Saturday, August 24, 2019

ಬತ್ತಿ ಬದುಕು

ದೀಪ ನೀನು
ತೈಲ ನಾನು
ಬತ್ತಿಯಂತೆ ಬದುಕಿದು

ದೀಪ ಉರಿಯೆ
ತೈಲ ಸುರಿಯೆ
ಹಣತೆಯಂತೆ ಬಾಳಿದು

ತೈಲ ವಿರದ
ಬತ್ತಿ ವಿರಹಿಯು
ಬಹುಕಾಲ ಬೆಳಗದು

ಬದುಕು ಎಂದರೆ
ನಮ್ಮ ಸಂಗವು
ಸಾಮರಸ್ಯ ಸೊಗಸಿದು

ನೀನು ಮಿನುಗಲು
ನಾನು ಸವೆಯುವೆ
ಹೂವಿನ ಜೊತೆ
ದಾರದಂತೆ ಮುಡಿಗೇರುವೆ

ನಾವು ಬೆಳೆಯಲು
ನೋವು ಅಳಿಯಲು
ಬರೆದ ಕತೆ
ಅಳಿಯದಂತೆ ಶಿಲೆಯಾಗು

ಸೌಮ್ಯಾಂದ

ಅದೋ ನೋಡು
ನಾಗರ ಜಡೆಯವಳು
ಉದ್ದ ಲಂಗವ ಧರಿಸಿ
ಎತ್ತ ಹೊರಟಿಹಳೋ...

ಮುಡಿಯಲ್ಲಿ ಕಂಡ
ಮಲ್ಲಿಗೆ ಹೂವಿನ ಕಂಪು
ಮನದೊಳಗೆ ಗುಡಿ ಮಾಡಿ
ಮರುಳನಾಗಿಸಿಹುದು

ಹಣೆ ಅಗಲವಾಗಿಹುದು
ಸಿಂಧೂರ ನಗುತಿಹುದು
ಕಣ್ಣ ಮೇಲಿನ ಹುಬ್ಬು
ಕಣ್ಮನವ ಸೆಳೆದಿಹುದು

ಮುಖದಲ್ಲಿನ ಮುಗ್ಧತೆಯು
ಮನೆಯಲ್ಲಿ ನೆಲೆಸಿದರೆ
ಮನದೊಳಗೆ ನೆಮ್ಮದಿಯಿರಲು
ಮನ್ಮಥನ ಮಣಿಸಿವೆನು

ಸ್ಪಷ್ಟ ಸಂದೇಶ ಬರದಿರಲು
ಕಷ್ಟ ಕಾರ್ಪಣ್ಯ ಬದಿಗಿರಲು
ಕಾಣುವುದೇ ಅವಳಂದಕೆ
ನನ್ನ ಮನದ ಮನವಿ

ರೂಪದಲಿ ಲಕ್ಷ್ಮಿ ದೇವಿಯು
ನಡಿತೆಯಲಿ ಜಾನಕಿಯು
ರಾಗದಲಿ ಶಾರದೆಯು
ರೌದ್ರದಲಿ ಮಹಾದುರ್ಗಿಯು

ಇವಳೆ ಸಿಗಬಹುದೇ
ಬಾಳಿನಲಿ ಹೆಜ್ಜೆಯಿಡಲು
ಸೌಮ್ಯಾಂದಕೆ ಸೋತಿರಲು
ಬಯಕೆ ಬಲಿತಿಹುದು

Thursday, August 15, 2019

ಎಲ್ಲೋ ಮಳೆ

ಎಲ್ಲೋ ಮಳೆಯು
ಇನ್ನೆಲ್ಲೋ ಹೊಳೆಯು
ಇದುವೆ ಜೀವನ ಗಾಥೆಯು
ಮಹಾ ಮಳೆಗೆ
ಉತ್ತರ ತತ್ತರ
ಮಲೆನಾಡ ಅಳಲಿಗೆ
ಕರಾವಳಿ ಕಂಪನ
ಎಲ್ಲಿಂದ ಎಲ್ಲಿಗೋ
ಪ್ರವಾಹದ ಬಂಧನ

ಗುರುತಿನ ಸೂಚಕ
ಮನುಜನ ಮುಖವಿದು
ಉತ್ತರ ಎತ್ತರ
ಗಮನವ ಸೆಳವುದು
ನೆರವಿನ ಆದ್ಯತೆ ಪಡೆವುದು

ಈಶಾನ್ಯ ಕಡಲಿನ ಕನ್ನಡ
ನರಳಿದೆ ತರತಮ ಧೋರಣೆಗೆ
ಸಿಗದು ಟಿ.ಆರ್.ಪಿ ಮಾಧ್ಯಮಕೆ
ರಾಜಕೀಯ ಲಾಭವಿಲ್ಲ ಪಕ್ಷಗಳಿಗೆ
ನಿರ್ಲಕ್ಷದ ಗೂಡಾಗಿದೆ ಕರಾವಳಿ

ಬೆಟ್ಟ ಗುಡ್ಡಗಳು ಎರಗಿದೆ
ರಾಜ್ಯ ಸರ್ಕಾರವು ಮಲಗಿದೆ
ಸುರಿದ ನೀರು ಹರಡಿ ತುಂಬಿದೆ
ರಸ್ತೆ ಇಕ್ಕೆಲಗಳು ಬಿರಿದಿದೆ
ಪ್ರಜೆಗಳ ಬದುಕಿದು ಸೊರಗಿದೆ

Saturday, June 29, 2019

ಬಿಸಿಲು ಮಳೆ ಜೊತೆಯಾದಾಗ

ಮಂಗನ ಮದುವೆಯಾಗುವುದಂತೆ
ಮಳೆ ಬಿಸಿಲು ಜೊತೆಯಾದಾಗ
ಬದುಕಿನ ಗಾಲಿ ತಿರುಗುವುದಂತೆ
ನಮ್ಮಯ ಒಲವು ಬೆರೆತಾಗ
ಪ್ರೀತಿಯ ಪಯಣದ ದಾರಿಯಲಿ
ಮುನಿಸಿನ ತಡೆಯು ಸಹಜ ಬಿಡು
ಕನಸಿನ ಮಳಿಗೆಯು ತುಳುಕಿರಲು
ಹೃದಯಕೆ ತುಡಿತವು ತುಂಬ ದಡು

ಹರಿಯುವ ನೀರಿನ ತೇರಿನಲಿ
ಕಸ ಕಡ್ಡಿಯ ಕಥೆ ಅಳಿಯುವುದು
ಶುಭ್ರತೆ ನೆಲಸಿದ ನಾಡಿನಲಿ
ಧೂಳಿನ ಕಣ ಸಹ ಹಿರಿದಾಗುವುದು
ತುಚ್ಛತೆ ನೋಟವ ಮರೆಸುತಲಿ
ವೈಶಮ್ಯದ ಕೇಡನು ದೂರ ಇಡು
ಗೌಪ್ಯತೆ ಮಾತನು ಕೇಳುತಲಿ
ಗಂಭೀರತೆ ನಡೆಯಲಿ ಬೀಗಿ‌ ಬಿಡು

ಉದುರುವ ಎಲೆಗಳ ತುದಿಗಳಲಿ
ಮಳೆಹನಿ ನೀರಿದು ಬೀಳುವುದು
ಕಂಬನಿ ಭರಿತ ನಯನದಲಿ
ಎದುರಿಗೆ ಬರಲು ಅಂಜಿಕೆಯು
ಸಮಯಕೆ ಸುರಿದ ಸೋನೆಯಲಿ
ಅಳುಕಿನ ದುಃಖದ ಹಂಚಿಕೆಯು
ಹೆತ್ತವರ ಹಿತವನು ಬಯಸುತಲಿ
ಸುಖದಲಿ ಸಾಯಲು ದೀಕ್ಷೆತೊಡು

Monday, June 17, 2019

ಭಾವಯಾನದ ತೀರ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜೇನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀತಿ ಹುಚ್ಚಂತೆ ನೀನು

Thursday, June 6, 2019

ಒಲವ ಧಾರೆ

ಮೋಡಕೆ ಮೋಡ
ಗುದ್ದಿದಾಗ
ಮಿಂಚು ಮೊದಲು
ಬಂದಂತೆ
ಗುಡುಗು ನಂತರ
ಸಿಡಿದಂತೆ
ನಮ್ಮಿಬ್ಬರ ಪ್ರೀತಿಯಲ್ಲಿ
ಚರಣಗೀತೆ ಬರೆದಾಗ
ನೋವು ಸುಡುತಿದೆ
ಎದೆಯಲ್ಲಿ
ನುಡಿಯು ಕೇಳುತಿದೆ
ಕೊನೆಯಲ್ಲಿ
ಹೋದೆ ನೀನು ದೂರ
ಭಾವಯಾನದ ತೀರ

ತುಂಬಿದ ಕೆರೆಯ ನೀರನು
ಕದಡಲು ಕಲ್ಲು ಸಾಕು
ಮೊದಲ ಪ್ರೀತಿ ಮರ್ಲನು
ಮರೆಯಲು ಜನ್ಮ ಬೇಕು
ಕುಳಿತೆ ನಿನ್ನ ಧ್ಯಾನದಿ ನಾನು
ತೊರೆದೆ ಆಸೆ ಬಾಳಲಿ ಜಾನು

ತಂಪಿನ ಒಲವ ಉಣಿಸಲು
ಬರೆದ ಹಾಡು ನೂರಾರು
ಕಂಪಿನ ಭಾವ ರಮಿಸಲು
ಬೇಡಿದ ಜಾಡು ಹತ್ತಾರು
ಕಳಕೊಂಡ ಕರದ ರೀತಿಯಂತೇನು
ಬರವಣಿಗೆಯ ಪ್ರೀಲತಿ ಹುಚ್ಚಂತೆ ನೀನು

Tuesday, June 4, 2019

ಬೇಕಾಗಿದ್ದಾರೆ ಹನಿ ನೀರ ದಾಸೋಹಿ!

ಎಲ್ಲೆಂದು ಅರಸಲಿ
ಹನಿ ನೀರನು
ಯಾರನ್ನು ಕೇಳಲಿ
ತುಸು ಜಲವನು

ಕಂಬನಿಯ ಸುರಿಸಲೂ ನೀರಿಲ್ಲ
ಬರಿದಾದ ನದಿಯೊಡಲಲಿ 
ಕಾಲುವೇಲಿ ಹರಿಸಲೂ ಜಲವಿಲ್ಲ
ಆರಿರುವ ಏರಿಯೊಳಗೆ

ಬರಿದಾದ ಕೆರೆ ಕಟ್ಟೆಗಳು
ಭಾಸವಾಗಿವೆ ಇಂದು
ಚಿಣ್ಣರೆಲ್ಲರು ಆಟ ಆಡುವ
ಮೈದಾನವೇ ಇದೆಂದು

ನೀರ ಹನಿ ಬಿಂದುವಿಗಾಗಿ
ಶುರುವಾಗಿದೆಲ್ಲೆಡೆ ಹಾಹಾಕಾರ
ಲಗ್ನವಾಗಿಲ್ಲ ಜೊತೆಯಾಗಿ
ಹುಡುಕಿ ಹಿಡಿದರೂ ಕಪ್ಪೆ ಸಂಗದವರ

ಮಠ ಮಂದಿರಗಳಲಿ
ಇಳಿಮುಖವಾಗಿದೆ ಭಕ್ತರ ಸಂಖ್ಯೆ
ಊರೂರ ಬೀದಿಗಳಲಿ
ಮಾಡಬೇಕಾಗಿದೆ ನೀರ ದಾಸೋಹಿ ಸಖ್ಯ

ಕೇರಿಯಲೊಬ್ಬರಂತೆ ಸಿಗುತಾರೆ
ನೀಡಲು ಹಣದ ಸಾಲ
ನೀರಿಲ್ಲದೆ ಬವಣೆಯಲಿ ಬೇಯುತಾರೆ
ಏರುತ ದಾಹವೆಂಬ ಶೂಲ

ಅದೆಂದೂ ಬರುವುದೋ?
ಕರಿಮೋಡ ಕರಗಿ ನೀರಾಗಲು
ಬತ್ತಿದೊಡಲ ತುಂಬುತ
ಬೆಳೆಯುವ ಕೃಷಿಕನ ನಗಿಸಲು

ಕೈ ಮುಗಿದು ಬೇಡಿದರೂ
ಕರುಣಾಮಯಿಯ
ಕಲ್ಲಾಗಿ ಬರಲಿಲ್ಲ ಕರಿಮೋಡ
ಸರಿಸಲು ಜಲಧಾರೆಯ