Tuesday, January 31, 2017

ನೀ ಬಾ ಉತ್ತರಿಸಲು

ಧೋ ಎಂದು ಸುರಿವ ಮಳೆಯಲಿ
ಜಾರಿ ಬೀಳಬಹುದೇ ನನ್ನವಳ ಒಲವು?
ತುಂಬಿ ತುಳುಕೊ ಹರಿವ ಹೊಳೆಯಲಿ
ತೇಲಿ ಬರಬಹುದೇ ಮನದನ್ನೆ ಪ್ರೇಮವು?
ನೆಗೆದು ಹಾರಲು ರಸ್ತೆ ಸುತ್ತ ಗುಂಡಿಗಳಲಿ
ಎಗರಿ ಸಿಗಬಹುದೇ ಪ್ರೀತಿಯ ಚಿಗುರು?

ಕೊರೆವ ಚಳಿಯಲಿ ಉಣ್ಣೆಯಂತೆ
ಬೆಚ್ಚನೆಯ ರಗ್ಗು ನೀನಾಗುವೆಯಾ?
ರಭಸದ ನೆಗಸಿನಲ್ಲಿ ತಡೆಗೋಡೆಯಂತೆ
ಅಡ್ಡಗಟ್ಟುಲು ಎದುರಿಸಿ ನಿಲ್ಲುವೆಯಾ?
ಸುಡುವ ಬಿಸಿಲಿನಲಿ ನೆರಳಿನಂತೆ
ತಂಪನೆಯ ಮನೆಯಾಗಿ ಬರುವೆಯಾ?

ಆತುರವು ಉತ್ಸುಕದ ಬಾಳಿನಲಿ
ಕಾಡಿರಲು ಹಲವಾರು ಪ್ರಶ್ನೆಗಳು
ಬಳಿ ಕರೆಯುವ ಕೂಗಿನ ಪರಿ
ಕೇಳದ ನೂರಾರು ಪ್ರಶ್ನಾರ್ಥಕಗಳು
ಎರಗಲು ಕಣಿವೆಯಲಿ ನೀರಿಲ್ಲ
ಒರಗಲು ಜೊತೆಯಲಿ ನೀನಿಲ್ಲ

ಕೇಳಿಸದು ದಮನಿಯ ದನಿ
ಬಳಿಯಿರಲು ಹಿಡಿದಿಡುವ ಇನಿ
ಆಗುವೆಯಾ ಜನುಮದ ಗೆಳತಿ?
ಸಾಕು ಜನ್ಮಕ್ಕೆ ಒಬ್ಬಳೇ ಒಡತಿ
ಉಳಿದೋಗಿವೆ ಹಲವಾರು ಒಗಟು
ನೀ ಬಾ ಉತ್ತರಿಸಲು ದೃಡಪಡಿಸುತ

ನೆರಳಿನ ಕನಸು

ನೆನಪೆಂಬ ದೀವಿಗೆಯಲಿ
ನೆನೆದ ಸಂಗತಿಯಲಿ
ನಾನಾರೆಂದು ಹುಡುಕಲಿ
ಬದುಕಿನ ವಾಸ್ತವದಲಿ

ಬರಿದಾಯ್ತು ಕಲ್ಪನೆ
ಸವಿಗನಸ ಕಾಣಲು
ಉತ್ತುಂಗದ ಶಿಖರವೇರಲು
ಸೂಕ್ಷ್ಮತೆಯ ನಿದ್ರೆಯಲಿ

ನಾನರಿಯೆ ಒಡನಾಡಿಗಳನು
ಹಿತವರಾರೆಂಬ ತೊಳಲಾಟವನು
ತೋರಿಸಲು ಒಲವಿನ ಪ್ರೀತಿಯನು
ಹೇಗೆ ಗುರುತಿಸಲಿ ನನ್ನಾಪ್ತರನು?

ನಂಬಿಕೆಯಲಿ ಹೊಲಿದಿದೆ ಸಂಬಂಧ
ಬೆಸೆದಿರುವ ಬಾಳಿನಲಿ ಅನುಬಂಧ
ವಿಶ್ವಾಸದಲಿ ನಡೆಯುವುದು ಬಾಳು
ಭರವಸೆಯೇ ಬತ್ತಿದಾಗ ನೋವು

ಅಂದುಕೊಂಡ ಬಾಂಧವ್ಯ ಹುಸಿಯಾಗಲು
ಬಯಸಿದ ರೀತಿಯಲಿ ಒಲವು ಸಿಗದಿರಲು
ಅವಹೇಳನ ಮಾಡುತ ತುಚ್ಛವಾಗಿ ನೋಡಲು
ನಿರೀಕ್ಷೆಯಾಗುವುದು ನೆರಳು ಕನಸ ಕಂಡಂತೆ

Monday, January 30, 2017

ಬಾವ ಬೆರೆಸಬಹುದೇ?

ಬಣ್ಣವಿರದ ನೀರಿನಲಿ
ಭಾವನೆಯನು ಬೆರೆಸಲಾಗುವುದೇ?
ಮರೆಮಾಚಲು ಮನದ ಇಂಗಿತವನು
ಕಣ್ಣೀರು ಕಾಣದಿರಲು ಮಳೆಯಲ್ಲಿ ನೆನೆದಂತೆ

ಹುಣ್ಣಿಮೆಯ ಬೆಳದಿಂಗಳಿನಲಿ
ರವಿಯು ರಮಿಸಲಾಗುವುದೇ?
ತಣಿಸಲು ಉರಿಯ ತಾಪವನು
ದೇಹದ ಸುಸ್ತು ನೆರಳಲ್ಲಿ ನವಿರಾದಂತೆ

ಬೆವರ ಹನಿಯಲಿ
ಕಂಬನಿಯ ಅಡಗಿಸಬಹುದೇ?
ತೋರಿಸಲು ದೇಹದ ದಣಿವನು
ಮನದ ನೋವಿಗೆ ಮುಖವಾಡ ಹಾಕಿದಂತೆ

ಕಣ್ಣ ಸನ್ನೆಯಲಿ
ಮನದ ಮಾತನಾಡಬಹುದೇ?
ಅರುಹಲು ಶಬ್ಧ ಸಂವೇದನೆಯನು
ಬಾಯಿ ಮಾತಿಗೆ ನಿವೃತ್ತಿ ನೀಡುವಂತೆ


Saturday, January 28, 2017

ನಮನ ಭಾಸ್ಕರಗೆ

ಇರುಳ ಧ್ಯಾನಕೆ
ಇರುವ ಏಕಾಂತಕೆ
ಕೊನೆಯು ಮಂಜಿನ ಬಿರುಕು
ಇನಿದನಿಯ ನಾದಕೆ
ಮೊಗ್ಗಿನ ಪದರನು
ಬಿಡಿಸುತ ಮೇಲೇಳುವ
ಇವನೇ ಮೂಲ ಕಾರಣನು

ನಿಶಾಚರಿಗಳಿಗೆ ಶಪಿಸಲು
ಮೂಡುವುದು ಬೆಳ್ಳು
ಚೀರುವ ಪ್ರಾಣಿಗಳು ಓಡುಲು
ಕೂಗುವುದು ಕೋಳಿ
ಇಂಪಾದ ಗಾನ ಕೇಳಲು
ಬಾನಾಡಿಗಳು ಹಾಡಲು
ತೆರೆಯುವ ಕದವನು ಬೆಳಗಿನಲಿ

ಭವದ ಬದುಕಿಗೆ ನಾವಿಕನು
ಕಿರು ಬಾನಿಗೆ ಕಳೆಯು
ಬವಣೆ ಬರಿದಾಗಲು ಸಹಕರನು
ಕೆಂಪು ಭಾನಿನ ಕಲೆಯು
ಹೋರಾಟದ ಜನ್ಮಕೆ ನೇತಾರನು
ಜಗವು ಪುಟಿದೇಳಲು ಪ್ರೇರಣೆಯು
ಹಂಬಲಿಪ ಬಾಳಿಗೆ ಅಸ್ತು ಎನ್ನುವವನು

ನಮನವು ಮೂಡಣದ ದಿಕ್ಕಿಗೆ
ಹಸುರಿನ ಹೆಂಡತಿ ನೋಡುತ
ದಾರಿಯ ತೋರುವ ಧರಿತ್ರಿಗೆ
ತಿರುಗುವ ಭೂಮಿಯ ಸೆಳೆಯಲು
ಧಮನಿಯ ನೆತ್ತರು ಪ್ರಚೋದನೆಗೆ
ಸುತ್ತುವನು ಇರುಳನು ಅಳಿಸುತ
ಎಲ್ಲವೂ ಚಲಿಸಲು ವಂದನೆಯು ಭಾಸ್ಕರಗೆ

Friday, January 27, 2017

ರಾಧಾಂತರಾಳ

ದಾಸವಾಳವು ಬರೆಯುತಿಹುದು
ಗೋಪಿಕೆಯ ಅಂತರಾಳದ
ಭಾವನೆಯನು
ಗೋಪಾಲನಿಗೆ ತಿಳಿಸಲು
ದುಂಬಿ ಸಂದೇಶ
ಕಳುಹಿಸುತಿಹುದು

ಹಸುವಿನ ಬಾಯಲ್ಲಿ ಅಂಬಾ
ಮೋಹನ ಕೊಳಲಿನ ನಾದ
ಜೊತೆಯಾಗಿ ಸೆಳೆಯುತಿಹುದು
ಮುದುಡಿದ ಮನವನು
ಅತ್ತಿತ್ತ ಅರಸಿಹಳು ರಾಧೆ
ವಿಹರದ ಬೇಗೆಯನು ತಾಳದೆ

ಗೋಪನಿರದೆ ಗೋಪಿಕೆಯ
ಮೊಗವು ಬಾಡಿದೆ
ತೋರವಾಗದಂತೆ ಸೋತಿದೆ
ಬಾಹುವಿನಲಿ ಬಂಧಿಸುವ
ಹಂಬಲದ ಮೊನೆಯು
ಚುಚ್ಚುತಿಹುದು ಮನಕೆ

ಜಲಕ್ರೀಡೆಗೆಂದು ತುಂಬಿದ
ನೀರಲ್ಲೂ ಕೆಸರು
ಬಳಸಲಾಗದಂತೆ ಕರಡಿದೆ
ಅರುಹುತಿಹುದು ಜಗಕೆ
ಕೃಷ್ಣನಿರದೆ ರಾಧೆಯ
ಬದುಕೆಲ್ಲ ಬರಡು