Thursday, March 7, 2013

…ಸೌಮ್ಯ ಸುಂದರ…


ಶೀರ್ಷಿಕೆಯನ್ನು ನೋಡಿದ ತಕ್ಷಣ ಎದುರಿಗೆ ಬರುವ ಚಿತ್ರಣವೆಂದರೆ ಯಾವಬ್ಬಳೋ ಹುಡುಗಿಯ ಸೌಂದರ್ಯದ ಬಗೆಗಿನ ಚಿತ್ರಣವಿರಬಹುದೆಂಬ ಯೋಚನೆ ನಿಮ್ಮ ಮನದಲ್ಲಿ  ಮೂಡಿರಬಹುದು, ಆಲೋಚಿಸಿರಬಹುದು. ಆದರೆ ಈ ಶೀರ್ಷಿಕೆ ಎರಡು ವಿಷಯದ ಕುರಿತು ಮತ್ತೆ ಯಾವುದು ಮುಖ್ಯ ಎನ್ನುವ ಸಲಹೆಯನ್ನು ಒಳಗೊಂಡಿದೆ.

ಸೌಮ್ಯ ಎಂದರೇನು...? ಎನ್ನುವುದನ್ನ ಸರಿಯಾಗಿ ಅವಲೋಕಿಸೋಣ. ಸೌಮ್ಯ ಎಂದರೆ ಇಲ್ಲಿ ಯಾವುದೋ ವ್ಯಕ್ತಿಯ ನಾಮಪದವಲ್ಲ. ಸೌಮ್ಯ ಎಂದರೆ ಮೃದು ಸ್ವಭಾವ. ಈ ಸೌಮ್ಯ ಸ್ವಭಾವವು ತಾಳ್ಮೆ, ಬುದ್ಧಿವಂತಿಕೆ, ಸಮಯಪ್ರಜ್ನೆ, ಪ್ರಚೋದನೆಗೆ ತಕ್ಕ ಪ್ರತಿಕ್ರೀಯೆ, ಸೋತ ಕ್ಷಣದಲಿ ಧನಾತ್ಮಕ ಬೆಂಬಲ ನೀಡುತ್ತದೆ. ಈ ಸೌಮ್ಯ ಸ್ವಭಾವದ ಜೀವಿಗಳು ಹಿರಿಯರನ್ನು ಪೂಜಿಸುವ, ಕಿರಿಯರನ್ನು ಗೌರವಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬೆರೆತು ಮಾತನಾಡುತ್ತ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇವರು ಜೀವನದಲ್ಲಿ ಎಲ್ಲರಿಗೂ ಅವರದೇ ಆದ ಸ್ಥಾನ ಮಾನ, ಗೌರವವನ್ನು ನೀಡಿ ಸೋಲು ಗೆಲುವು ಎಲ್ಲವನ್ನು ಸಮನಾಗಿ ಸ್ವೀಕರಿಸಿ, ಬೇರೆಯವರಿಗೆ ಕೇಡನ್ನು ಬಯಸದೆ, ಬಗೆಯದೆ ಆದರ್ಶಪ್ರಾಯರಾಗಿರುತ್ತಾರೆ. ಅನುಸರಿಸಿಕೊಂಡಿ  ಹೋಗುವ ಇವರು ತನ್ನ ಸಂಗಾತಿಯ ಏಳಿಗೆಗಾಗಿ ಶ್ರಮಿಸುತ್ತಾರೆ. ಜೀವನದಲ್ಲಿ ಬರುವಂತಹ ಏರಿಳಿತಗಳಿಗೆ ಹೆದರದೆ ಸಂಯಮದಿಂದ ಕಾಲಕ್ಕೆ ತಕ್ಕಂತೆ ಹೆಜ್ಜೆಯಿಡುತ್ತಾರೆ.

ಸುಂದರ ಎಂದರೆ ಸೌಂದರ್ಯ, ಆಕರ್ಶಕವಾಗಿ ಕಾಣುವ ಮನಮೋಹಕ ರೂಪ, ಕಣ್ಮನ ಸೆಳೆಯುವ ಬಾಹ್ಯ ಗುರುತು. ಯಾವುದೋ ಒಬ್ಬ ಹುಡುಗನ ಹೆಸರಲ್ಲ. ಸುಂದರತೆ ನೋಡಲು ಅಂದವಾಗಿ ಕಂಡು ಮೋಹಿಸುವ ತವಕದಲ್ಲಿ ಮನ ಸೋಲುವರು. ಎಲ್ಲರ ನೋಟವನ್ನು ತನ್ನೆಡೆಗೆ ಕೇಂದ್ರಿಕರಿಸುವಂತೆ ಮಾಡುವ ಈ ಸೌಂದರ್ಯ ಪ್ರತಿಯೊಬ್ಬರ ಕಾಮನೆಗಳಿಗೆ ಪ್ರಚೋದನೆ ನೀಡುತ್ತದೆ. ಪ್ರತಿಯೊಂದು ಜೀವಿಯು ಈ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಿ ತಾನೂ ಸಹ ಸುಂದರವಾಗಿ ಕಾಣಬೇಕು ಎಂದು ಸೌಂದರ್ಯವರ್ಧಕಗಳನ್ನ ಬಳಸುವುದು ಸಹಜವಾಗಿ ಕಂಡುಬರುತ್ತದೆ. ಇದು ಹೆಚ್ಚಿನದಾಗಿ ಸ್ತ್ರೀಯರಲ್ಲಿ ಎದ್ದು ಕಾಣುವಂತಹ ವಿಷಯ.

ಸೌಮ್ಯ ಮತ್ತು ಸುಂದರತೆಯಲ್ಲಿ ಹೊರನೋಟದಿಂದ ಆಕರ್ಷಣೆಗೆ ಒಳಪಡುವುದು ಸೌಂದರ್ಯ. ಆದರೆ ಇಣುಕಿ ಒಳನೋಟ ತಿಳಿದಾಗ ಪ್ರಜ್ವಲಿಸುವುದು ಮೃದು ಸ್ವಭಾವ. ಕಣ್ಣಿಗೆ ಕಂಡಾಗ ತನ್ನತ್ತ ಸೆಳೆಯುವುದು ಸೌಂದರ್ಯ ಆದರೆ ಸೌಂದರ್ಯ ದ ಹಿಂದೆ ಕತ್ತಲಿದೆಯೋ, ಬೆಳಕಿದೆಯೋ ಎನ್ನುವುದು ತಿಳಿಯಲಸಾಧ್ಯವಾದದ್ದು. ಸೌಮ್ಯ ಸ್ವಭಾವವು ಹೊರ ನೋಟದಿಂದ ತಿಳಿಯಲಸಾಧ್ಯವಾದಂತಹ ಒಂದು ನಿಧಿ. ಇದನ್ನ ತಿಳಿದು ಆಕರ್ಷಿತರಾದರೆ ಅಲ್ಲಿ ಬೇರೆಯ ವಿಷಯದ ಬಗ್ಗೆ ಆಲೋಚಲಿಸಲಿಕ್ಕೆ ಇನ್ನೇನು ಉಳಿದಿರುವುದಿಲ್ಲ. ಆಕಳು ಕಪ್ಪಾದರೆ ಹಾಲು ಕಪ್ಪೆ ಎನ್ನುವ ನಾನ್ಮುಡಿ ಇದಕ್ಕೆ ಪುಷ್ಠಿ ನೀಡುತ್ತದೆ. ಗೆಳೆತನವು ಗುಣ ನೋಡಿ ಅಗಿದ್ದರೆ ಸಹವಾಸ ದೋಷದಿಂದ ಹಾಳಾದೆ ಎನ್ನುವ ಪ್ರಮೇಯವೆ ಬರಲಾರದು.

ಒಂದ ಕೊಟ್ಟರೆ ಶಿವ ಒಂದ ಕೊಡ ಎಂಬಂತೆ ಮೃದು ಸ್ವಭಾವವಿದ್ದರೆ ಸೌಂದರ್ಯದ ಕೊರತೆ ಎದ್ದು ಕಾಣುತ್ತದೆ. ಸೌಂದರ್ಯವಿದ್ದರೆ ಮೃದು ಸ್ವಭಾವ ಅಥವಾ ಒಳ್ಳೆಯ ಗುಣದ ನ್ಯೂನ್ಯತೆ ಇದ್ದಿರುತ್ತದೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಮಾತಂತೆ ಸೌಮ್ಯ & ಸೌಂದರ್ಯವು ಜೊತೆಗಿರುವುದಿಲ್ಲ ಎಂದು ವಾದಿಸಬಹುದು. ಇವೆರಡು ಜೊತೆಗಿರುವುದು ತುಂಬ ಅಪರೂಪ, ಇವೆರಡು ಜೊತೆಗಿದ್ದರೆ ಜೀವಿಸುವ ವಿಚಾರದಲ್ಲಿ ತೊಳಲಾಟ ನಡೆಸುವ ಸಾಧ್ಯತೆ ಇದ್ದಿರುತ್ತದೆ. ಇವೆರಡು ಜೊತೆಗೆ ಸಿಕ್ಕರೆ ಅದು ಅದೃಷ್ಠದ ಮನೆಯಲ್ಲಿ ನಲಿದಂತೆ ಎನ್ನುವ ಭಾವವ ಮೂಡಿಸುತ್ತದೆ.

ಸೌಂದರ್ಯ & ಹಣ ಅಹಂಕಾರಕ್ಕೆ, ಆಳಸಿತನಕ್ಕೆ ಬುನಾದಿಯಾದರೆ ಸೌಮ್ಯ  ಸ್ವಭಾವವು ಶಾಂತಿಯ ಸಂಕೇತ. ಬಹುಪಾಲು ಜನರನ್ನು ಸೌಂದರ್ಯ & ಹಣ ಆಕರ್ಷಿಸಿದರೆ ಅದು ದುರಾಸೆಯ ವರ್ತಮಾನ ಎಂದರೆ ತಪ್ಪಾಗಲಾರದು. ರೂಪವು ಮೋಹಕ್ಕೆ ಗುರಿಯಾದರೆ ಹಣವು ಭೋಗಕ್ಕೆ ಬೇಕಾಗುವ ಮೂಲವಸ್ತು. ಹಣ ಮತ್ತು ರೂಪ ಇವೆರಡರಿಂದ ಬದುಕು ಪರಿಪೂರ್ಣವಾಗಲಾರದು ಮತ್ತು ಮನಸಿಗೆ ಬೇಕಾಗುವ ಸಂತೋಷವನ್ನು ಒದಗಿಸಲಾರದು. ಇವೆರಡು ಬದುಕಲಿ ಎದ್ದು ಕಾಣುವ ಕ್ಷಣಿಕ ಸುಖದ ಮೂಲಗಳು. ಆದರೆ ಸೌಮ್ಯ ಸ್ವಭಾವವು ಮನಸಿಗೆ ನೆಮ್ಮದಿಯನ್ನ ನೀಡಿ ಹೊಂದಾಣಿಕೆಯಲಿ ಹೊನ್ನ ಸಂಪಾದಿಸಿ ಭೋಗಕ್ಕೆ ನಾಂದಿ ಹಾಡಿ ಬದುಕಿಗೆ ಭದ್ರ ಬುನಾದಿ ಹಾಕುತ್ತದೆ.

ಬಡತನ ಸಿರಿತನದ ಅರಿವಿಲ್ಲದಂತೆ ಹೃದಯ ಶ್ರಿಮಂತಿಕೆಯಲ್ಲಿ ನೆಮ್ಮದಿಯನ್ನು ಕಾಣುವುದು ಸೌಮ್ಯ ಸ್ವಭಾವ. ಕ್ಷಣಿಕ ಸುಖಕ್ಕೆ ದಾಸರಾಗಿ ಜೀವೆನವನ್ನು ಹಾಳುಮಾಡಿಕೊಂಡರೆ ಮೃದುಸ್ವಭಾವದವರಾಗುವ ಸಾಧ್ಯತೆಗಳಿರುತ್ತವೆ. ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಮುಗಿಯಿತು ಎಂಬಂತೆ ಕಳೆದ ಸಮಯವು ಮತ್ತೆ ತಿರುಗಿ ಬರಲಾರದು. ಯಾವುದೇ ಒಂದು ವಿಶಯವನ್ನು ಸರಿಯಾಗಿ ಅರ್ಥೈಸಿಕೊಳ್ಲಬೇಕಾದರೆ ತಾಳ್ಮೆ ಅವಶ್ಯಕ. ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿ ನೋಡು ಎನ್ನುವುದು ಸೌಮ್ಯ ಸ್ವಭಾವದ ವ್ಯಕ್ತಿಗಳಲ್ಲಿ ಗೋಚರಿಸುತ್ತದೆ.

ಸೌಂದರ್ಯದ ಜೊತೆ ಮೃದು ಸ್ವಭಾವವಿದ್ದರೆ ತುಂಬಿದ ಕೊಡ ತುಳುಕುವುದಿಲ್ಲವೆಂದು ಶ್ಲಾಘಿಸಿದರೆ ದುರ್ಹಂಕಾರಿಯು ವಿಲಕ್ಷಣವಾಗಿದ್ದರೆ ರೂಪಕ್ಕೆ ತಕ್ಕ ಗುಣ ಅಥವಾ ಅವರಿಂದ ಎನಾದರು ಕೆಡುಕಾದರೆ ನಾಗರಹಾವು ಕಚ್ಚದಿರುತ್ತದೆಯೇ ಎಂದು ನುಡಿವರು. ಜಾತಿ ಕುಲವಿಲ್ಲದೆ ಮೃದು ಸ್ವಭಾವಕ್ಕೆ ಮನ ಸೋತರೆ ಹೀಯಾಳಿಸುವ ಸಮಾಜ ಎದುರಿಗೆ ಬಂದು ತಡೆಗೋಡೆಯೊಡ್ಡುತ್ತದೆ. ರೂಪ ಎನ್ನುವುದು ಯವ್ವನದಲ್ಲಿ ಅಂದವಾಗಿ ಕಂಡರೆ ಮೋಹಿಸುವ ತನಕ ಸುಖ ನೀಡುತ್ತದೆ ಆದರೆ ಸೌಮ್ಯ ಸ್ವಭಾವವು ಜೀವನದ ಕೊನೆತನಕ ಜೊತೆಯಿದ್ದು ಪ್ರತಿಯೊಂದು ಹಂತದಲ್ಲು ಧನಾತ್ಮಕವಾಗಿ ಸ್ಪಂದಿಸುತ್ತದೆ. ಸೌಂದರ್ಯವು ಬಾಹ್ಯವಾಗಿ ಗೊಚರಿಸುವುದರಿಂದ ಅಪಘಾತದಲ್ಲಿ ವಿಲಕ್ಷಣವಾಗಿ ಬಯಸಿದ ರೂಪವನ್ನು ಕಳೆದುಕೊಳ್ಲುವ ಸಾಧ್ಯತೆಗಳಿರುತ್ತವೆ. ಆದರೆ ಸೌಮ್ಯ ಸ್ವಭಾವವು ಎಂದು ಮಾಸದ ಆಗಸದಂತಿರುತ್ತದೆ. ಬಾಹ್ಯ ಅಂದವು ಸೌಂದರ್ಯ ಎನಿಸಿಕೊಂಡರೆ ಆಂತರಿಕ  ಸೌಂದರ್ಯವು ಒಳ್ಳೆತನ ವೆನಿಸಿಕೊಳ್ಳುತ್ತದೆ. ಬಾಹ್ಯ ಸೌಂದರ್ಯವು ಕ್ಷೀಣಿಸಬಹುದು ಆದರೆ ಆಂತರಿಕ ಸೌಂದರ್ಯವು ಜನರನ್ನು ಗೆದ್ದು ಗಜವನ್ನು ಗೆಲ್ಲಲು ನಾಂದಿ ಹಾಡುತ್ತದೆ. ಇದರಿಂದಾಗಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಇದನ್ನ ಒದಿದ ಮೇಲೆ ಸೌಮ್ಯ ಮತ್ತು ಸುಂದರೆತೆಯಲ್ಲಿ ಯಾವುದು ಮುಖ್ಯ ಎನ್ನುವುದು ಅವರವರ ಭಾವಕ್ಕೆ ಬಿಟ್ಟ ವಿಷಯ.

...ಗಂಭೀರವಾದ ಕಡಲು ಸಹ ಚಂಚಲವಾಗುವುದು...


ಗಂಭೀರತೆಗೆ ಹೆಸರಾದ ಕಡಲು ಸಹ ಒಮ್ಮೊಮ್ಮೆ ತನ್ನ ಮಿತಿಯನ್ನು ಮೀರಿ ವರ್ತಿಸುತ್ತದೆ. ಗಂಭೀರ ವರ್ತನೆಯ ವ್ಯಕ್ತಿಗಳು ಒಮ್ಮೊಮ್ಮೆ ಹಾಸ್ಯಾಸ್ಪದಕ್ಕೆ ಗುರಿಯಾಗುತ್ತಾರೆ ಅಂತಹ ಸಂದರ್ಭದಲ್ಲಿ ಈ ಮಾತು ಒಂದೊಳ್ಳೆ ಉದಾಹರಣೆಯಾಗುತ್ತದೆ. ಆದರ್ಶ ವ್ಯಕ್ತಿ ಅಥವ ಉತ್ತಮ ಸ್ವಭಾವವನ್ನ ಹೊಂದಿರ್ತಕ್ಕಂತವರು ಕೆಲವೊಮ್ಮೆ ಬೇರಾವುದೋ ಆಕರ್ಷಣೆಗೆ ಒಳಗಾಗಿ ಮೋಹದಿಂದ ಮನಸಿಗೆ ಹಿಡಿಸುವುದನ್ನು ಪಡೆಯಲು ತನ್ನ ತನವನ್ನು ಬಿಟ್ಟು ಹಠವಾದಿ, ಭಿಕ್ಷಾರ್ಥಿ, ಛಲಗಾರ, ಮೋಹಗಾರರಗುತ್ತಾರೆ. ಚಂಚಲತೆಗೆ ದಾಸರಾಗಿ   ತಮ್ಮ ಗಂಭೀರರತೆಯನ್ನು ತೊರೆದು ಆಕ್ಷೇಪಾರ್ಹರಾಗಿ ಬಿಂಬಿತರಾಗುತ್ತಾರೆ.

ಭೋರ್ಗರೆವ ಕಡಲು ಸಹ ಕೆಲವೊಮ್ಮೆ ತನ್ನ ಮಿತಿಯನ್ನು ದಾಟಿ ಮೆರೆಯುತ್ತದೆ. ಇದರಿಂದಾಗಿ ಅಪಾರ ನಷ್ಟವಾಗುವುದಲ್ಲದೆ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಕಡಲಿನಲ್ಲಿ ಬೀಸುವ ಬಿರುಗಾಳಿಯಿಂದ ಪರಿಸರದಲ್ಲಿ ಅಪಾರ ಮಳೆಯುಂಟಾಗುತ್ತದೆ. ಅದೇ ರೀತಿ ಗಂಭೀರವಾದಂತಹ ಕಡಲು ಕೂಡ ಪ್ರಾಕೃತಿಕ ವೈಪರಿತ್ಯದಿಂದ ಅಲೆಗಳ ಭೋರ್ಗರೆತದಲ್ಲಿ ಏರಿಳಿತವನ್ನು ಪಡೆಯುತ್ತದೆ.ಹುಣ್ಣಿಮೆ ದಿನದಂದು ಅಲೆಗಳ ಭೋರ್ಗರೆತ ಜೋರಾಗಿದ್ದು ತೀರದ ತುದಿಯನ್ನು ತಲುಪಲು ಮುನ್ನುಗ್ಗುತ್ತದೆ. ಅದೇ ರೀತಿ ಅಮವಾಸ್ಯೆಯ ದಿನದಂದು ತೆರೆಗಳು ಸಹಜ ಸ್ಟಿತಿಯಲ್ಲಿರುತ್ತವೆ. ಈ ರೀತಿಯಾಗಿ ಗಂಭೀರವಾದ ಕಡಲು ಸಹ ಚಂಚಲತೆಯನ್ನು ಪಡೆಯುತ್ತದೆ.

ಮಂಗನಿಂದ ಮಾನವನಾದಂತಹ ಮನುಜರು ಎಷ್ಟೆ ಗಂಭೀರವಾಗಿದ್ದರೂ ಮರ್ಕಟ ಮನಸ್ಸಿನಿಂದ ಕೆಲವೊಂದು ಕ್ಷಣದಲಿ ಚಂಚಲವಾಗುತ್ತಾರೆ. ಇದಕ್ಕೆ ಕಾರಣಗಳು ಹಲವಾರು ರೀತಿಯಲ್ಲಿರುತ್ತವೆ. ಅವೆನೆಂದರೆ ಬೇರೆಯವರು ಮಾತಿಗೆ ಮರುಳಾಗುತಲಿ ಹೊಸ ಬಯಕೆಯ ದಾಸರಾಗಿ ಹೊಸತನ ಪಡೆಯುವ ತವಕದಲಿ ಬದಲಾವಣೆಯನು ಇಛ್ಚಿಸುತಲಿ ಉತ್ತುಂಗವನು ಎರುವುದರಿಂದ, ಸಿರಿವಂತರಾಗುವುದರಿಂದ, ಕೆಲಸ ಮಾಡುವ ವಾತಾವರಣ ಮತ್ತು ಪರಿಸರದಿಂದ, ಒಡನಾಟದಿಂದ, ಪರಿಸ್ಥಿತಿಯಿಂದ, ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದರಿಂದ, ಹುಚ್ಚು ಆಸೆ ಗಳಿಂದ ಗಂಭೀರತೆಯ ವ್ಯಕ್ತಿತ್ವ ಹಾಸ್ಯಾಸ್ಪದಕ್ಕೆ ಗುರಿಯಾಗುತ್ತದೆ.   

ಸಮುದ್ರದಡಿಯಲ್ಲಿ ಉಂಟಾಗುವ ಭೂಕಂಪನದಿಂದ ಎಳುವ ಬ್ರಹದಾಕಾರದ ಅಲೆಗಳು ಸುನಾಮಿಯೆಂಬ ಹೆಸರಿನಲ್ಲಿ ನಾಡನ್ನು ನುಂಗುವ ಕಡಲಳೆಗಳು ಗಂಭೀರತೆಗೆ ಹೆಸರಾಗಿರುವ ಸಮುದ್ರರಾಜನನ್ನು ಚಂಚಲಗೊಳಿಸಿ ಜನರ ಮಾತಿಗೆ ಸಿಲುಕುವಂತೆ, ಶಾಪಕ್ಕೆ ಗುರಿಯಾಗುವಂತೆ ಮಾಡುತ್ತದೆ. ಒಡಲಲಿ ಆಗುವಂತಹ ಬದಲಾವಣೆ ಹೇಗೆ ಕಡಲನು ಕಂಪಿಸಿ ತನ್ನ ಮಿತಿಯನ್ನು ಮೀರುತ್ತದೆಯೋ ಹಾಗೆ ತನ್ನ ಗಂಭೀರತೆಯನ್ನು ತೊರೆದು ಚಂಚಲವಾಗುವಂತೆ ಮಾಡುತ್ತದೆ.

ತನ್ನ ಮನದಿಛ್ಚೆಗೆ ಸ್ಪಂದಿಸಿದ ಮಾತು, ಚಂಚಲತೆಯನ್ನು ಹುಟ್ಟಿಸಿ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸಿ ಹೊರಹೊಮ್ಮುವ ಭಾವನೆ ಆ ವ್ಯಕ್ತಿಯನ್ನು ಗೌರವಿಸಲು ಕಾರಣವಾದ ಗುಣಗಳು ಮರೆಯಾಗಿ ಇನ್ನೊಂದು ರೀತಿಯ ಭಾವನೆ ವ್ಯಕ್ತವಾದಾಗ ತನ್ನ ಹಿಡಿತವನ್ನು ಕಳೆದುಕೊಂಡು ನಿಂದನೆಗೆ, ಅಗೌರವಕ್ಕೆ, ದೂಷಣೆಗೆ, ಹಾಸ್ಯಾಸ್ಪದಕ್ಕೆ ಗುರಿಯಾಗಿ ಆರೋಪಿಯಾಗಿ ಅಥವಾ ಕೆಲವೊಮ್ಮೆ ಅಪರಾಧಿಯಾಗಿ ಬಿಂಬಿತವಾಗುತ್ತಾನೆ.

ಮೇಲಿನ ಮಾತುಗಳು, ಗಂಭೀರತೆಯಲ್ಲಿ ಚಂಚಲತೆ ಹೇಗೆ ಹೊರಹೊಮ್ಮುತ್ತದೆ ಎನ್ನುವುದನ್ನು ಬಿಂಬಿಸುತ್ತದೆ. ಮಿತಿ ಮೀರಿದ ವರ್ತನೆ ಸ್ಥಿರತೆ, ಗಂಭೀರತೆಯನ್ನು ಮರೆಯಾಗಿಸಿ ಅಗೌರವ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಗಂಭೀರತೆಯ ವ್ಯಕ್ತಿತ್ವ ಚಂಚಲವಾದಾಗ ಅದಕ್ಕೆ ತನ್ನ ತಪ್ಪನ್ನು ಮನವರಿಕೆ ಮಾಡಿಕೊಟ್ಟು ಇನ್ನೊಂದು ಅವಕಾಶ ನೀಡಿ ಪರಿಕ್ಷಿಸುವುದು ಅಥವಾ ಕಾದುನೋಡುವುದರಿಂದ ವ್ಯಕ್ತಿಯ ಸರಿಯಾದ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ.

Tuesday, March 5, 2013

|| ಬಾಡಿದ ಹೂ ||


ಜೀವನದ ಜಂಜಾಟದಲಿ
ಅನುರಾಗ ಏನಾಯ್ತು?
ಅನುಕಂಪ ಮರೆಯಾಯ್ತು?
ಮನಸಿನ ಭಾವನೆಗೆ
ಮೋಸವೇ ಮೌಲ್ಯವಾಯ್ತು ||

ನಾ ನಂಬಿದ ಜೀವವು ನಿಂದೇನಾ?
ಬೆಲೆಯಿಲ್ಲದ ಭಾವವು ನಂದೇನಾ?
ವಹಿಸಿದ ಕಾಳಜಿ ಕಾಣದಾಗ
ನೀರಿನಲಿ ಮಾಡಿದ ಹೋಮವಾಯ್ತು
ರಸವಿಲ್ಲದ ನವರಸ ಮೊಗದಲಿ ತುಂಬಿದಾಗ ||

ಎದುರು ನೋಡುತ ಕಾಯುವೆ ಒಲವಿಗೆ
ಮನಸಲಿ ಮೂಡಿದೆ ಬಳಿಬರುವ ಭರವಸೆಯು
ಗಮನವ ಸೆಳೆಯುವ ಕನಸಾಗದಿರು
ಹನಿ ಹನಿ ಉದುರಿದರು ಕಣ್ಣಂಚಿನಲಿ
ಬಾಡಿದ ಹೂ ಅರಳುವ ಆಸೆ ಎದೆಯಾಳದಲಿ ||