Monday, March 13, 2017

ಸುಗ್ಗಿಯಲ್ಲಿ ಹೋಳಿ ಮೆರಗು

ಸುಗ್ಗಿಯ ಕಾಲದ ಬೆಳೆಯನ್ನುಕೊಯ್ದು ಅದರ ಸಂಭ್ರಮವನ್ನು ಆಚರಿಸುವ ಹಬ್ಬವೇ ಸುಗ್ಗಿ ಹಬ್ಬ. ಹಳ್ಳಿಯ ಕಡೆಗೆ ಇದನ್ನುಸುಗ್ಗಿ ಎಂದು ಕರೆದರೆ, ನಗರ ಮತ್ತು ಪಟ್ಟಣಗಳಲ್ಲಿ ಹೋಳಿ ಎಂದು ಕರೆಯುವರು.  ಹಳ್ಳಿಗಳಲ್ಲಿ ಹದಿನೈದು ದಿನಗಳ ಕಾಲ ಹಬ್ಬ ಇದ್ದರೆ, ನಗರದಲ್ಲಿ ಒಂದು ದಿನ ಆಚರಿಸುವರು.  ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದವರಾದ ಹಾಲಕ್ಕಿ ಸಮಾಜದವರು ಹಾಗು ಇತರೆ ವರ್ಗದ ಜನಾಂಗದವರು ತಮ್ಮಲ್ಲಿಯೇ ಒಂದೊಂದು ಗುಂಪು ಅಥವಾ ಪಂಗಡಗಳನ್ನಾಗಿ ಮಾಡಿಕೊಂಡು ಸುಗ್ಗಿ ಹಬ್ಬಕ್ಕಿಂತ ಒಂದು ತಿಂಗಳು ಮೊದಲೇ ತಯಾರಿಯನ್ನು ಮಾಡಿಕೊಳ್ಳುತ್ತಾರೆ.

ಹಲವರು ನೃತ್ಯವನ್ನು, ಕೆಲವರು ಹಾಡನ್ನು, ಇಬ್ಬರು-ಮೂವರು ವಾದ್ಯಗಳನ್ನು ಬಾರಿಸುವರು. ಒಬ್ಬ ಗುಮಟೆಪಾಗನ್ನು, ಇನ್ನೊಬ್ಬ ಜಮಟೆ(ಜಾಗಟೆ)ಯನ್ನು, ಮತ್ತೊಬ್ಬ ತಾಳವನ್ನು ಬಾರಿಸುವರು. ಗುಮಟೆಪಾಗು ಎನ್ನುವುದು ಚಾಪ್ಯ ಎನ್ನುವ ಪ್ರಾಣಿಯ ಒಣ ಚರ್ಮವನ್ನು ಮಣ್ಣಿನ ಮಡಿಕೆಯ ಬಾಯಿಗೆ ಕಟ್ಟಿ ಮಾಡುವ ಒಂದು ವಾದ್ಯವಾಗಿದೆ.

ಚೋ..ಹೋ..ಹೋಯ್
ಹೋಯ್... ಹೋಯ್...

ಎಂದು ಹಾಡು ಹೇಳುತ್ತ, ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ನವಿಲುಗರಿಗಳಿಂದ ಮಾಡಿದ ಕುಂಚವನ್ನು ಒಂದು ಕೈಯಲ್ಲಿ, ಕೊಲನ್ನು ಇನ್ನೊಂದು ಕೈಯಲ್ಲಿ ಹಿಡಿದು ಕುಣಿಯುವರು.ಇದನ್ನೇ ಹಳ್ಳಿಯಲ್ಲಿ ಸುಗ್ಗಿ ಕುಣಿತ ಎನ್ನುವರು.
                                                  
ಸುಗ್ಗಿಯು ಬಂತೆಂದರೆ ಚಿಕ್ಕ ಮಕ್ಕಳಿಗೆ ಹಿಗ್ಗೋ ಹಿಗ್ಗು. ಸುಗ್ಗಿಯವರು ಮಾಡಿಕೊಂಡು ಬರುವ ವಿವಿಧ ವೇಷಗಳಾದ ಯಕ್ಷಗಾನ, ನಾಟಕ, ಮೊಕ್ಕಟ, ಇತ್ಯಾದಿ ವೇಷಗಳನ್ನು ನೋಡಲು ಕಾತುರರಾಗಿರುತ್ತಾರೆ.ಕೆಲವು ಮಕ್ಕಳು ಮೊಕ್ಕಟ ವೇಷಧಾರಿಯನ್ನು ಕಂಡರೆ ಹೆದರುತ್ತಾರೆ. ಏಕೆಂದರೆ ವೇಷಧಾರಿಗಳು ಚಿಕ್ಕ ಮಕ್ಕಳನ್ನು ಕಂಡರೆ ಎತ್ತುಕೊಂಡು ಹೋಗುತ್ತೇನೆ ಎಂದು ಹೆದರಿಸುತ್ತಾರೆ. ಹೀಗಾಗಿ ಚಿಕ್ಕ ಮಕ್ಕಳು ಸುಗ್ಗಿ ಬಂದಾಗ ಮನೆಯಿಂದ ಹೊರಗೆ ಬರುವುದಿಲ್ಲ. ನಾವು ಚಿಕ್ಕವರಿದ್ದಾಗ ಊರಿನ ಪ್ರತಿ ಮನೆಗೂ ಹೋಗಿ ಹುಚ್ಚನ ವೇಷ, ಕರಡಿಯ ವೇಷ, ಹನುಮಂತನ ವೇಷ ಹಾಗೂ ಮುಂತಾದ ವೇಷಧಾರಿಗಳ ಜೊತೆಗೆ ಮಾಡುತ್ತಿದ್ದ ಕೀಟಲೆಗಳನ್ನು ನೆನೆಸಿಕೊಂಡರೆ ಇಂದಿಗೂ ಖುಷಿಯಾಗುವುದು ಮತ್ತು ಹಳೆಯ ದಿನಗಳಿಗೆ ಹಿನ್ನಡೆಯಬೇಕೆನ್ನಿಸುತ್ತದೆ. ಸುಗ್ಗಿಯ ಸೆಳೆತವೇ ಅಂತಹದು.... ಅಲ್ವೇ?

                ಮನೆ ಮನೆಗೆ ಬರುವ ಸುಗ್ಗಿ ಮೇಳದವರಿಗೆ ಮನೆಯ ಯಜಮಾನರು ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಹಣವನ್ನು ನೀಡುತ್ತಾರೆ. ಹೀಗೆ ಪ್ರತಿ ಮನೆಯಲ್ಲೂ ಸುಗ್ಗಿಯವರಿಗೆ ಮರ್ಯಾದೆಯನ್ನು ನೀಡುತ್ತಾರೆ. ಮೊಕ್ಕಟನ ವೇಷಧಾರಿಯು ಚಿಲ್ಲರೆ ರೊಕ್ಕವನ್ನು ನೀಡುವಂತೆ ಕಾಡುತ್ತಾನೆ. ಸುಗ್ಗಿ ಮೇಳದವರು ಹಗಲು ಇರುಳೆನ್ನದೆ ಊರೂರು ಸುತ್ತಿ ಪ್ರತಿ ಮನೆಗೂ ಹೋಗುವರು. ಸುಗ್ಗಿಯಲ್ಲಿ "ತುರಾಯಿ" ಕಟ್ಟುವುದು ವಿಶೇಷವಾದುದು. ಹಿಂದಿನ ಕಾಲದಲ್ಲಿ ತುರಾಯಿ ವೇಷಧಾರಿಗಳು ಮಾತ್ರ ಸುಗ್ಗಿಯನ್ನು ಕುಣಿಯುತ್ತಿದ್ದರು. ಆದರೆ ಇಂದು ಬೆಂಡಿನಿಂದ (ಥರ್ಮೋಕಾಲ್) ಮಾಡುವ ತುರಾಯಿಯ ಒಂದು ಕಡ್ಡಿಗೆ ನೂರು ರೂಪಾಯಿಗಳಿಗಿಂತ ಹೆಚ್ಚು ಹಣವಿದ್ದು ಇಪ್ಪತ್ತೈದರಿಂದ ಐವತ್ತು ಕಡ್ದಿಗಳಿರುವ ತುರಾಯಿ ಗೊಂಚಲೊಂದಕ್ಕೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಹೀಗಾಗಿ ಬೇರೆ ಬೇರೆ ರೀತಿಯ ವೇಷಗಳನ್ನು ಧರಿಸಲು ಆರಂಭಿಸಿದರು.
                                                 
ವಿವಿಧ ವೇಷ, ಮುಖಕ್ಕೆ ಚಿತ್ರ ವಿಚಿತ್ರ ಬಣ್ಣಗಳನ್ನು ಬಳಿದುಕೊಂಡು ಬರುವ ಸುಗ್ಗಿಯ ಕೊನೆಯ ದಿನ ಕಾಮನ ಸುಡುವ ಪದ್ಧತಿ ಇದ್ದು ದಿನವನ್ನು ಹೋಳಿ ಎಂದು ಕರೆದು ಬಣ್ಣ ಬಡಿದು ಕುಣಿಯುತ್ತಿದ್ದ ಜನಗಳು ಮತ್ತು ಇತರರೆಲ್ಲರೂ ಸೇರಿ ಬಣ್ಣವನ್ನು ಎರಚಿಕೊಂಡು ಹೋಳಿಯಾಡುವರು. ಅಲ್ಲದೆ ಸುಗ್ಗಿಯಲ್ಲಿ ಕಟ್ಟಿದ ತುರಾಯಿಯನ್ನು ರಾಶಿ ಹಾಕಿ ಅದಕ್ಕೆ ಪೂಜೆಯನ್ನು ಮಾಡಿ ಬೆಂಕಿಯನ್ನು ಇಟ್ಟು ಸುಡುವರು. ಇದನ್ನು ಕಾಮ ದಹನ ಎಂದು ಕರೆಯುವರು. ನಂತರ ಮನೆಗೆ ಬಂದು ಸ್ನಾನ ಮಾಡಿ, ಹಬ್ಬದ ಅಡುಗೆಯನ್ನು ಮಾಡಿ ಊಟ ಮಾಡುವರು.
                                                 
ಯಜಮಾನ ಎಂದು ಊರ ಗೌಡ ಅಥವಾ ಮುಖ್ಯಸ್ಥನನ್ನು ಕರೆಯುತ್ತಿದ್ದು ಸುಗ್ಗಿಯ ಸಮಯದಲ್ಲಿ ಸುಗ್ಗಿಯ ಗುಂಪಿನ ಸದಸ್ಯರೆಲ್ಲ ತಮ್ಮ ಮನೆಗಳಿಗೆ ತೆರಳದೆ ಯಜಮಾನನ ಮನೆಯಲ್ಲಿ ಉಳಿಯುವರು. ಕೊನೆಯಲ್ಲಿ ಬಂದ ಹಣದಲ್ಲಿ ಧವಸ ಧಾನ್ಯಗಳನ್ನು ಖರೀದಿಸಿ ತಂದು ಎಲ್ಲರೂ ಸಮನಾಗಿ ಹಂಚಿಕೊಳ್ಳುವರು. ಸುಗ್ಗಿಯಲ್ಲಿ ಪ್ರತಿ ಮನೆಯಿಂದ ಒಬ್ಬ ಸದಸ್ಯ ಭಾಗವಹಿಸಲೇ ಬೇಕು. ಅದೇ ಆಚರಣೆ ಈಗಲು ಮುಂದುವರೆದುಕೊಂಡು ಬರುತ್ತಿದೆ ಎನ್ನುವುದು ನಮ್ಮ ಸಂಸ್ಕೃತಿಗೆ ಒಂದು ಹಿರಿಮೆ.

ಹೋಳಿ ಎಂದರೆ ಮೇಲ್ನೋಟಕ್ಕೆ ಬಣ್ಣದಾಟ ಎಂಬ ಮಾತಿದೆ. ಇತ್ತೀಚಿನ ದಿನಗಳಲ್ಲಿ ಇದು ಸತ್ಯ ಕೂಡ. ಅಲ್ಲದೆ ಹೋಳಿಯೆಂದರೆ ಮೋಜು ಮಸ್ತಿಯಾಟವಾಗಿದೆ. ಹೋಳಿ ಯಾಡುವುದರ ಅರ್ಥ ಗೊತ್ತಿಲ್ಲದೆ ಹಲವು ಜನರು ಮೋಜಿಗಾಗಿ ರಂಗನ್ನೆರಚಿ ಕುಣಿಯುವದಷ್ಟೆ ತಿಳಿದಂತಿದೆ. ರಂಗಿನಾಟದ ಮೂಲ ಉತ್ತರ ಭಾರತವೆಂದರೆ ತಪ್ಪಾಗಲಾರದು. ನಮ್ಮಲ್ಲಿ ಇದನ್ನೆ ಕಾಮದಹನ ಎಂಬಾಚರಣೆಯ ಮೂಲಕ ಸಂಭ್ರಮಿಸುತ್ತೇವೆ.


ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಮಿಯಂದು ಇದನ್ನು ಆಚರಿಸುತ್ತೇವೆ. ಹಬ್ಬವನ್ನು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸಂಭ್ರಮಿಸುವ ಅಭ್ಯಾಸವಿದೆ. ಕೆಲವು ಕಡೆ ೧೦ ತಲೆಯ ರಾವಣನ ಮೂರ್ತಿಯನ್ನು ಸುಡುವುದು, ಗೋದಿಯ ಕಿಚಡಿಯನ್ನು ಬೇಡಿ ಸಂಭ್ರಮಿಸುವುದು, ಶಿಕಂಡಿಯ ವೇಷಧಾರಿಯು ಮನೆಗಳಿಂದ ಬೇಡಿತಂದ ಬೇಡದೇ ಹೋದ ವಸ್ತುಗಳನ್ನು ಸುಡುವುದು ಹೀಗೆ ಬೇರೆ ಬೇರೆ ತರನಾದ ಆಚರಣೆಗಳು ನಮ್ಮ ವೈವಿಧ್ಯತೆಯಲ್ಲಿನ ಏಕತೆಯನ್ನು ಎತ್ತಿ ತೋರಿಸುತ್ತದೆ.


ಕಾಮ ದಹನ ಮಾಡುವುದು ಮತ್ತು ರಾವಣನ ಮೂರ್ತಿಯನ್ನು ದಹಿಸುವುದು ನಮ್ಮಲ್ಲಿರುವ ಕೆಟ್ಟದ್ದನ್ನು, ದುಷ್ಟತನ, ಬೇಡದ ವಸ್ತುವನ್ನು ಸುಟ್ಟು ಅಥವಾ ಬಿಟ್ಟು ನವ ಪಥದಲ್ಲಿ ಸಾಗೋಣ ಎಂಬ ವಿಚಾರವನ್ನು ತಿಳಿಸುತ್ತದೆ. ಹಾಗೆ ರಂಗಿನೆರೆಚಾಟವು ನಮ್ಮ ಬಾಳಲ್ಲಿ ವೈವಿಧ್ಯಮಯ ಸಂಗತಿಗಳು ಘಟಿಸಿ ರಂಗುರಂಗಾಗಿ ನಮ್ಮ ಬಾಳು ಪ್ರಜ್ವಲಿಸಲಿ ಎಂಬ ಸದುದ್ದೇಶವಿದೆ. ಯಾಕೆಂದರೆ ಹೆಚ್ಚಿನದಾಗಿ ರಂಗಿನೆರೆಚಾಟಕ್ಕೆ ಬಳಸುವ ಬಣ್ಣಗಳ ವಿಶಾಲಾರ್ಥ ಹೀಗಿದೆ: ಕೆಂಪು ಬಣ್ಣ-ಭಾವೋದ್ವೇಗ ಹೆಚ್ಚಿಸುತ್ತದೆ, ಕಿತ್ತಳೆ ಬಣ್ಣ-ಮನಸ್ಸಿನ ಸ್ವಭಾವ ಮತ್ತು ವರ್ತನೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ, ತೀಕ್ಷ್ಣಸ್ವಭಾವದ ಸೌಹಾರ್ದ  ರೂಪವಾಗಿದೆ ಮತ್ತು ವ್ಯಾಮೋಹ ಹೆಚ್ಚಿಸುತ್ತದೆ, ನೀಲಿ ಬಣ್ಣ-ಪ್ರಶಾಂತತೆ ನೀಡುತ್ತದೆ ಮತ್ತು ಆನಂದ ಉಲ್ಲಾಸ ಹೆಚ್ಚಿಸುತ್ತದೆ, ಹಸಿರು ಬಣ್ಣ-ಶಾಂತಿ ನೆಮ್ಮದಿ ವಿಶ್ರಾಂತಿಯನ್ನು ತರುತ್ತದೆ, ನೇರಳೆ ಬಣ್ಣ-ಮನಸ್ಸಿಗೆ ಪ್ರಶಾಂತತೆ ಅನುಭವ ಕೊಡುತ್ತದೆ, ಹಳದಿ ಬಣ್ಣ-ಶಕ್ತಿಯನ್ನು ಮತ್ತು ವ್ಯಾಮೋಹವನ್ನು ವೃದ್ಧಿಸುತ್ತದೆ. ಹೀಗಾಗಿ ಸರ್ವ ಧರ್ಮಿಯರೂ ಸಹ ಹೋಳಿಯನ್ನಾಡುತ್ತಾರೆ. ಬಣ್ಣಗಳನ್ನಾಡುವುದರಿಂದ ಪ್ರತಿ ಬಣ್ಣಗಳಿಗೆ ಇರುವ ಸಂಕೇತ ಸಾಕಾರವಾಗಲಿ ಎಂಬ ಆಶಯದೊಂದಿಗೆ ಸುಗ್ಗಿಯ ಹೋಳಿಗೆ ಮೆರುಗನ್ನು ನೀಡೋಣ.



No comments:

Post a Comment