Tuesday, December 31, 2019

ಮುಂದೊಂದು ದಿನ ಹೇಗಾಗಬಹುದೇ?



_ಪೇಟೆಯಲ್ಲಿ ಪುನರಾವರ್ತಿತವಾಗಲಿದೆ ಅವಿಭಕ್ತ ಕುಟುಂಬದ ಪರಿಕಲ್ಪನೆ..._

ಬೆಳೆಯುತ್ತಿರುವ ಜಗತ್ತಿನಲ್ಲಿ ಪ್ರತಿಯೊಂದು ಕಣಕಣವೂ ಮತ್ತು ಪ್ರತಿಯೊಂದು ಕ್ಷಣಕ್ಷಣವೂ ಬದಲಾಗುತ್ತಿರುತ್ತಿದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಹೀಗೆ ಬದಲಾದ ಕಾಲಘಟ್ಟಗಳನ್ನು ನೋಡಿದರೆ ಎಷ್ಟೆಲ್ಲಾ ಪರಿವರ್ತನೆಗಳು ಕಾಣಸಿಗುತ್ತವೆ. ಮೊದಲಿದ್ದ ನೀತಿ-ನಿಯಮಗಳು, ಹೊಂದಾಣಿಕೆಗಳು, ಒಗ್ಗಟ್ಟು, ನಮ್ಮವರೆಂಬ ಭಾವನೆಗಳು, ಸಹಕಾರ ಮನೋಭಾವಗಳು, ಪ್ರೀತಿ-ವಾತ್ಸಲ್ಯ-ಮಮತೆಯ ವಿಷಯಗಳಲ್ಲಿ ಗಣನೀಯ ಬದಲಾವಣೆಗಳಾಗಿರುವುದು ನಮ್ಮ ಅನುಭವಕ್ಕೆ ಬರುತ್ತಿವೆ.

ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳ ಬಗೆಗಿನ ಪರಿಕಲ್ಪನೆಯನ್ನು ನಾನಿಂದು ನನ್ನ ವಿಚಾರಧಾರೆಯಿಂದ ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯಗಳನ್ನು ಹಂಚಿಕೊಳ್ಳುವ ಮುಂಚೆ ನಾನೂ ಸಹ ಈ ಎರಡೂ ಪ್ರಕಾರದ ಕುಟುಂಬ ವ್ಯವಸ್ಠೆಯಲ್ಲಿ ಒಬ್ಬನಾಗಿದ್ದವನು, ಹೀಗಾಗಿ ಇದರ ಬಗ್ಗೆ ಮತ್ತು ಮುಂದಿನ ಆಗು ಹೋಗುಗಳ ಬಗ್ಗೆ ನನ್ನ ವಿಚಾರಧಾರೆಗೆ ಒಂದು ರೂಪು ನೀಡಬಹುದೆಂದು ಅಂದುಕೊಂಡಿದ್ದೇನೆ.

ಅವಿಭಕ್ತ ಕುಟುಂಬವಿದು ಮೊದಲು ನೀಡುವ ವರವೆಂದರೆ ಅದು ಸಂಸ್ಕಾರ. ತುಂಬು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತನ್ನ ಅಕ್ಕ-ತಂಗಿ ಮತ್ತು ಅಣ್ಣ-ತಮ್ಮಂದಿರ ನಡುವೆ ಬೆಳೆಯುವ ನಾವು ಜನರೊಂದಿಗೆ ಹೇಗೆ ಒಡನಾಡಬೇಕು, ಮಾತಾಡಬೇಕು, ಗುರು-ಹಿರಿಯರನ್ನು ಹೇಗೆ ಗೌರವಿಸಬೇಕು ಹಾಗೂ ಮತ್ತವರ ಬೆಲೆಯೇನು ಮತ್ತು ಸಮೂಹದಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ತಿಳಿಸಿಕೊಡುತ್ತದೆ.. ಆಡಿ-ಬೆಳೆವಂತಹ ಖುಷಿ, ವೈವಿಧ್ಯಮಯ ಆಟೋಟಗಳ ಪರಿಚಯ ಮತ್ತು ಅವುಗಳನ್ನಾಡಿದ ಅನುಭವದ ಸಂತೋಷ ವಿಭಕ್ತ ಕುಟುಂಬದ ಪರಿಸರದಿಂದ ಸಿಗಲಾರದು.

ಆದರೆ ದೊಡ್ಡ ಕುಟುಂಬವನ್ನು ನಿಭಾಯಿಸುವ ಜವಾಬ್ಧಾರಿ ಕುಟುಂಬದ ಹಿರಿಯನ ಮೇಲಿರುವುದರಿಂದ ಕುಟುಂಬದ ಮಕ್ಕಳಿಗೆಲ್ಲಾ ಉತ್ತಮ ಶಿಕ್ಷಣ ಸಿಗುತ್ತದೆಂಬ ಭರವಸೆ ಇರಲಾರದು. ಹೀಗಾಗಿ ಹಿರಿಯನ ಅನುಜರ ಮಕ್ಕಳು ತನ್ನಪ್ಪ ನಮಗೆ ಸರಿಯಾಗಿ ಕಲಿಸಲಿಲ್ಲವೆಂಬ ಆಪಾದನೆ ಮಾಡಲು ಸಹಕಾರಿಯಾಗಿರುತ್ತದೆ. ಆದರೆ ಆಪಾದನೆ ಮಾಡುವ ಮಕ್ಕಳು ತಾವೆಷ್ಟು ಓದಿ ಗುಡ್ಡೆ ಹಾಕಿದ್ದೇವೆ ಅಥವಾ ತಮ್ಮ ಬುದ್ಧಿಮತ್ತೆಯೆಷ್ಟೆಂಬುದನ್ನು ಅರಿಯದೆ ಹೆತ್ತವರ ಮೇಲೆ ಆಪಾದನೆ ಹೊರಿಸುವುದು ಸರ್ವೆ ಸಾಮಾನ್ಯವಾಗಿದೆ. ಅವಿಭಕ್ತ ಕುಟುಂಬದಲ್ಲೂ ಸಹ ತಂದೆಯಾದವನು ತನ್ನ ಮಕ್ಕಳ ಏಳಿಗೆಗಾಗಿ ಅಗ್ರಜನನ್ನು ಒತ್ತಾಯ ಪಡಿಸಿ ಅವನೊಂದಿಗೆ ಜಗಳವಾಡಿಯಾದರೂ ಹಣವನ್ನೋ ಅಥವಾ ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನೋ ತಂದುಕೊಡುತ್ತಾನೆಂಬುದನ್ನು ಮಕ್ಕಳು ಅರ್ಥ ಮಾಡಿಕೊಂಡು ವಿಭಕ್ತ ಕುಟುಂಬವಾದ ಮೇಲೆ ಹೆತ್ತವರನ್ನು ಹಿತವಾಗಿ ನೋಡಿಕೊಳ್ಳುವುದು ಉಚಿತವಾಗಿರುತ್ತದೆ.

ಹಾಗೆ ವಿಭಕ್ತ ಕುಟುಂಬದಲ್ಲಿ ಒಡನಾಡಿಗಳಾರು ಇರುವುದಿಲ್ಲ. ಆದರೆ ಮಕ್ಕಳ ಓದು ಮತ್ತು  ಬಯಸಿದ್ದನ್ನು ಕೊಡಿಸುವಲ್ಲಿ ಸಹಕಾರಿಯಾಗಿರುತ್ತದೆ. ನಾನು ನನ್ನದೆಂಬ ಬಾವ ಬೆಳೆಯುತ್ತದೆ. ಹೊರ ಜಗತ್ತಿನೊಂದಿಗೆ ಬೆಳೆಯುವ ಅವಕಾಶ ಸಿಕ್ಕರೆ ಒಳಿತು ಇಲ್ಲವೆಂದರೆ ಬೆಳೆಯುವ ಮಗುವಿನಲ್ಲಿ ಸಂಕುಚಿತ ಮನೋಬಾವ ಬೆಳೆಯುತ್ತದೆ. ಅಲ್ಲದೆ ಬೇರೆಡೆಗೆ ಹೋಗುತ್ತೇನೆಂದರೆ ಮನೆಯನ್ನು ನೋಡಿಕೊ ಳ್ಳುವ ಜನ ಸಿಗುವುದಿಲ್ಲ ಅಲ್ಲದೆ ನಮಗೆ ಸರಿಯಾದ ರಕ್ಷಣೆ ಇರುವುದಿಲ್ಲ.

ಆದರೆ, ಕಾಲಚಕ್ರ ಉರುಳಿದಂತೆ ಹೇಗೆ ಹಳ್ಳಿಗಳಲ್ಲಿ ತುಂಬಿದ್ದ ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿ ವಿಭಕ್ತ ಕುಟುಂಬಗಳಾಗಿವೆಯೋ ಹಾಗೆ ಮುಂದೊಂದು ದಿನ ಪಟ್ಟಣಗಳಲ್ಲಿ ಈ ಅವಿಭಕ್ತ ಕುಟುಂಬದ ಪರಿಕಲ್ಪನೆಗಳು ಮತ್ತೆ ಭೂಮಿಕೆಗೆ ಬರುತ್ತವೆಯೇನೊ ಎಂದೆನಿಸುತ್ತಿದೆ. ಆದರೆ ಈ ಅವಿಭಕ್ತ ಕುಟುಂಬಗಳು ಸ್ವಂತ ಅಣ್ಣ-ತಮ್ಮಂದಿರ ಸಂಸಾರಗಳಿಂದ ಕೂಡಿರುವುದಿಲ್ಲ ಬದಲಾಗಿ ಸ್ನೇಹ ಜೀವಿಗಳ ಸಂಸಾರಗಳ ಸಮ್ಮಿಲನವಾಗಿರುತ್ತವೆ.

ಯಾಕೆ ಹೀಗಾಗುತ್ತದೆ ಎಂದು ನೀವು ಆಲೋಚಿಸುವುದಾದರೆ, ಈಗಾಗಲೆ ಆರತಿಗೊಂದು ಕೀರುತಿಗೊಂದು ಎಂಬ ನಿಲುವುಗಳು ಮಾಯವಾಗಿ ಹೆಣ್ಣಾಗಲಿ ಗಂಡಾಗಲಿ ನಮಗೊಂದೆ ಸಾಕು ಎಂಬ ವಿಚಾರಧಾರೆ ಹರಿಯುತ್ತಿದೆ ಮತ್ತು ಅದೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಂದೇ ಕುಟುಂಬದ ಅಣ್ತಮ್ಮಂದಿರ ಅವಿಭಕ್ತ ಕುಟುಂಬ ಏರ್ಪಡುವುದು ದೂರದ ಮಾತು. ಬದಲಾಗಿ ಉತ್ತಮ ಸ್ನೇಹ ಜೀವಿಗಳು ಜೊತೆಯಾಗಿ ಒಂದೇ ಸೂರಲ್ಲಿ ವಾಸಿಸಲು ಅಣಿಯಾಗಬಹುದು.

ಇಂತಹ ಪರಿಸ್ಥಿತಿಗಳಿಗೆ ಕಾರಣಗಳೆಂದರೆ:

೧. ಏರುತ್ತಿರುವ ದಿನಚರಿಗಳ ಬೆಲೆ.
೨. ಪಟ್ಟಣಗಳಲ್ಲಿ ಏರುತ್ತಿರುವ ಮನೆಗಳ ಬಾಡಿಗೆ.
೩. ಸ್ವಂತ ಮನೆ ಕಟ್ಟಿ ಬದುಕಲು ಬೇಕಾದ ಜಾಗ ಮತ್ತು ಆರ್ಥಿಕ ಕೊರತೆಯಾಗಬಹುದು.
೪. ಸ್ನೇಹದಲ್ಲಿ ಕಲಹ ಮತ್ತು ಅಹಂಕಾರದ ಮಾತುಗಳು ಬರದಿರಬಹುದೆಂಬ ಭರವಸೆ.
೫. ಬಾಡಿಗೆ ಮನೆಗಳ ಕೊರತೆ ಎದುರಾಗಬಹುದು.
೬. ತನ್ನ ಮಗ/ಮಗಳಿಗೆ ಆಟವಾಡಲು ಜೊತೆಯಾಗಿ ಇನ್ನೊಬ್ಬರು ಸಿಗಲೆಂಬ ಆಲೋಚನೆ.

ಹೀಗೆ ಪಟ್ಟಿ ಮಾಡಿದರೆ ಇನ್ನೂ ಹಲವು ಕಾರಣಗಳು ಸಿಗಬಹುದು. ಹೀಗಾಗಿ ಈ ಅವಿಭಕ್ತ ಕುಟುಂಬಗಳೆಂಬ ಪರಿಕಲ್ಪನೆ ಪುನಃ ಮುನ್ನುಡಿಗೆ ಬರಬಹುದು. ಇವನ್ನೆಲ್ಲಾ ಆಲೋಚಿಸಿದರೆ ನಾವೆಲ್ಲೋ 'ನಾವು ನಮ್ಮನೆಯವರೆಂಬ ಭಾವವನ್ನು' ಕಳೆದುಕೊಂಡು 'ನಾವು ನಮ್ಮ ಸ್ನೇಹಿತರೆಂಬ’ ಬಾವಕ್ಕೆ ಒಲವನ್ನು ತೋರಿಸುತ್ತಿದ್ದೇವೆಯೇನೋ ಎಂದೆನಿಸುತ್ತಿದೆ.  ಅಲ್ವೇ?

ಹೀಗೆ ಸ್ನೇಹ ಜೀವಿಗಳ ಅವಿಭಕ್ತ ಕುಟುಂಬದಲ್ಲಿ ಅಸಮಾನತೆಯ ಗೊಂದಲ ಬರುವುದಿಲ್ಲ ಮತ್ತು ತನ್ನ ಮಕ್ಕಳಿಗೆ ಸರಿಯಾದ ವಿದ್ಯೆಕೊಡಲಿಲ್ಲವೆಂಬ ಅಸಮಾಧಾನ ಇರುವುದಿಲ್ಲ. ಯಾಕೆಂದರೆ ಇಲ್ಲಿ ಜೊತೆಯಾಗಿ ಒಂದೇ ಕುಟುಂಬದಲ್ಲಿರುವ ಸ್ನೇಹಿತರಿಬ್ಬರೂ ಸಹ ಸಮಾನ ಜವಬ್ಧಾರರು. ಹಾಗಾಗಿ ತಮ್ಮ ತಮ್ಮ ಮಕ್ಕಳಿಗೆ ಬೇಕಾದ ಅವಶ್ಯಕ ತೆಗಳನ್ನು ಮತ್ತು ವಿದ್ಯೆಯನ್ನು ಕೊಡಿಸುವುದು ಅವರವರ ದುಡಿಮೆ ಮತ್ತು ಆಸೆಗಳಿಗೆ ಅನುಗುಣವಾಗಿರುತ್ತವೆ.  ಹೀಗಾಗಿ ತನಗೆ ಅನ್ಯಾಯವಾಗಿದೆ ಅಥವಾ ತನ್ನಪ್ಪನನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂಬಂತಹ ಮನಸ್ತಾಪಗಳು ಭುಗಿಲೇಳುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಇಂತಹ ಪರಿಕಲ್ಪನೆಗೆ ಜನರ ಮನಸ್ಸು ಒಗ್ಗಿಕೊಳ್ಳುವ ಸಾಧ್ಯತೆಗಳಿವೆ.

ಹೆಂಡತಿಯ ಗೆಳತಿಯ ಕುಟುಂಬದವರೊಂದಿಗೋ ಅಥವಾ ಗಂಡನ ಸ್ನೇಹಿತನೋದಿಗೋ ಹೊಂದಿಕೊಂಡು ಬಾಳ್ವೆ ಮಾಡುವ ದಿನ ಬಹಳ ದೂರವಿಲ್ಲವೆಂದೆನಿಸುತ್ತಿದೆ. ಯಾಕೆಂದರೆ ಹಳ್ಳಿಗಳೆಲ್ಲ ತರುಣರಿಲ್ಲದೆ ಬಿಕೋ ಎನ್ನುತ್ತಿದೆ ಯಾಕೆಂದರೆ ಕಲಿತ ಮಕ್ಕಳೆಲ್ಲಾ ಹೆತ್ತವರನ್ನು ಬಿಟ್ಟು ಪೇಟೆ ಸೇರಾಗಿದೆ. ಅಲ್ಲದೆ ಕೃಷಿ ಮಾಡುವವ ಕೀಳೆಂಬ ಮನೋಭಾವ ಮಂದಿಯ ಮನದಲ್ಲಿ ಮೂಡಿರುವುದು ವಿಷಾದನೀಯ. ಅದಲ್ಲದೆ ನಮ್ಮ ಸರಕಾರಗಳೂ ಸಹ ಕೃಷಿಯ ಬಗ್ಗೆ ಮತ್ತು ಕೃಷಿಕರ ಬಗ್ಗೆ ತೋರುತ್ತಿರುವ ನಿಷ್ಕಾಳಜಿಯಿಂದ ಪೇಟೆಯ ಬದುಕೊಂದೇ ಬದುಕಿನ ಗುರಿ ಎಂಬಂತಾಗಿದೆ.

ಹೀಗಾಗಿ ಬದುಕಿನ ಅಡಿಪಾಯವನ್ನು ಭದ್ರವಾಗಿ ಹಾಕಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ಸಹ ಹುಟ್ಟಿ-ಬೆಳೆದ ಗೂಡನ್ನು ಬಿಟ್ಟು ಪೇಟೆಯತ್ತ ಹೆಜ್ಜೆ ಹಾಕುತ್ತಿರುವ ಹೊಸ ಪೀಳಿಗೆಯವರಿಂದಲೇ ಹೊಸ ಪರಿವರ್ತನೆಯ ಪರ್ವ ಸಾಧ್ಯವಾಗುತ್ತದೆ.

Wednesday, October 23, 2019

ಬಾಲತನದ ಪುಳಕ

ತುಂಬಿ ಹರಿವ ತೊರೆಯ
ತಟದಲ್ಲಿ ನಿಂತು
ಕಪ್ಪೆ ಹಾರುವ ಹಾಗೆ
ಕಲ್ಲನ್ನು ಎಸೆದು
ಬಾಲ ತನದ ದಿನವನ್ನು
ಸಂಭ್ರಮಿಸುವ ಪುಳಕ

ಪುಸ್ತಕದ ನಡುವಲ್ಲಿ
ನವಿಲುಗರಿಯಾನಿರಿಸಿ
ಮರಿ ಹಾಕಿದೆಯಾ ಎಂದು
ತೆರೆದು ನೋಡುವ ತವಕ

ಗುಡ್ಡ ಬೆಟ್ಟಗಳ ಅಲೆದು
ಕಲ್ಲು ಮುಳ್ಳುಗಳ ಮೆಟ್ಟಿ
ಪ್ರಾಕೃತಿಕ ಹಣ್ಣುಗಳನು
ಮನಸಾರೆ ಸವಿಯುವ ಬಯಕೆ

ಹಳ್ಳ ಕೊಳ್ಳದಲಿ ಜಿಗಿದು
ತಡೆಗೋಡೆ ನಡುವಲ್ಲಿ ಮಿಂದು
ಮೀಸಿ ಮುಟ್ಟಾಡುತಲಿ
ಉಗಿಸಿಕೊಳ್ಳುವ ಕಲಿಕೆ

ಅಧ್ಯಯನದ ನೆಪದಲ್ಲಿ
ಕುಂಬ್ರಿ ಹತ್ತುತ ಓಡಿ
ಗೇರ್ಬೀಜಕೆ ಚಿಕಿತ್ಸೆ ಮಾಡಿ
ಕಾಲ ಹರಣದ ಸುಲಿಗೆ

ಶಾಲೆ ಮುಗಿದ ಮೇಲೆ
ರವಿಯಾದಗ ಕಿವಿಯೋಲೆ
ಮನೆಗೆ ಮರಳುವ ಹೊತ್ತು
ವಿಶ್ರಮಿಸುವ ಮುಸ್ಸಂಜೆ ಗಳಿಗೆ

ಮರಳಿ ಬಯಸಲು ಆ ದಿನಗಳ
ಆಗುವುದೆ ಬಾಲಿಶದ ಯೋಚನೆಯು
ಬಾಣಗಳಿಗೆ ಬಾಲತನ ಬಂದಂತೆ
ಗುರಿ ತಪ್ಪಿದ ಅರ್ಜುನನ ಶರಗಳಿಗೆ

Thursday, October 17, 2019

ನವ ನಯ

ಮುಡಿಪಾಗಿದೆ ಮೂಡಿ
ಒಲವು
ನವ ನಯ ರೀತಿ
ಒಡೆಯಾ.... ನೀನೆ
ಬರುವೆಯಾ ಬೆಳಗಲು ಕಾಂತಿ

ಮುಂದುವರಿಸು
ಬಂದು ವರಿಸು
ಜೋಡಿಯಾಗಲು ಬಯಕೆ ನನಸು
ಕಾಯುವೆನು ನಿನ್ನ
ಅಂಗಾಲ ಕಾಂತಿಗೆ
ಮನಸು ಮಾಗಿದೆ
ಮಾವಾಗಿ ಬಾ

ಕಂಡ ಕನಸು
ನಿನ್ನ ಮನಸು
ಕೂಡಿಬಾಳಲು ಬದುಕೆ ಸೊಗಸು
ಜೊತೆಯಾಗೊ ಮುನ್ನ
ಸಮ್ಮತಿಯೆ ಚೆನ್ನ
ವಯಸು ವಾಲಿದೆ
ಬೆಳಕಾಗಿ ಬಾ

ವರಿಸು

ಇಂದುವನ್ನು ನೋಡುತ
ಬಂದು ಹೃದಯದಿ ಹಾಡುತ
ಏಕೆ ಹೀಗೆ ಕಾಡುವೆ
ಕನಸಲಿ ಮನಸಲಿ
ವರಿಸಲು ಬಾರದೆ

ಯಾರ ಕಣ್ಣನು ಕಾಣಲಿ
ಖುದ್ದು ನೋಡುವೆ ಬಾನಲಿ
ಕದ್ದು ಕಲಕಿದೆ ಚಿತ್ತ ಕೆಣಕಿದೆ
ಪ್ರೀತಿ ಕಲಸುತ
ಒಲವ ಬಡಿಸುತ
ನನ್ನ ಮನಸನು ಕೆಡಿಸಿದೆ
ಓ ಹುಡುಗ.... ಬಾ ಹುಡುಗ....
ಎಲ್ಲಿರುವೆ ಬಾ ಬೆಡಗ.....

ಯಾವ ಚಿತ್ರವ ನೋಡಲು
ನಿಂದೆ ರೂಪವು ಕಾಣಲು
ಬಿದ್ದು ನಗಿಸಿದೆ ಎದ್ದು ಕುಣಿಸಿದೆ
ನೀತಿ ಕಲಿಸಿದೆ
ನಿಯಮ ತಿಳಿಸಿದೆ
ನಮ್ಮ ಜೀವನ ತೆರೆದಿದೆ
ಓ ಹುಡುಗ.... ಬಾ ಹುಡುಗ....
ಓಡದಲೆ ಸೇರು ಬದುಕ.....

Thursday, October 3, 2019

ಕಾವ್ಯ ಗಾನ

ಕಾವ್ಯ ರಾಗದ ಲಯಕೆ
ಬಾವ ಜೀವದ ಬೆಸುಗೆ
ಕವಿಯ ಆಶಯಕೊಂದು
ರೂಪ ನೀಡುವುದು

ಗಾನ ತಾಳದ ಸ್ವರಕೆ
ಶ್ರೋತೃ ಮನ ತಲುಪುವುದು
ಗೀತೆ ಬರೆದ ಜನಕೆ
ತೃಪ್ತ ಹೆಮ್ಮೆ ಹೆಚ್ಚುವುದು

ದನಿಯ ಇಂಪು ಗಾಳಿಯಲ್ಲಿ
ನುಡಿಯ ಕುಣಿತ ಸ್ವರಗಳಲ್ಲಿ
ಕೇಳಿ ತಂಪು ಕಿವಿಗಳಲ್ಲಿ
ಹರಡಿತು ಕಂಪು ಬರಹದಲ್ಲಿ

ಈಜಿ ಮುಳುಗಲು ಪಾತಾಳಕೆ
ಅದುವೆ ರಾಗದ ಅವರೋಹಣ
ಗಿರಿಯ ಏರಿ ಗುರಿಯ ತಲುಪಲು
ಅದಕೆ ಹೆಸರು ಆರೋಹಣ

ಬೇಡಿ ಬಯಸಿ ಸಿದ್ಧಿಯಾದರೆ
ಇನಿತು ದೊರೆತ ಖುಷಿಯದು
ತೋಡಿ ಹರಿಸಿ ವೃದ್ಧಿಯಾದರೆ
ಗರ್ವ ತೊರೆದು ನಿಲ್ಲುವುದು

ಹತ್ತಿ ಮುಳುಗುವ ಜನರು ವಿರಳ
ಸಾಧನೆ ತುದಿಯ ಹತ್ತುವುದು ಸರಳ
ನಿರತವಾದರೆ ಭಕ್ತಿ ತಪವಿದು
ಅಭಿಮಾನವು ಸುತ್ತಿ ಬರುವುದು

Friday, September 27, 2019

ಮಗಳು ಧೃತಿ

ಆ ಪುಟ್ಟ ಕೈಯಲ್ಲಿ
ಚಿವುಟಾಡುವಾಗ
ಮನದಾಳದ ಖುಷಿಯೆಲ್ಲಾ
ಹೊರ ಹೊಮ್ಮಿತಾಗ

ಮೃದುವಾದ ಕಾಲಲ್ಲಿ
ನೀ ಒದೆಯುವಾಗ
ಎದೆಯಾಳದ ನಗುವೆಲ್ಲಾ
ಹೊರ ಚಿಮ್ಮಿತಾಗ

ನೀನೆ ನನ್ನ ಜಗವು
ನಿನ್ನಿಂದಲೆ ಹೊಸ ಯುಗವು
ಆ ತುಂಟ ನಗುವಲ್ಲಿ
ಮರೆವುದು ಎಲ್ಲಾ ನೋವು

ನವ ಮಾಸ ಕಳೆಯಿತು
ತಪಸಿನ ದ್ಯಾನದ ರೀತಿಯಲಿ
ತಂಪಾದ ಗಾಳಿ ಬೀಸಿತು
ಜನುಮದ ಸುದ್ದಿ ಕರೆಯಲ್ಲಿ

ಬಯಸಿದ ಪುಟಾಣಿ ಮುದ್ದು
ಅಳಿಸದೆ ಅಳುವ ನಿನ್ನ ಸದ್ದು
ಹೆರಿಗೆಯ ನೋವಲು ನಗುವ
ಕಂಡೆ ತಾಯಿ ಮೊಗದ ಬಾವ

ಭಯದಲಿ ಕಳೆದೆವು ನಿರತ
ದೇವರೆ ನೀನೆ ಗತಿಯೆನ್ನುತ
ಹೊಸತಿಗೆ ಕಾಯುತ ಸತಿ ಪತಿ
ಕ್ಷೇಮದಿ ಜನಿಸಲು ಮಗಳು ಧೃತಿ

Monday, September 23, 2019

ಬೇಸರದ ಬಾವ

ನನ್ನ ಕೊಳಲಿನ ನಾದಕ್ಕೊಂದು
ಸೋತ ಮೊಗ್ಗು ಅರಳಿದೆ
ಅವಳು ಕರೆಯಲು ನಾನು ಬರುವೆನು
ಕೃಷ್ಣಾ ಎಂದು ಧ್ಯಾನದಿ....

ಮಡದಿಯರೆಷ್ಟು ಇದ್ದರೇನು
ಪ್ರೀತಿ ಸೆಳೆತ ನಿನ್ನದು
ಭಕ್ತರೆಷ್ಟು ಬಂದರೇನು
ಭಕ್ತಿ ಮೊರೆತ ಬಂಧವು

ಹರಿವ ನದಿಯ ತೀರದಲ್ಲಿ
ಜೋತು ಮರದ ಟೊಂಗೆಗೊಂದು
ಕಟ್ಟಿ ತೂಗುವೆ ಉಯ್ಯಾಲೆಯ
ಮುದದ ಮರಕೆ ಬುನಾದಿಯ

ಕಾದು ಕುಳಿತಿಹ ಮನಕೆ ಎಂದು
ಬೇಸರದ ಭಾವಕೆ ನಾಮ ರಾಧೆ
ಅರಿತು ಬಾಳುವ ಜೋಡಿಗೆಂದು
ಸದೃಶವಾಗುವ ಯುಗ್ಮ ನಾವು

Wednesday, September 4, 2019

ಶ್ರಾವಣ ಶೃಂಗಾರ

ಶೃಂಗಾರಕೆ ಮೀಸಲದುವೆ
ಶ್ರಾವಣ ಮಾಸ
ವಿಷಯವನು ವಿನಿಮಯಿಸೆ
ಹೊಂದಾಣಿಕೆ ರಸ

ಶ್ರಾವಣದಲೆ ಬರುವುದುಂಟು
ಸೋಣೆ ಸಂಕ್ರಾಂತಿ
ತೋಟಗಳಲಿ ಊಳುವುದುಂಟು
ಮಾಡುತ ಸಂ ಕ್ರಾಂತಿ

ಶ್ರಾವಣಕು ಶೃಂಗಾರಕು
ಇರುವುದು ಆ ನಂಟು
ಆಷಾಡದ ವಿರಹಗಳನು
ಅಳಿಸುವುದು ಈ ಅಂಟು

ಕಾಮಕಾಗಿ ಹಪಹಪಿಸುವ
ಜನಕೆ ಹೇಳುವ ಮಾತುಂಟು
ಆಡಬೇಡ ಸೋಣೆ ಕುನ್ನಿಯ ಹಾಗೆ
ಹಾಕುವ ಮೊದಲು ಮೂರುಗಂಟು

ಆಷಾಡಲಿ ದೂರಿರುವ
ದಂಪತಿಗಳಿಗೆ ಮೀಸಲಾದ
ಶ್ರಾವಣದಲಿ ಜೊತೆಯಾಗುವ
ಜೋಡಿಗಳ ಶೃಂಗಾರದ ನಾದ

ಅನುರಾಗಕೆ ಮುಡಿಪಾಗಿದೆ
ಜನರ ಮಾತಿನಲಿ ಉಳಿದೋಗಿದೆ
ಹಾಡಿನಲೂ ಪದವಾಗಿದೆ
ಶ್ರಾವಣವೆಂದರೆ ಶೃಂಗಾರವಾಗಿದೆ

Saturday, August 24, 2019

ಬತ್ತಿ ಬದುಕು

ದೀಪ ನೀನು
ತೈಲ ನಾನು
ಬತ್ತಿಯಂತೆ ಬದುಕಿದು

ದೀಪ ಉರಿಯೆ
ತೈಲ ಸುರಿಯೆ
ಹಣತೆಯಂತೆ ಬಾಳಿದು

ತೈಲ ವಿರದ
ಬತ್ತಿ ವಿರಹಿಯು
ಬಹುಕಾಲ ಬೆಳಗದು

ಬದುಕು ಎಂದರೆ
ನಮ್ಮ ಸಂಗವು
ಸಾಮರಸ್ಯ ಸೊಗಸಿದು

ನೀನು ಮಿನುಗಲು
ನಾನು ಸವೆಯುವೆ
ಹೂವಿನ ಜೊತೆ
ದಾರದಂತೆ ಮುಡಿಗೇರುವೆ

ನಾವು ಬೆಳೆಯಲು
ನೋವು ಅಳಿಯಲು
ಬರೆದ ಕತೆ
ಅಳಿಯದಂತೆ ಶಿಲೆಯಾಗು

ಸೌಮ್ಯಾಂದ

ಅದೋ ನೋಡು
ನಾಗರ ಜಡೆಯವಳು
ಉದ್ದ ಲಂಗವ ಧರಿಸಿ
ಎತ್ತ ಹೊರಟಿಹಳೋ...

ಮುಡಿಯಲ್ಲಿ ಕಂಡ
ಮಲ್ಲಿಗೆ ಹೂವಿನ ಕಂಪು
ಮನದೊಳಗೆ ಗುಡಿ ಮಾಡಿ
ಮರುಳನಾಗಿಸಿಹುದು

ಹಣೆ ಅಗಲವಾಗಿಹುದು
ಸಿಂಧೂರ ನಗುತಿಹುದು
ಕಣ್ಣ ಮೇಲಿನ ಹುಬ್ಬು
ಕಣ್ಮನವ ಸೆಳೆದಿಹುದು

ಮುಖದಲ್ಲಿನ ಮುಗ್ಧತೆಯು
ಮನೆಯಲ್ಲಿ ನೆಲೆಸಿದರೆ
ಮನದೊಳಗೆ ನೆಮ್ಮದಿಯಿರಲು
ಮನ್ಮಥನ ಮಣಿಸಿವೆನು

ಸ್ಪಷ್ಟ ಸಂದೇಶ ಬರದಿರಲು
ಕಷ್ಟ ಕಾರ್ಪಣ್ಯ ಬದಿಗಿರಲು
ಕಾಣುವುದೇ ಅವಳಂದಕೆ
ನನ್ನ ಮನದ ಮನವಿ

ರೂಪದಲಿ ಲಕ್ಷ್ಮಿ ದೇವಿಯು
ನಡಿತೆಯಲಿ ಜಾನಕಿಯು
ರಾಗದಲಿ ಶಾರದೆಯು
ರೌದ್ರದಲಿ ಮಹಾದುರ್ಗಿಯು

ಇವಳೆ ಸಿಗಬಹುದೇ
ಬಾಳಿನಲಿ ಹೆಜ್ಜೆಯಿಡಲು
ಸೌಮ್ಯಾಂದಕೆ ಸೋತಿರಲು
ಬಯಕೆ ಬಲಿತಿಹುದು

Thursday, August 15, 2019

ಎಲ್ಲೋ ಮಳೆ

ಎಲ್ಲೋ ಮಳೆಯು
ಇನ್ನೆಲ್ಲೋ ಹೊಳೆಯು
ಇದುವೆ ಜೀವನ ಗಾಥೆಯು
ಮಹಾ ಮಳೆಗೆ
ಉತ್ತರ ತತ್ತರ
ಮಲೆನಾಡ ಅಳಲಿಗೆ
ಕರಾವಳಿ ಕಂಪನ
ಎಲ್ಲಿಂದ ಎಲ್ಲಿಗೋ
ಪ್ರವಾಹದ ಬಂಧನ

ಗುರುತಿನ ಸೂಚಕ
ಮನುಜನ ಮುಖವಿದು
ಉತ್ತರ ಎತ್ತರ
ಗಮನವ ಸೆಳವುದು
ನೆರವಿನ ಆದ್ಯತೆ ಪಡೆವುದು

ಈಶಾನ್ಯ ಕಡಲಿನ ಕನ್ನಡ
ನರಳಿದೆ ತರತಮ ಧೋರಣೆಗೆ
ಸಿಗದು ಟಿ.ಆರ್.ಪಿ ಮಾಧ್ಯಮಕೆ
ರಾಜಕೀಯ ಲಾಭವಿಲ್ಲ ಪಕ್ಷಗಳಿಗೆ
ನಿರ್ಲಕ್ಷದ ಗೂಡಾಗಿದೆ ಕರಾವಳಿ

ಬೆಟ್ಟ ಗುಡ್ಡಗಳು ಎರಗಿದೆ
ರಾಜ್ಯ ಸರ್ಕಾರವು ಮಲಗಿದೆ
ಸುರಿದ ನೀರು ಹರಡಿ ತುಂಬಿದೆ
ರಸ್ತೆ ಇಕ್ಕೆಲಗಳು ಬಿರಿದಿದೆ
ಪ್ರಜೆಗಳ ಬದುಕಿದು ಸೊರಗಿದೆ

Saturday, June 29, 2019

ಬಿಸಿಲು ಮಳೆ ಜೊತೆಯಾದಾಗ

ಮಂಗನ ಮದುವೆಯಾಗುವುದಂತೆ
ಮಳೆ ಬಿಸಿಲು ಜೊತೆಯಾದಾಗ
ಬದುಕಿನ ಗಾಲಿ ತಿರುಗುವುದಂತೆ
ನಮ್ಮಯ ಒಲವು ಬೆರೆತಾಗ
ಪ್ರೀತಿಯ ಪಯಣದ ದಾರಿಯಲಿ
ಮುನಿಸಿನ ತಡೆಯು ಸಹಜ ಬಿಡು
ಕನಸಿನ ಮಳಿಗೆಯು ತುಳುಕಿರಲು
ಹೃದಯಕೆ ತುಡಿತವು ತುಂಬ ದಡು

ಹರಿಯುವ ನೀರಿನ ತೇರಿನಲಿ
ಕಸ ಕಡ್ಡಿಯ ಕಥೆ ಅಳಿಯುವುದು
ಶುಭ್ರತೆ ನೆಲಸಿದ ನಾಡಿನಲಿ
ಧೂಳಿನ ಕಣ ಸಹ ಹಿರಿದಾಗುವುದು
ತುಚ್ಛತೆ ನೋಟವ ಮರೆಸುತಲಿ
ವೈಶಮ್ಯದ ಕೇಡನು ದೂರ ಇಡು
ಗೌಪ್ಯತೆ ಮಾತನು ಕೇಳುತಲಿ
ಗಂಭೀರತೆ ನಡೆಯಲಿ ಬೀಗಿ‌ ಬಿಡು

ಉದುರುವ ಎಲೆಗಳ ತುದಿಗಳಲಿ
ಮಳೆಹನಿ ನೀರಿದು ಬೀಳುವುದು
ಕಂಬನಿ ಭರಿತ ನಯನದಲಿ
ಎದುರಿಗೆ ಬರಲು ಅಂಜಿಕೆಯು
ಸಮಯಕೆ ಸುರಿದ ಸೋನೆಯಲಿ
ಅಳುಕಿನ ದುಃಖದ ಹಂಚಿಕೆಯು
ಹೆತ್ತವರ ಹಿತವನು ಬಯಸುತಲಿ
ಸುಖದಲಿ ಸಾಯಲು ದೀಕ್ಷೆತೊಡು

Monday, June 17, 2019

ಭಾವಯಾನದ ತೀರ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜೇನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀತಿ ಹುಚ್ಚಂತೆ ನೀನು

Thursday, June 6, 2019

ಒಲವ ಧಾರೆ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜಾನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀಲತಿ ಹುಚ್ಚಂತೆ ನೀನು

Tuesday, June 4, 2019

ಬೇಕಾಗಿದ್ದಾರೆ ಹನಿ ನೀರ ದಾಸೋಹಿ!

ಎಲ್ಲೆಂದು ಅರಸಲಿ
ಹನಿ ನೀರನು
ಯಾರನ್ನು ಕೇಳಲಿ
ತುಸು ಜಲವನು

ಕಂಬನಿಯ ಸುರಿಸಲೂ ನೀರಿಲ್ಲ
ಬರಿದಾದ ನದಿಯೊಡಲಲಿ 
ಕಾಲುವೇಲಿ ಹರಿಸಲೂ ಜಲವಿಲ್ಲ
ಆರಿರುವ ಏರಿಯೊಳಗೆ

ಬರಿದಾದ ಕೆರೆ ಕಟ್ಟೆಗಳು
ಭಾಸವಾಗಿವೆ ಇಂದು
ಚಿಣ್ಣರೆಲ್ಲರು ಆಟ ಆಡುವ
ಮೈದಾನವೇ ಇದೆಂದು

ನೀರ ಹನಿ ಬಿಂದುವಿಗಾಗಿ
ಶುರುವಾಗಿದೆಲ್ಲೆಡೆ ಹಾಹಾಕಾರ
ಲಗ್ನವಾಗಿಲ್ಲ ಜೊತೆಯಾಗಿ
ಹುಡುಕಿ ಹಿಡಿದರೂ ಕಪ್ಪೆ ಸಂಗದವರ

ಮಠ ಮಂದಿರಗಳಲಿ
ಇಳಿಮುಖವಾಗಿದೆ ಭಕ್ತರ ಸಂಖ್ಯೆ
ಊರೂರ ಬೀದಿಗಳಲಿ
ಮಾಡಬೇಕಾಗಿದೆ ನೀರ ದಾಸೋಹಿ ಸಖ್ಯ

ಕೇರಿಯಲೊಬ್ಬರಂತೆ ಸಿಗುತಾರೆ
ನೀಡಲು ಹಣದ ಸಾಲ
ನೀರಿಲ್ಲದೆ ಬವಣೆಯಲಿ ಬೇಯುತಾರೆ
ಏರುತ ದಾಹವೆಂಬ ಶೂಲ

ಅದೆಂದೂ ಬರುವುದೋ?
ಕರಿಮೋಡ ಕರಗಿ ನೀರಾಗಲು
ಬತ್ತಿದೊಡಲ ತುಂಬುತ
ಬೆಳೆಯುವ ಕೃಷಿಕನ ನಗಿಸಲು

ಕೈ ಮುಗಿದು ಬೇಡಿದರೂ
ಕರುಣಾಮಯಿಯ
ಕಲ್ಲಾಗಿ ಬರಲಿಲ್ಲ ಕರಿಮೋಡ
ಸರಿಸಲು ಜಲಧಾರೆಯ

Monday, June 3, 2019

ಮುಸ್ಸಂಜೆ ಕಲೆಗಾರ

ದೇವನೊಬ್ಬ ಕಲೆಗಾರ
ಜಗಕೆ ಆಯ್ತು ಉಪಕಾರ
ಸಂಜೆಗೊಂದು ವ್ಯವಹಾರ
ನಯನ ಸೆಳೆವ ಉಪಹಾರ
ತಂಪ ಬಾನ ಮಂದಾರ
ತೆರೆದ ಭಾನ ಶೃಂಗಾರ

ಮುಸ್ಸಂಜೆ ಹೊತ್ತಿಗಾರೋ
ಬಣ್ಣ ಬಳಿದು ಹೋಗುವರು
ಇಂಪೆಂಬ ಗಾನಕಾರೋ
ರಾಗ ಹೆಣೆದು ಹಾಡುವರು

ರವಿ ಹೊರಟ ದಾರಿಯಲಿ
ತಂಪನೆರೆವ ಚಿತ್ತಾರ
ಕವಿ ತೊರೆವ ಪದಗಳಲಿ
ಹಕ್ಕಿ ಗಾನಕೆ ಗಾಂಧಾರ

Sunday, June 2, 2019

ಮೀಸೆ ಚಿಗುರೋವಾಗ

ಏನೋ ಹುಚ್ಚು ವಯಸು
ಕಣ್ಣ ತುಂಬ ಕನಸು
ಸೂರೆಗೊಂಡ ಮನಸು
ನವ ಪ್ರೀತಿ ಸೊಗಸು
ಮನವೀಗ ಬಯಸಿರಲು
ಅವಳೇ ನನ್ನ ಉಸಿರು

ಮೀಸೆ ಚಿಗುರೋವಾಗ
ದೇಶ ಕಾಣದೆಂಬ ಮಾತೆ ನಿಜವು
ಆಸೆ ಮಿಡಿಯುವಾಗ
ವೇಷ ಯಾವುದೆಂಬ ಚಿಂತೆ ನಿಲುವು
ಅಂತೆ ಕಂತೆಯ ಕಥೆ ಕೇಳಿ
ಸ್ವಂತ ಬಂಟರ ವ್ಯಥೆ ಹೇಳಿ
ಎಚ್ಚರಿಸುವ ನುಡಿಯೇ ಗುರುವು

ಮಲೆಯ ಏರುವಾಗ
ನೆಲವು ಕಾಣದಂತೆ ಇರಲು
ತಲೆಯು ತಿರುಗುವಾಗ
ಜಗವು ಸುತ್ತಿದಂತೆ ಕಾಣಲು
ಅಂಟು ಗಂಟಿನ ನಡುವಲ್ಲಿ
ಉಂಟು ನಂಟಿನ ಮಡಿಲಲ್ಲಿ
ಮುದ್ದಿಸುವ ಮೂರ್ತವೆ ಒಲವು

Tuesday, April 2, 2019

ಜೋ...ಜೋ ಲಾಲಿ

ವಸುದೇವ ದೇವಕಿ ಕಂದ
ಜೊಜೋ ಲಾಲಿ
ಎಂದ್ ಹೇಳುತ್ತ ಹಾಡುವುದು
ಜಗದ ಲಾಲಿ
ಜೋ.....ಜೋ...ಜೋ.......
ಜೋ.....ಜೋ...ಜೋ.......

ಮಡಿಕೆಯೋಳ್ ಇರುವ
ಬೆಣ್ಣೆ ಕದ್ದು
ಗೆಳೆಯರ ಬಾಯಿಗೆ ಒರೆಸುವ
ಪರಿಯೇ ಮುದ್ದು

ಗೋಕುಲದೋಳ್ ಆಟದಲಿ
ಸೋಲದೆ ಗೆದ್ದು
ಸೋಜಿಗವ ತೋರಿದನು
ಕೇಳಲು ಸದ್ದು

ಸ್ಪೂರ್ತಿಯ ಸ್ಪರ್ಶವಿದು
ಧರಣಿಗೆ ಬಿದ್ದು
ಕೋಲಾಟ ಆಡಿದನು
ತಾನೇ ಖುದ್ದು

ರಾಧೆ ಪ್ರೇಮದಲಿ
ಅವನೇ ಮಿಂದೆದ್ದು
ಜಗಕೆಲ್ಲಾ ತಿಳಿಸಿದನು
ಪ್ರೀತಿಯೇ ಮದ್ದು

ಕನ್ನಡ ಉಳಿಯಬೇಕೆಂದು ಬಾಯಲ್ಲಿ ಕೂಗಿದರೆ ಕನ್ನಡದ ಉಳಿಯುತ್ತದೆಯೇ?

ನಮ್ಮ ಸುತ್ತಮುತ್ತಲು ಕನ್ನಡದ ಉಳಿವಿಗಾಗಿ ಹೋರಾಟವೆಂಬ ದೊಡ್ಡ ದೊಡ್ಡ ಫಲಕಗಳನ್ನು ನೋಡೂತ್ತೇವೆಯೇ ಹೊರತು ಅದರ ಕಾರ್ಯಾಚರಣೆಗಳನ್ನು ಕಾಣುವುದು ಬಹಳ ವಿರಹ. ನಾವು ನಮ್ಮ ಭಾಷೆ ಉಳಿಯಬೇಕಂದರೆ ಏನು ಮಾಡಬೇಕು? ಕಟ್ಟುನಿಟ್ಟಾದ ಕಾಯಿದೆಯನ್ನು ಸರಕಾರ ಜಾರಿಗೆ ತರಬೇಕೆ? ಮಕ್ಕಳು ಕನ್ನಡದಲ್ಲಿ ಕಡ್ಡಾಯವಾಗಿ ಓದುವಂತೆ ಮಾಡಬೇಕು? ಇದಕ್ಕೆಲ್ಲ ಉತ್ತರ ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡ ಮಾತ್ರಕ್ಕೆ ಉತ್ತರ ಸಿಗದ ವಿಷಯವಾಗಿದೆ. ಇವಕ್ಕೆಲ್ಲ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ "ಇಚ್ಛಾಶಕ್ತಿ" ಇರಬೇಕಾಗಿದೆ. ಕನ್ನಡ ಉಳಿಸಿ ಎಂದು ಬರಿ ಹೇಳುವುದರಿಂದಾಗಲಿ, ಕೂಗಾಡುವುದರಿಂದಾಗಲಿ ಅಥವಾ ಹೋರಾಡುವುದರಿಂದಾಗಲಿ ಕನ್ನಡ ಉಳಿಯುತ್ತದೆ ಎನ್ನುವ ಭ್ರಮೆಯನ್ನು ಬಿಟ್ಟು ವಾಸ್ತವಿಕತೆಯನ್ನು ಅರಿಯುವುದು ಒಳ್ಳೆಯದು.

ಏನೆಲ್ಲಾ ಮಾಡುವುದರಿಂದ ನಮ್ಮ ಕನ್ನಡದ ಉಳಿವಿಗೆ ನಾವು ಕಾಣಿಕೆಯನ್ನು ಕೊಡಬಹುದು? ಎಂಬ ಚಿಕ್ಕ ಚಿಕ್ಕ ವಿಷಯವಾದರೂ ಜವಾಬ್ಧಾರಿಯುತ ಅಂಶಗಳತ್ತ ನಮ್ಮ ಗಮನವನ್ನು ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿಯತ್ತ ನಾವಿಂದು ಬಂದು ನಿಂತಿದ್ದೇವೆಂದರೆ ಅದು  ವಿಷಾದನೀಯ ಸಂಗತಿ, ಅಲ್ವೇ? ಕೆಲವು ಸೂಕ್ಷ್ಮ ಸಂಗತಿಗಳತ್ತ ನಮ್ಮ ಕಣ್ಣು ಮಿಟಕಾಯಿಸಿದಾಗ ನಮಗೆ ಹಲವು ಅಂಶಗಳು ಗೋಚರಿಸುತ್ತವೆ.

ಜವಾಬ್ಧಾರಿಯುತ ಸ್ಥಾನದಲ್ಲಿರು ಪ್ರಸಿದ್ಧ ವ್ಯಕ್ತಿಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸ್ವಚ್ಚಂದವಾಗಿ ಕನ್ನಡವನ್ನು ಮಾತಾಡಬೇಕಿದೆ. ಪ್ರಸಿದ್ಧ ವ್ಯಕ್ತಿಗಳೆಂದರೆ ಸಿನಿಮಾದ ನಟ ನಟಿಯರು, ರಾಜಕಾರಣಿಗಳು, ಬುದ್ಧಿಜೀವಿಗಳು, ಸಂಘಟನೆಯ ಮುಖ್ಯಸ್ಥರು, ಅಭಿಯಂತ್ರಕರು (Engineers), ವೈದ್ಯರುಗಳು, ಶಿಕ್ಷಕರು, ಪ್ರಾಧ್ಯಾಪಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅತಿ ಮುಖ್ಯವಾಗಿ ಮಾಧ್ಯಮ ಮಿತ್ರರು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸ್ಥಾನದಲ್ಲಿರುವ ಮಹನೀಯರು ಹಾಗು ತಾಯಂದಿರು ಕನ್ನಡವನ್ನು ಸ್ವಚ್ಚಂದವಾಗಿ ಮಾತನಾಡಿದರೆ ಅದು ಸಾಮಾನ್ಯ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವುದು ಖಂಡಿತ. ಎಲ್ಲದಕ್ಕಿಂತ ಹೆಚ್ಚಿನದಾಗಿ ಸಿನಿಮಾ ನಟ ನಟಿಯರು ತಮ್ಮ ತಮ್ಮ ಸ್ವಪ್ರತಿಷ್ಠೆಯ ಮೆರೆಸುವುದನ್ನು ಬಿಟ್ಟು ನಿರಾಯಾಸವಾಗಿ ಆಂಗ್ಲ ಭಾಷೆಯ ಹಂಗಿಲ್ಲದೆ, ಒಂದೇ ಒಂದು ಆಂಗ್ಲ ಭಾಷೆಯನ್ನು ಬಳಸದೆ ಮಾತನಾಡುವುದರಿಂದ ಅದು ಅವರನ್ನು ನೋಡುವ, ಹಿಂಬಾಲಿಸುವ ಅವರವರ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕನ್ನಡದ ಉಳಿವಿಗೆ ಸಹಕಾರಿಯಾಗುತ್ತದೆ.

ಅದಲ್ಲದೆ ಇಂದಿನ ದಿನಗಳಲ್ಲಿ ಅತಿ ಹೆಚ್ಚಿನದಾಗಿ ಪ್ರಚಲಿತದಲ್ಲಿರುವ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಸಡೆಸುವ ಸಂಭಾಷಣೆಯನ್ನು ಕನ್ನಡದಲ್ಲಿ ಸಡೆಸಬೇಕಾಗಿದೆ. ಸಂಭಾಷಣೆ ಹಾಗಿರಲಿ ಮಧ್ಯದಲ್ಲಿ ಬರುವ ಗೀತೆಗಳ ಸಾಹಿತ್ಯದಲ್ಲೂ ಆಂಗ್ಲ ಭಾಷೆಯನ್ನು ಬಳಸುತ್ತಿರುವುದನ್ನು ನಿಲ್ಲಿಸಬೇಕಾಗಿದೆ. ಪ್ರತಿಯೊಂದು ಚಿತ್ರದ ಶೀರ್ಷಿಕೆಯನ್ನು ಕನ್ನಡದಲ್ಲಿಯೇ ಇರುವಂತೆ ನಿಗಾ ವಹಿಸಬೇಕಾಗಿದೆ. ನಡೆಸುವ ಸಂಭಾಷಣೆಯಲ್ಲಿ ಕನ್ನಡದ ಶಬ್ಧಗಳನ್ನು ಬಳಸುವುದರಿಂದ ಅದು ನೋಡುವ ಜನರ ಮೇಲೆ ಪರಿನಾಮ ಬೀರುತ್ತದೆ. ಇದನ್ನು ಯಾಕೆ ಒತ್ತು ಕೊಟ್ಟು ಹೇಳುತ್ತೇನೆ ಎಂದರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುತ್ತೇವೆ. ಅಲ್ಲದೆ ಒಂದು ಭಾಷೆ, ಸಂಸ್ಕೃತಿ ಉಳಿಯಬೇಕೆಂದರೆ ಅದು ಸಹ ಮಹಿಳೆಯರಿಂದಾಗಿಯೇ ಎನ್ನುತ್ತೇವೆ.  ಹಾಗಾಗಿ ಧಾರಾವಾಹಿಗಳನ್ನು ನೋಡುವುದು ಹೆಚ್ಚಿನದಾಗಿ ಮಹಿಳೆಯರಾಗಿರುವುದರಿಂದ ಧಾರಾವಾಹಿ ಮತ್ತು ಚಲನಚಿತ್ರದ ಸಂಭಾಷೆಣೆ ಮತ್ತು ಸಾಹಿತ್ಯಗಳಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಬಳಸಲೇ ಬೇಕಾಗಿದೆ.

ಕನ್ನಡದ ಉಳಿವಿಗಾಗಿ ಹೋರಾಡುತ್ತೇವೆ ಎನ್ನುವ ಚಲನಚಿತ್ರ ರಂಗದ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಂದು ವಿನಂತಿಯೇನೆಂದರೆ ದಯವಿಟ್ಟು ಆಂಗ್ಲಭಾಷೆಯಲ್ಲಿ ಮಾತಾಡುವ ಪ್ರತಿಷ್ಠೆಯನ್ನು ಬಿಟ್ಟು ಮೊದಲು ಸರಾಗವಾಗಿ ಕನ್ನಡವನ್ನು ಮಾತನಾಡಿ ನಂತರ ಅವಶ್ಯಕತೆಯಿದ್ದರೆ ಹೋರಾಟದ ದಾರಿ ನೋಡಿ ಎಂದೇಳುತ್ತ ಮನವರಿಕೆ ಮಾಡಿಕೊಡಬೇಕಾಗಿದೆ. ಉಳಿದ ಆದರ್ಶ ವ್ಯಕ್ತಿಗಳೆಂದು ಗುರುತಿಸಲ್ಪಡುವ ಹಿರಿಯರಾದ ಶಿಕ್ಷಕರು, ಸಮಾಜಮುಖಿ ವ್ಯಕ್ತಿಗಳು, ಕವಿಗಳು, ಬರಹಗಾರರು, ಮೌಲ್ಯಯುತ ಸಂದೇಶ ಹೇಳುವ ಸಂಪನ್ಮೂಲ ವ್ಯಕ್ತಿಗಳು ಹೀಗೆ ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ತಮ್ಮ ಜವಾಬ್ಧಾರಿಗಳನ್ನು ಅರಿತು ವ್ಯವಹರಿಸುವ ಸಂದರ್ಭದಲ್ಲಿ ಕನ್ನಡವನ್ನೇ ಬಳಸುವುದರಿಂದ ಜನರಲ್ಲಿ ಕನ್ನಡವನ್ನೇ ಬಳಸಬೇಕೆಂಬ ಸ್ವೇಚ್ಛೆ ಜಾಸ್ತಿಯಾಗುತ್ತದೆ ಎಂಬ ಆಶಾಭಾವ ನಮ್ಮದಾಗಿದೆ.

ಅಲ್ಲದೇ ಅಂತರ್ಜಾಲ ತಾಣಗಳಲ್ಲಿ ಬರೆಯುವ ಹತ್ತು ಹಲವು ಬರಹಗಾರರು ಮತ್ತು ಹವ್ಯಾಸಿ ಬರಹಗಾರರುಗಳೇ, ದಯವಿಟ್ಟು ತಮ್ಮ ಬರಹಗಳಲ್ಲಿ ಕನ್ನಡವನ್ನೇ ಬಳಸಿ ಹೊರತು ಕಂಗ್ಲೀಷನ್ನು ಬರೆಯದೆ ಓದುಗರಿಗೆ ಕನ್ನಡದ ಮೇಲೆ ಬೇಸರ ಮೂಡುವ ಹಾಗೆ ಬರೆಯಬೇಡಿ. ಕನ್ನಡದ ಉಳಿವಿಗಾಗಿ ನಾವು ನಮ್ಮ ಚಿಕ್ಕ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿಕೊಂಡು ಬರೆಯುವ ನಿಮ್ಮ ಬರಹ ನಿಮಗರಿಯದ ರೀತಿಯಲ್ಲಿ ಬರಹವನ್ನು ಓದುವವರಿಗೆ ಕನ್ನಡದ ಮೇಲೆ ಜಿಗುಪ್ಸೆ ಮೂಡದಂತಾಗದಿರದಂತೆ ಎಚ್ಚರವಹಿಸಿ. ಜಾಲತಾಣಗಳಲ್ಲಿ ಬಿತ್ತರಿಸುವ ಹಲವು ಬರಹಗಳಿಗೆ ನಿಮ್ಮದೇ ವ್ಯಾಖ್ಯಾನವನ್ನು ಮಾಡುವಾಗಲೂ ಸಹ ಕನ್ನಡವನ್ನೇ ಬಳಸುವುದರಿಂದ ಯುವ ಜನತೆಯ ಮೇಲೆ ಕನ್ನಡದ ಬಗ್ಗೆ ಅಭಿಮಾನ ಮೂಡಲು ಸಹಕಾರಿಯಾಗುತ್ತದೆ.

ಹಾಗೆ ಅತ್ಯಂತ ಜವಾಬ್ಧಾರಿಯುತ ಸ್ಥಾನದಲ್ಲಿರುವುದು, ಜನಮಾನಸದಲ್ಲಿರುವುದು, ಜನರನ್ನು ಸೆಳೆಯುವುದು, ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆಂದರೆ ಅದು ದೂರದರ್ಶನದ ಮಾಧ್ಯಮಗಳು. ಹಾಗಾಗಿ ಕನ್ನಡದ ದೂರದರ್ಶನದ ಮಾಧ್ಯಮಗಳಾಗಿರಲಿ ಅಥವಾ ಪತ್ರಿಕೆಯ ಮಾಧ್ಯಮಗಳಾಗಿರಲಿ ತಮ್ಮ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಎಲ್ಲದಕ್ಕೂ ಕನ್ನಡ ಶಬ್ದವನ್ನೇ ಬಳಸಬೇಕಾಗಿದೆ. ತಾವು ಪ್ರಸಾರ ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಕನ್ನಡದಲ್ಲಿಯೇ ಶೀರ್ಷಿಕೆಯನ್ನು ನೀಡಬೇಕು. ಹಾಗೆ ನಡೆಸುವ ಚರ್ಚೆಗಳಲ್ಲಿ, ಓದುವ ವಾರ್ತೆಯಲ್ಲಿ, ಒಂದು ವಿಷಯದ ಬಗ್ಗೆ ವಿವರಿಸುವಾಗಲೂ ಸಹ ಕನ್ನಡದ ಶಬ್ಧಗಳನ್ನು ಬಳಸುವುದರಿಂದ ಅದನ್ನು ನೋಡುವ ಜನರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಪತ್ರಿಕಾ ಮಾಧ್ಯಮದವುರೂ ಸಹ ತಾವು ಬರೆಯುವ ಲೇಖನಗಳಲ್ಲಿ, ಸುದ್ದಿಗಳಲ್ಲಿ, ಪ್ರಕಟಿಸುವ ಹೆಚ್ಚುವರಿ ಪತ್ರಿಕೆಗಳಲ್ಲಿ ಕನ್ನಡದಲ್ಲಿಯೇ ಶೀರ್ಷಿಕೆಯನ್ನು ನೀಡುವುದರಿಂದ ಓದುವ ಜನ ಸಮಾನ್ಯರ ಮೇಲೆ ಕನ್ನಡವನ್ನೇ ಬಳಸಬೇಕೆಂಬ ಮನದಿಚ್ಛೆ ಮೂಡಲು ಸಾಧ್ಯವಾಗುತ್ತದೆ.

ನಾವು ಕನ್ನಡದ ದೂರದರ್ಶನ ಮಾಧ್ಯಮಗಳು, ಪತ್ರಿಕಾ ಮಾಧ್ಯಮಗಳು ಎಂಬ ಪ್ರಜ್ನೆಯಿಂದ ಕನ್ನಡದ ಉಳಿವಿಗೆ ಶ್ರಮಿಸಬೇಕಾಗಿದೆ. ಆಂಗ್ಲ ಭಾಷೆಯ ದುರ್ಮೋಹವನ್ನು ದೂರಾಗಿಸಿ ನಮ್ಮ ಕನ್ನಡದಲ್ಲಿಯೇ ಎಂತೆಂಥ ಚಂದದ ಶಬ್ಧಗಳಿವೆಯೆಂಬುದನ್ನು ಪರಿಚಯಿಸುವ ವಿಶೇಷವಾದ ದೃಢ ಸಂಕಲ್ಪ ಮತ್ತು ಕಾರ್ಯ ನೀವು ಮಾಡಿದರೆ ಚಂದ. ಬೇರೆಯವರ ಮೇಲೆ ಜವಾಬ್ಧಾರಿಗಳನ್ನು ಹೊರಿಸುವ ಬದಲು ಹೇಗೆ ತಪ್ಪಿತಸ್ಥರ ವಿರುದ್ಧ ನಿಮ್ಮ ದನಿಯೆತ್ತಿ ಅವರಿಗೆ ಶಿಕ್ಷೆಯಾಗುವಲ್ಲಿ ಮಹತ್ತರ ಪಾತ್ರವಹಿಸುತ್ತೀರೋ ಹಾಗೆ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿ ಕನ್ನಡದ ಉಳಿವಿಗೆ ಹೋರಾಡುವ ಕರಾಳ ದಿನಗಳು ಎದುರಾಗದಂತೆ ನೋಡಿಕೊಳ್ಳುವ ಮಹತ್ತರ ಕಾರ್ಯ ನಿಮ್ಮಿಂದಾಗಬೇಕಿದೆ. ನಂತರದಲ್ಲಿ ಕನ್ನಡದ ಶಾಲೆಗಳಲ್ಲಿ ಓದುವುದನ್ನು ಕಡ್ಡಾಯಗೊಳಿಸುವುದು ಮತ್ತೊಂದು ಎನ್ನುವುದನ್ನು ಮಾನ್ಯ ಸರಕಾರಕ್ಕೆ ಎಚ್ಚರಿಸಬೇಕಾಗಿದೆ. ನೀವುಗಳೇ ಕನ್ನಡದ ಒಳಿತಿಗೆ ಶ್ರಮಿಸದೆ ಸರಕಾರಗಳನ್ನು ದೂಷಿಸುವುದು ಸರಿಯಲ್ಲ ಅಲ್ಲವೇ? ಹಾಗಾಗಿ ಕನ್ನಡವನ್ನು ದಿನ ನಿತ್ಯದ ವ್ಯವಹಾರಗಳಲ್ಲಿ ಬಳಸಿ ಕನ್ನಡದ ಉಳಿವಿಗೆ ಹೋರಾಟ ಬೇಡವೆಂಬುದನ್ನು ಮನದಟ್ಟು ಮಾಡಿಕೊಡೋಣ.

ಇವರಿಷ್ಟಲ್ಲದೇ ಅತಿ ಮುಖ್ಯವಾಗಿ ಸಾರ್ವಜನಿಕ ವಾಹನದ (ಬಸ್) ನಿರ್ವಾಹಕರು, ಚಾಲಕರು, ಅಂಗಡಿಯವರು, ರಿಕ್ಷಾ ಚಾಲಕರು ಹೀಗೆ ಎಲ್ಲರೂ ಸಹ ತಾವು ನಡೆಸುವ ವ್ಯವಹಾರಗಳಲ್ಲಿ ಕನ್ನಡವನ್ನು ಮಾತನಾಡುವುದರಿಂದ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ದಿಟ್ಟ ಹೆಜ್ಜೆಯಿಡಬೇಕಾಗಿದೆ. ಇದರಿಂದಾಗಿ ದಿನನಿತ್ಯ ವ್ಯವಹರಿಸುವ ಅನ್ಯ ಭಾಷಿಕರಲ್ಲಿ ಕನ್ನಡವನ್ನು ಕಲಿಯಬೇಕೆಂಬ ಅನಿವಾರ್ಯತೆ ಬಂದು ಅವರು ಭಾಷೆಯನ್ನು ಕಲಿಯುವುದರಿಂದ ಕನ್ನಡ ಬೆಳೆಸುವಲ್ಲಿ ಒಂದು ಹೆಜ್ಜೆ ಮುಂದೆಯಿಟ್ಟಂತಾಗುತ್ತದೆ. ಮಕ್ಕಳಿಗೆ ಶಾಲೆಯ ಪಾಠ ಕಲಿಸುವ ಮತ್ತು ವಿಷಯ ಹೇಳಿಕೊಡುವ ಸಮಯವನ್ನು ಬಿಟ್ಟು ಉಳಿದ ಸಮಯದಲ್ಲಿ, ದಿನಚರಿಯ ಕೆಲಸದಲ್ಲಿ ಕನ್ನಡದಲ್ಲಿಯೇ ಪಾಲಕರು ಮಾತನಾಡಿದರೆ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಕನ್ನಡವು ಹೂವಾಗಿ ಅರಳುವುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸದಲ್ಲಿರಲಿ, ಎಷ್ಟೇ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿ, ಯಾವುದೇ ಪ್ರದೇಶದಲ್ಲಿರಲಿ ಜನರೊಂದಿಗೆ ವ್ಯವಹರಿಸುವಾಗ ಸ್ವಚ್ಚ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಉಳಿಸಿ ಎಂಬ ಹೋರಾಟದ ಕೂಗು ಕೇಳುವುದು ನಿಲ್ಲುತ್ತದೆ. ಬ್ರಿಟಿಷರು ಆಳಿದ್ದರಿಂದ ನಾವು ಕನ್ನಡ ಮಾತಾಡುವಾಗ ಅಂಗ್ಲ ಪದ ಬಳಕೆ ಬರುತ್ತದೆ ಎಂಬ ಫಲಾಯನವಾದವನ್ನು ಮಂಡಿಸುವ ಬದಲು ನಾವು ನಮ್ಮ ಭಾಷೆಯನ್ನು ಮಾತನಾಡಲು ನಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಕನ್ನಡ ಮಾತಾಡುತ್ತೇವೆಂದರೆ ಎಷ್ಟು ಚನ್ನ ಅಲ್ವೇ? ಹೀಗಾಗಿ ನಾವು ನಮ್ಮ ಭಾಷೆಯನ್ನು ಬೇರೆ ಭಾಷೆಯ ಹಂಗಿಲ್ಲದೆ ಸ್ವಚ್ಚಂದವಾಗಿ ಮಾತಾನಾಡ ಬೇಕು ಎನ್ನುವ ಸ್ವಾಭಿಮಾನ ಮೂಡಬೇಕಾಗಿದೆ.

ಕನ್ನಡ ಉಳಿಸಿಯೆಂದು ಕನ್ನಡದ ಬಾವುಟ ಹಿಡಿದು ರಸ್ತೆಯ ಮೇಲೆ ಕೂಗಾಡುವುದು, ಹೋರಾಡವುದು ಮತ್ತು ರಸ್ತೆ ತಡೆದು ದಟ್ಟ ಸಂಚಾರ ಸ್ಥಂಭನವನ್ನು ಉಂಟುಮಾಡಿ ಇತರರಿಗೆ ತೊಂದರೆ ಕೊಡುವ ಬದಲು ಕನ್ನಡದ ಉಳಿವಿಗೆ ಇರುವ ಉಪಾಯದ ಹಾದಿಯನ್ನು ತುಳಿದು ಮೂಲದಿಂದಲೇ ಗಟ್ಟಿಗೊಳಿಸಿದರೆ ಕಂಗ್ಲಿಷ್ ಅಡಗಿ ಕನ್ನಡದ ಸುವರ್ಣ ಯುಗ ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೆನಿಸುತ್ತಿದೆ.

Monday, March 4, 2019

ಹಸಿರಾಗಿ ಬೆಳಗು

ಬಾನ ದಾರಿಯಲ್ಲಿ ಮೆರೆವ ಚಂದ್ರ
ಮರೆಯಾಗಿ ಹೋದ
ನೀಲಿ ಬಾನಿನಲ್ಲಿ ಕವಿದು ಬಂದ
ಮೋಡ ನುಡಿಯಾಯಿತಾಗ
ನುಡಿಗೆ ತಣಿದ ಧರಣಿ ಹಾಡಿ
ಬೆಳೆದು ಬಂತು
ಬೆಳೆಯ ಪೈರ ಧಮನಿ ರಾಗ
ನೆಗೆದು ನಿಂತು

ಇರುವ ಖುಷಿಯು ಕಾಣೆಯಾಗಿ
ಇರುಳು ಹರಡಲು
ಹೆದರಬೇಡ ಹರುಷವುಂಟು
ಹಗಲು ಅರಳಲು

ಸುಳ್ಳ ಬಾಳು ಪೊಳ್ಳ ಗೂಡು
ಹಿತವಾಗಿ ಉಳಿಯದು
ಮಳ್ಳ ಮಾತು ಕಳ್ಳ ಕಾಡು
ಹಸಿರಾಗಿ ಬೆಳಗದು

Monday, February 25, 2019

ಒಲವಿನ ಧ್ಯಾನ

ಇನ್ನಾರಿಗೆ ಮಾತಾಡಲಿ
ನನ್ನವಳ ಹೊರತು
ಹೃದಯದಲಿ ಬರೆದಿರುವ
ಚಿತ್ರಗಳ ಕುರಿತು

ಹರುಷದಲಿ ಕಳೆದಿರುವ
ಘಳಿಗೆಗಳ ಅರಿತು
ವಿರಸದಲಿ ಕೂಡಿರುವ
ನೆನಪುಗಳ ಮರೆತು

ಹೋಗಿರುವೆ ಹರಣದಲಿ
ಕಾಲನೀತಿಯ ಹಂಗಿನಲಿ
ಸೊರಗಿರುವೆ ಗೋಳಿನಲಿ
ಏಕಾಂತದ ಹಸಿವಿನಲಿ

ಬರುವಿಕೆಯ ಕಾಯುತಲಿ
ಕುತ್ತಿಗೆಯು ಬಲಿಯಾಗಲಿ
ಸ್ಪಂದನೆಯು ನೊವಿನಲಿ
ನಿನ್ನೊಲವಿನ ಧ್ಯಾನದಲಿ

Friday, February 15, 2019

ಅಣ್ತಮ್ಮರ ಬಲಿದಾನ

ಹೆತ್ಹೊತ್ತ ತಾಯಿಯ ಕಣ್ಣೀರ ಒರೆಸಲು
ಮುತ್ತಿಟ್ಟ ಮುದ್ದಿನ ಮಡದಿಯ ಸಲಹಲು
ನೀವಿಟ್ಟಿರಿ ಹೆಜ್ಜೆಯ ದೇಶವ ಕಾಯಲು
ವಿಪತ್ತಿನ ನಿರೀಕ್ಷೆಯನು ಹುಸಿ ಮಾಡಲು

ರಣ ಹೇಡಿ ನರಿಗಳ ಕುತಂತ್ರದಿಂದ
ಎಗರಿ ಬರುತಿರುವ ವಿಷಕಾರಿ ಗುಂಡುಗಳಿಂದ
ದೇಶವನು ರಕ್ಷಿಸಲು ಪಾಪಿ ತಾಣದವರಿಂದ
ಬಲಿದಾನ ಮಾಡಿದಿರಿ ಪ್ರಾಣವನು ಧರೆಯಿಂದ

ಚಿರಕಾಲ ಉಳಿಯಲಿ ನಿಮ್ಮ ನೆನಪು
ಚಿರವಾಗಿ ಸ್ಪುರಿಸಲಿ ತಮ್ಮ ಹುರುಪು
ಪ್ರೇರಣೆಯ ಮರವಾಗಿ ಹೂ ಬಿಡುತಿರಿ
ಚಿರಶಾಂತಿ ಪಡೆದು ಹರಸುತ ಬದುಕಿರಿ

ನಿಮಗಾಗಿ ಏನೂ ಮಾಡಲಾಗಲಿಲ್ಲವೆಂಬ ಕೊರಗು
ನಿಮ್ಮಿಂದ ಬದುಕುಳಿದಿದ್ದೇವೆ ಎಂದರಿಯದೆ
ಪಾತಕಿಗಳಿಗೆ ಹಾರೈಸುವವರ ಮೆರಗು
ನೋಡಿ ಕುದಿಯುತಿದೆ ರಕ್ತ ಅಸಹಾಯಕತೆಯಿಂದ

ದುಷ್ಟ ರಾಜಕೀಯದ ನೆರಳಲಿ ಬೊಗಳುವವರು
ಮಿತಿಗೇಡಿಗಳಾದ ಬುದ್ಧಿವಂತ ಮನುಜರು
ಬಲಿದಾನಕೆ ನ್ಯಾಯವನು ನೀಡರ್ಯಾರು
ವೈರಿಗಳ ಸಂಹರಿಸಲು ಮತ್ತೆ ಹುಟ್ಟಿ ಬರಬೇಕು ನಿಮ್ಮಂತವರು

Monday, February 4, 2019

ಚಿರವಾದ ಗೆಲುವು

ಈ ಹೆಸರಿನಲ್ಲೇನಿದೆ
ಉಸಿರು ನಿಂತ ಮೇಲೆ
ಜನರು ನೀಡುತಾರೆ
ಹೆಣವು ಎಂಬ ಪಟ್ಟಿ
ಲೋಕ ಮರೆಯುತಾವೆ
ನೀನಿದ್ದೆನೆಂದು ಗಟ್ಟಿ

ಎಷ್ಟೇ ದುಡ್ಡು ಕೂಡಿ
ಬದುಕ ನಡೆಸಿದರುನೂ
ಎಷ್ಟೇ ಆಸ್ತಿ ಗಳಿಸಿ
ಜಗದಿ ಮೆರೆದರುನೂ
ಸತ್ತ ಮೇಲೆ ನಿನಗೆ
ಸಿಗುವುದೊಂದೆ ಪಟ್ಟ
ಕೊನೆಗೆ ದೊರೆವುದೊಂದೆ
ಹೆಣವು ಏರುವ ಚಟ್ಟ

ಒಲವು ಪ್ರೀತಿ ಹಂಚಿ
ಜನರ ಗಳಿಸಬೇಕು
ಒಳಿತು ಮಾಡಿ ಜಗಕೆ
ಜನ್ಮ ಸವೆಸು ನೀ ಸಾಕು
ನಿನ್ನ ಹರಣಕೊಂದು
ಅರ್ಥ ಬರುವುದಾಗ
ನಾಲ್ಕು ಮಂದಿ ಬಂದು
ಒಂದ್ಹನಿ ಸುರಿಸಿದಾಗ

ಬೋಳು ಮರಕೆಯೆಂದು
ಬೊಗಸೆ ನೀರ ಉಣಿಸು
ಹಸಿದ ಜೀವಕೆಂದು
ತುತ್ತು ಅನ್ನ ನೀಡು
ದೇಹಿಯೆಂಬ ದೇಹಕೆಂದು
ಆಶ್ರಯ ದಾನ ಮಾಡು
ನೆನಪಾಗಿ ಉಳಿವೆಯಾಗ
ನೇಪತ್ಯ ಸೇರಿದಾಗ

ಕೊಳೆಯಾದರೆ ಅತ್ತ ಇತ್ತ
ಸ್ವಚ್ಛಗೊಳಿಸು ನಿನ್ನ ಸುತ್ತ
ಸೆಳೆದು ಜನರ ಕಣ್ಣ
ಬಳಿದು ಸ್ನೇಹ ಬಣ್ಣ
ಹಾಕಲು ಹೆಜ್ಜೆಯನ್ನ
ತೊರೆಯುವೆ ಲಜ್ಜೆಯನ್ನ
ಪಡೆಯಲು ವಿಶ್ವಾಸವನ್ನ
ಚಿರವಾಗಿ ಗಲ್ಲುವೆ ಸಾವನ್ನ

Tuesday, January 22, 2019

ಪರ್ವಕಾಲ

ಆ ಸೂರ್ಯ ತೊರೆದ ಕಳ್ಳ ಹಾದಿಯ
ಈ ಭೂಮಿ ಕ್ರಮಿಸಲು ಸರಿ ದಾರಿಯ
ಹಗಲೆಂಬ ಹೊತ್ತು ಹೆಚ್ಚಾಗಲು
ಇರುಳೆಂಬ ಕೆಡುಕು ದೂರಾಗಲು
ಬಾಳೆಂಬ ತೇರು ಜೊತೆ ಸಾಗಲಿ

ಒಳ್ಳೊಳ್ಳೆ ಕೆಲಸ ಸಂಧಿಸಲಿದೋ ಬಂದಿದೆ
ಉತ್ತರಾಯಣದ ಪರ್ವಕಾಲ
ಹುಳುಕೆಂಬ ಬಂಡೆ ಕರಗುತ ಅಳಿಯಲಿದೆ
ನಾನು ನನ್ನದೆಂಬ ಅಹಮ್ಮಿನ ಶೂಲ

ಬೆಳೆದ ಬೆಳೆಗೆ ಸಿಗಲಿ
ಹೊಸ ಆಸೆ ಈಡೇರಿಸುವ ದರ
ಸುಗ್ಗಿಕಟ್ಟಿ ಕುಣಿಯಲಿ
ರಸ ಬಾಧೆ ಅಡಗಿಸುವ ಕರ

ಎಳ್ಳು ಬೆಲ್ಲವ ತಿಂದು ಒಳ್ಳೆ ಮಾತಾಡಬೇಕೆಂಬುದು
ಬರಿ ಮಾತಾಗದಿರಲಿ
ಜಲಸೆಯಿಂದ ಎಗರಿ ವಲಸೆ ಹೋಗದ
ನಿಸ್ವಾರ್ಥದ ಬದುಕಿಗೆ ನಾಂದಿಯಾಗಲಿ

ಬೆಳಗಲಿ ಜಗದ ಜ್ಯೋತಿಯು
ಆರದ ನಂದಾದೀಪವಾಗಿರಲು
ಗುಡಿಸಲಿ ಮನದ ತೊಚ್ಛೆಯನು
ಸ್ವಚ್ಛ ಸಮೃದ್ಧಿಯ ಗುಡಿಯಾಗಿರಲು

Saturday, January 12, 2019

ಹಡಗಿನಂತ ಬದುಕು

ಬದುಕು ಮಾಸಬಹುದೇ ಹಾಗೆ
ತಾರೆ ಮಿನುಗದೆ
ಚಿತ್ರ ಏರಬಹುದೇ ಹೀಗೆ
ಗೋಡೆ ಕುಣಿಕೆಗೆ
ಬಾನ ದಾರಿಯಲ್ಲಿ ಚಂದ್ರ
ಬೆಳಗೊ ಹೊತ್ತಲಿ
ಸೂತ್ರವಿರದ ಜನ್ಮದಲ್ಲಿ
ಪಾತ್ರ ಯಾತಕೆ?

ಬೆಂದ ಬೇಳೆ ಹುಳುಕು ಹೊಟ್ಟೆಗೆ
ನೊಂದ ಜೀವ ಸುಡುವ ಚಟ್ಟಕೆ
ಕಾಲಚಕ್ರ ತಿರುಗುತಿಹುದು
ಒಳಿತು ಕೆಡುಕ ನಡುವೆಯು

ಸಂದ ಬಯಕೆ ಇಚ್ಛೆ ಮನಕೆ
ಕಂದ ಕೊರತೆ ತೊಚ್ಛೆ ಸುಖಕೆ
ಏಳುಬೀಳಿನಾಟ ನಡೆವುದು
ನಿನ್ನ ಹಾದಿ ಕ್ರಮಿಸಲು

ಎಲ್ಲಿ ತಿರುಗಿ ಏನ ಕೇಳಲಿ
ಇಲ್ಲಿ ಕಾವಲು ಸಿಗುವುದೇ?
ಯಾರು ಯಾರಿಗಾಗರೆಂದು
ಸ್ವಂತ ಕೆಲಸ ಆಗದೆ

ಹುಟ್ಟಿ ಬರುವ ಪ್ರಾಣಿಗೆಂದು
ಕರುಣೆ ತೋರುವ ಜೀವವುಂಟು
ಮರೆಯಲಾದರೂ ಅಳುತ ಮರುಗುವ
ದೇಹ ಇರುವುದು ಕಾಣದೆ

ಬರೆದ ಹಾಗೆ ಸಾಗೊ ಚೇತನ
ತೊರೆಯು ಓಡುವಂತೆ ಶರಧಿಗೆ
ಕುಣಿವ ಕಡಲ ನಡುವೆ ಮುಳುಗದ
ಹಡಗಿನಂತೆ ಮೆರೆವ ಭಾವ ಬದುಕಿದು

Monday, January 7, 2019

ಶ್ರೀಮತಿಗೆ ಸೀಮಂತವೇ ಶೃಂಗಾರ

ಮೊದಲ ನಕ್ಷತ್ರದ ಹೆಸರೆಂದರೆ ಅಶ್ವಿನಿ
ಆಗಿಹಳು ನನ ಬಾಳ ಪ್ರೇಮಸತಿ
ನೋವು ನಲಿವಿನಲಿ ನಿಜ ಗೆಳತಿ
ನಮ್ಮಿಬ್ಬರ ಕನಸೀಗ ಆಗುವುದು ನನಸು
ಜೊತೆಯಾಗಿ ಬರಲು ಪುಟ್ಟ ಕೂಸು

ಇಬ್ಬರು ಮೂರಾಗುವ ಈ ಹೊತ್ತಿನಲಿ
ಸಂಸಾರ ವೃದ್ಧಿಯ ಹೊಸ್ತಿಲಲಿ
ಕನಸು ಕಂಗಳ ತುಂಬ ನಲಿವ ಗಿಲಕಿ
ಹೃದಯದಂಗಳದಲ್ಲಿ ಇದುವೆ ಖುಷಿಯ ಗಿರಕಿ

ಶ್ರೀಮತಿಗೆ ಸೀಮಂತ ನಾಂದಿಯಾಯಿತು
ಸಿಂಗಾರದ ಬಾಳಿಗೆ ದಾರಿಯಾಯಿತು
ಹುಳಿಮಾವು, ಹುಣಸೆಗಳ
ಬಯಸಿ ತಿಂದೆ
ಚಿನ್ನದೊಡವೆಗಳನು ರತ್ನದಂತವಳಿಗೆ ನಾನೇ ತಂದೆ

ಬಾಳ ಗೂಡಿನಲಿ ಕೇಳಬೇಕಿದೆ ಹೊಸರಾಗ ಚಿಲಿಪಿಲಿ
ಹೆಣ್ಣು ಗಂಡೆನದೆ ಕೇಳಲಿ ನಗುವ ಕಂದನ ತೊದಲುಲಿ

ಕೇಳಿಸು ಕಂದಗೆ ರಾಮ, ಕೃಷ್ಣರ ಕಥೆಗಳನು
ಗರ್ಭದೊಳಗೇ ಆಲಿಸಲಿ ಹಿರಿಯ ವೀರ ಯೋಧರ ವ್ಯಥೆಗಳನು

ಹಿರಿಯ ಜೀವಗಳ ಹಾರೈಕೆ ಇರಲಿ
ಸದ್ವಿಚಾರಗಳ ಆರೈಕೆ ಸಿಗಲಿ
ಕೇಳಿ ತಿಳಿಯುತ, ಓದಿ ಕಲಿಯುತ ನವಮಾಸ
ತುಂಬಲಿ
ಕಾತರದ ಕಾಯುವಿಕೆ ತೀರಲಿ ಸಖಿ
ಸುಖಿಯಾಗಲಿ ಜೀವಗಳೆರಡಾಗುವ ಹೆರಿಗೆಯ ಆಯಾಸ