Thursday, April 14, 2022

ಗೋ ಜೀವನ

ಅಂಬಾ ಎಂಬ ಕೂಗ ಕೇಳಿ

ಅಮ್ಮಾ ಜನಿಸಿಹಳು

ಜನಿತ ಮಗುವಿನ ಮೊದಲ ಶಬ್ದವೇ

ಉಂಙೆ ಆಗಿಹುದು


ಕಂದಾ ಸಾಗುವ ಮೊದಲ ಚಲನೆಗೆ

ಅಂಬೆಗಾಲೆನ್ನುವರು

ಮಗುವಿಗೆ ಕಲಿಸುವ ಮೊದಲ ನೀತಿಯೆ

ಪುಣ್ಯಕೋಟಿಯಾಗಿಹುದು


ಜನಿತ ಕಂದಗೆ ನೀಡುವ ಹಾಲಿಗೆ

ಗೋವೆ ಬೇಕಿಹುದು

ಮಗುವಿನ ಪ್ರೀತಿಗೆ ಮೊದಲ ಪ್ರಾಣಿಯೇ

ಅಂಬಚ್ಚಿಯಾಗಿಹುದು


ಮನೆಯ ಸ್ವಚ್ಚತೆ ಮನದ ಶುದ್ಧತೆ

ಗೋಮಯ ಗೋಮೂತ್ರವಾಗಿಹುದು

ತೋಟಕೆ ಸಿಗುವ ಫಲವತ್ತತೆಯು

ಸಾವಯವ ಗೊಬ್ಬರವಾಗಿಹುದು


ಬೆಳೆವ ಮಗುವು ಪಡೆಯುವ ಫಲಗಳು

ಗೋವಿನ ಕೃಪೆಯಾಗಿರುವುದು

ಮುದಿ ಗೋವನು ಹೊಡೆಯುವ  ಮಾನವ

ಕಟುಕನ ಮನೆ ಕಡೆಗಾಗಿವುದು


ಪಡೆಯುವುದೊಂದೆ ಮನುಜನ ಮೂಲ

ನಿರ್ದಯಿಯಾಗಿರಲು

ಉಳಿದವರೆಲ್ಲಾ ಹಸುವನು ಸಾಕಬೇಕು

ತಾನೊಬ್ಬ ಸ್ವಾರ್ಥಿಯಾಗಿರಲು


ದುಡ್ಡನು ನೀಡುವೆ ದನಿಯನು ಎತ್ತುವೆ

ಶಾಲನು ಹೊದೆಯುವ ತೋರಿಕೆಗೆ

ಮಾತಲೇ ಮಡಿಯನು ಧರಿಸುವ ಜನರು

ಗೋನಾಶಕೆ ನಾಂದಿ ಹಾಡಿಹರು

ಶ್ರಮಿಸೇ ಮೇಲಕೇರು

ತೆರೆದ ಬಾವ ಭಕುತಿಯಲ್ಲಿ

ನುಡಿಯೆ ಅದರ ಖ್ಯಾತಿಯ

ಜನಿಪನಾವ ಧರಣಿಯಲ್ಲಿ

ಶ್ರಮಿಸೇ ಮೇಲಕೇರುವ


ಬಗರಿಯಾಟ ಬದುಕಿನಲ್ಲಿ

ತಿರುಗಿ ಸೇರಿ ನಿಲ್ಲಲು

ಗೋಲ ಭೂಮಿಯ ವೃತ್ತದಲ್ಲಿ

ಬಿಟ್ಟ ಜಾಗ ತಲುಪಲು


ಸತ್ತ ಮನಸಿನ‌ ಸುತ್ತಲಲ್ಲಿ

ಭಾರಿ ಬಯಕೆಯು ಉಳಿವುದೇ?

ಸೋತ ಕನಸಿನ ವ್ಯಥೆಗಳಲ್ಲಿ

ಕೊನೆಯಿದೆಂದು ಲೆಕ್ಕವೇ?


ನುಡಿವ ಭಕ್ತಿ ಶೋಕಿಗಾಯ್ತು

ಬಗರಿಯಾಟ ಬದುಕಿಗಾಯ್ತು

ಸತ್ತ ಮನಸಿಗಿಲ್ಲ ಬಯಕೆಯು

ಬಂದು ಹೋಗಲು ಲೆಕ್ಕ ಚುಕ್ತವು

Tuesday, November 9, 2021

ಕಾಡುವ ಮನಸು

ಪದೆ ಪದೆ ನನ್ನ ಕಾಡುವ ಮನಸೆ

ಏಕೆ ಹೀಗೆ ಸತಾಯಿಸುವೆ?

ಎತ್ತರ ನೋಡಿ ಹತ್ತುವ ಹಂಬಲ

ಬೀಳುವ ಯೋಚನೆ ಮರೆಯುವೆಯೇ?


ನೋವು ನಲಿವಿನ ಮಜಲಿಗೆ ಕಾರಣ

ಕೈಗೆಟುಕದ ಹಸಿವಿನ ಧಾರಣ

ಪ್ರೀತಿ ಹಂಚಿಕೆ ಏಳಿಗೆ ಹೂರಣ

ದ್ವೇಷ ಅಸೂಯೆ ಬದುಕಿಗೆ ಮಾರಣ


ಏಳು ಬೀಳಿನ ಏರಿಳಿತದಲಿ

ಕಪ್ಪು ಬಿಳಿಪಿನ ಚಲನಚಿತ್ರವು

ಸೋಲು ಗೆಲುವಿನ ಹೋರಾಟದಲಿ

ಸಮ ಚಿತ್ತವೆ ನಿದರ್ಶನವಾಗಲಿ


ದಾರಿ ಹೋಕರು ಜಗದ ಪುಟದಲಿ

ಬಾಗಿ ನಿಂತಿರುವ ಬಿಕ್ಷುಕರೆಲ್ಲರು

ಊರ ನಡುವಿನ ವೇದಿಕೆ ಮೇಲೆ

ಅನ್ಯರ ನಗಿಸುವ ನಟರುಗೆಳೆಲ್ಲರು

Saturday, October 30, 2021

ಮತ್ತೆ ಬಾ ಪುನೀತನಾಗಿ

ದೇವರ ಪಾತ್ರವ ಮಾಡುತನೀತ

ದೇವರ ಕಡೆಗೆ ಸಾಗಿದನು

ಹಲವರ ಬಾಳಿನ ದೇವರೇ ಇವನು

ಕಣ್ಣಿಗೆ ಕಾಣದೆ ಚಲಿಸಿದನು


ಹುಟ್ಟಿದ ದಿನವನು ಹಬ್ಬವ ಮಾಡುತ

ಖುಷಿಯಲಿ ಕುಣಿಯುತ ರಂಜಿಸಿದ

ಗಾನಕೆ ನೀಡುತ ದನಿಯಲಿ ಹಾಡುತ

ಕೇಳುವ ಕಿವಿಗಳಿಗ್ ತಂಪೆರೆದ


ದೇಹವ ದಣಿಸುತ ಯೋಗವ ಮಾಡುತ

ವೃದ್ಧರನ್ನೆಲ್ಲಾ ಪಾಲಿಸಿದ

ಗೋವನು ಸಲಹುತ ಗೋವಿಂದನಾಗುತ

ದೀನ ಮಕ್ಕಳ ಸಲುಹಿದನು


ಕಲಿಕೆಗೆ ಒತ್ತನು ನೀಡುತ ಕಲಿಸುತ

ಅಕ್ಷರ ದಾಸೋಹಿ ಆಗಿಹನು

ಕಲಿಯುವ ಮಕ್ಕಳ ಬೆನ್ನನು ತಟ್ಟುತ

ಹೃದಯವಂತಿಗೆ ತುಂಬಿಹನು


ಇಲ್ಲಿ ಸಲ್ಲುವನು ಅಲ್ಲು ಸಲ್ಲುವನೆಂಬ

ಬಸವನ ಮಾತದು ಸತ್ಯವಾಗಿಹುದು

ಹೇಳದೆ ಕೇಳದೆ ಪೊರೆಯುವ ದೇವನಂತೆ

ನುಡಿಯದೆ ಸಲುಹಿದ ಹಲವರನು


ನಟನೆಯ ಮೂಲಕ ಗಾನದಿ ಸೆಳೆಯುತ

ಅಭಿಮಾನಿ ದೇವರ ಗಳಿಸಿದನು

ಹೊಸಬರ ಏಳಿಗೆ ಬಯಸುತ ರಂಗದಿ

ಸ್ನೇಹದಿಯೆಲ್ಲರ ಬೆಂಬಲಿಸಿದನು


ದೊಡ್ಮನೆ ಹಿರಿಮೆಯ ಸಾರುತ ಧರೆಯಲಿ

ಬೇಕಾದ ಹೊತ್ತಲೇ ಕಣ್ಮರೆಯಾಗಿಹನು

ಕೇವಲ ಕಣ್ಣಿಗೆ ಮಾತ್ರವೆ ಕಾಣದೆ 

ದೇವರೇ ತಾನೆಂದು ತಿಳಸಿದನು


ಮರಳಿಬಾರದೂರಿಗೆ ಸಾಗಲು ಭೌತಿಕವಾಗಿ

ಎಲ್ಲರ ಧ್ಯಾನದಿಂದ ಪುನೀತನಾದನು 

ಹಲವರನ್ನೆಲ್ಲಾ ಅನಾಥರ ಮಾಡುತ

ಚಿರಶಾಂತಿ ಸಿಗುವೆಡೆಗೆ ಕ್ರಮಿಸಿಹನು


ಗುರಿ ಮುಟ್ಟುವ ತನಕ,

ವಿಚಾರಿ

Thursday, October 28, 2021

ಕಂಡ ಸ್ವಪ್ನ

ಅಂದು ಕಂಡ ಸ್ವಪ್ನದಿ
ಕಣ್ಣೆದುರು ಬಂದ ರೀತಿಲಿ
ಕೈಗೆ ಸಿಗದ ದುಂಬಿ ನೀನೆ
ಹಾರಿ ಹೋದ ಮರೀಚಿಕೆ

ಭಾವ ಮೋಹ ಅರಳಲು
ಪ್ರೀತಿ ಪ್ರೇಮ ಬದನೆಯು
ನೀತಿ ನಿಯಮ ಮೀರಲು
ಸಲುಗೆ ದಾಟಿ ಹೋಗಲು
ನೀನೆ ನನ್ನ ಬದುಕಲಿ ಕಾಡುವಂತ ದೇವತೆ
ಬಳಿಗೆ ಬಂದು ಕಣ್ಣ ತೆರೆಯೆ ಉಳಿಯಲು

ಭಾರತ ಮಾತಾ ಕೀ ಜೈ for Sharan

ನಾವು ಒಂದೇ
ನಾವು ಎಲ್ಲಾ ಒಂದೇ
ಇಂದು ಮುಂದು ಎಂದು
ಭಾವೈಕ್ಯದಲಿ ಸದಾ ಬಂಧು
ಮೈ ಮುರಿದು ನಡೆ
ಕೈ ಮುಗಿದು ಕೂಗು
ಜಾತಿ ಮತಗಳ ಮರೆ
ದನಿಯೆತ್ತಿ ಘೋಷಿಸು
ನಮ್ಮ ತಾಯಿ ಭಾರತಿ
ವಿಶ್ವಕ್ಕೊಬ್ಬಳೇ ಭಾರತಿ
ವಿಶ್ವ ಗುರುವೇ ಭಾರತಿ
ಹಿಂಬಾಲಿಸು ನಮ್ಮ ಸಂಸ್ಕೃತಿ
ಮುಗಿಲು ಕರಗುವಂತೆ ಕೂಗಿರಿ
ಭಾರತ ಮಾತಾ ಕೀ ಜೈ

ಯುದ್ಧದ ಕರಾಳ ನೆರಳನು
ಮುಕುಟದಲಿ ಮರೆಯಾಗಿಸಿ
ತನ್ನ ಮಕ್ಕಳ ರಕ್ಷಿಸಿ
ಬಹುಬಗೆಯ ಸಂಸ್ಕಾರಗಳನು
ಸಂಸ್ಕರಿಸಿ ಮೆರೆಯುವ ಸಾಂಗತ್ಯವು
ವಿವಿಧ ಮತಗಳಿಂದಾಚೆ ಕರೆದು
ತನ್ನ ಧ್ಯಾನದ ಅರಿವು ಮೂಡಿಸಲಿ
ಕಂಠಾ ಘೋಷವಾಗಿ ಕೂಗಿರಿ
ಭಾರತ ಮಾತಾ ಕೀ ಜೈ
ಬೋಲೊ ಭಾರತ ಮಾತಾ ಕೀ ಜೈ

ತಲೆಯ ಸುತ್ತಲು
ದುರುಳರ ಆಟವು
ಹೊಟ್ಟೆಯೊಳಗಡೆ
ಮತಾಂಧರ ಮಾಟವು
ಬೆನ್ನ ತಿವಿಯುವ ಮಾರರು
ಕಾಲ ಎಳೆಯುವ ಒಲಸಿಗರು
ಅದೆಷ್ಟೇ ಜನರು ದಾಳಿಗೈದರು
ಅವರೆಲ್ಲರ ಪೊರೆದು ಸಲಹಲು
ಪ್ರೀತಿಯಿಂದ ಪ್ರಾರ್ಥಿಸಿ ಹಗಲಿರುಳಲೂ
ಭಾರತ ಮಾತಾ ಕೀ ಜೈ
ಹೇಳಿ ಭಾರತ ಮಾತಾ ಕೀ ಜೈ

ಜಯದ ಮೆಟ್ಟಿಲು
ದಾಳಿ ಕೋರರ ಒಡಲು
ಸೆಳೆವ ಸಂಸ್ಕೃತಿ
ಹಿಂಬಾಲಕರೆ ಮಡಿಲು
ಜಗವೇ ಒಪ್ಪುವ ಯೋಗ
ನೀನೇ ಅಪ್ಪುವ ಭೋಗ
ಕಡಲ ಕುಮಾರಿಗೆ ಹಿಮದ ಶಿರ
ತುಂಡಾದ ಒಡಲು ಎಡಬಲದಲಿ
ಪಿತೂರಿ ಗಂಚಾಲಿಗಳ ಬಾಯಲ್ಲೂ ಸ್ಪುಟಿಸಲಿ
ಭಾರತ ಮಾತಾ ಕೀ ಜೈ
ಹೇಳಿ ಭಾರತ ಮಾತಾ ಕೀ ಜೈ

ಮೌನದರಮನೆಯ ರಾಣಿ

ಕಣ್ಣಲ್ಲಿ ಒಂದು
ಪ್ರತಿಬಿಂಬ ಮೂಡಿಹುದು
ನನ್ನೆದುರು ಬಂದಂತೆ
ಪ್ರತಿ ಕ್ಷಣವೂ ಸಹ....

ಮನಸಲ್ಲಿ ಒಂದು
ಪ್ರತಿಮೆಯನು ಕೆತ್ತಿಹೆನು
ಕಲ್ಪನೆಗೆ ಕಂಡಂತೆ
ಪ್ರತಿ ಕಣವೂ ಸಹ....

ಬಾಕಿಯೇನು ಉಳಿದಿಲ್ಲ
ನಲ್ಲನೆಂದು ಕರೆದಿಲ್ಲ
ನಾಚಿಕೆಯು ಮನೆ ಮಾಡಿ
ಆಗಿಹೆನು ಮೌನದರಮನೆಯ ರಾಣಿ
ಬಂದು ನೀ ಬಿಡಿಸುವೆಯಾ ಕನ್ಯಾ ಸೆರೆ.....

ಶೋಕಿಯೇನು ಕಲಿತಿಲ್ಲ
ಲಗ್ನವೆಂದೋ ಗೊತ್ತಿಲ್ಲ
ಇನಿಯನಿಗೊಂದು ಗುಡಿ ಕಟ್ಟಿ
ಆಗುವೆನು ನಾನೆಂದು ಆರದ ದೀಪ
ಬೆಂದು ನಾ ಬೆಳಗುವೆನು ನಿನ್ನಾ ಮನೆ.....