ಮೊದಲೆಲ್ಲ ನಮ್ಮ ಹಳ್ಳಿಗಳಲ್ಲಿ ಇದ್ದ ಕೆಲವೊಂದು ನೈಸರ್ಗಿಕ ವ್ಯಾಯಾಮದ ಪದ್ದತಿಗಳು ಇಂದೆಲ್ಲ ಮರೆಯಾಗಿ ಎಷ್ಟೋ ಜನರಿಗೆ ಅದರ ಹೆಸರೇ ಮರೆತುಹೋಗಿದೆ ಅಲ್ವೇ...? ಇಲ್ಲಿ ನಮ್ಮ ಮಹಿಳೆಯರಿಗೆ ಬಸರಿನ ಸಮಯದಲ್ಲಿ ಮಾಡಿಸುವಂತಹ ವ್ಯಾಯಾಮ ಹೀಗಿತ್ತು. ಮಡಿಕೆಯಲ್ಲಿ ಮೊಸರನ್ನು ಮಾಡಿ ಬೆಳಗಾದ ಮೇಲೆ ಮೊಸರನ್ನು ಕಡೆಯುವ ಕೆಲಸದಲ್ಲಿ ಮಹಿಳೆಯರ ಗಡಿಬಿಡಿಯ ತಲೆಬಿಸಿಗಳು ಇಂದು ಕಾಣ ಸಿಗುವುದು ಬಹಳ ಅಪರೂಪದ ದಿನಚರಿ. ನಾವೇಕೆ ಅದನ್ನೆಲ್ಲಾ ಮಾಡಬೇಕು? ನಾವೀಗ ಮುಂದುವರಿದ ಜನಾಂಗದವರು ಎಂದೇಳುವ ನಮ್ಮ ಮಹಿಳೆಯರಲ್ಲಿ ಅದನ್ನು ಮಾಡುವುದರಿಂದ ಏನು ಓಳಿತಿತ್ತು ಎಂದು ಪರಾಮರ್ಷಿಸುವ ಸೌಜನ್ಯತೆಯೂ ಸಹ ಇಲ್ಲದಿರುವುದು ವಿಪರ್ಯಾಸವೇ ಸರಿ ಎಂದೆನಿಸುತ್ತದೆ.
ಮೊದಲೆಲ್ಲ ಪ್ರತಿ ಮನೆಯಲ್ಲೂ ಕಡಲ್ಕಂಬ (ಮೊಸರು ಕಡೆಯುವ ಕಂಬ) ಮತ್ತು ಅದರ ಜೊತೆಗೆ ಕಡಲ್ಗೋಲು (ಮೊಸರು ಕಡೆಯುವ ಕೋಲು) ಇದ್ದೇ ಇರುತ್ತಿತ್ತು. ಇವೆಲ್ಲ ಏನು? ಅಂತ ಕೇಳಿದರೆ, ಕೆಲವರಿಗೆ ಹಿಂದೆಂದೂ ಕೇಳರಿಯದ ಶಬ್ಧ, ಇನ್ನೂ ಕೆಲವರಿಗೆ ಎಲ್ಲೋ ಕೇಳಿದ ನೆನಪು, ಮತ್ತೂ ಕೆಲವರಿಗೆ ಈಗ ಅವುಗಳೆಲ್ಲಾ ಎಲ್ಲಿ ನೋಡಲು ಸಿಗುತ್ತದೆ? ಎಂಬ ಆಶ್ಚರ್ಯ ಯಾಕೆಂದರೆ ಮೊಸರು ಕಡೆಯುವ "ಮೊಟಾರು ಮಷಿನ್" ಬಂದಿರುವುದರಿಂದ ಅವುಗಳೆಲ್ಲ ಮನೆಯಲ್ಲಿ ಮೂಲೆಗುಂಪಾಗಿದೆ ಅಥವಾ ಬಚ್ಚಲಮನೆಯ ಒಲೆಯನ್ನು ಬಿದ್ದು ಬೂದಿಯಾಗಿವೆ ಎಂಬ ವಿಷಾದದ ಭಾವ. ಸ್ವಲ್ಪವೇ ಸ್ವಲ್ಪ ಜನರಿಗೆ ಅದರ ಒಡನಾಟದ ಅನುಭವ ಈಗಲೂ ಸಿಗುತ್ತಿದೆ ಹಾಗಾಗಿ ಅದರಲ್ಲೇನಿದೆ ವಿಶೇಷವೆಂಬ ನಿರ್ಲಕ್ಷದ ಮಾತನಾಡುವವರಿರಬಹುದು.
ಮೊದಲು ಮೊಸರನ್ನು ಕಡೆಯಲು ಮಣ್ಣಿನ ಮಡಿಕೆಯ ಅಡಿಯಲ್ಲಿ ಹಿರ್ಕೆಯನ್ನು (ಬೆತ್ತದ ಎಳೆಗಳಿಂದ ಮಾದಿದ ಅಡಿ ಮಣೆ) ಇರಿಸಿ ಕಡಲ್ಗೋಲನು ಮೊಸರಿನ ಮಡಕೆಯೊಳಗಿಟ್ಟು ಕಡಲ್ಕಂಬಕ್ಕೆ ಸಿಲುಕಿಸಿ ನೇಣನ್ನು ಕಟ್ಟಿ ಸೊರ...ಸೊರ ಎಂದು ಮೊಸರನ್ನು ಕಡೆಯಲು ಪ್ರಾರಂಭಿಸಿದರೆ ಸಾಬುವನ್ನು ತಿಕ್ಕಿದಾಗ ನೊರೆ ಬಂದಹಾಗೆ ಬೆಣ್ಣೆಯು ಮಜ್ಜಿಗೆಯ ಮೇಲೆ ತೇಲಿ ಬರುತ್ತಿದ್ದುದನ್ನು ನೋಡಲು ಖುಷಿಯ ಭಾವ ಕಡೆಯುವವರ ಮೊಗದಲ್ಲಿ ಮೂಡುತ್ತಿತ್ತು. ಮಕ್ಕಳು ಕದ್ದು ತಿನ್ನಬಾರದೆಂದು ಹುರಿಯ ಹಗ್ಗದಿಂದ ಮಾಡಿದ ಶಿಕ್ಕದ (ಹಗ್ಗದ ಜೋಳಿಗೆ) ಮೇಲೆ ಮಜ್ಜಿಗೆಯ ಬೊಡ್ಡೆಯನ್ನು ಇಡುತ್ತಿದ್ದರು. ಆದರೂ ಬೆಣ್ಣೆಯ ಬೊಡ್ಡೆಯೊಳಗೆ ಕೈ ಹಾಕಿ ಕದ್ದು ತಿನ್ನುತ್ತಿದ್ದ ಮಜವೇ ಬೇರೆ. ಆದರೆ ಇಂದಿಗೆ ಅವುಗಳೆಲ್ಲ ಮಾಸಿದ ಬರಿ ನೆನಪುಗಳು ಮಾತ್ರ.
ಮೊದಲೆಲ್ಲ ಏಳು ತಿಂಗಳು ತುಂಬಿದ ಮಹಿಳೆಯರಿಗೆ ಈ ಕೆಲಸವನ್ನು ಕೊಡುತ್ತಿದ್ದುದು ಬಹಳ ವಿಷೇಶವಾಗಿತ್ತು. ಯಾಕೆಂದರೆ ಗರ್ಭಿಣಿಯರಿಗೆ ಮೈ ಕೈಗಳೆಲ್ಲ ಆಡಲೆಂದು ಮತ್ತು ಮುಂದಾಗುವ ಹೆರಿಗೆ ಸರಾಗವಾಗಿ ಆಗಲಿ ಎಂಬ ಸದುದ್ದೇಶ ಇದರ ಹಿಂದಿರುತ್ತಿತ್ತು. ಮೊಸರನ್ನು ಕಡೆಯುವಾಗ ಕಡಲ್ಗೋಲಿಗೆ ಸುತ್ತಿದ ನೇಣನ್ನು ಹಿಡಿದು ಎಳೆಯುವಾಗ ಒಂದು ಕೈ ಮುಂದೆ ಮತ್ತೊಂದು ಕೈ ಹಿಂದೆ ಆಗುವುದರಿಂದ ಗರ್ಭಿಣಿಯರಿಗೆ ಸರಿಯಾದ ವ್ಯಾಯಾಮವಾಗಿ ಹೊಟ್ಟೆಯೊಳಗಿದ್ದ ಮಗು ಸರಾಗವಾಗಿ ಓಡಾಡಿಕೊಂಡು ಇರುತ್ತಿತ್ತು ಎಂಬ ನಂಬಿಕೆಯಿದೆ. ಇದು ಬರಿ ನಂಬಿಕೆ ಅಥವಾ ಮೂಢನಂಬಿಕೆಯಲ್ಲ, ಯಾಕೆಂದರೆ ಹಲವು ಜನರಿಗೆ ಸರಾಗವಾಗಿ ಹೆರಿಗೆಯು ಆಗಿದ್ದು ಸತ್ಯ ಎಂಬುದು ಬಹಳ ಜನರ ಮಾತು. ಇದರಿಂದಾಗಿ ಎರಡು ಕೆಲಸಗಳು ಜೊತೆಯಾಗಿ ಆಗುತ್ತಿತ್ತು. ಒಂದು ದೇಹದ ವ್ಯಾಯಾಮ ಇನ್ನೊಂದು ಅಗತ್ಯವಾಗಿ ಮಾಡಬೇಕಾದ ದಿನಚರಿಯ ಕೆಲಸ. ಹೀಗಾಗಿ ಆಗಿನ ಕಾಲದ ಬಸ್ರಿ ಹೆಂಗಸರಿಗೆ ಸಂಜೆ ಹೊತ್ತಲ್ಲಿ ಹೋಗುವ ವಾಯು ವಿಹಾರವಾಗಲಿ, ಹಾಸಿಗೆಯ ವಿಶ್ರಾಂತಿಯಾಗಲಿ ಬೇಕೆ ಆಗುತ್ತಿರಲಿಲ್ಲ. ಇವುಗಳನ್ನೆಲ್ಲ ಮಾಡದಿದ್ದರೂ ಹೆರಿಗೆ ಸರಾಗವಾಗಿ ಆಗಿ ಆರೋಗ್ಯದಿಂದಿರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.
ಇನ್ನೊಂದು ಮಾಸಿದ ನೆನಪು "ಯಸಮುಚ್ಲು" ಎಂದರೆ ಬಾಗಿಸಿದ ಅನ್ನವನ್ನು ಮಾಡುವಾಗ ಬಳಸುತ್ತಿದ್ದ ಚಪ್ಪಟೆಯಾಗಿರುತ್ತಿದ್ದ ಮರದಿಂದ ಮಾಡಿದ ಮುಚ್ಚಳ. ಇದನ್ನು ಬರಿ ಅನ್ನ ಬಾಗಿಸಲಿಕ್ಕಷ್ಟೇ ಅಲ್ಲ ಮಗುವಾದ ಮೇಲೆ ಚಿಕ್ಕ ಮಗುವಿನ ಸ್ನಾನ ಮಾಡಿಸಿ ತೊಟ್ಟಲಿನಲ್ಲಿ ಮಲಗಿಸುವಾಗ ಮಗುವಿನ ತಲೆಯ ಆಡಿಯಲ್ಲಿ ಇದಕ್ಕೆ ಬಟ್ಟೆಯನ್ನು ಸುತ್ತಿ ಇಡುತ್ತಿದ್ದರು. ಕಾರಣವೆಂದರೆ ಮಗುವಿನ ತಲೆಗೆ ಸುಂದರವಾದ ರೂಪ ಕೊಡುವುದಾಗಿತ್ತು. ಇದನ್ನು ತಲೆಯ ಅಡಿಯಲ್ಲಿಟ್ಟು ಮಗುವನ್ನು ಕೆಲ ತಿಂಗಳುಗಳ ಕಾಲ ಮಲಗಿಸಿದರೆ ಎಳೆಗೂಸಿನ ತಲೆಯ ಹಿಂಬದಿ ಉಬ್ಬು ತಬ್ಬುಗಳಿಲ್ಲದೆ ಸಮವಾದ ರೂಪ ಪಡೆಯಯುತ್ತಿತ್ತು. ಆಧುನಿಕವಾಗಿ ಬೆಳೆಯುತ್ತಿರುವ ನಾವು ಇಂತಹ ಹಲವು ಸೂತ್ರಗಳು ನಮ್ಮ ಅನುಕೂಲಕ್ಕೆ ಇರುತ್ತಿದ್ದವು ಎಂಬುದನ್ನು ಮರೆತು ಮರೆಯಾಗಿಸುತ್ತಿದ್ದೇವೆ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ. ಈಗಲಾದರೂ ಅವುಗಳತ್ತ ಮುಖ ಮಾಡಿ ನಮ್ಮ ಹಳೆಯ ಒಳಿತಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ನಮ್ಮ ಹೆಗಲ ಮೇಲಿದೆ ಎಂಬುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ.