Sunday, December 30, 2018

ಸಸ್ಯ ಸಾಮರಸ್ಯ

ಜಾರದಿರಲಿ ಹನಿ ನೀರು
ಬೊಗಸೆಯಿಂದಾಚೆಗೆ
ಬುದ್ಧಿಯಿರಲಿ ಒಂಚೂರು
ಸ್ಥಾನಮಾನದಿಂದೀಚೆಗೆ

ಕಡಿಯದಿರು ಹೆಮ್ಮರವ
ತಂಪೆರೆಯುವ ಮೂಲವ
ಕದಡದಿರು ಜಗ ನಿಯಮವ
ಕಾಪಾಡು ಪ್ರಾಣಿ ಸಂಕುಲವ

ಬಾಯಲ್ಲಿ ಬಡಾಯಿ ಕೊಚ್ಚಿ
ಸ್ವಪ್ರತಿಷ್ಠೆ ವೈಭವೀಕರಿಸದಿರು ಮೂಢ
ಕಾದಿಟ್ಟ ದಿನದಂದು ಫಲಕವ ಹಚ್ಚಿ
ಜಾಗೃತಗೊಳಿಸುವೆನೆಂಬ ನಂಬಿಕೆಯು ಬೇಡ

ಹೆಸರಿಗೆ ಮಾತ್ರ ದಿನವೆಂದುಕೊಂಡು
ಆ ಕ್ಷಣಕ್ಕಷ್ಟೇ ಮುಗಿಯದಿರಲಿ ಹಬ್ಬವು
ಕೇವಲ ಜಾಲತಾಣಗಳ ಮಿತಿಯಲಿರದೆ
ಬದುಕಿನ ದಿನಚರಿಯಾಗಲಿ ಬರಿ ಮಾತಾಗದೆ

ತಿಳಿದಿಕೊ ತರುವಿರದ ಇಳೆಯು
ಉಗುಳುವ ಬೆಂಕಿ ಮಳೆಯು
ಕರಡಿ ನೀರಾದ ಮಣ್ಣು ಮರಳಾಗಿ
ಪ್ರಳಯದಲೆಗಳ ಎರಗಿಸುವವು ಜೋರಾಗಿ

ನೆರಳಿಗಾಗಿ ತುಸು ಉಸಿರಿಗಾಗಿ
ಕಡಿಯದಿರು ಹಸಿರು ಮರವ
ನೀರಡಿಕೆಗಾಗಿ ಹನಿ ನೀರಿಗಾಗಿ
ಕೊಲ್ಲದಿರು ಜೀವ ಜಲವ

ಮರೆತರೆ ಕ್ರಮಬದ್ಧ ಕಾರ್ಯವನು
ಅನುಭವಿಸುವೆ ಕರುಣೆಯಿರದ ಕರ್ಮವನು
ಉಳಿಯಲು ನೆಡು ಸಸ್ಯದ ಬೇರನ್ನು
ಬದುಕಲು ದುಗುಡ ರಹಿತ ಬಾಳನ್ನು

ಬೆಳೆಸೋಣ ಸಸ್ಯರಾಶಿಯನ್ನ
ಮೆರೆಯಿಸೋಣ ಸಸ್ಯಕಾಶಿಯನ್ನ
ಉಳಿಸೋಣ ಒಂದು ಹನಿ ನೀರನ್ನ
ಬದುಕೋಣ ಸಾಮರಸ್ಯದ ಬದುಕನ್ನ 

Wednesday, December 19, 2018

ಹಸಿವಿರದ ಹೊಂದಾಣಿಕೆ

ರೆಕ್ಕೆ ಬಲಿತ ಹಕ್ಕೀಯೆಂದೂ
ಗೂಡಲ್ಲಿ ಬಂಧಿಯಾಗುವುದೇ?
ಮಾತು ಕಲಿವ ಮಗುವುಯೆಂದೂ
ತೊದಲು ಮಾತಾಡದೆ ಇರುವುದೇ?
ಸಮಯ ಬಂದ ಕ್ಷಣಕೆ ಸತ್ತು
ಹಿಡಿ ಬೂದಿಯಾಗುವುದು ಈ ದೇಹ
ಹೀಗೆ ಆಗುವುದೇ ವಿಧಿ ಲಿಖಿತ
ತಪ್ಪದೇ ನಡೆಯುವುದು ಇದು ಖಚಿತ

ಜನಿಸಿದ ಕೂಸಿನ ನಗುವ ಕಂಡು
ಮನಸೋಲದ ಹೆತ್ತವರು ಇರರೂ ಎಂದೂ
ನಾಳೆ ಬೆಳೆವ ಮಕ್ಕಳ ಮೇಲೆಂದು
ಅವಲಂಬಿತವಾಗದಿರು ಸಲಹುವರು ಎಂದೂ
ಗೆಲುವೇ ಜೊತೆಯಿರದು ಸೋಲೇ ಉಳಿದಿರದು
ಭರವಸೆಯಲಿ ಬದುಕುತಿರು ಬಾಳಲಿಯೆಂದೂ

ವರಿಸಿದ ಸಂಗಾತಿಯ ಮಂದಹಾಸ
ಸೂರೆಗೊಂಡರೆ ಆಗುವರು ಚರಣದಾಸ
ಅರಳಿದ ಕಾಂತೀಯ ಚಂದ್ರಹಾಸ
ಸೋಲೆಂದರೆ ನೀಡುವುದು ಸ್ಪೂರ್ತಿಯಾಕಾಶ
ಪ್ರೀತಿ ಶಾಶ್ವತವಲ್ಲ ದ್ವೇಷ ಸಂಸ್ಕಾರವೇ ಅಲ್ಲ
ಹಸಿವಿರದ ಹೊಂದಾಣಿಕೆಯ ಸಂಬಂಧಕೆ ಸಾವಿಲ್ಲ

Sunday, October 28, 2018

ಬೆಳಗು

ಬ್ರಾಹ್ಮಿ ಮುಹೂರ್ತದಲ್ಲಿ ಮೂಡಿತೊಂದು ಬೆಳ್ಳು
ಉಕ್ಕಿ ಬರುತಿದೆ ಹೊಸ ಭರವಸೆಯ ಜೊಲ್ಲು
ಮಂಜಿನ ಹನಿಯ ಮಧುರವಾದ ಗುಡುಗು
ಬಾನಾಡಿಗಳ ಇಂಚರಕೆ ಸ್ಪೂರ್ತಿಯಾದ ಬೆಳಗು

ದಣಿವಾರಿದ ಚೈತನ್ಯಕೆ ಧರೆಯಾಳುವ ಬಯಕೆ
ಬಾನಾಳುವ ಭಾನಿಗೆ ಜಗ ಬೆಳಗುವ ಹರಕೆ
ಮನ ತಣಿಸುವ ಪ್ರೀತಿಗೆ ಬೆಳದಿಂಗಳೇ ಹೋಲಿಕೆ
ಅಂತರಂಗದ ಮಸುಕಿಗೆ ಜ್ಞಾನವೇ ಬೆಳಗೆಂಬ ಕಾಣಿಕೆ

Sunday, October 21, 2018

ಒಗಟು

ತಂಗಾಳಿಯಲ್ಲಿ ನಾ
ತೇಲಿ ಬಂದೆನು
ತಂಪನ್ನು ಎರೆದು ನಾ
ಕರಗಿ ಹೋದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ನೀರ ಹೊತ್ತಿ ಬರುವ ಮೋಡ ನಾ ತಿಳಿಯದಾದೆಯಾ?

ಹಸಿರು ಹರಡಿದ ಎಲೆಯು
ಕಣ್ಣ ಸೆಳೆತಕೆ
ಇಡಲು ಮುಂದಿನ ಹೆಜ್ಜೆ
ಮಣ್ಣ ಕುಣಿತಕೆ
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ಮಳೆಗೆ ಮೆರೆವ ಕಳೆಗೆಯು ಎಂದು ನುಡಿಯಬಲ್ಲೆಯಾ?

ಒಡಲ ಮಡಿಲು ತವರಿಗೆಂದು
ಓಡುತಿರುವೆನು
ಬೆಳಕ ಸ್ಪರ್ಶ ಸೋಕಿತೆಂದು
ಮಾಯವಾದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ತುಂಬಿ ಹರಿವ ಹೊಳೆಯು
ಎಂದು ಹಾಡಬಲ್ಲೆಯಾ?

Wednesday, October 10, 2018

ದಿಕ್ಪಾಲಕ

ಮೂಡಣದ ಹೊತ್ತಿನಲಿ
ಏಕಾಂಗಿ ಧ್ಯಾನದಲಿ
ಒಂದುಸಿರ
ಮನದೊಲವ ಸೂರೆಗಯ್ಯುವವನೆ
ಜೊತೆಯಾಗುವೆಯೇನು?

ಪಡುವಣದ ಸಮಯದಲಿ
ರಭಸದ ತೆರೆಗಳಲಿ
ರಂಗಾದ ಮುಗಿಲಿನಲಿ
ರಂಗಿನಾಟದ ರವಿಯಂತೆ
ಬಳಿಬಾರದೇನು?

ಬಡಗಣದ ಪಯಣದಲಿ
ಹಿಮಗಿರಿಯ ಶಿಖರದಲಿ
ತಂಪಾದ ಮಂಜಿನಲಿ
ನುಸುಳಿ ಬರುವ
ಬೆಚ್ಚನೆಯ ಉಷೆಯು ನೀನಾಗುವೆಯಾ?

ತೆಂಕಣದ ಹಡಗಿನಲಿ
ತಿಳಿಯಾದ ಸಂಜೆಯಲಿ
ತೇಲುತಿಹ ಬದುಕಿನಲಿ
ಚುಕ್ಕಾಣಿಯ ಹಿಡಿದ ನಾವಿಕ
ನೀನಾಗುವೆಯಾ?

Saturday, August 11, 2018

ಎಲ್ಲಿರುವೆ?

ಎಲ್ಲಿ ಅಂತ ಅಲೆಯಲಿ
ನಿನ್ನ ಹುಡುಕುತ
ಹೇಗೆ ಎಂದು ಅರಿಯಲಿ
ಚಿತ್ತ ಕಲಕುತ

ಯಾವ ಊರು ಯಾರ ಮಗುವೋ
ಯಾವ ಗುಡಿಯು ನಿನ್ನ ಮನೆಯೋ
ತಲುಪುವಾಸೆ ಅಡಗಿದೆ
ನಿನ್ನ ಹೆಸರು ತಿಳಿಯದೆ

ಗುಡ್ಡ ಬೆಟ್ಟ ಅರಸಬೇಕೆ
ನಾಡಿ ಮಿಡಿತ ಹೇಳಬೇಕೆ
ಒಲವಿನೋಲೆ ತಲುಪದೆ
ಮರಳಿ ಆಸೆ ಉಳಿದಿದೆ

Friday, July 6, 2018

ರಿಂಗಣದ ರಾತ್ರಿ ಬೆಳಗಿನ ತನಕ

ಬೆಳಗಿನಿಂದ ಗಡಿಬಿಡಿಯ ಕೆಲಸವ ಮುಗಿಸಿ ಮದುವೆ ಮಕ್ಕಳ ಮೊದಲನೆಯ ರಾತ್ರಿಗೆ ಕೊಣೆಯನ್ನು ಸಿಂಗರಿಸಲು ಬೇಕಾದ ಹೂವು-ಹಣ್ಣುಗಳನ್ನು ತಂದು ಅಲಂಕರಿಸಿದೆವು. ಸಂಜೆ ವರನ ಮನೆಯಲ್ಲಿ ನಡೆದ ವಧು ಪ್ರವೇಶದ ನಂತರ ಊಟ ಮುಗಿಸಿ ನೆಂಟರೆಲ್ಲ ಹೊರಟು ಹೋದರು. ಅಲ್ಲೇ ಉಳಿದಿದ್ದ ಬೆರಳೆಣಿಕೆಯಷ್ಟು ಜನರಲ್ಲಿ ಕೆಲವರು ಮಧುಮಗನ ಸ್ನೇಹಿತರು ನಾವಾಗಿದ್ದೆವು. ಶೃಂಗಾರದ ನಾರಿ ಮೊದಲ ರಾತ್ರಿಯ ಕೊಣೆಯತ್ತ ಹಂಸ ನಡಿಗೆಯಲ್ಲಿ ನಡೆದಳು. ಅದನ್ನೇ ಗಮನಿಸುತ್ತಿದ್ದ ನಾವು ಇಸ್ಪೀಟು ಆಡಲು ಪ್ರಾರಂಭಿಸಿದೆವು ಯಾಕೆಂದರೆ ಮಧುಮಗನಿಗೆ ಇಸ್ಪಿಟು ಆಟದ ಹುಚ್ಚು ಜಾಸ್ತಿ (ಸುಮ್ನೆ ತಮಾಷೆಗೆ ಆಡಲು ಮಾತ್ರ). ದಾಡ್ ಪೀಡ್ ಆಟ ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲೆ ದಢಾರ್ ದಢಾರ್ ಎಂಬ ಸದ್ದೊಂದು ಪ್ರೆಸ್ತದ ಕೋಣೆಯಿಂದ ಕೇಳಿ ಬಂತು. ಅದರ ಜೊತೆಗೆ "ನನ್ ಮಕ್ಳ, ಮೊದಲ ರಾತ್ರಿ ಕೋಣೆಯ ಅಲಂಕಾರ ಮಾಡುತ್ತೇವೆ ಎಂದು ಹೇಳಿ ಎಲ್ಲೆಲ್ಲಿ ಏನೇನ್ ಇಟ್ಟು ಸತ್ತಿದ್ರೋ" ಎಂಬ ಬೈಗುಳವ ಕೇಳಿ ನಗು ತಡೆಯಲಾಗದೆ ಇಸ್ಪೀಟು ಆಟವನ್ನು ಅರ್ಧಕ್ಕೆ ಬಿಟ್ಟು ಮಧುಮಗನಿಗೆ ಕಾಣದಂತೆ ಅಲ್ಲಿಂದ ಕಾಲ್ಕಿತ್ತೆವು. ಯಾಕೆಂದರೆ ಮಂಚದ ಅಡಿಯಲ್ಲಿ ಮತ್ತು ಆಚೆ ಈಚೆಯಲ್ಲೆಲ್ಲಾ ೧೫ ನಿಮಿಷಕ್ಕೆ ಅಲಾರಾಂ ಆಗುವಂತೆ ಸಮಯವನ್ನು ನಿಗದಿ ಪಡಿಸಿದ್ದೆವು. ಆದರೆ ಆ ನವದಂಪತಿಗಳು ಅವುಗಳನ್ನೆಲ್ಲ ಹುಡುಕಿ ಅಲಾರಂ ಆಗದಂತೆ ನಿಷ್ಕ್ರಿಯಗೊಳಿಸಿದರು. ಇವುಗಳನ್ನ ಅರಿತಿದ್ದ ನಾವು ಇನ್ನೂ ಸ್ವಲ್ಪ ಜಾಸ್ತಿ ಮಜವಾಗಲೆಂದು ಕೋಣೆಯಲ್ಲಿದ್ದ ಕಪಾಟಿನಲ್ಲಿ ದೊಡ್ಡ ಸದ್ದು ಮಾಡುವ ೨ ಚೈನಾ ಮೊಬೈಲ್ ಇಟ್ಟು ಬೀಗವನ್ನು ಹಾಕಿ ಕೀಯನ್ನು ನಾವೇ ಇಟ್ಟುಕೋಡಿದ್ದೆವು. ಹಾಗಾಗಿ ಅಲ್ಲಿಂದ ಓಡಿದ ನಾವು ಆ ಮೊಬೈಲ್ ಗೆ ೫ ನಿಮಿಷಕ್ಕೊಮ್ಮೆ ಕರೆ ಮಾಡುವುದನ್ನು ಬೆಳಗಿನವರೆಗು ಮಾಡಿದೆವು. ಪಾಪ ನಿದ್ರೆ ಮಾಡದೆ ನವ ದಂಪತಿಗೆಳು ಮೊದಲ ರಾತ್ರಿಯಿಂದ ಬೆಳಗಿನ ತನಕ ಮೊಬೈಲ್ ರಿಂಗಣಕ್ಕೆ ತಲೆ ತೂಗಿದರು.

Thursday, July 5, 2018

ಕುಶಲದ ಕುಚೋದ್ಯ

ಹರಿವ ನದಿಯ
ದಡದ ತುದಿಯಲ್ಲಿ
ಬಾಗಿ ನಿಂತಿರುವ
ಮರದ ಕೊಂಬೆಗೆ
ಜೋತು ಕಟ್ಟಿದ
ಜೋಕಾಲಿ ತೂಗಲು
ಮೋಹನ ನುಡಿಸಲು
ಮೋಹಕ ರಾಗವ
ರಾಧೆ ಸೋಲದೆ
ಇರಲು ಸಾಧ್ಯವೇ?

ಹರಿಯ ತೋಳಿಗೆ
ಒರಗಲು ಪ್ರೇಯಸಿ
ಕೈ ಚಾಚಿ ತೋರಿದ
ಹಾರುವ ಹಕ್ಕಿಯ
ವಿರಹದ ರಾಗವ
ಸರಸದಿ ಕೂಡಿದ
ರಾಧೆಯ ಮನದಲಿ
ವಿರಸವು ಮೂಡಲು
ಕುಶಲದ ಕುಚೋದ್ಯ
ಕಲಕಲು ಸಾಕಲ್ಲವೆ?

ಸುಮ್ಮನೆ ಕಾಡಿಸಿ
ಹುಸಿಗೋಪವ ಹೆಚ್ಚಿಸಿ
ಇರುಳೆಯ ವದನದಿ
ಚಿತ್ತಾರವ ಪಸರಿಸಿ
ಆಕರ್ಷಿತ ಪರಿಯನು
ಮನಗಾಣಿಸಿ ಅರುಹಿದ
ಪ್ರೀತಿಯ ಸ್ಮರಣೆಯು
ಏಕಾಂತದ ಗಾನವು
ಒಲವಿನ ಧ್ಯಾನಕೆ
ಒಲಿಯುವನು ಎಂದಲ್ಲವೆ?

Thursday, May 24, 2018

ದಿನವೊಂದು ಅಳಿಯುತಿದೆ
ನಿನ್ನ ನೆನಪಿನ ಬೆಳಕಲಿ
ಕನಸೊಂದು ಅರಳುತಿದೆ
ಸ್ಮರಣೆಯ ಧ್ಯಾನದಲಿ
ಪೂಜೆಯ ಮಂತ್ರವೆ ಮರೆಯುತಿದೆ
ನೆನವರಿಕೆಯ ಪರಿಯಲಿ
ಆಗಮನವೆಂದೋ ನನ್ನ ವರಿಸುವ ದಿನವೆಂದೋ?

ತಂದಿರುವೆ ತವರಿನ ತೊಟ್ಟಿಲ
ತಿನಿಸುವ ಒಲವಿದು ಚೊಚ್ಚಲ
ಹೃದಯದ ಕೋಣೆಯಲಿ ಕೂರಿಸಿ ತುಂಬಾ ನಿಗೂಢ
ಹರಸಿರುವ ಪ್ರೀತಿಯ ಸಿಂಚನ
ಜೊತೆಯಾಗಲು ಆದರ್ಶದ ಕಂಪನ
ಅರಿವಿನ ನೂಲಲಿ ನೇಯುವೆನು ಸಿದ್ದ ಸಿಂಹಾಸನ

Sunday, May 20, 2018

ಭರವಸೆಯೇ ಚೂರಾಗಿದೆ

ಅಲೆಗಳ ರಭಸಕೆ
ದಡ ಸೇರುವ ಮಿಡಿತವು
ನನ್ನ ಮನಸ್ಸಿನ ಮಿಡಿತಕೆ
ನಿನ್ನ ನೋಡುವ ಧ್ಯಾನವು
ಕೈ ಉಂಗುರದ ಗುರುತಿದೆ
ನಮ್ಮಿಬ್ಬರ ಭೇಟಿಗೆ
ಇದ ಹಿಡಿದು ಹೊರಟಿದೆ
ಹುಟುಕಾಟದ ಜಾತ್ರೆಲಿ

ಹೆಸರಿದೆ ಕಲ್ಪಿತ ಚಿತ್ರಕೆ
ಅರಸುವ ಕಾರ್ಯವು ನಡೆದಿದೆ
ಕಂಡಿರುವೆ ಮಾಸದ ಕಣ್ಣಂಚಿನ ವಿಸ್ಮಯವ
ಪುಟಿದೆಬ್ಬಿಸಿತು ಕಾಣುವ ಕಂಪನವ
ತಗ್ಗಿಸಿತು ಎದೆಯೊಳಗಿನ ಭಾವವ
ಖುದ್ದು ತೊಡಿಸುವ ಕಲ್ಪನೆ ಜೋರಾಗಿದೆ

ಶೋಧನೆಯ ಕೆಲಸಕೆ ಹೊಸಬನು
ಕದಿಯುವ ಚೋರನಲ್ಲ ನೀ ಜಾಲಾಡಲು
ಜೋಪಾನ ಮಾಡಿರುವೆ ತಿರುಗಿಸಲು ಚಿನ್ನವ
ದೋಣಿಯಲಿ ನದಿಯನು ದಾಟಿ ಬಂದಿರುವೆ
ಸಿಗದೆ ಸತಾಯಿಸುತ ಎಲ್ಲಿರುವೆ?
ಬಳಿಬಂದು ನೀಡುವೆನೆಂಬ ಭರವಸೆಯೇ ಚೂರಾಗಿದೆ

Tuesday, April 10, 2018

ವರುಷದ ಹರುಷ

ನನ್ನವಳೊಂದಿಗಿಟ್ಟ ಹೆಜ್ಜೆಗೆ
ಆಯಿತೊಂದು ವರುಷ
ಮನೆಮನಗಳಲಿ ಉಕ್ಕುತಿದೆ
ಹಾಲಿನಂತ ಹರುಷ

ಚೆಲುವಿನ ಒಲವಿನ
ಚಿತ್ತಾರದ ಗೊಂಬೆಗೆ
ಜೀವ ತುಂಬಿದ ಚಿತ್ರಣ
ನೀನೆ ನನ್ನ ನನಸು

ಪ್ರೀತಿಯ ರೀತಿಯ
ನೋವಿನ ಸಂಗತಿಗೆ
ಔಷಧವು ನಿನ್ನ ನಗುವು
ಬದುಕಲು ನೀನೆ ಸ್ಪೂರ್ತಿಯು

Saturday, March 31, 2018

ಜೋ...ಜೋ ಲಾಲಿ

ಜೊಜೋ... ವಸುದೇವ ದೇವಕಿ ಕಂದ
ಜೊಜೋ ಲಾಲಿ
ಎಂದ್ ಹೇಳುತ್ತ ಹಾಡುವುದು
ಜಗದ ಲಾಲಿ
ಜೋ.....ಜೋ...ಜೋ.......
ಜೋ.....ಜೋ...ಜೋ.......

ಮಡಿಕೆಯೋಳ್ ಇರುವ
ಬೆಣ್ಣೆ ಕದ್ದು
ಗೆಳೆಯರ ಬಾಯಿಗೆ ಒರೆಸುವ
ಪರಿಯೇ ಮುದ್ದು

ಗೋಕುಲದೋಳ್ ಆಟದಲಿ
ಸೋಲದೆ ಗೆದ್ದು
ಸೋಜಿಗವ ತೋರಿದನು
ಕೇಳಲು ಸದ್ದು

ಸ್ಪೂರ್ತಿಯ ಸ್ಪರ್ಶವಿದು
ಧರಣಿಗೆ ಬಿದ್ದು
ಕೋಲಾಟ ಆಡಿದನು
ತಾನೇ ಕುದ್ದು

ರಾಧೆ ಪ್ರೇಮದಲಿ
ಅವನೇ ಮಿಂದೆದ್ದು
ಜಗಕೆ ಅರುಹಿದನು ಬದುಕಿನಲಿ
ನೆಮ್ಮದಿಗೆ ಪ್ರೀತಿಯೇ ಮದ್ದು

Friday, March 30, 2018

ಮರೆಯಲಾಗದು ಹುಟ್ದಬ್ಬದ ಉಡುಗೊರೆ

ಅದೊಂದು ದಿನ ಅವನ ಹುಟ್ದಬ್ಬ. ಶುಭಾಶಯಗಳ ಹೊಳೆಯೇ ಹರಿದುಬರುತ್ತಿತ್ತು. ಗೆಳೆಯನ ಮನೆಗೆಂದು ಹೋಗಿದ್ದ  ಅವನು ಹುಟ್ದಬ್ಬದ ದಿನ ಬಸ್ಸಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾದ ಕರೆಯೊಂದು ಬಂದಿತು. ಏನಪ್ಪ ಇದು ಆದಿತ್ಯವಾರವಾದರೂ ನೆಮ್ಮದಿಯಿಂದಿರಲು ಬಿಡುವುದಿಲ್ಲವಲ್ಲ ಎಂದು ಗೊಣಗುಡುತ್ತ ಕರೆಯನ್ನು ಸ್ವೀಕರಿಸಿದ. ಆಗ ಕರೆ ಮಾಡಿದ್ದ ಮ್ಯಾನೇಜರ್ ಹೇಳಿದ, ಅಭಿನಂದನೆಗಳು ಎಂದು. ಆದರೆ ಅವನು ಅಂದ್ಕೊಂಡ ಹುಟ್ದಬ್ಬದ ಶುಭಾಶಯದ ಬದಲು ಅಭಿನಂದನೆಯೆನ್ನುತ್ತಿದ್ದಾರೆ ಎಂದುಕೊಂಡು ಧನ್ಯವಾದಗಳೆಂದನು.

ಮಾತನ್ನು ಮುಂದುವರೆಸಿದ ಮ್ಯಾನೇಜರ್ ಕೇಳುತ್ತಾರೆ ನಿನಗ್ಯಾಕೆ ಅಭಿನಂದನೆ ಹೇಳಿದೆಯೆಂದು ಗೊತ್ತಾಯಿತಾ ಎಂದು ಕೇಳಿದರೆ ನಾನು ಇಲ್ಲವೆಂದೆ. ಆದರೆ ನಿಮಗೆ ಹೇಗೆ ಇಂದು ನನ್ನ ಹುಟ್ದಬ್ಬವೆಂದು ತಿಳಿಯಿತು ಎಂದು ತಿರುಗಿ ಕೇಳುತ್ತಾನೆ. ಆಗ ಮ್ಯಾನೇಜರ್, ಒಹ್ ಏನು ಇಂದು ನಿನ್ನ ಹುಟ್ದಬ್ಬ ಕೂಡನಾ? ಹಾಗಾದ್ರೆ ಇದು ನಿನಗೆ ಇಮ್ಮಡಿಯ ಖುಷಿಯ ಸಮಯವೆನ್ನುತ್ತಾನೆ. ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಯದೆ, ಯಾಕೆ ಸರ್ ಹೀಗೆ ಹೇಳುತ್ತಿದ್ದೀರಿ? ನೀವು ನನ್ನ ಹುಟ್ದಬ್ಬಕ್ಕೆ ಶುಭಾಶಯ ಕೋರಲು ಕರೆ ಮಾಡಿದ್ದೀರಿ ಅಂತಂದುಕೊಂಡೆ ಆದರೆ ಈಗ ನಿಮ್ಮ ಮಾತನ್ನು ಕೇಳಿ ನನಗೇನೆಂದು ಅರ್ಥವಾಗುತ್ತಿಲ್ಲ. ದಯವಿಟ್ಟು ಸರಿಯಾಗಿ ತಿಳಿಸಿ ಹೇಳಿ ಎಂದಾಗ ಅವರು ಹೇಳುತ್ತಾರೆ, ಮೊದಲು ಹುಟ್ದಬ್ಬದ ಪಾರ್ಟಿ ಕೊಡು ನಂತರ ಹೇಳುತ್ತೇನೆ ಎನ್ನುತ್ತಾರೆ. ಸರಿ ಸಾರ್ ಇಂದು ಸಂಜೆ ಸಿಗಿ ಕೊಡಿಸುತ್ತೇನೆ ಎಂದಾಗ, ನನಗೆ ನಿನ್ನ ಪಾರ್ಟಿ ಬೇಡ ಮೊದಲು ನೀನು ಪುಣಾಕ್ಕೆ ಹೊರಡಲಿಕ್ಕೆ ತಯಾರಾಗು, ಯಾಕೆಂದರೆ ಅಧಿಕೃತ ತಂಡದ ಮುಂದಾಳುವಾಗಿ ನಿನ್ನೋಬ್ಬನೇ ನೇಮಕವಾಗಿದ್ದೀಯ ಹಾಗಾಗಿ ನಾಳೆ ಬೆಳಿಗ್ಗೆಯೇ ನೀನು ಪುಣಾದಲ್ಲಿರಬೇಕು ಎನ್ನುತ್ತಾರೆ. ಇದು ಅವಸರದ ಅವಶ್ಯಕತೆ ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡ, ಇಂದು ರಾತ್ರಿಯೊಳಗಾಗಿ ಪುಣಾದಲ್ಲಿರು ಎಂದು ಹೇಳಿತ್ತಾರೆ. ಆಗ ಧನ್ಯೋಸ್ಮಿ ಎಂದು ಹೇಳಿದ ಅವನಿಗೆ ಆದ ಖುಷಿಗೆ ಪಾರವೇ ಇರ್ಲಿಲ್ಲ.

ಆದರೆ ಪುಣಾದ ಹೆಸರನ್ನು ಮಾತ್ರ ಕೇಳಿದ್ದ ಅವನು ಆಲ್ಲಿಯವರೆಗೆ ಒಮ್ಮೆಯೂ ಪುಣಾವನ್ನು ನೋಡಿದವನಲ್ಲ. ಅಲ್ಲದೇ ಪರಿಚಯದರ್ಯಾರೂ ಅಲ್ಲಿರಲಿಲ್ಲ. ಆದರೂ ಧೈರ್ಯದಿಂದ ಪುಣಾಕ್ಕೆ ಹೊರಡಲು ಸಿದ್ಧನಾಗಿ ವಿಮಾನದ ಮೇಲೆ ಹೋಗಿ ಹೊಸ ಊರಿಗೆ ಕಾಲಿರಿಸಿದೆ. ಆಗ ಹಿಂದಿ ಭಾಷೆಯನ್ನು ಸುಟ್ಟುಕೊಂಡು ತಿನ್ನಲೂ ಸಹ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜನರ ನೆಲದಲ್ಲಿ ವಿಳಾಸಕ್ಕೆ ಅರಸಿ ತಲುಪ ಬೇಕಾದ ಸ್ಥಳ ತಲುಪಿದ ಅವನು ಯಾವುದೋ ಒಂದು ಹೊಟೆಲ್ ನಲ್ಲಿ ಉಳಿದುಕೊಂಡ. ಆ ಹೊಟೆಲ್ಲಿನ  ಅವ್ಯವಸ್ಥೆಯೇ ವ್ಯವಸ್ಥೆಯಾಗಿತ್ತು. ಸೊಳ್ಳೆಯ ಕಾಟದಲ್ಲಿ ಮಲಗಲು ಸಿಗದ ಮಂಚ, ಹೊದೆಯಲೂ ಸಹ ಸಿಗಲಿಲ್ಲವಾಗಿತ್ತು ಒಂದು ಚಾದರ. ಹೀಗಿದ್ದರೂ ಹಾಗೋ ಹೀಗೋ ಬೆಳಗು ಮಾಡಿದ. ಅವರ ಮಾತಿನಂತೆ ಮಾಡಿದ ಅವನು ತನ್ನ ಕಂಪನಿಯನ್ನು ತಲುಪಿ ಅಧಿಕಾರ ಹಸ್ತಾಂತರ ಪಡೆದುದ್ದು ಮರೆಯಲಾಗದ ಹುಟ್ದಬ್ಬದ ಉಡುಗೊರೆ.

ಧರಿತ್ರಿ ದರ್ಶಿಸಿದವರು

ಗರ್ಭಗೂಡಲಿ ಗೌಪ್ಯವಾಗಿ
ಜೋಪಾನ ಮಾಡಲು
ರೂಪ ಪಡೆದೆ
ತುಂಡು ಮಾಂಸದ ಪಕಳೆಯಾಗಿ
ತುಂಬಿದೆ ಮಡಿಲ ಮಗುವಾಗಿ
ಮರು ಜನ್ಮವೆತ್ತಿ ಹಡೆದಿರುವೆಯಮ್ಮ
ಹಾಲ್ಗೆನ್ನೆ ಅರಳಲು ಮರೆತೆ ಎಲ್ಲವ
ಜಗವ ತೋರಿಸಿ ಜಪವ ಮಾಡಿಸಿ
ಏಳ್ಗೆ ಬಯಸುತ ಸಂಸ್ಕರಿಸಿದೆ

ದುಡುಮೆ ಮಾಡುತ ಪಣವತೊಟ್ಟೆ
ಕುಡಿಯ ಬೆಳೆಸುವ ದೀಕ್ಷೆ ತೊಟ್ಟೆ
ಒಣಗಿದ ಬೆವರಿನ ವಾಸನೆಯಲ್ಲಿ
ಮೋಡಿ ಮಾಡುವ ಜಾದುಗಾರನಾದೆ
ಸಂಸಾರದ ನಗವ ಹೊತ್ತು
ಸಾಧಿಸಬೇಕೆಂಬ ಛಲವ ಬಿತ್ತಿ
ವಿದ್ಯೆಯೆಂಬ ಏಣಿ ಹತ್ತಿಸಿ
ಸ್ವಕಾಲಲಿ ನಿಂತು ಬದುಕ ಕಟ್ಟಲು
ಮಾದರಿಯ ಪ್ರೇರಣೆಯು ನೀನಾದೆಯಪ್ಪ

Thursday, March 8, 2018

ಈ ಸಂಜೆ ದಂಡ

ಈ ಸಂಜೆ ನಗಲು
ಉಕ್ಕಿ ಭೋರ್ಗರೆಯುವ ಕಡಲು
ನಿಂದಿಸುತಿದೆ ಕರೆದು
ಬಂದಿರಲು ನಿನ್ನ ತೊರೆದು
ಹಸಿಯಿಲ್ಲದ ಬಯಲು
ಕಸಿಯಿಲ್ಲದ ಮಡಿಲು
ನೆರವಾಗದೆ ಜರಿಯುತಿದೆ
ನೀನಿರದೆ ಜೊತೆಯಾಗಿ
ತಿರುಗುತಿರುವ ನನ್ನ

ನೀ ಬಳಿಯಿರದ ಹೊತ್ತು
ಬೆಳ್ಳಿ ಬಾನಲಿ ಕೂಡ
ಬೆಳಗುವ ಭಾನು
ಬರಿದಾಗಿ ಕಂಡ
ಮುಸ್ಸಂಜೆ ಮತ್ತು
ನಾ ಏಕಾಂಗಿ ಸ್ವತ್ತು
ಕಾಯುವ ಕಾಯಕವು
ಬರಿದಾದ ದಂಡ

ಮಧು ಹೀರಿದ ದುಂಬಿ
ನೆಗೆದು ಹಾರಿದ ಭಂಗಿ
ನೋಡಲು ಬಂತು
ಕೋಪ ತಾಪದ ಗೀಳು
ಶೃತಿ ಭರಿತ ತುಂಬಿ
ಕೃತಿ ಬರೆದ ಕಂಬಿ
ರಾಗಕೆ ಸೋತು
ಪ್ರೀತಿ ಒಲಿದು ಬೀಳು

Thursday, January 25, 2018

ಅನಿರೀಕ್ಷಿತ

ಹಿತವಾದ ಮಾತಿನಲಿ
ಸಿಹಿಯಾದ ನೋವು
ಹಿರಿದಾದ ಭಾವನೆಯಲಿ
ಸೊಗಸಾದ ಸಾವು
ಹಳೆಯದಾದ ಹಣತೆಯಲಿ
ಹೊಸದಾದ ಬೆಳಕು
ಜೀವನದ ಏಳ್ಹೆಜ್ಜೆ
ಸಂಗಡವೆ ಇಡುವಾಸೆ
ಹಿಂದಿನದ ಮರೆತಾಗ
ಅನುರಾಗ ಹೊಸದಾಗಲಿ

ಹೋಯಿತೆಂದು ಭಾವಿಸಿದೆ
ಹೊರಗಿಂದ ಬಂದಿಹುದು
ಮುಗಿಯಿತೆಂದು ಬಿಂಬಿಸಿದೆ
ಮುಗ್ಗರಿಸಿ ನಿಂತಿಹುದು
ಅಂದುಕೊಳ್ಳದ ನಿರೀಕ್ಷೆ
ಬಾಳಲ್ಲಿ ನೆಡೆಯುವ ನಿತ್ಯ ಪರೀಕ್ಷೆ
ಬಯಸಿ ಬೇಕೆಂಬ ಫಲಿತಾಂಶ
ನಡೆಯದು ಎಂಬುದೇ ಸಾರಾಂಶ

ನನಗಾಗಿ ಕಾಯುವವರಾರಿಲ್ಲ
ಏಕಾಂಗಿ ಪಯಣದಲಿ
ಹಿತಕಾಗಿ ಪ್ರಾರ್ಥಿಸುವವರಾರಿಲ್ಲ
ಏಕಾಂತ ಧ್ಯಾನದಲಿ
ನೆನೆದದ್ದು ಹಾಯಾದ ಕಾವ್ಯ
ನಡೆಯುವುದು ಕೋರದ ದೃಶ್ಯ
ನಡೆಯುವುದನು ಆಸ್ವಾದಿಸು
ಸರಿಸಾಟಿ ಯಾರಿರರು ಆನಂದಿಸಲು

Wednesday, January 10, 2018

ಹೊಸ್ತಿಲಿಂದಾಚೆಗೆ

ಹುಸಿಗೋಪ
ಮುನಿಸಾಗಿ ಕಾಡಲು
ತೊರೆದೆ
ನಲ್ಮೆಯ ಪ್ರೀತಿಯಲಿ
ಕಾಯುವ ಪತಿಯನು

ನಂಜಂತೆ ತಲೆಗೇರಿದ
ಸಿಟ್ಟದು
ಆಲಿಸಿತು ಹಿತ್ತಾಳೆ ಕಿವಿಯಂತೆ
ಉಳಿದವರ ಮಾತನು

ವಿಜೃಂಭಿಸಿ ಮೆರೆದ ಜಗಳವು
ನಿರ್ಧರಿಸಿತು
ಅಗಲಿ ಏಕಾಂಗಿಯಾಗಿ
ಬಾಳಲು

ಬಟ್ಟೆಗಳ ಪೆಟ್ಟಿಗೆಯ ಹಿಡಿದು
ಹೊರಟಿತು
ತವರಿನ ತೊಟ್ಟಿಲಿದೆಯೆಂಬ
ಜ್ಞಾಪಕದಲಿ

ಹೆತ್ತವರು ಹೋಗಿರುವುದನು
ಮರೆತೆ
ಬಂದಿಳಿಯಿತು ಬೊಕ್ಕಸವು
ಮೂಲಕೆ

ಮೊದಲೆಲ್ಲ ತಾಯಿಯ
ಮಾತು ಕೇಳುತ್ತಿದ್ದ ಸಹೋದರ
ನಾದಿನಿಯ ಮುಖದ ಭಾವಕೆ
ಈಗಲೂ ಅದನೇ ಮಾಡಿದ

ತವರಿನ ಹೊಸ್ತಿಲಿಂದಾಚೆಗೆ
ಇಡಲಿಲ್ಲ ಒಂದ್ಹೆಜ್ಜೆ ಮುಂದಕೆ
ಕನಸು ಕಟ್ಟಿದ್ದ ಮನೆಯದು
ನನಸಲಿ ಜೊತೆಗೆ ಬಾರದಾಯಿತು

ಅಪ್ಪನ ಮುದ್ದು ಮಗಳಾಗಿ
ತಿಂದಿದ್ದ ಹೊಡೆತವು
ಅಮ್ಮನ ಕೈಯಲಿ
ಕಣ್ಣಿಂದ ಇಳಿಯಿತು
ಹಂಬಲದ ಹನಿಯಾಗಿ

ಜೊತೆ ನಡೆದ ಸಹಬಾಳ್ವೆಯ
ಪ್ರತಿನಿಧಿಯನು
ಮಗುವಂತೆ ಜತನವ ಮಾಡಿದ್ದ
ಅಬ್ಬೆಯನು
ಕಳೆದುಕೊಳ್ಳಬಾರದೆಂಬ ಅರಿವಾಗಿ
ಮರಳಿತು ಕಾಳಜೀಯ ಕೌಶಲ್ಯ
ನೆನಪಾಗಿ