Sunday, October 28, 2018

ಬೆಳಗು

ಬ್ರಾಹ್ಮಿ ಮುಹೂರ್ತದಲ್ಲಿ ಮೂಡಿತೊಂದು ಬೆಳ್ಳು
ಉಕ್ಕಿ ಬರುತಿದೆ ಹೊಸ ಭರವಸೆಯ ಜೊಲ್ಲು
ಮಂಜಿನ ಹನಿಯ ಮಧುರವಾದ ಗುಡುಗು
ಬಾನಾಡಿಗಳ ಇಂಚರಕೆ ಸ್ಪೂರ್ತಿಯಾದ ಬೆಳಗು

ದಣಿವಾರಿದ ಚೈತನ್ಯಕೆ ಧರೆಯಾಳುವ ಬಯಕೆ
ಬಾನಾಳುವ ಭಾನಿಗೆ ಜಗ ಬೆಳಗುವ ಹರಕೆ
ಮನ ತಣಿಸುವ ಪ್ರೀತಿಗೆ ಬೆಳದಿಂಗಳೇ ಹೋಲಿಕೆ
ಅಂತರಂಗದ ಮಸುಕಿಗೆ ಜ್ಞಾನವೇ ಬೆಳಗೆಂಬ ಕಾಣಿಕೆ

Sunday, October 21, 2018

ಒಗಟು

ತಂಗಾಳಿಯಲ್ಲಿ ನಾ
ತೇಲಿ ಬಂದೆನು
ತಂಪನ್ನು ಎರೆದು ನಾ
ಕರಗಿ ಹೋದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ನೀರ ಹೊತ್ತಿ ಬರುವ ಮೋಡ ನಾ ತಿಳಿಯದಾದೆಯಾ?

ಹಸಿರು ಹರಡಿದ ಎಲೆಯು
ಕಣ್ಣ ಸೆಳೆತಕೆ
ಇಡಲು ಮುಂದಿನ ಹೆಜ್ಜೆ
ಮಣ್ಣ ಕುಣಿತಕೆ
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ಮಳೆಗೆ ಮೆರೆವ ಕಳೆಗೆಯು ಎಂದು ನುಡಿಯಬಲ್ಲೆಯಾ?

ಒಡಲ ಮಡಿಲು ತವರಿಗೆಂದು
ಓಡುತಿರುವೆನು
ಬೆಳಕ ಸ್ಪರ್ಶ ಸೋಕಿತೆಂದು
ಮಾಯವಾದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ತುಂಬಿ ಹರಿವ ಹೊಳೆಯು
ಎಂದು ಹಾಡಬಲ್ಲೆಯಾ?

Wednesday, October 10, 2018

ದಿಕ್ಪಾಲಕ

ಮೂಡಣದ ಹೊತ್ತಿನಲಿ
ಏಕಾಂಗಿ ಧ್ಯಾನದಲಿ
ಒಂದುಸಿರ
ಮನದೊಲವ ಸೂರೆಗಯ್ಯುವವನೆ
ಜೊತೆಯಾಗುವೆಯೇನು?

ಪಡುವಣದ ಸಮಯದಲಿ
ರಭಸದ ತೆರೆಗಳಲಿ
ರಂಗಾದ ಮುಗಿಲಿನಲಿ
ರಂಗಿನಾಟದ ರವಿಯಂತೆ
ಬಳಿಬಾರದೇನು?

ಬಡಗಣದ ಪಯಣದಲಿ
ಹಿಮಗಿರಿಯ ಶಿಖರದಲಿ
ತಂಪಾದ ಮಂಜಿನಲಿ
ನುಸುಳಿ ಬರುವ
ಬೆಚ್ಚನೆಯ ಉಷೆಯು ನೀನಾಗುವೆಯಾ?

ತೆಂಕಣದ ಹಡಗಿನಲಿ
ತಿಳಿಯಾದ ಸಂಜೆಯಲಿ
ತೇಲುತಿಹ ಬದುಕಿನಲಿ
ಚುಕ್ಕಾಣಿಯ ಹಿಡಿದ ನಾವಿಕ
ನೀನಾಗುವೆಯಾ?

Saturday, August 11, 2018

ಎಲ್ಲಿರುವೆ?

ಎಲ್ಲಿ ಅಂತ ಅಲೆಯಲಿ
ನಿನ್ನ ಹುಡುಕುತ
ಹೇಗೆ ಎಂದು ಅರಿಯಲಿ
ಚಿತ್ತ ಕಲಕುತ

ಯಾವ ಊರು ಯಾರ ಮಗುವೋ
ಯಾವ ಗುಡಿಯು ನಿನ್ನ ಮನೆಯೋ
ತಲುಪುವಾಸೆ ಅಡಗಿದೆ
ನಿನ್ನ ಹೆಸರು ತಿಳಿಯದೆ

ಗುಡ್ಡ ಬೆಟ್ಟ ಅರಸಬೇಕೆ
ನಾಡಿ ಮಿಡಿತ ಹೇಳಬೇಕೆ
ಒಲವಿನೋಲೆ ತಲುಪದೆ
ಮರಳಿ ಆಸೆ ಉಳಿದಿದೆ

Friday, July 6, 2018

ರಿಂಗಣದ ರಾತ್ರಿ ಬೆಳಗಿನ ತನಕ

ಬೆಳಗಿನಿಂದ ಗಡಿಬಿಡಿಯ ಕೆಲಸವ ಮುಗಿಸಿ ಮದುವೆ ಮಕ್ಕಳ ಮೊದಲನೆಯ ರಾತ್ರಿಗೆ ಕೊಣೆಯನ್ನು ಸಿಂಗರಿಸಲು ಬೇಕಾದ ಹೂವು-ಹಣ್ಣುಗಳನ್ನು ತಂದು ಅಲಂಕರಿಸಿದೆವು. ಸಂಜೆ ವರನ ಮನೆಯಲ್ಲಿ ನಡೆದ ವಧು ಪ್ರವೇಶದ ನಂತರ ಊಟ ಮುಗಿಸಿ ನೆಂಟರೆಲ್ಲ ಹೊರಟು ಹೋದರು. ಅಲ್ಲೇ ಉಳಿದಿದ್ದ ಬೆರಳೆಣಿಕೆಯಷ್ಟು ಜನರಲ್ಲಿ ಕೆಲವರು ಮಧುಮಗನ ಸ್ನೇಹಿತರು ನಾವಾಗಿದ್ದೆವು. ಶೃಂಗಾರದ ನಾರಿ ಮೊದಲ ರಾತ್ರಿಯ ಕೊಣೆಯತ್ತ ಹಂಸ ನಡಿಗೆಯಲ್ಲಿ ನಡೆದಳು. ಅದನ್ನೇ ಗಮನಿಸುತ್ತಿದ್ದ ನಾವು ಇಸ್ಪೀಟು ಆಡಲು ಪ್ರಾರಂಭಿಸಿದೆವು ಯಾಕೆಂದರೆ ಮಧುಮಗನಿಗೆ ಇಸ್ಪಿಟು ಆಟದ ಹುಚ್ಚು ಜಾಸ್ತಿ (ಸುಮ್ನೆ ತಮಾಷೆಗೆ ಆಡಲು ಮಾತ್ರ). ದಾಡ್ ಪೀಡ್ ಆಟ ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲೆ ದಢಾರ್ ದಢಾರ್ ಎಂಬ ಸದ್ದೊಂದು ಪ್ರೆಸ್ತದ ಕೋಣೆಯಿಂದ ಕೇಳಿ ಬಂತು. ಅದರ ಜೊತೆಗೆ "ನನ್ ಮಕ್ಳ, ಮೊದಲ ರಾತ್ರಿ ಕೋಣೆಯ ಅಲಂಕಾರ ಮಾಡುತ್ತೇವೆ ಎಂದು ಹೇಳಿ ಎಲ್ಲೆಲ್ಲಿ ಏನೇನ್ ಇಟ್ಟು ಸತ್ತಿದ್ರೋ" ಎಂಬ ಬೈಗುಳವ ಕೇಳಿ ನಗು ತಡೆಯಲಾಗದೆ ಇಸ್ಪೀಟು ಆಟವನ್ನು ಅರ್ಧಕ್ಕೆ ಬಿಟ್ಟು ಮಧುಮಗನಿಗೆ ಕಾಣದಂತೆ ಅಲ್ಲಿಂದ ಕಾಲ್ಕಿತ್ತೆವು. ಯಾಕೆಂದರೆ ಮಂಚದ ಅಡಿಯಲ್ಲಿ ಮತ್ತು ಆಚೆ ಈಚೆಯಲ್ಲೆಲ್ಲಾ ೧೫ ನಿಮಿಷಕ್ಕೆ ಅಲಾರಾಂ ಆಗುವಂತೆ ಸಮಯವನ್ನು ನಿಗದಿ ಪಡಿಸಿದ್ದೆವು. ಆದರೆ ಆ ನವದಂಪತಿಗಳು ಅವುಗಳನ್ನೆಲ್ಲ ಹುಡುಕಿ ಅಲಾರಂ ಆಗದಂತೆ ನಿಷ್ಕ್ರಿಯಗೊಳಿಸಿದರು. ಇವುಗಳನ್ನ ಅರಿತಿದ್ದ ನಾವು ಇನ್ನೂ ಸ್ವಲ್ಪ ಜಾಸ್ತಿ ಮಜವಾಗಲೆಂದು ಕೋಣೆಯಲ್ಲಿದ್ದ ಕಪಾಟಿನಲ್ಲಿ ದೊಡ್ಡ ಸದ್ದು ಮಾಡುವ ೨ ಚೈನಾ ಮೊಬೈಲ್ ಇಟ್ಟು ಬೀಗವನ್ನು ಹಾಕಿ ಕೀಯನ್ನು ನಾವೇ ಇಟ್ಟುಕೋಡಿದ್ದೆವು. ಹಾಗಾಗಿ ಅಲ್ಲಿಂದ ಓಡಿದ ನಾವು ಆ ಮೊಬೈಲ್ ಗೆ ೫ ನಿಮಿಷಕ್ಕೊಮ್ಮೆ ಕರೆ ಮಾಡುವುದನ್ನು ಬೆಳಗಿನವರೆಗು ಮಾಡಿದೆವು. ಪಾಪ ನಿದ್ರೆ ಮಾಡದೆ ನವ ದಂಪತಿಗೆಳು ಮೊದಲ ರಾತ್ರಿಯಿಂದ ಬೆಳಗಿನ ತನಕ ಮೊಬೈಲ್ ರಿಂಗಣಕ್ಕೆ ತಲೆ ತೂಗಿದರು.

Thursday, July 5, 2018

ಕುಶಲದ ಕುಚೋದ್ಯ

ಹರಿವ ನದಿಯ
ದಡದ ತುದಿಯಲ್ಲಿ
ಬಾಗಿ ನಿಂತಿರುವ
ಮರದ ಕೊಂಬೆಗೆ
ಜೋತು ಕಟ್ಟಿದ
ಜೋಕಾಲಿ ತೂಗಲು
ಮೋಹನ ನುಡಿಸಲು
ಮೋಹಕ ರಾಗವ
ರಾಧೆ ಸೋಲದೆ
ಇರಲು ಸಾಧ್ಯವೇ?

ಹರಿಯ ತೋಳಿಗೆ
ಒರಗಲು ಪ್ರೇಯಸಿ
ಕೈ ಚಾಚಿ ತೋರಿದ
ಹಾರುವ ಹಕ್ಕಿಯ
ವಿರಹದ ರಾಗವ
ಸರಸದಿ ಕೂಡಿದ
ರಾಧೆಯ ಮನದಲಿ
ವಿರಸವು ಮೂಡಲು
ಕುಶಲದ ಕುಚೋದ್ಯ
ಕಲಕಲು ಸಾಕಲ್ಲವೆ?

ಸುಮ್ಮನೆ ಕಾಡಿಸಿ
ಹುಸಿಗೋಪವ ಹೆಚ್ಚಿಸಿ
ಇರುಳೆಯ ವದನದಿ
ಚಿತ್ತಾರವ ಪಸರಿಸಿ
ಆಕರ್ಷಿತ ಪರಿಯನು
ಮನಗಾಣಿಸಿ ಅರುಹಿದ
ಪ್ರೀತಿಯ ಸ್ಮರಣೆಯು
ಏಕಾಂತದ ಗಾನವು
ಒಲವಿನ ಧ್ಯಾನಕೆ
ಒಲಿಯುವನು ಎಂದಲ್ಲವೆ?

Thursday, May 24, 2018

ದಿನವೊಂದು ಅಳಿಯುತಿದೆ
ನಿನ್ನ ನೆನಪಿನ ಬೆಳಕಲಿ
ಕನಸೊಂದು ಅರಳುತಿದೆ
ಸ್ಮರಣೆಯ ಧ್ಯಾನದಲಿ
ಪೂಜೆಯ ಮಂತ್ರವೆ ಮರೆಯುತಿದೆ
ನೆನವರಿಕೆಯ ಪರಿಯಲಿ
ಆಗಮನವೆಂದೋ ನನ್ನ ವರಿಸುವ ದಿನವೆಂದೋ?

ತಂದಿರುವೆ ತವರಿನ ತೊಟ್ಟಿಲ
ತಿನಿಸುವ ಒಲವಿದು ಚೊಚ್ಚಲ
ಹೃದಯದ ಕೋಣೆಯಲಿ ಕೂರಿಸಿ ತುಂಬಾ ನಿಗೂಢ
ಹರಸಿರುವ ಪ್ರೀತಿಯ ಸಿಂಚನ
ಜೊತೆಯಾಗಲು ಆದರ್ಶದ ಕಂಪನ
ಅರಿವಿನ ನೂಲಲಿ ನೇಯುವೆನು ಸಿದ್ದ ಸಿಂಹಾಸನ