ನಾನಿರುವ ಊರಿನಲಿ ಚಂದ್ರನಿಲ್ಲ
ನೀನಿರುವ ಉರಿನಲಿ ರವಿ ಕಾಣುತಿಲ್ಲ
ಬೆರೆತಾಗಿದೆ ನಾವು ಕವಿ ಕಲ್ಪನೆಯಲಿ
ಒಲವು ಚಿಮ್ಮಿತು ಮುಸ್ಸಂಜೆ ತಂಪಿನಲಿ ||
ಆ ತಾರೆ ಮಿನುಗುವುದ ಮರೆತಿಹುದು
ನಿನ ಮೊಗದ ಕಾಂತಿಯಲಿ ಮಂಕಾಗಿಹುದು
ನಾನೋಡದಾಚಂದ್ರ ನಿನ ಹಿಂದೆ ಅಲೆದಿಹನು
ಉರಿ ಕುಂದುವುದೆಂಬ ಭಯದಲಿ ಅಡಗಿ ಬೆಳಗುತಿಹನಾಸೂರ್ಯನು ||
ವಾರಿ ಸುಳಿಯಲಿ ಸಿಲುಕಿದರೂನು
ತೇಲಿ ಬರುವೆನು ನಿನ್ನಯ ಸೆಳೆತಕೆ
ಹೊಳೆಯ ಹನಿಯ ತಂಪಿನಲಿ ಭಾವನೆಗಳು
ಮೂಡಿಸಿವೆ ನಿನ ಅಂದದ ಬಿಂಬಗಳನು ||
ಕರಿಮೋಡ ಮಳೆಯಾಗಿ ಧರೆಗುರುಳಿ
ಬರಡು ಭೂಮಿಯ ಬಾಯಾರಿಕೆ ತಣಿಸಿದಂತೆ
ನನ ಎದೆಯು ಸುಡುತಿದೆ ವಿರಹದ ಬೇಗೆಯಲಿ
ನೀ ಬಂದು ಆರಿಸು ಈ ನೀರಡಿಕೆಯ ||