ಕರುಣಾಳು ಶಿರವೆರಗಿ
ನಾ ಬೇಡುವೆ
ನೀ ನೀಡು ಕಿರಿದಾದ
ತಿಳಿ ಬೆಳಕನು
ನೀ ಕರುಣಿಸು ಮಿತಿಯಿರುವ
ಕ್ಷೇತ್ರವನ್ನು
ನೀ ದಯಪಾಲಿಸು ಮತ್ತರಳಲು
ಅವಕಾಶವನ್ನು ||
ಸೆರಗೊಡ್ಡಿ ಬೇಡುವೆನು
ಓ ನಂಬಿಕೆ
ಅಳಿಸು ಬಾಲ ಬುದ್ಧಿಯ
ತೋರಿಕೆ
ಉಳಿಸು ಬೆಳವಣಿಗೆಯ
ದೃಢತೆ
ನನ್ನನೇರಿಸು ಎಲ್ಲರಂತೆ
ಸಾಮಾನ್ಯ ಸ್ಥಳಕೆ ||
ನೀನು ಕಿಂಚಿತ್ತಾದರು
ಕೃಪೆದೋರು
ಅಲೆಮಾರಿ ಅಲೆದಾಟದ
ಬದುಕಿಗೆ
ಹೊಡೆದೋಡಿಸು ಮುಸುಕಿರುವ
ಮಬ್ಬನು
ನನ್ನ ಕೈ ಪಿಡಿದು ದಡ
ಸೇರಿಸು ||
ಗೊತ್ತು ಗುರಿಯಿಲ್ಲದ
ಪಯಣದಲಿ
ಮುಚ್ಚಿಡಲು ಗೌಪ್ಯತೆಯು
ಉಳಿದಿಲ್ಲ
ಬಚ್ಚಿಡಲು ಹೊನ್ನನು
ಗಳಿಸಿಲ್ಲ
ಮನವು ಮಣ್ಣು ಮೋಹವ
ಬಯಸದಿರಲು ||
ಕೃಪೆದೋರಿ ನೀ
ಕರುಣಿಸು
ನನ್ನ ಕೈ ಪಿಡಿದು
ನೀ ನಡೆಸು
ಕರುಣೆಯಲಿ ಕಣ್ಣೀರು
ಆರುವುದು
ನಿರ್ದೇಶಿಸು ಓ ಬೆಳಕೆ
ಮುನ್ನಡೆಯಲು ||