Wednesday, October 29, 2014

ಅರ್ಧ ಸತ್ಯ

ಮಾನದಲಿ ಸತ್ತಿರಲು
ಮೌನದಲಿ ಬೆಂದಿರಲು
ಏನೋ ಆಗಿರುವ ಬದುಕಿನಲ್ಲಿ
ನಡೆದ ಘಟನೆಗೆ ನಿಂದನೆಯೇಕೆ
ಪರರ ಮಾತಿಗೆ ಮಾನಕೆ ಅಂಜಿ
ಅಳಿಯುವ ಜೀವದ ಕಥೆಯಿದು ಕೇಳಿ...

ತಪ್ಪು ಯಾರದೊ ಹೆಸರು ನನ್ನದು
ಜನತೆ ಜರಿಯಲು ಬದುಕ ಚಿವುಟಿತು
ಚರಮಗೀತೆಯು ಕೇಳಿರಲು
ಪೂರ್ಣವಿರಾಮ ಬಿದ್ದಿತು ಬದುಕಿಗಿಂದು
ಮಾಡದ ಕೆಲಸದಲ್ಲಿ ಅಪರಾಧಿಯು ಯಾರಿಲ್ಲಿ
ಬಾಳಲು ಸ್ಪೂರ್ತಿ ತುಂಬಲು ಕಾರಣವು
ಬಿಂಬಿತ ಜೀವದ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...

Wednesday, October 22, 2014

ಆಸೆ ಭರವಸೆ

ದಿನವೆಲ್ಲ ಕಾಣಲಿ ತುಂಬಿರುವ ಬೆಳಕಿನಲಿ
ಎಣ್ಣೆ ತುಂಬಿ ಹೊತ್ತಿಸಿದ ಹಣತೆಯು
ನಂದಾದೀಪವಾಗಲೆಂಬ ಬಯಕೆಯು
ಸೂರ್ಯ ಅಡಗಿದರು ಬೆಳಗುತಿರಲಿ

ಕಾರ್ತಿಕ ಮಾಸದಲಿ ಬರವಿಲ್ಲ ಬೆಳಕಿಗೆ
ಅಂತಹುದೆ ಬೆಳಕು ತುಂಬಿರಲಿ ಬದುಕಿಗೆ
ಕತ್ತಲು ಕವಿಯದಂತೆ ಪ್ರಜ್ವಲಿಸಲಿ ಜೀವನ
ಪೂಜಿಸಿ ನಂಬಿಹೆನು ಬಾಳಾಗಲಿ ಪಾವನ

Monday, October 20, 2014

ಕೇಳು ಸೂಚನೆ

ಊರಿನಾಚೆ
ನಿಂತು ನೋಡು ನನ್ನನೆ
ಎದೆಯೊಳಗೆ 
ಕೂತ ಕಾಡು ಮನಸನೆ
ತಿಳಿಯದೆ
ನಿನಗೆ ಒಂದು ಸೂಚನೆ
ನಿನಗಾಗೆ
ಮಿಡಿಯುತಿದೆ ನನ್ನೊಳಗಿನ ಭಾವನೆ

ಕನಸು ಕಾಣಲು

ಮನಸ ಕಲ್ಪನೆ ಕಾರಣ
ನಮ್ಮ ಮಿಲನಕೆ
ಹಾಕಿಸುವೆ ಊರತುಂಬ ತೋರಣ
ಪ್ರತಿಕ್ಷಣ
ಬದುಕಲು ನಿನ್ನ ಪ್ರೀತಿಯ ಹೂರಣ
ನೀನು ತೊರೆದರೆ
ಆಗುವುದು ನನ್ನ ಒಲವಿನ ಮಾರಣ

Thursday, October 16, 2014

ಹನಿ ಕಂಬನಿ

ಮೋಡಗಳ ಘರ್ಷಣೆಯು
ಗಗನದಲಿ
ಮಿಂಚು ಗುಡುಗಿನ ಜನನವು
ಜಗಳಕ್ಕೆ ಕೊನೆಯುಂಟು
ಮಳೆಯಲಿ

ಭಾವನೆಗಳ ಕಡೆತವು
ಮನದಾಳದಲಿ
ಕೋಪತಾಪದ ಹುಟ್ಟು
ಮಿಡಿತಗಳಿಗೆ ಅಂತ್ಯವುಂಟು
ಕಂಬನಿಯಲಿ

Monday, October 13, 2014

ಬತ್ತಿದ ಕಡಲೊಳಗೊಂದು ಆಟದ ಮೈದಾನ

ಲೋಕಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನಾ ಬರೆದ ಕಥೆ .

ಆ ಒಂದು ಜೀವ ಬಡತನದಲಿ ಬಾಡಿದ ಕುಸುಮವೆಂಬಂತೆ ಗಿಡದಿಂದ ಉದುರಿ ಬೀಳದೇ ಶತಾಯ-ಗತಾಯ ಶ್ರಮಿಸುತ್ತ ಆಕಾಶಕ್ಕೊಂದು ಏಣಿ ಹಾಕುವ ಕಲ್ಪನೆಯಲಿ ಬದುಕ ಸವೆಸುತ್ತಿದೆ. "ಅದೊಂದು ರಾತ್ರಿಯಲಿ ಅರಳಿದ ನೈದಿಲೆಯಂತೆ, ಆಳು ಎಂದು ಆತನನ್ನು ಮುಂಬೈಯಂತಹ ಮಹಾನಗರಿಯತ್ತ ಕೊಂಡೊಯ್ದನು" ಆತನ ಸ್ನೇಹಿತ. ಭಾಷೆ ಬರದ ನಾಡು, ಗುರುತು ಪರಿಚಯವಿರದ ಪ್ರದೇಶ ಎತ್ತಣದಿಂದೆತ್ತಣಕ್ಕೆ ಜಿಗಿತವೆಂಬುದು ಅರ್ಥವಾಗದೆ ಸ್ನೇಹಿತ ತೋರಿಸಿದ ಜಾಗದಲಿ ಅವ ಹೇಳಿದ ಕೆಲಸ ಮಾಡಿಕೊಂಡು ಬಾಲ ಮುದುಡಿಕೊಂಡು ಅಣಿಯಾಳಾಗಿ ಬಿದ್ದ. ನಕ್ಷತ್ರ ಬಿದ್ದು ಬಂಗಾರದ ಗಣಿ ಸಿಕ್ಕಿದಾಗ ಆಗುವಂತಹ ಖುಷಿ, ದಾರಿ ಕಾಣದ ಹೊತ್ತಲ್ಲಿ ಬೆಳದಿಂಗಳು ಮೂಡಿದ ಹಾಗೆ ಹೊಸ ಹೊಸ ಕನಸುಗಳನ್ನು ಹೊತ್ತು ಬಂದಿದ್ದ ಈತನಿಗೆ ದೊರೆತದ್ದು ಮನೆಯಾಳೆಂಬ ಪಟ್ಟ. ಹೀಗಿರುವಾಗ ಇವನ ದಾಹಕ್ಕೆ ದೊರೆತದ್ದು ಕೆಸುವಿನೆಲೆಯ ಮೇಲೆ ಸಂಗ್ರಹಿಸಿಟ್ಟ ನೀರೆನ್ನುವುದು ಅರ್ಥವಾಗಲು ಕೆಲವೇ ಕೆಲವು ದಿನಗಳು ಸಾಕಾಯಿತು.

ಮರೀಚಿಕೆಯಾದಂತಹ ಕನಸಿನ ಮೂಟೆಯನ್ನು ಹೊತ್ತು ಬೇಸರದಿ ದಿನ ಕಳೆಯುತ್ತಿದ್ದ. ಒಂದು ದಿನ ಕಸಗುಡಿಸುತ್ತ ಮನೆಯ ಬಾಗಿಲನ್ನು ಸ್ವಚ್ಚ ಮಾಡುತ್ತಿದ್ದಾಗ ನಿನ್ನ ಹೆಸರೇನಪ್ಪ ಎಂಬ ಕನ್ನಡದ ಶಬ್ಧ ಕೆಳಿಸಿತು. ಆಗ ತುಸು ಸಮಾದಾನದಿಂದ ಮುಖವನ್ನೆತ್ತಿ ನೋಡಲು ಗೊಚರಿಸಿದ್ದು ಗುರುತೆ ಇರದ ಮೊಗಾರವಿಂದದ ವ್ಯಕ್ತಿ. ನೀವು... ಎಂಬ ರಾಗದಲ್ಲಿ ಕೇಳಿದಾಗ "ಹೌದಪ್ಪ ನಾನೇ", ಯಾಕೆ ಗುರುತು, ಪರಿಚಯ ಸಿಗಲಿಲ್ವಾ...? ನಾನಪ್ಪ ನಿಮ್ಮ ರಾಮಜ್ಜನ ಮನೆಯ ಶಂಕರ. ಹೌದು ನಿನ್ನ ಹೆಸರೇನೆಂದು ಹೇಳಲೇ ಇಲ್ವಲ್ಲಾ...? ಒಡೆಯಾ ನನ್ನ ಹೆಸರು "ತಿಮ್ಮಪ್ಪ" ಎಂದು ಹೇಳಿದ. ಆಗ ಶಂಕರ, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಕೇಳಿದ. ಅವನ ಮಾತಿಗೆ ಉತ್ತರಿಸುತ್ತ ಹೇಳಿದ ತಿಮ್ಮಪ್ಪ, ಇಲ್ಲಾ ಒಡೆಯ ಮರಳುಗಾಡಿನಲ್ಲಿ ಮಳೆಬಂದಂತೆ ಚಂದ್ರು ಬಂದು ಹೀಗೆ ಹೋಗೋಣ ಒಳ್ಳೆಯ ಕೆಲಸದೊಂದಿಗೆ ಹೊಟ್ಟೆ ತುಂಬ ಊಟ, ಬಟ್ಟೆ ಎಲ್ಲ ಸಿಗುತ್ತದೆ ಎಂದು ಹೇಳಿದಾಗ ಬರಡು ಭೂಮಿಯಲ್ಲಿ ಹಸಿರೊಡೆದಂತಾಯಿತೆಂದು ಅವನೊಟ್ಟಿಗೆ ಇಲ್ಲಿಗೆ  ಬಂದುಬಿಟ್ಟೆನೆಂದ. ಆದರೆ ಇಲ್ಲಿಗೆ ಬಂದು ಸ್ವಲ್ಪ ಕ್ಷಣದಲ್ಲೆ ಮಾಯವಾದ ಆತ ಇಲ್ಲಿಯ ತನಕವೂ ಕಣ್ಣಿಗೆ ಸುಳಿಯಲಿಲ್ಲವೆಂದು ಬೇಸರಿಸಿದ. ಹೆಪ್ಪು ಮೂತಿಯ ತಿಮ್ಮಪ್ಪನನ್ನು ನೋಡಿದ ಶಂಕರ, ನಿನಗ್ಯಾವ ಕಾಲ ಬಂತೋ ನಾ ಕಾಣೆ, ಅವನ ಮಾತನು ನಂಬಿ ಊರು ಬಿಟ್ಟು ಅಪರಿಚಿತ ಸ್ಥಳಕ್ಕೆ ಬಂದಿದ್ದೀಯಲ್ಲ ನಿನಗೇನು ಹೇಳಲಿ...? ಹೆದರದಿರು ನಿನ್ನ ಕಾರ್ಯ ಹೀಗೆ ಸಾಗುತ್ತಿರಲಿ, ನಿನಗು ಒಂದು ದಿನ ಬರುತ್ತೆ ಆಗ ನಿನ್ನನ್ನು ನೀನೆ ನಂಬದಂತಹ ಬದಲಾವಣೆ ಆಗಿರುತ್ತದೆ ಎಂದು ಹೊರಟುಹೋದ.

'ಮತ್ತದೆ ಬೇಸರ.. ಅದೆ ಸಂಜೆ... ಅದೆ ಏಕಾಂತ' ಹಾಡು ಕೇಳುತ್ತ ಒಡೆಯನ ಮನೆಯ ಟೆರಸಿಯ ಮೇಲೆ ಮಕಾಡೆ ಮಲಗಿದ. ದಿನ ಬೆಳಗಾದರೆ ಗುಡಿಸಿ-ವರೆಸಿ ಕಾರು ತೊಳೆಯುವುದು, ಹೂದೋಟಕ್ಕೆ ನೀರುಣಿಸುವುದು, ಅಂಗಳದ ತುಂಬ ಬಿದ್ದಿರುವ ಕಸ, ಎಲೆಗಳನ್ನು ಹೆಕ್ಕಿ, ಹಸಿರು ಹುಲ್ಲನು ಅಳತೆಗೆ ಸಮನಾಗಿ ಕತ್ತರಿಸಿ, ಪೋಷಿಸುವುದೇ ಇವನ ದಿನ ನಿತ್ಯದ ಕೆಲಸ. ಕಾಂಪೌಂಡಿನ ಹೊರಗೇನಿದೆ ಎನ್ನುವ ಅರಿವಿಲ್ಲದಂತೆ ಬಾವಿಯೊಳಗಿನ ಕಪ್ಪೆಯಂತಾಗಿ ರೋಸಿಹೋದ.

೨ನೇ ತರಗತಿಯವರೆಗೆ ಓದಿದ್ದ ತಿಮ್ಮಪ್ಪ ಬೇಸರ ಕಳೆಯಲು ಮನಸಿಗೆ ಬಂದಿದ್ದನ್ನು ಬರೆಯಲು ಪ್ರಯತ್ನಿಸಿದ. ಗೀಚಿದ ಸಾಲುಗಳು ಏನೆಂದು ತಿಳಿದವರಿಗೆ ಬಹುಮಾನ ನೀಡಲಾಗುವುದು ಎಂದರೂ ಓದಿ ಅರ್ಥೈಸಿಕೊಳ್ಳಲಾಗದ ಸ್ಥಿತಿ ಅವನ ಬರವಣಿಗೆಯಾಗಿತ್ತು. ಮನೆಯ ಟೆರೇಸಿಯ ಮೇಲೆ ಕುಳಿತು ಏಕಾಂತದಿ ಸಂಜೆ ಕಳೆಯುತ್ತಿದ್ದಾಗ ಪಕ್ಕದ ಮನೆಯಲ್ಲೊಬ್ಬನ ಮುಖ ಪೆರಿಚಯವಾಗಿ ಸನ್ನೆಯ ಮೂಲಕ ಸಂಭಾಷಿಸಿದರು. ಹಾಗೆ ದಿನ ಕಳೆಯುತ್ತ ಮನೆಯ ಕಾಂಪೌಂಡಿನ ಗೇಟಿನವರೆಗೆ ಮುಂದುವರೆದ ಪರಿಚಯ ಸ್ನೇಹಕ್ಕೆ ತಿರುಗಿತು. ಆವತ್ತಿನಿಂದ ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಸ್ನೇಹಿತನಿಂದ ಹಿಂದಿ ಕಲಿಯಲು ಪ್ರಾರಂಭಿಸಿದ. ಹಾಗೆ ಅದೇ ಕೆಲಸ ಮಾಡುತ್ತ ಚೂರು ಕನ್ನಡ ತಿಳಿದವನಿಂದ ಹಿಂದಿ ಕಲಿತು ಹೊರ ಜಗತ್ತಿನ ಅರಿವು ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತ.

ಏನೇನೋ ಆಸೆ, ಪರಿಕಲ್ಪನೆಗಳ ಗೂಡಿಗೊಂದು ಹಕ್ಕಿಯ ಪ್ರವೇಶವಾಯಿತು. ಎಂದೋ ಕಮರಿ ಹೊಗಿದ್ದ ಬದುಕಿನ ನಿರ್ಣಯಕ್ಕೆ ಹೊಸದೊಂದು ಗರಿ ಮೂಡಿ ನೂತನವಾದ ತಿರುವು ಸಿಕ್ಕಿತು. ಗಡಿನಾಡ ಗೆಳೆಯ 'ಪುಣ್ಯಾತ್ಮ ಪಾಟೀಲ'ನ ಜೊತೆ ಸೇರಿ ಮಜ್ಜಿಗೆ ಮಾರುವ ಕೆಲಸ ಪ್ರಾರಂಭಿಸಿದ. ದಿನ ಬೆಳಗಾದರೆ ಹಸಿ ಮೆಣಸು, ಉಪ್ಪು, ಶುಂಟಿಯನ್ನು ಬೆರೆಸಿದ ಮಸಾಲ ಮಜ್ಜಿಗೆಯನ್ನು ಮಾರುತ್ತ ಮಾರುತ್ತ ತನ್ನ ಬದುಕಿಗೊಂದು ನೆಲೆ ಕಂಡುಕೊಂಡ. ದಿನವೆಲ್ಲ ದಣಿದು ಸಂಜೆ ಎಲ್ಲೋ ಎಲ್ಲೋ ಮಲಗುತ್ತಿದ್ದ ಈರ್ವರು ತಮ್ಮದೇ ಆದ ಗುಡಿಸಲೊಂದನ್ನು ಕಟ್ಟಿ ಅದರೊಳಗೆ ತಮ್ಮ ವಾಸ್ತವ್ಯಮಾಡಿದರು. ವಿಳಾಸವಿರದ ಜೀವಕ್ಕೊಂದು ಗುರುತಿಸುವ ಜೀವನ ಸಿಕ್ಕಿತು. ಹಾಗೆ ಮಜ್ಜಿಗೆ ಮಾರುತ್ತ ಗಳಿಸಿದ ಹಣದಿಂದ ತಮ್ಮನ್ನು ತಾವೆ ಗುರುತಿಸಿಕೊಳ್ಳುವ ಹಾಗೆ ಎಲ್ಲ ರೀತಿಯ ಸಕಲ ಸಲಕರಣೆಗಳನ್ನು ಗಳಿಸಿದರು. ಉಳಿದವರಿಂದ ತೆಗಳಿಕೆಗೆ ಒಳಗಾಗದೆ ಮಾಡುವ ಕೆಲಸಗಳನ್ನು ನಿಯತ್ತಿನಿಂದ ಮಾಡಿ ಎಲ್ಲರ ಗಮನ ಸೆಳೆದರು. ಇವರ ನಿಯತ್ತನ್ನು ನೋಡಿ ಬೇರೆಯವರೆ ಇವರನ್ನು ಕರೆದು ಮಾತನಾಡಿಸಿದರೂ ಅವಶ್ಯಕತೆಗೆ ಮೀರಿದ ಮಾತಾಡದೆ ಅಲ್ಲಿಂದ ತಮ್ಮ ಮನೆಯತ್ತ ಹೋಗುತ್ತಿದ್ದರು. ಅದೆ ಮಜ್ಜಿಗೆ, ಅದೆ ಸೈಕಲ್ ಆದರೆ ಗಳಿಸಿದ ಮೊತ್ತ ಹನಿ ಹನಿ ಕೂಡಿ ಹಳ್ಳವೆಂಬ ಮಾತಿಗೆ ಅರ್ಹವಾದಷ್ಟು.

ಬಂದ ಹಣವನ್ನೆಲ್ಲ ಕೂಡಿಟ್ಟು ಇಬ್ಬರು ಸಮನಾಗಿ ಹಂಚಿಕೊಂಡು ತಮ್ಮ ತಮ್ಮ ಊರಿನತ್ತ ಮುಖ ಮಾಡಿದರು. ಆದರೆ ತಿಮ್ಮಪ್ಪನ ಮನೆಯಿದ್ದ ಜಾಗದಲ್ಲಿ ತೋಟವಿತ್ತು, ಊರ ತುಂಬೆಲ್ಲ ಬರೆ ವರ್ಷವಾದವರ ಸಂಘ. ಬರೋಬ್ಬರಿ ೧೩ ವರ್ಷಗಳ ಬಳಿಕ ಊರಿಗೆ ಹಿಂತಿರುಗಿದ ತಿಮ್ಮಪ್ಪನ ಮೊಗದಲ್ಲಿದ್ದ ಮನೋತ್ಸಾಹ ಮಂದವಾಯಿತು. ನನ್ನ ಮನೆ, ನನ್ನ ಕುಟುಂಬ, ನನ್ನವರು ಎಲ್ಲಿ...? ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲವೆಂಬುದಾಗಿತ್ತು. ಮಂದಸ್ಮಿತನಾದ ತಿಮ್ಮಪ್ಪ ಸಾಗಿದ್ದು ಅದೇ ಮುಂಬೈನಲ್ಲಿ ಸಿಕ್ಕಿದ್ದ ರಾಮಜ್ಜನ ಮನೆಯ ಶಂಕರನತ್ತ. ಆದರಲ್ಲಿ ಆ ಶಂಕರನಿರಲಿಲ್ಲ ಬದಲಾಗಿ ಇದ್ದಿದ್ದು ಇಬ್ಬರು ಮುದುಕಿಯರು ಮಾತ್ರ. ಆತನ ಬಗ್ಗೆ ವಿಚಾರಿಸಿದಾಗ ತಿಳಿದಿದ್ದು ೧೯ ವರ್ಷಗಳ ಹಿಂದೆ ದೇಶಾಂತರ ಹೋಗಿದ್ದ ಎಂದು, ಆದರೀಗ ಶಂಕರನ ಕುರಿತಾಗಿ ಬೇರೇನು ತಿಳಿದಿಲ್ಲವೆಂಬ ಸತ್ಯ ತಿಳಿಯಿತು. ತನ್ನ ಕುಟುಂಬವೆಲ್ಲಿ ಎನ್ನುತ್ತ ಅರಸುತ ಅಲೆದಾಗ ತಿಳಿದದ್ದು "ಸುಳಿವಿಲ್ಲದಂತೆ ಎಲ್ಲರೂ ಸತ್ತು ಸುಡುಗಾಡು ಸೇರಿದರೆನ್ನುವುದು". ಆದರೆ ಇವನ ಮಾವನೊಬ್ಬ ದೇವಸ್ಥಾನ ಅಲೆಯುತ್ತ ದಿನವೆಣಿಸುತ್ತಿದ್ದಾನೆ ಎನ್ನುವುದು ಗೊತ್ತಾದ ಕ್ಷಣದಿಂದಲೆ ಎಲ್ಲ ದೇವಸ್ಥಾನಗಳ ಯಾತ್ರೆ ಪ್ರಾರಂಭಿಸಿದ. ಎಲ್ಲೋ ದೇವಸ್ಥಾನದ ಮೂಲೆಯೊಂದರಲ್ಲಿ ಮಲಗಿ ಹೊರಳಾಡುತ್ತಿದ್ದ ಈತನ ಮಾವನನ್ನು ನೋಡಿ ಅಳುತ್ತ ಹತ್ತಿರ ಹೋಗಿ ಹಿಡಿದುಕೊಂಡು ತಾನಾರೆಂದು ಹೇಳುತ್ತಿರುವಾಗಲೆ ಆತನು ತನ್ನ ಕೊನೆಯುಸಿರೆಳೆದ.

ಏನು ಮಾಡುವುದೆನ್ನುವುದು ಅರ್ಥವಾಗದೆ ಸ್ನೇಹಿತನ ಜೊತೆ ಗೂಡಿ ತನ್ನ ಉದ್ಯೋಗಕ್ಕೆ ಮರಳಿದ. ಆಗ ಆತನಿಗೆ ಸಿಕ್ಕಿದ್ದು ಅದೇ ಶಂಕರ. ನೀನು ಊರಿಗೆ ಹೋಗಿ ಎಲ್ಲ ಅವಗಡಗಳನ್ನು ತಿಳಿದು ನನ್ನ ಬಗ್ಗೂ ವಿಚಾರಿಸಿ ವಿಷಾದನೀಯ ಸ್ಥಿತಿಯಲ್ಲಿ ಮರಳಿದ್ದು ತುಂಬಾ ಬೇಸರವಾಯಿತು ಎಂತೆಂದ. ಆದರೆ ನೀನೀಗ ಅದನ್ನೆಲ್ಲ ಮರೆತು ನಿನ್ನ ಕೆಲಸ ಕಾರ್ಯದಲ್ಲಿ ತೊಡಗು ಆಗ ನೀನು ನಿನ್ನನ್ನೆ ನಂಬಲಾಗದಷ್ಟು ಬದಲಾಗುತ್ತೀಯ ಎಂದು ಪುನರುಚ್ಚರಿಸಿದ. ಹಾಗೆ ಮುಂದುವರೆಯುತ್ತ ನೀನು ಗಳಿಸಿದ ಮೇಲೆ ನೀನು ನಿನ್ನ ಗಡಿಯೊಳಗೆ ನಿನ್ನದೇ ಆದ ಸಾಧನೆಯನ್ನು ಮಾಡು ಎಂದು ಮತ್ತೆ ಪುನಃ ಹೊರಟುಹೋದ.

ಪುಣ್ಯಾತ್ಮ ಮತ್ತು ತಿಮ್ಮಪ್ಪ ಜೊತೆ ಸೇರಿ ಮತ್ತೈದು ವರ್ಷ ದುಡಿದು ತಮ್ಮದೇ ಆದ ತಂಪು ಪಾನೀಯದ ಚಿಕ್ಕ ಕಂಪನಿಯೊಂದನ್ನು ಪ್ರಾರಂಭಿಸಲು ನಾಂದಿ ಮಾಡಿದರು. ಪರಿಶ್ರಮ ಪರಿವರ್ತನೆಯಾಗಿ ಇಬ್ಬರನ್ನು ಕಂಪನಿಯೊಂದರ ಮಾಲೀಕರನ್ನಾಗಿ ಮಾಡಿತು. ತಮ್ಮ ಕಂಪನಿಯಲ್ಲಿ ಊರಿನಲ್ಲಿದ್ದ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡಿ ಊರಿನ ತುಂಬ ಎಲ್ಲರ ಮನೆಯೊಲ್ಲೊಬ್ಬ ಉದ್ಯೋಗಸ್ಥರು ಇರುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಆಗ ಆತನಿಗೆ ನೆನಪಾಗಿದ್ದು ಮತ್ತದೆ ಶಂಕರನ ಮಾತು.

ಮದುವೆಯಾಗಿದ್ದ ಪುಣ್ಯಾತ್ಮ ಬೇರೆಯಾಗಲಿಚ್ಚಿಸಿದ. ಆಗ ಅದರ ಮಾಲಿಕತ್ವವನ್ನು ಆತನಿಗೆ ಬಿಟ್ಟು ಮತ್ತೆ ಪುನಃ ಮೊದಲಿನಂತೆಯೇ ಮಜ್ಜಿಗೆ ಮಾರಲು ಪ್ರಾರಂಭಿಸಿದ. ಮೊದಲಿನ ಹಾಗೆ ಮಜ್ಜಿಗೆ ಮಾರುತ್ತಿರುವಾಗ ಮಜ್ಜಿಗೆ ಕುಡಿಯಲು ಮತ್ತೆ ಇವನೆದುರು ಬಂದವನೇ ಶಂಕರ. ಆಶ್ಚರ್ಯ ಚಕಿತನಾಗಿ ಅವನನ್ನೆ ದಿಟ್ಟಿಸಿ ನೋಡಲಾರಂಭಿಸಿದ ತಿಮ್ಮಪ್ಪ. ನಿನ್ನ ಸಮಯ ಪ್ರಜ್ಞೆ, ನಿನ್ನ ಇಂಗಿತ, ನಿನ್ನ ಹೋರಾಟ, ನಿನ್ನ ಯಶಸ್ಸು ಒಂದು ಪಾಠ. ಎತ್ತರಕ್ಕೆ ಏರಿದರೂ ಮೇಲೆ ಹತ್ತಿಸಿದ ಏಣಿಯ ಬುಡ ನೋಡಲು ಮೇಲಿಂದ ಕೆಳಗಿಳಿದು ಬಂದಿದ್ದು ಸಿನಿಮೀಯ ಕಥೆಯಂತಾದರೂ ಅದರ ಹಿಂದಿರುವ ಅರ್ಥ ತಿಳಿದರೆ ಸಾಯುವವ ಬದುಕುವುದು ಖಂಡಿತ. ಗಳಿಸಿದ್ದನ್ನೆಲ್ಲ ಕಳೆದುಕೊಂಡೆನೆಂದು ಭಾವಿಸಿ ಬೇಸರಿಸದಿರು, ನಿನ್ನ ಜೀವನದ ಕಥೆ ಕೇಳಿದ ಜೀವಗಳಿಗೆ ಬದುಕಲು ಸ್ಪೂರ್ಥಿ ನೀಡುತ್ತದೆಂದು ಹೆಮ್ಮೆಪಡು ಎನ್ನುತ್ತ ಮತ್ತೆ ಮರೆಯಾದ. ಅವನ ಮಾತನ್ನು ಯೋಚಿಸುತ್ತ ಅದರಿಂದ ಸ್ಪೂರ್ತಿಗೊಂಡು ಮಜ್ಜಿಗೆ ಮಾರುವತ್ತ ತನ್ನ ಗಮನ ಹರಿಸಿದ.

Tuesday, October 7, 2014

ಸುರಕ್ಷತೆಯ ಭಯ ಪ್ರಯಾಣಿಕರಿಗಿಲ್ಲ ಅಭಯ

ನಾವು ಪ್ರಯಾಣಿಸುವಾಗ ನಮ್ಮ ಪ್ರಯಾಣ ಎಷ್ಟು ಸುರಕ್ಷಿತವೆಂದು ಯೋಚಿಸಿದರೆ ಮನೆಯಿಂದ ಹೊರ ಹೋಗುವುದನ್ನು ವಾಹನಗಳಲ್ಲಿ ಬಿಟ್ಟು ನಡೆದುಕೊಂಡೆ ಹೋಗುವುದನ್ನು ರೂಡಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸ್ವಂತ ವಾಹನವಾಗಲಿ, ಸರ್ಕಾರಿ ವಾಹನಗಳಾಗಲಿ, ಖಾಸಗಿ ವಾಹನಗಳಾಗಲಿ ಸಂಚಾರ ಸ್ತಂಭನ (Traffic Jam) ದಿಂದ ತಪ್ಪಿಸಿಕೊಳ್ಳಲಾಗಲಿಕ್ಕಿಲ್ಲ. ಇದು ಬೆಂಗಳೂರಿನಂತಹ ಮಹಾನಗರಿಯಲ್ಲಿ ಪ್ರತಿಕ್ಷಣ ಕಾಡುವ ಭಯ.

ಊರು ಬೆಳೆಯುತ್ತಿದೆ ಹಾಗೆ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಸ್ವಂತ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳ ಕಾರುಬಾರು. ನಾಲ್ಕುಚಕ್ರ ವಾಹನದಲ್ಲಂತು ಒಬ್ಬನಿಗಾಗಿ ಜನರಿಗೆ ಬೇಕಾಗುವಷ್ಟು ಜಾಗದ ವ್ಯಯ. ಇದರಿಂದಾಗಿಯೆ ಸಂಚಾರ ಸ್ತಂಭನ (Traffic Jam) ಹೆಚ್ಚಾಗಿರುವುದು ಮತ್ತು ಜಾಸ್ತಿಯಾಗುತ್ತಿರುವುದು. ಇವುಗಳಿಂದ ಅಪಘಾತಗಳು ಜಾಸ್ತಿಯಾಗುತ್ತಿದ್ದು ಆಸ್ಪತ್ರೆಗಳಲ್ಲಿ ಜಾಗವಿಲ್ಲದಂತಾಗುತ್ತಿದೆ.

ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದಿರುವುದರಿಂದ, ಪೋಲಿಸರ ಕಣ್ಣು ತಪ್ಪಿಸಿ ಸಂಚಾರಿ ನೀತಿ ನಿಯಮಗಳನ್ನು ಗಾಳಿಗೆ ತೂರುವುವರಿಂದ, ಖಾಸಗಿ ಕಂಪನಿಗಳ ಕರೆದೊಯ್ಯುವ ವ್ಯವಸ್ಥೆಯಿಂದಾಗಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ, ಮೇಲಿನ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು ದೊಡ್ಡ ಜನವೆಂದು ಅಂತಸ್ತನ್ನು ತೊರಿಸಲಿಚ್ಚೆಪಡುವ ಮೂರ್ಖರಿಂದಾಗಿ, ಕುಡಿದು ಚಾಲನೆ ಮಾಡುವುದರಿಂದಾಗಿ, ವಾಹನದಲ್ಲಿ ಅಥವಾ ಹಿಂಬದಿಯಲ್ಲಿ ಹುಡುಗಿಯನ್ನು ಕೂರಿಸಿಕೊಂಡು ಮತ್ತು ಹುಡುಗಿಯರನ್ನು ಆಕರ್ಷಿಸಲಿಕ್ಕೆಂದು ಅತಿವೇಗದಲ್ಲಿ ಚಾಲನೆ ಮಾಡುವ ಹುಂಬರಿಂದಾಗಿ ಸಂಚಾರ ಸ್ತಂಭನ, ಅಪಘಾತಗಳು ಮತ್ತು ಸಾವು ನೋವುಗಳು ಆಗುತ್ತಿರುವುದು ವಿಷಾದನೀಯ ಮತ್ತು ಭಯಕ್ಕೆ ಕಾರಣವಾಗುತ್ತಿರುವ ಕೆಲವು ನಿದರ್ಶನಗಳು.

ಹಾಗೆ ನಮ್ಮ ಬಿ.ಎಂ.ಟಿ.ಸಿ ಬಸ್ಸಿನ ಕೆಲವು ನಿಷ್ಕಾಳಜಿಯುತ ಚಾಲಕರಿಂದಲೂ ಮತ್ತು ಕೆಲವು ಬಿ.ಎಂ.ಟಿ.ಸಿ ವ್ಯವಸ್ಥಾಪಕ ಅಧಿಕಾರಿಗಳಿಂದಾಗಿಯೂ ಸಂಚಾರ ಭಯ ಹೆಚ್ಚುತ್ತಿದೆ. ಬಸ್ಸಿನ ಒಳಬದಿಯಲ್ಲಿ ಚಾಲಕರ ಆಜುಬಾಜಿನಲ್ಲಿ ಅಂಟಿಸಿರುವ ಸೂಚನಾ ಫಲಕವನ್ನು ನೀವು ಗಮನಿಸಿರಬಹುದು. ಅದೇನೆಂದರೆ "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಎಂದು. ಆದರೆ ಇಲ್ಲಿಯೆ ನೋಡಬಹುದು ನಮ್ಮ ಬಿ.ಎಂ.ಟಿ.ಸಿಯ ವ್ಯವಸ್ಥಾಪಕರ ಎಡವಟ್ಟುಗಳನ್ನು. ಚಾಲಕರೊಬ್ಬರನ್ನೆ ಇಟ್ಟು ಬಸ್ಸಿನ ಚಾಲನೆ ಮತ್ತು ನಿರ್ವಹಣೆಯನ್ನು ಮಾಡಿಸಿಕೊಂಡು, ಇಂತಿಷ್ಟೆ ಸಮಯದ ಮಿತಿಯಲ್ಲಿ ನಿರ್ದಿಷ್ಟ ಸ್ಥಳವನ್ನು ತಲುಪಬೇಕೆಂದು ಷರತ್ತನ್ನು ವಿಧಿಸಿ ಯರ್ರಾಬಿರ್ರಿ ಚಾಲನೆ ಮಾಡಲು ಪ್ರಚೋಧಿಸುತ್ತಿರುವುದನ್ನು ಕಾಣಬಹುದು.

ನಿರ್ವಾಹಕರಿಲ್ಲದಿರುವಾಗ ಹೀಗೆತಾನೆ ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸದೇ ಇರಲಿಕ್ಕೆ ಸಾಧ್ಯ. ಅದಷ್ಟೆ ಅಲ್ಲದೆ ಚಾಲಕ ಮತ್ತು ನಿರ್ವಾಹಕನಾಗಿ ಒಬ್ಬನೆ ಕಾರ್ಯನಿರ್ವಹಿಸಿದರೆ ಅವರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಹೇಳಿ ಅಪಘಾತ ಮತ್ತು ಅವಗಡಗಳು ಸಂಭವಿಸುವುದಕ್ಕೆ ಪ್ರಚೋಧಿಸುತ್ತಿರುವುದು ಖಂಡನೀಯ. ಯಾಕೆಂದರೆ ಇಳಿಯುವ ಸ್ಥಳಕ್ಕಾಗಿ, ಟಿಕೇಟ್ ಗಾಗಿ, ಚಿಲ್ಲರೆ ಹಣವನ್ನು ತಿರುಗಿ ಪಡೆಯಲಿಕ್ಕಾಗಿ, ನಿಲ್ಲಿಸುವಿರಾ ಎಂದು ಕೇಳಲಿಕ್ಕಾಗಿ, ಹೋಗುವ ಪ್ರದೇಶದ ಮಾರ್ಗದ ಮಾಹಿತಿಗಾಗಿ ಚಾಲಕರನ್ನು ಮಾತನಾಡಿಸಲೇ ಬೇಕಾಗುತ್ತದೆ. ಹೀಗಿರುವಾಗ ಬಸ್ಸಿನ ಒಳಬದಿಯಲ್ಲಿರುವ ಫಲಕಕ್ಕೆ ಇನ್ನೆಲ್ಲಿಯ ಬೆಲೆ ಇರುತ್ತದೆ..? ಸಂಚಾರಿ ನಿಯಮವನ್ನು ಸರ್ಕಾರಿ ಅಧಿಕಾರಿಗಳೇ ಮುರಿದಿರುವಾಗ ಭಯ ಕಾಡಿಯೇ ಕಾಡುತ್ತದೆ. ಅದು ಅಲ್ಲದೆ ಇದು ಚಾಲಕರ ಕಣ್ತಪ್ಪಿಸಿ ಟಿಕೇಟ್ ರಹಿತ ಪ್ರಯಾಣಿಸುವವರಿಗೆ ಪ್ರಚೋಧನೆ ನೀಡಿ ಅನುವುಮಾಡಿಕೊಡುತ್ತದೆ. ನೀಡಿದ ಸಮಯದಲ್ಲಿ ನಿರ್ಧಿಷ್ಟ ಸ್ಥಳಗಳನ್ನು ತಲುಪದಿದ್ದರೆ ಅವರಿಗೆ ತೊಂದರೆ ನೀಡಿ ಕಿರಿಕಿರಿ ಮಾಡುವ ಮೇಲಾಧಿಕಾರಿಗಳು ಇದ್ದಾರೆ ಹಾಗೆ ದ್ವಿಪಾತ್ರ ಮಾಡಿಯೂ ತಡವಾಗಿ ಬಂದವರ ತುಟ್ಟಿಭತ್ಯೆಗೆ ಕತ್ತರಿ ಬೀಳುತ್ತದೆಯೆಂದು ದ್ವಿಪಾತ್ರ ಮಾಡಿದ ಚಾಲಕರನ್ನೆ ಕೇಳಿ ತಿಳಿದಿದ್ದೇನೆ.

ಬೆಳಕು ಚೆಲ್ಲಬೇಕಾದ ಸಂಚಾರಿ ಆರಕ್ಷಕರೆ ಕೆಲವೊಂದು ಬಾರಿ ನೀತಿ ನಿಯಮಗಳನ್ನು ಮುರಿದು ಚಲಿಸುವುದು ಕಂಡುಬರುತ್ತಿದೆ. ಇದು ಸಹ ಉಳಿದವರನ್ನು ಪ್ರಚೋಧಿಸುತ್ತದೆ. ಅದು ಅಲ್ಲದೆ ಆರಕ್ಷಕರ ಜೇಬಿನಲ್ಲಿ ಹಣವಿಲ್ಲದಿದ್ದಾಗ ಹೆಚ್ಚಿನದಾಗಿ ದ್ವಿಚಕ್ರ ವಾಹನಗಾರರನ್ನೆ ಹಿಡಿದು ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಿ ರಸೀದಿ ನೀಡದೆ ಹಣ ಕಿತ್ತುಕೊಳ್ಳುವ ಆರಕ್ಷಕರಿಂದಾಗಿ ಪರವಾನಗಿ ಪುಸ್ತಕವನ್ನು ತರದೆ ಕದ್ದು ಸಂಚರಿಸುವವರಿಂದಲೂ ಕೆಲವೊಂದು ಅವಗಢಗಳು ಸಂಭವಿಸುತ್ತವೆ. ಹಾಗೆ ಗೌರವನ್ವಿತ ಆರಕ್ಷಕ ಇಲಾಖೆಯ ಮೇಲಿನ ಗೌರವ ಹಾಳಾಗುತ್ತಿರುವುದು ವಿಷಾದನೀಯ.

ಬಸ್ಸಿನಲ್ಲಿ ಹಾಕಿರುವ ಚಿಕ್ಕ ಫಲಕಕ್ಕೆ ಅದರದೆ ಆದ ಒಳಾರ್ಥವಿದೆ. "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಇದು ನಿಜವಾದ ಮಾತು. ಆದರೆ ಒಬ್ಬಿಬ್ಬರು ದ್ವಿಪಾತ್ರಿ ಚಾಲಕರನ್ನು ಮಾತನಾಡಿಸುವಾಗ ಇನ್ನುಳಿದ ಪ್ರಯಾಣಿಕರಿಗೆಲ್ಲಿರುತ್ತದೆ ಸುರಕ್ಷತೆಯ ಅಭಯ...? ಯಾಕೆಂದರೆ ಚಾಲಕರ ಗಮನ ಚಾಲನೆಯಿಂದ ಬೇರೆಡೆಗೆ ಹೋಗುತ್ತದೆ ಮತ್ತು ಇದರಿಂದ ಅಪಘಾತ ಸಂಭವಿಸಬಹುದು. ಅದು ಅಲ್ಲದೆ ವೇಗವಾಗಿ ಚಲಿಸುವ ಮತ್ತು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗುವ ವಾಹನಗಳಿಂದಾಗಿ ಸುರಕ್ಷತೆಯ ಭಯಕಾಡುವುದಂತು ನಿಜ.