Wednesday, August 5, 2015

ಶುಭ ವಿದಾಯ

ಒಳ ಮನಸಿನ ಕಡಲಿನಲಿ
ಬಾವಗಳ ಮಥನವು
ಸುತ್ತು ಹಾಕಿದ ದಾರದಲಿ
ಒಂದು ಎಳೆಯು ಹುಸಿದಿಹುದು
ದಾರ ಹರಿದ ಕ್ಷಣದಲಿ
ಹುಳಿ ಮೊಸರಿನಂತೆ ನಾನು

ಹರಿವ ನದಿಯು ನೀನು
ತಡೆದು ನಿನ್ನ ಪ್ರಿತಿಯಿಂದ
ಬಯಸಿದ ಒಲವ ತಂಬಲು
ವ್ಯರ್ಥ ಪ್ರಯತ್ನದ ಮೂರ್ಖ ನಾನು

ನೀರಿನಂತೆ ಹರಿವ ಆಸೆಗೆ
ಹಿಡಿದೆ ಕುಟಿಲ ಪಥಗಳನು
ಸಾಗುವೆ ಜಟಿಲ ಕಾನನದಲಿ
ಎಂಬ ಯೋಚನೆಯ ಮಾಡದೆ

ಸೂಕ್ಷ್ಮವಾಗಿ ತಿಳಿಯದ
ಹಿತ್ತಾಳೆ ಕಿವಿಯು ನಿನದು
ಬೇರೆಯವರ ಮಾತಿನಲ್ಲಿ
ಮರೆತೆ ನಿನ್ನ ಜೀವದ ಒಳಿತನು

ನಿನ್ನ ಬಯಕೆಯು ಬದುಕಲಿ ಮಾಡುವ
ನಾಲ್ಕು ದಿನ ಸುತ್ತುವ ಮಜದ ಘಳಿಗಯು
ಕಳೆದುಕೊಂಡಿರುವೆ ನಿಯತ್ತಿನ ಕಾಳಜಿಯನು
ಮತ್ತೆ ಸಿಗುವ ಅವಕಾಶದ ಭರವಸೆಯಿಲ್ಲದೆ

ನನ್ನ ಮನಕೆ ಘಾಸಿಯಾದ ನೋವು
ಉಳಿದಿಲ್ಲ ಪಡೆದ ನಂಬಿಕೆಯ ಮಾತು
ಬದುಕಲ್ಲಿ ಅನುಭವಿಸಿದೆ ಪ್ರಾಯಶ್ಚಿತ
ಹೇಳುವೆ ಶುಭ ಕಾಮನೆಗಳ ವಿದಾಯ

Monday, July 20, 2015

ಜಿಜ್ಞಾಸೆ

ಒಂದೇ ಸಾಲಿನಲ್ಲಿ ಬರೆಯಲೆ
ನಿನ್ನ ಅಂದವ
ಪದಗಳಿಗೆ ನಿಲುಕದಂತ
ಗುಪ್ತ ಸೌಂದರ್ಯವ
ಹೋಲಿಕೆಯಿರದ ಭಾವಗಳೆಲ್ಲ
ಭಾವನೆಗೆ ಸ್ಪೂರ್ತಿ ತುಂಬಲು
ಅಗಲಿ ಹೋಗುವ ಚಿತ್ತಕೆಂದು
ಜೀವ ಬಾರದು

ಸುಪ್ತ ಮನಸಿನ ಆಳದಲ್ಲಿ
ನೂರಾರು ಚಿಂತನೆ
ನಿನ್ನ ಚಂದಕೆ ಅವಧಿಯಿಹುದೇ
ಎಂಬ ಯೋಚನೆ
ಬಾಹ್ಯ ರೂಪವೋ ಒಳಗಿನಂದವೋ
ಯಾವುದು ಸೂಕ್ತವೆಂಬ ಕಲ್ಪನೆ

ಮರ್ಕಟದಂತಹ ಮನಸ್ಸಿನಲ್ಲಿ
ಉಳಿಯುವುದೇ ಸ್ಥಿರ ಭಾವನೆ
ಮುಪ್ಪಾಗುವ ಮುಖದಲ್ಲಿ
ಇರುವುದೇ ಆಕರ್ಷಣೆ
ಮುಖವೋ ಚಿತ್ತವೋ
ಗೌಪ್ಯವಾದ ಪರಿಕಲ್ಪನೆ

ಬಾಹ್ಯವಾದ ಮಾರ್ಪಾಟು
ವಯಸ್ಸಿನ ಸಹಜ ಗುಣ
ಮನಸ್ಸಿನ ಬದಲಾವಣೆ
ಸಾಂದರ್ಭಿಕ ಸನ್ನಿವೇಶ
ಅಂದವೋ ಚಂದವೋ
ಬಗೆಹರಿಯದ ಜಿಜ್ಞಾಸೆ 

Saturday, July 18, 2015

ದಾರಿ ತಪ್ಪಿದ ಪಯಣ

ಅರ್ಥವಿರದ ಅನುರಾಗದಲ್ಲಿ
ಅನುಬಂಧವೆಲ್ಲಿ ಹುಡುಕಲಿ
ನನಸು ಮಾಡಲು ಕನಸುಗಳನು
ಬಾಂಧವ್ಯಬೇಕು ಬದುಕಲಿ

ತಂತಿಯಿರದ ವೀಣೆಯಲ್ಲಿ
ರಾಗ ಹೇಗೆ ನುಡಿಸಲಿ
ಗಾನ ನಾಟ್ಯಕೆ ತಾಳ ಹಾಕಲು
ನಾದ ನುಡಿತಕೆ ಸ್ವರವೇ ಬಾರದು

ಲಯವೇ ಇಲ್ಲದ ಹಾಡಿನಲ್ಲಿ
ಮನದ ನೋವಿನ ಕುಣಿತವು
ಪ್ರಾಸವಿರದ ಪದ್ಯದಲ್ಲಿ
ಪದಕೆ ಅರ್ಥವೇ ಕಾಣದು

ಬಂದೇ ಬರುವೆನು ಹಾಡುತ
ಹೊಂದಿ ಬಾಳುವೆ ಸೋಲುತ
ಗಾನ ಕೇಳಲು ತಲೆದೂಗುತ
ಮುಸ್ಸಂಜೆ ಮೌನಕೆ ಶರಣಾಗುತ

ಭಾಸ್ಕರ ಮೂಡಲು ಅರಿಶಿನವು
ಚಿಲಿಪಿಲಿ ಹಾಡಿನ ಸ್ವಾಗತವು
ದಿನವು ಏರಲು ಸುಡುಶಾಖವು
ಶಾಂತವಾಗಲು ಇಂಪಾದ ಸಂಗೀತವು

ಕರ್ಕಶವಾಗದಿರಲು ಸಾಮಗಾನಕೆ
ಸ್ವರ ಏರಿಳಿತದ ಮಾಧುರ್ಯವು
ದಾರಿ ತಪ್ಪಿದ ಬಾಳ ಪಯಣಕೆ
ಅನುಭವಿಗಳ ಮಾರ್ಗದರ್ಶನವು

Thursday, July 16, 2015

ಪದಗಳ ಮರೆತ

ಮರೆತೆ ನಿನ್ನ ಮಾತ ಕೇಳಿ
ಕವಿತೆಯಾಗೋ ಪದಗಳ
ಅರಿತೆ ನನ್ನ ಭಾವ ಹಾಡಿ
ಮನಸ ಕಾಡೋ ಸ್ತುತಿಗಳ
ಜೀವವಿಲ್ಲದ ಕಲ್ಪನೆಗಳಿಗೆ
ಕನಸಿನಲ್ಲಿ ಬದುಕಿದೆ
ಪ್ರೀತಿಯಿಲ್ಲದ ಜೀವಿಗಳಿಗೆ
ನನಸಿನಲ್ಲಿ ನೋವಿದೆ
ಕನಸು ನನಸಿನ ಬಾಳಿನಲ್ಲಿ
ಏಳುಬೀಳಿನ ಪದರಗಳಿವೆ

ಸುಡುಗಾಡಿಗೆ ಹೋದ ದೇಹಕೆ
ಅಗ್ನಿ ಸ್ಪರ್ಶಿಸೋ ಸಂಭ್ರಮ
ಹುಡುಗಾಟದ ತುಂಟ ಮನಸಿಗೆ
ಸಮಯ ದೂಡಲು ಅಕ್ರಮ
ದ್ವದ್ವ ನೀತಿಯ ರೀತಿಗಳಿಗೆ
ಬದುಕ ಪ್ರಾಮುಖ್ಯತೆಗೆ ತರ್ಪಣ

ತನ್ನ ಮಾತಿನ ಬೆಲೆಯನರಿಯದೆ
ತಪ್ಪು ಕಲ್ಪನೆಯ ಅನುಭವ
ಜಗಳವಾಡಲು ಮಾತುಮಾತಿಗೆ
ಸ್ಪೂರ್ತಿ ತೊರೆದ ಕಂಪನ
ಎದೆಯ ಅಗತ್ಯಕೆ ಸ್ಪಂದನೆಯು
ದುರೆಯದೆ ಕಾಡುವ ನಿಬಂಧನೆಯು

Tuesday, June 23, 2015

ಹಸೆಮಣೆ

ಬಾಸಿಂಗ ಕಟ್ಟಿರುವೆ
ಪೇಟವನು ಹಾಕಿರುವೆ
ನಿನಗಾಗಿ ಕಾದಿರುವೆ
ಹಸೆಮಣೆಯಲಿ

ವೈದಿಕರ ಬಾಯಲಿ ಮಂತ್ರವು
ಮಾಡುತಲಿ ಕೈಂಕರ್ಯವನು
ಮುಗಿಸಲು ಕೂತಿರುವೆ
ಹಸೆಮಣೆಯಲಿ

ಸ್ನೇಹಿತರು ನುಡಿದಿಹರು
ಕಿಚಾಯಿಸೋ ಮಾತನು
ನಾಚುತ ತಲೆತಗ್ಗಿಸಿರುವೆ
ಹಸೆಮಣೆಯಲಿ

ಚಿಕ್ಕ ಮಕ್ಕಳ ತುಂಟತನ
ನನಗಾದ ಮುಜುಗರವ
ನೀ ಕೂತು ಬಗೆಹರಿಸು

ಬರಲಿ ಭರವಸೆ ಇರಲಿ

ಎಲ್ಲೋ ದೂರದಲಿ ಕಾಣುತಿದೆ
ಹಸಿರು ತುಂಬಿದ ಮೆಟ್ಟಿಲುಗಳು
ಮುಂದೆ ನುಗ್ಗುವೆ ತಾಳ್ಮೆಯಿಂದ
ಮೆಟ್ಟಿಲೇರಿ ಮೇಲೆ ನಿಲ್ಲಲು

ಬಿಡಿಸಿ ಹೇಳು ಬರುವ ತೊಡಕನು
ವಿವರಿಸು ಪಾರಾಗುವ ಪರಿಯನು
ಹರಸು ನನ್ನನು ಗುರಿಯ ತಲುಪಲು
ದೂರದಲ್ಲಿನ ಮೆಟ್ಟಿಲನೇರಲು

ಸೂಕ್ಷ್ಮ ಮನಸಿನ ಸುಪ್ತ ಕನಸಲಿ
ಕಾಣದಿರಲಿ ಗುಪ್ತವಾದ ಕಲ್ಪನೆ
ಬರಲಿ ಕ್ಷಣಗಳು ಭರವಸೆಯಲಿ
ಇರಲಿ ನಂಬಿಕೆಯು ಬದುಕಿನಲಿ

ಮೌನದ ಮನ

ಮರದಾ ಮ್ಯಾಲೆ
ಕೂಗೋ ಹಕ್ಕಿ
ಇಂದು ಯಾಕೋ
ಎದೆಯಾ ಒಳಗೆ
ಕಿರುಚಿದಂತೆ ಆರೋಹಣ

ಮುಖವು ನಗಲು
ಹರ್ಷದ ಹೊನಲು
ಹೆಪ್ಪುಗಟ್ಟಿದ
ಮನಸಿನ ಒಳಗೆ
ಹೇಳಲಾಗದ ಆಕ್ರಂದನ

ಇಡುವ ಹೆಜ್ಜೆ
ಗುರುತಾದರೆ
ಮುಂದಿನ ಯುಗಕೆ
ಇತಿಹಾಸವು

ದೂರ ಹೋಗು
ಎಂದಾಕ್ಷಣ
ಅರಳಿದ ಪ್ರೀತಿ
ಬಾಡೋಗದು

ನಿನಗಾಗೆ ಇರವ
ಈ ಹೃದಯಕ್ಕೆ
ನಲಿಯುವ ಆಸೆ
ಮಣ್ಣಾಯಿತು

ಬಂದೇ ಬರುವೆ
ಒಂದು ದಿನ
ನಿನ ಒಂಟಿತನಕೆ
ಸ್ಪಂದಿಸಲು