Saturday, May 11, 2013

|| ನನ ಬಾಳ ನಾವಿಕ ||

ಭಾವಗಳ ರಂಗೋಲಿಯನು
ಮನದಂಗಳದಿ ಬಿಡಿಸಿಹೆನು
ರಂಗಾದ ನಿನ ನೆನಪಿನ
ಬಣ್ಣಗಳ ತುಂಬಿಹೆನು
ಎದೆಯ ಜೋಪಡಿಯ ಮೇಲೆ
ಮಣೆಯನು ಹಾಕಿ ಕಾದಿಹೆನು
ಕಳಶಾಭಿಷೇಕ ಮಾಡಿಸಲು
ಸಾಲಾಗಿ ನಿಂತಿಹರು ಮುತ್ತೈದೆಯರು
ನವಬದುಕ ಬಯಸಿಹೆನು ನಿನ್ನಿಂದ
ನೀನೆಂದು ಬರುವೆಯೊ ನನ ವರಿಸಲು ||

ಉರಿಜ್ವಾಲೆಯಂತೆ ಸುಡುತಿದೆ
ವಿರಹದ ಬೇಗೆಗಳು
ನೀ ಬಂದು ಆರಿಸು ಈ ಜ್ವಾಲೆಯ
ಹನಿಗಳ ಸುರಿಸಿ ತಂಪಾಗಿಸೆಯ
ನಿನ ಬದುಕಿನ ಪಯಣಕೆ
ದೋಣಿಯಾಗುವೆ ನಾ ತೇಲಿಸಲು
ಹೃದಯದಿ ಹುದುಗಿರುವ ಭಾವಗಳ
ಹಾಡಾಗಿ ನಾ ಹೇಗೆ ಹೇಳಲಿ
ಬಳಿಬಂದು ಅರಿ ನೀ ಒಲವನು
ದೋಣಿಯೇರಿ ನೀನಾಗು ನನ ಬಾಳ ನಾವಿಕ ||

Friday, May 3, 2013

|| ಹೊಸ ಬದುಕು ||

ಯಾವ ಕಾಮನಬಿಲ್ಲು ಕಂಡಿತು
ದೂರತೀರಕೆ ಜಾರಲು
ಎಲ್ಲ ಸುಂದರ ದೂರದಿಂದಲಿ
ಸನಿಹ ಸಾಗಲು ತಿಳಿವುದು ||

ಮುಳ್ಳು ಹಾಸಿಗೆ ಕಲ್ಲು ಮಂಚದಿ
ವಿಶ್ರಾಂತಿ ಪಡೆಯಲು ಆಗದು
ಬೇಕುಗಳಿಗೆ ಬೇಲಿ ಹಾಕಲು
ಬೇಡದಂತೆ ಬದುಕಲಾಗದು ||

ಕಾಣದೂರಿನ ಆಚೆಯೆಲ್ಲೊ
ಕವಿಯ ಕಲ್ಪನೆ ಮೀಟಿದೆ
ಹೊಳೆಯ ಸುಳಿಯಲಿ ಮೂಕವೇದನೆ
ತಿಳಿಯದಂತೆ ಕೇಳಿದೆ ||

ವಿಧಿವಶವಾಗಲು ನಿನ್ನ ಪ್ರಾಣವು
ಪರವಶವು ನಿನ್ನ ಈ ದೇಹವು
ನಿನ್ನದೆಲ್ಲವ ಬಿಟ್ಟು ಹೋಗಲು
ಹೊಸದು ಬದುಕಲಿ ಬಾಳಲು ||

|| ಧ್ಯಾನ ||

ಬರುವೆಯೇನು
ಭಾಗ್ಯ ನೀನು
ನನ್ನ ಹೃದಯದ ತುಡಿತಕೆ ||
ಯಾರು ಬೆಳೆದ
ಕುಸುಮ ನೀನು
ನನ್ನ ಎದೆಯ ಭಡಿತಕೆ ||
ಕೊಡುವೆಯೇನು
ಒಲವ ನೀನು
ನನ್ನ ಬದುಕಿನ ಸೆಳೆತಕೆ ||
ಬೇಡುತಿಹೆನು
ನಿನ್ನ ನಾನು
ನನ್ನ ಮನಸಿನ ಮಿಡಿತಕೆ ||
ಆಲಾಪಿಸುವೆನು
ನಿನ್ನ ಹೆಸರನು
ನನ್ನ ಉಸಿರಿನ ರಾಗಕೆ ||
ಆರಾಧಿಸುವೆನು
ನಿನ್ನ ನೆನಪನು
ನನ್ನ ಭಕ್ತಿಯ ಧ್ಯಾನಕೆ ||

|| ಪ್ರಾರ್ಥನೆ ||

ನಮಿಸುತ ಬೇಡುವೆ ತಾಯೆ
ಕೃಪೆಯನು ಬೀರುತ ಕಾಯೆ
ಕರುಣಿಸು ಕಲ್ಪನಾ ಶಕ್ತಿಯ
ಮುದ್ರಿಸಿ ಹೊಂದುವೆ ಮುಕ್ತಿಯ ||
 
ಲೋಕ ಬೆಳಗುವ ಸೂರ್ಯನಂತೆ
ನನ್ನ ಹರುಷ ಹರಡಲಿ
ಬರೆಯುತ ಬದುಕುವೆ ಮೂಗನಂತೆ
ಸ್ಷಷ್ಟ ಪದಗಳು ಹರಿಯಲಿ ||
 
ಅರಿವೆ ಜಗದ ಜ್ನಾನವ
ಬರೆವೆ ಮನದ ಭಾವವ
ಲೇಖನದಿ ಲೇಖಿಸುವೆ ಕಟುಸತ್ಯವ
ಯತ್ನಿಸುವೆ ಮಾಡಲುತ್ತಮ ಸಮಾಜವ ||

ಹರಸು ನನ್ನನು ತಾಯೆ ನೀನು
ಹೆದರದಂತೆ ಎದುರಿಸಿ ನಿಲ್ಲಲು
ಗೀಚಿದ ಪದಗಳು ಪದ್ಯವಾಗಲಿ
ವಾಣಿ ಶಾರದೆಗೆ ಶರಣಾಗಲಿ ||

Saturday, April 20, 2013

|| ಏಕಾಂತ ||

ಯಾತಕೆ ಸಂಜೆಯಲಿ
ಏಕಾಂತವು ಕಾಡುತಿದೆ
ನನ್ನ ಮನವು ಬೇಸರಿಸುತ
ನಿನ್ನ ಸಾಂಗತ್ಯ ಬಯಸುತಿದೆ
ನಗುವಿಲ್ಲದೆ ಮಾತಿಲ್ಲದೆ
ವಿಬ್ರಾಂತದಲಿ ಜೀವ ಬಳಲುತಿದೆ ||

ಮಬ್ಬಿನ ತಿಳಿ ಬೆಳಕಲಿ
ಬಣ್ಣಗಳು ಹರಡುತಿದೆ ಕಿರಣದಲಿ
ಆಯಾಸವ ಹೊರಹಾಕಲು ನಲಿದಾಡುತ
ಕೈ ಹಿಡಿದು ಜೊತೆಯಾಗಿವೆ ಜೋಡಿ ಜೀವಗಳು
ಶಬ್ಧಗಳು ಮರೆಯಾಗುತ ಸ್ತಬ್ಧವಾಗುತಿಹುದು
ಮೌನವಾವರಿಸುತಿಹುದು ನೀನಿಲ್ಲದ ಏಕಾಂತದಲಿ ||

Monday, April 15, 2013

|| ಚಿವುಟಿದ ಮನಸು ||

ಜಗವ ಬೆಳಗಲು
ಚಂದ್ರ ಬಂದರು
ಗ್ರಹಣ ಬಿಡದು ಹಿಡಿಯದೆ
ನಿನ್ನ ಮೋಹದಲಿ
ನಾನು ಮಿಂದಿರಲು
ಉಳಿಸು ನನ್ನನು ಕ್ಷೇಮದಿ ||

ಬಳಸಿ ಬಳಲಿಹೆ
ನಿನ್ನ ಒಲವಲಿ
ನನ್ನ ಮನದಲಿ ಚಳುವಳಿ
ಸಿಹಿಯ ನೀರಲಿ
ಕಲ್ಲ ಎಸೆಯುತ
ಮಜವ ನೋಡುತಿಹೆ ಖುಷಿಯಲಿ ||

ಸೂರ್ಯ ಬೆಳಗಲು
ತಾರೆ ಮರೆಯಾಗಲು
ಪ್ರಜ್ವಲತೆಯ ಪ್ರಶ್ನೆ ಮೂಡುವುದು
ಚಿವುಟಿದ ಮನಸು ನನ್ನದು
ನಗುವಿನ ಹರುಷ ನಿನ್ನದು
ತಿಳಿಯದಾಯ್ತು ಶುದ್ಧವಾದ ಪ್ರೀತಿಯು ||

|| ಗಾಲಿಯಾಗಲೆ ನಾ ||


ಸುರಿವ ಜೇನದು 
ನಿನ್ನ ಮೊಗದಲಿ
ಹೂವಿನಂತೆ ನಗುತಿರೆ
ನಿನ್ನ ನೋಟವು
ಚಿತ್ತ ಕದ್ದಿರಲು
ಮಧುರ ದನಿಯದು
ಕಿವಿಯಲಿ ಗುನುಗುತ
ಗಾಢವಾದ ಪ್ರೀತಿ ಬಂಧಿಸಿದೆ ನನ್ನನು ||

ನಾ ನುಡಿಯೆನು
ನೀ ನನ್ನ ಉಸಿರು ಎಂದು
ನಾಳೆ ಉಸಿರು ನಿಲ್ಲುವುದು
ನಾ ಸಹಿಸೆನು ನೀ ದೂರಗುವುದೆಂದು
ಕೂಗಿ ಹೇಳುವೆನು
ನೀ ನನ್ನ ಹೆಸರು ಎಂದು
ಒಳ್ಳೊಳ್ಳೆ ಕೆಲಸ ಮಾಡುವೆನು
ನನ್ನ ಹೆಸರು ಚಿರಕಾಲ ಉಳಿಯಲೆಂದು ||

ಉಸಿರು ಜೀವ ನೀ ನೀಡಿದೆ
ಎಲ್ಲ ಕೊಡುತಲಿ ನನ್ನ ಬದುಕಿಸಿದೆ
ಜಿಗುಪ್ಸೆ ಬಂದ ಜೀವನದಲಿ
ಆಸಕ್ತಿ ಮೂಡುವಂತೆ ಮಾಡಿದೆ
ಚಿತ್ತ ಸೆಳೆಯುವ ಕಾರ್ಯ ಮಾಡುವೆ
ಬದುಕಿಗೆ ಸ್ಪೂರ್ತಿ ನೀನೆಂದು ಹಾಡುವೆ
ನಿರಾಕರಿಸುವೆ ನಾ ಕಳೆದುಕೊಳ್ಳಲು
ಗಾಲಿಯಾಗಲೆ ನಾ ಸಂಸಾರ ನೆಡೆಸಲು ||