Thursday, June 22, 2023

ಹೂವು ಬಾಡದಿರದು

ಮಳೆಯಲ್ಲಿ ನೆಂದರೂ ಬಿಸಿಲಲ್ಲಿ ಬೆಂದರೂ

ಹೂವೆಂದೂ ಬಾಡದೇ ಇರಲಾರದು

ಇವ ಮೇಲೇ ಎದ್ದರೂ ಅವ ಕೆಳಗೇ ಬಿದ್ದರೂ

ಸಾವನ್ನು ಗೆದ್ದು ಬರಲಾಗದು


ಶೃತಿಯರಿತು ಇಡಬೇಕು ಸರಿಯಾದ ಹೆಜ್ಜೆ

ಇದ್ದಲ್ಲೇ ಹೊರಬೇಕು ಅವ ಕೊಡುವ ವಜ್ಜೆ

ಅಂತ್ಯಾದಿ ನಡುವೆ ಹೋರಾಟದುಳುಮೆ

ಹೊಂದಾಣಿಕೆಯೊಂದೆ ಈ ಬಾಳ ಗರಿಮೆ


ಗಳಿಸಿರುವ ಹಣವನ್ನು ನೀ ಹಂಚಿ ಸಾಗು

ಜನರೊಡನೆ ಛಲಬಿಟ್ಟು ನೀ ಕೊಂಚ ಬಾಗು

ಕೈ ಚಾಚಿ ನೆರವಾಗು ಬೇಡಿರುವ ಜನಕೆ

ನೋವಲ್ಲಿ ಜೊತೆಯಾಗು ಅಳುತಿರುವ ಮನಕೆ

Saturday, June 17, 2023

ಮುಗುಳಿನ ಗಂಧ

ಬಯಲು ವೇದಿಕೆ ಮೇಲೆ

ಬೆಳೆದು ನಿಂತಾ ಮುಗುಳೆ

ಹೇಳು ಭೀಗುವ ಮುನ್ನ

ಯಾವ ಪಯಣವು ಭಿನ್ನ

ಎಲ್ಲೂ ಬೇಡದ ಮುನಿಸು

ಎಲ್ಲಾ ಬಯಸುವ ಕನಸು

ಹೊಂದಿದ ಬಗೆಯನ್ನು ತಿಳಿಸು

ಆಗುವ ಕಲೆಯನ್ನು ಕಲಿಸು


ನರಳಿ ತೂರುತಲಿರಲು 

ಬದುಕ ಬಂಡಿಯ ಒಳಗೆ

ಮಿಂಚು ಹುಳುವಿನ ರೀತಿ

ಮಿನುಗಿದಾ ದೀಪ

ತತ್ವವನು ತೊರೆದಂತೆ 

ಸಾಗಿದೆಯಾ ಬಾಳಿನಲಿ

ಸತ್ವವನು ಎದುರಿಟ್ಟು

ತೋರುವುದೇ ಕ್ರಾಂತಿ


ಜನರೆಲ್ಲ ಬೇಡುತಿಹ

ಹಾರೋ ದುಂಬಿ ಹರಡುತಿಹ

ಜೇನಿನ ಸಿಹಿಯಲ್ಲೂ

ಮುಗುಳಿನ ಗಂಧ

ಪ್ರೀತಿ ಹರಿವ ಹೊತ್ತು

ಸ್ಪೂರ್ತಿಯಾಗಲು ಅಸ್ತು

ಇರುವ ತಡೆಯನು ತೊಡೆದು

ನುಡಿಯುವುದೇ ಶಾಂತಿ


ಮೌನದಲೆ ಹಂಗಿಸುವ

ಮಾತಿನಲೆ ತಿವಿಯುತಿಹ

ಹಂಗಿನರಮನೆಗಿಂತ 

ಇಂಗಡದ ಗುಡಿ ಲೇಸು

ಹೊತ್ತುಗೊತ್ತು ಇಲ್ಲದಲೆ

ಸುತ್ತ ಸುತ್ತಿ ಹುಡುಕುತಿಹ

ಭ್ರಷ್ಟ ಸಂಸಾರಿಗಳು

ಪರಿಸರದ ಕಾಂತಿ...

ಬಯಲಿನ ಗೋಪುರ

ನನ್ನೆದೆಯ ಬಯಲಿನ ಗೋಪುರ

ನಿನ್ನ ನೆನಪಿನ ಪ್ರೀತಿಯ ಸ್ಮಾರಕ

ಒಣ ಹುಲ್ಲಿನ ಹಾಸಿಗೆ ರೂಪಕ

ಭಿನ್ನ ಮನಸಿನ ಭಾವನೆ ಪೂರಕ


ಬಿಸಿಯುಸಿರಿದು ಸೋಕಲು ಮೆಲ್ಲಗೆ

ನನ್ನ ಹಂಬಲವಾಗಲು ಮೆಲ್ಲಗೆ

ನಿನ್ನೆದೆಯ ನೆನಪಿನ ದೀವಿಗೆ

ಬೆಳಗುವುದೇ ಒಲವಿನ ಪ್ರೀತಿಗೆ


ಅಳಿವಿರದ ದೀಪದ ಜೋಳಿಗೆ

ಹೊತ್ತುತರಲು ಕಣ್ಣಿನ ಕಾಡಿಗೆ

ತಿಳಿಸುವುದೇ ನೀತಿಯ ಬಾಳಿಗೆ

ಹಸಿರಾಗಲು ಶಾಶ್ವತ ಕೂಳಿಗೆ

ಜಾಣ್ಮೆಯ ಗಾಳ

ಮನಸಿನ ಇಳೆಯಲ್ಲಿ ಸ್ವಾಭಿಮಾನದ ಬಾಳು

ನನಸಿನ ಅಂಗಳದಿ ನೆಂಟರಿಷ್ಟರ ಗೋಳು

ಕಳೆವುದು ನೀತಿಯ ಆತ್ಮೀಯ ಬಂಧ

ಮುಗಿವುದು ನಮ್ಮಯ ಪ್ರೀತಿಯ ಸಂಬಂಧ


ಸೋಲು ಗೆಲುವಿನ ಮೂಲ

ಗೆಲುವು ಅಹಂಕಾರದ ಬಾಲ

ನಾನು ನನ್ನದೆಂಬ ಕಾಲ

ಆಗುವುದು ನಮ್ಮ ಬಾಳಿಗೆ ಶೂಲ

ಬದುಕುವ ಹೊತ್ತಲ್ಲಿ ವಿವೇಚನೆಯೇ ದಾಳ


ಮಾತು ಮಾರ್ಮಿಕ ಜಾಲ

ಸೂಕ್ಷ್ಮ ಅರಿವಿನ ಕೋಲ

ಮೂದಿಸುತ ಜರಿಯಲು ಕೀಳ

ಕೈಯಾಭರಣ ಕೋಳ

ಹೊಂದಾಣಿಕೆ ಮಾತು ಜಾಣ್ಮೆಯ ಗಾಳ

ಧೃತಿಯ ಕಿರಣ

ಮನದಾ ಮನೆಯಲ್ಲಿ ಧೃತಿಯ ಕಿರಣ

ಬದುಕಾ ಬಯಲಲ್ಲಿ ಪುಟಿದೆದ್ದಿದೆ ಚರಣ

ಏನೋ ಒಂದು ಎದುರಾಗಿದೆ

ಬೆಳಕಾ ಹನಿಸೋ ಬೆಳ್‌ ಮೂಡಿದಿದೆ


ಧೀ ಆರಿದ ಕಾರಣ ಶನಿಯಾಟದ ಹೂರಣ

ತಲೆಯೇರುತ ಕಿವಿಯಲಿ ಬೆರಳಿಡುವನು ಖುಷಿಯಲಿ

ಮಂಕಾದರೆ ಮುಗಿಯಿತು ಮೇಲೇರುವ ಸರಣಿ

ಬೆಳಕಾಗುವ ಭರವಸೆ ತಿರುಗುತಲಿ ಧರಣಿ

ಚಿವ್ ಚಿವ್ ಗುಬ್ಬಿ

ಚಿವ್ ಚಿವ್ ಗುಬ್ಬಿ ನೆನಪಾಗಿದೆ

ಯಾಕೋ ಏನೋ ಮರೆಯಾಗಿದೆ

ಬೆಳಿಗ್ಗೆ ಎದ್ದು ಹೂ ಕೊಯ್ಯುವಾಗ

ಹಳೆ ಅನ್ನ ಹೆಕ್ಕಿ ತಿನ್ನುತಲಿತ್ತು

ಆ ದಿನಗಳ ನೆನಪು ಮಾಸೋಗದೆ

ಹೊಸದಿನಗಳಿಗಾಗಿ ಮುಡಿಪಾಗಿದೆ


ಹುಲ್ಲು ನಾರು ಹೆಣೆದ ಗೂಡು

ಮಾಡ್ಗುಳಿಯಲ್ಲಿ ಬರಿದಾಗಿದೆ

ಮನೆಯೊಳಗೆ ಮಲಗಿರುವ ನಮಗೆ

ತಿಳಿಸುವವರು ಇಲ್ಲಾ ಬೆಳಗಾದ ಘಳಿಗೆ


ಬಾಲ್ಯದ ಸಂಗಾತಿ ಬಾಗಿಲೆದುರಿಗೆ ಬಂದು

ಸ್ವಾಗತಿಸುವ ರೀತಿಯೇ ಮನಮೋಹಕ

ಬಿಳಿಯ ಗುರಿತಿನ ಗಂಟಲಿನ ಬಾಗ

ಕುಣಿಕುಣಿದು ಸೇಳೆಯಲು ಕಣ್ನೋಟವೇ ಸಖ

Monday, June 5, 2023

ಮಡಿಲ ನೂಲಿನ ಕೌದಿ

ಮಡಿಲಿನ ನೂಲನ್ನು ನೇಯುವ ನೇಕಾರ

ಅನುಭವಿಸೋ ನೋವನ್ನು ಪೇಳದೆ ಝೇಂಕಾರ

ಮೂಡಿದ ಬೆಳಕಲ್ಲಿ ನೋವಾರುವುದೇ ನೀತಿ


ಕಮಲದ ಕಣ್ಣಿನಲಿ ಕಾಡಿಗೆಯ ಕರಿಗುರುತು

ಅರಿಯದ ಮನಸಲ್ಲಿ ಮುಸುಕಿನ ಗುದ್ದಾಟ


ಸೂಕ್ಷ್ಮತೆಯ ಆರೈಕೆ ಒಲವಾಗುವ ಮುನ್ನ

ವ್ಯಾಪಾರ ವಹಿವಾಟು ಅತಿಯಾಯಿತು ಭಿನ್ನ


ಸಂತೈಸುವ ಮನಸು ಜೊತೆಯಾಗಲು ತಣಿಸು

ದೀಪವಾರುವ ಹೊತ್ತು ಆಗದಿರಲಿ ಕುತ್ತು