Thursday, August 28, 2014

|| ಪ್ರಾಸಂಗಿಕ ಪ್ರಕ್ರಿಯೆ ||

ಮಡಿದ ಮನಸು
ಮಿಡಿದರೂನು
ಭಾವನೆಗೆಲ್ಲಿದೆ ಬೆಲೆಯು
ಜಗದ ನಿಯಮ
ನಿಂತಿರುವುದು
ಹುಟ್ಟ ಬರುವ ಸಂಬಂಧದಲಿ ||

ಹುಟ್ಟುತ ಆಡುತ
ಅಣ್ಣ ತಮ್ಮಂದಿರುಗಳು
ಬೆಳೆಯುತ ಆಗುವರು ದಾಯಾದಿಗಳು
ಜೊತೆಯಲೆ ಜಡೆಯನು
ಹಾಕಿದ ಸಹೋದರಿಯರು
ಮದುವೆಯ ನಂತರ ಸಂಬಂಧಿಗಳು ||

ಎತ್ತಣದಿಂದ ಎತ್ತಣಕ್ಕೆ
ಸಂಬಂಧಗಳು ಬೆಸೆದಿರುವುದೊ
ಬತ್ತಿದ ಭಾವನೆ ಹೊಳೆಯಲಿ ತೇಲುವವು
ಭಾವನೆಯಲಿ ಬೆಳೆಯುವ
ಸಂಬಂಧಗಳಿಗೆ ಬೆಲೆಯಿಲ್ಲ
ಅಪಾರ್ಥ ರೂಪದಲಿ ಮನಸ್ತಾಪವು ||

ಹೊಸದು ಸಂಗಕೆ
ಚಿತ್ತ ಸೆಳೆಯಲು
ಹಳೆಯ ಜೊತೆಯನು ತೊರೆಯುವರು
ಬೆರೆತ ಬೆಸುಗೆಗೆ
ಗುರುತೆ ಇಲ್ಲದೆ
ಮರೆತು ಮರೆಯಲಿ ಬಾಳುವರು ||

ಮನಸಿಗೆ ಹಿಡಿಸಿದ
ಹಾಗೆ ಮಾತುಗಳು
ವ್ಯಕ್ತವಾಗಲು ಕಲ್ಪನೆಯ ಕಡಲಿನಲಿ
ಸರ್ವವು ವ್ಯರ್ಥ
ಮಾಡಲು ಅಪಾರ್ಥ
ಮರ್ಯಾದೆಯಿರದು ಪ್ರಾಸಂಗಿಕ ಪ್ರಕ್ರಿಯೆಯಲಿ ||

1 comment:

  1. ಸಂಬಂಧಗಳ ಅಸಲೀ ನಿರೂಪಣೆ ಇಲ್ಲಿದೆ.

    ReplyDelete