Tuesday, October 19, 2021

ನಿತ್ಯ ನಿರ್ಮಲ ತರ್ಪಣ

 ಯಾವ ತೀರದ ಅಲೆಗಳಿಂದ ಹೆಜ್ಜೆ ಗುರುತು ಮಾಸಿದೆ?

ಬಂಧಿಯಾಗಿ ಸಂಬಂಧದಿಂದ ನಂಬಿಕೆಯು ಸೊರಗಿದೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳು ಅಹಿತವೆಂದು ಅನಿಸಿದೆ

ಮೂಡಿ ಬರುವ ಭರವಸೆಯೊಂದೆ

ನಿತ್ಯ ನಿರ್ಮಲ ತರ್ಪಣ


ಕೂಡಿ ಬಾಳುವ ಮಾತುಗಳೆಲ್ಲ ಕನಸಿಗೊಂದು ಕಲ್ಪನೆ

ಸೂಡಿ ಬೀಸುವ ದಾರಿಯಲ್ಲಿ ಬೆಳಕಿಗೊಂದು ಭರವಸೆ

ಸೋತು ಏಳುವ ಜೀವಿಗೊಂದು

ಸುಪ್ತ ಮನಸಿನ ಪ್ರೇರಣೆ

ಶಾಂತಿ ನೆಲೆಸುವ ಜಾಗಕ್ಕೆಂದು

ಗುಪ್ತ ಕೆಲಸದ ಧೋರಣೆ


ಜೋಡಿ ಕೂಡುವ ಜೀವಿಗಳಲಿ ಅಪನಂಬಿಕೆಯ ನರ್ತನ

ರೇಖೆ ಅಳಿದ ಕರಗಳಲ್ಲಿ ಮುಂದೆ ಸಾಗುವ ಚಿಂತನ

ಅರಿವೆ ಒಂದು ಕಲಿಕೆಯೆಂದು ವಿಶ್ರಮಿಸವೇಕು ಬಾಳಲಿ

ಹೇಳಿಕೊಳ್ಳುವ ವಿದ್ಯೆಯೆಂದೂ ವಿಚಿತ್ರ ವಾದ ನಾಡಲಿ


ಗುರಿ ಮುಟ್ಟುವ ತನಕ,

ವಿಚಾರಿ

ರಾಗ ಹಾಕಿರಲು

ಭುವಿ ಜಿಗಿದಂತೆ ಬಾನೆತ್ತರಕೆ

ರವಿ ನಿಂತಂತೆ ಪಡುವಣಕೆ

ಕೈಯಲ್ಲಿ ಕೈ ಹಿಡಿದು

ನದಿ ತೀರದಿ ನಡೆದಿರಲು

ಹಾರುವ ಹಕ್ಕಿಯ ಹಾಡಿನ ಲಯವು

ಉದ್ವೇಗ ಚಿಮ್ಮಿಸಿ 

ನುಡಿಯುವುದಾ ಪ್ರೀತಿ

ನಿನ್ನಧರವ ಚುಂಬಿಸಿ


ಸಾಲಾಗಿ ಹಾರಿರಲು

ಆಕಾರ ನೀಡಿರಲು

ಕಣ್ಣೋಟ ಸೆಳೆಯುವುದು

ದನಿಗೊಂದು ರಾಗ ಹಾಕಿಹುದು


ಮುಸ್ಸಂಜೆ ಕವಿದಿರಲು

ಬೆಳದಿಂಗಳು ಹಾಸಿರಲು

ಧ್ಯಾನಿಸೋಣ ಈ ಸಂಜೆ ಅಳಿಯದಿರಲೆಂದು

ಮುದ್ದಿಸೋಣ ಈ ಮಾತು ಮುಗಿಯದಿರಲೆಂದು


ಗುರಿ ಮುಟ್ಟುವ ತನಕ,

ವಿಚಾರಿ

Saturday, November 21, 2020

ಶಶಿಯೆಂಬ ಖುಷಿ

ಬೆಳದಿಂಗಳ ರಾತ್ರಿಯಲಿ
ತಂಪಾದ ವೇಳೆಯಲಿ
ನಿನ ಸನಿಹ
ಜೊತೆಯಾಗಿ ಇರುವಾಗ
ಈ ಪರಪಂಚವೇ ಶೂನ್ಯ
ನಿನ ಒಡನಾಟವೇ ಮಾನ್ಯ
ಸಂಗಾತಿ ಸಂಪ್ರೀತಿ ಸಿಗುವಾಗ


ಹಿತವಾದ ಮಾತಿನಲಿ
ಇಂಪಾದ ಗಾನದಲಿ
ಗುನುಗುಡುವ ಸದ್ದೆಂದೂ
ನಿನ ನಾಮವಾಗಲಿ


ಜೀರ್ಜಿಂಬೆ ರಾಗದಲಿ
ತಾರೆಗಳ ನಡುವಿನಲಿ
ಕರ್ಗತ್ತಲ ಬೆಣ್ಣೆಯೆಂದೂ
ಶಶಿಯೆಂಬ ಖುಷಿಯಲಿ

Tuesday, June 30, 2020

ಇಡುವ ಹೆಜ್ಜೆ

ನಾವು ಕಲಿತ ಶಾಲೆಯಲ್ಲಿ
ಕನಸ ಬಣ್ಣ ದೊರೆವುದು
ನನಸ ಚಿತ್ರಣ ಎದುರಿನಲ್ಲಿ
ನಿನ್ನ ಕೈ ಗುಣ ತಿಳಿವುದು ||ಪ||

ಬದುಕ ರೂಪಿಸೊ ವೇಳೆಯಲ್ಲಿ
ಮೈಯ ಮರೆತರೆ ಇರುಳದು
ಅರಿತು ಇಡುವ ಹೆಜ್ಜೆಯಲ್ಲಿ
ಕಷ್ಟ ಸುಖವೋ ಸೊಗಸದು ||೧||

ಪಾಠ ಕಲಿಸುವ ಗುರುವಿನಲ್ಲಿ
ತಿದ್ದಿತೀಡುವ ಗುಣವು ಬೇಕು
ವಿದ್ಯೆ ಕಲಿತ ಶಿಷ್ಯರಲ್ಲಿ
ಗೌರವಿಸುವ ಭಕ್ತಿ ಬೇಕು ||೨||

ಜನ್ಮ ತಳೆವರಲವು ಅಪ್ಪ ಅಮ್ಮ
ಗೆಲುವು ಕಂಡ ಹೊತ್ತಿನಲ್ಲಿ
ಆಳಿಗೊಂದು ಕಲ್ಲ ಎಸೆವರು
ಹೊಂಡದಲ್ಲಿ ಬಿದ್ದ ಕ್ಷಣದಲಿ ||೩||

Sunday, May 10, 2020

ಅಮ್ಮಂದಿರ ದಿನ ಮತ್ತು ತಂದೆಯಂದಿರ ದಿನಾಚರಣೆಯ ಕುರಿತಾಗಿ ನನ್ನದೊಂದು ವಿಚಾರ:

ಈ ಅಮ್ಮಂದಿರ ದಿನ ಮತ್ತು ಅಪ್ಪಂದಿರ ದಿನ ಎಂಬ ಶಬ್ದಗಳು ಬಂದಿದ್ದು ಪಾಶ್ಚಾತ್ಯ ದೇಶಗಳಿಂದವೇ ಹೊರತು ಅದು ನಮ್ಮ ಭಾರತೀಯ ಅಥವಾ ಸನಾತನ ಸಂಸ್ಕೃತಿಯಿಂದಲ್ಲ.

ಅವರು ಎತಕ್ಕೆ ಈ ಅಮ್ಮಂದಿರ ದಿನ ಮತ್ತು ಅಪ್ಪಂದಿರ ದಿನ ಎಂಬ ಪದಗಳ ರೂಢಿಯನ್ನು ಬಳಕೆಗೆ ತಂದಿರಬಹುದೆಂದರೆ ಪಾಶ್ಚಿಮಾತ್ಯರು ಅವರ ಹೆತ್ತವರನ್ನು ವೃದ್ಧಾಶ್ರಮದ ಅತಿಥಿಗಳನ್ನಾಗಿ ಕಳಿಸಿಕೊಟ್ಟಾಗ ಅವರನ್ನು ಮತ್ತು ಅವರ ಯೋಗಕ್ಷೇಮ ವಿಚಾರಿಸಲಿಕ್ಕೆಂದು ನಿಗದಿ ಮಾಡಿಕೊಂಡ ದಿನಗಳೇ ಈ ಅಪ್ಪ ಮತ್ತು ಅಮ್ಮಂದಿರ ದಿನಾಚರಣೆಗಳೆಂಬ ಶಬ್ದಗಳ ವ್ಯಾಖ್ಯಾನವಾಗಿರಬಹುದೇ?

ನಾವು ನಮ್ಮ ಸಂಸ್ಕೃತಿಯಲ್ಲಿ, ಮನಸ್ಸಿನಲ್ಲಿ ಮತ್ತು ಬಳಕೆಯಲ್ಲಿ ಮಾತೃದೇವೋ ಭವ ಮತ್ತು ಪಿತೃದೇವೋ ಭವ ಎಂದು ಪ್ರತಿನಿತ್ಯ ಪೂಜನೀಯ ಭಾವದಿಂದ ನಡೆದುಕೊಳ್ಳುತ್ತಿರುವಾಗ ಈ ದಿನಾಚರಣೆಗಳ ಅಗತ್ಯ ಏನಿದೆ ಅನ್ನೋದು ನನಗೆ ಅರ್ಥವಾಗದ ಗೊಂದಲ.

ಹೆತ್ತವರನ್ನು ಒಂದೇ ಒಂದು ದಿನಕ್ಕೆ ಸೀಮಿತಗೊಳಿಸಿ ಬಹಿರಂಗವಾಗಿ ತೋರಿಕೆಯನ್ನು ವ್ಯಕ್ತಪಡಿಸಿ ಮರು ಕ್ಷಣದಿಂದ ಅವರನ್ನು ನಿರ್ಲಕ್ಷಿಸುವುದು, ಅವರು ನಮಗೆ ಜನ್ಮ ಕೊಟ್ಟಿದ್ದಕ್ಕೆ ಮಾಡುವ ಅವಮಾನವಾಗುತ್ತದೆ ಅಲ್ವಾ...?

ಬೇರೆಯವರು ಮಾಡಿರುವ ಅವೈಜ್ಞಾನಿಕ ಆಚರಣೆಗಳ ಅನುಕರಣೆ ಮಾಡುವುದಕ್ಕೆ ಹೋದರೆ ಅದು ನಮ್ಮನ್ನು ನಿರಾಸೆಗೆ ಒಳಪಡುವಂತೆ ಮಾಡುತ್ತದೆ....

ಅಮ್ಮಾ ಅಥವಾ ಅಪ್ಪ ಇಲ್ಲದವರು ಅವರು ನಮ್ಮೊಂದಿಗೆ ಇಲ್ಲಾ ಅಂತ ಅಂದುಕೊಳ್ಳುಹುದು ಮಾನಸಿಕ ಖಿನ್ನತೆ ಅನ್ನೋದು ನನ್ನ ಅಭಿಪ್ರಾಯ. ಅದರ ಬದಲು ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ವಾಪಸ್ಸು ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ಮಾನಸಿಕವಾಗಿ ಸದಾ ಅಪ್ಪ ಮತ್ತು ಅಮ್ಮನ ಜೊತೆಗೆ ಇರುವುದೇ ನಿಜವಾದ ಪ್ರೀತಿ ಮತ್ತು ಭಕ್ತಿ.

ಸದಾ ಮಾನಸಿಕವಾಗಿ ಅವರೊಟ್ಟಿಗಿದ್ದರೆ, ಆಗ ನಮ್ಮಷ್ಟು ಸುಖವಾಗಿ ಮತ್ತೊಬ್ಬರು ಇರುವುದಿಲ್ಲ.

ಅವರನ್ನು ಕಳೆದುಕೊಂಡೆವು ಎಂಬ ಭಾವದಿಂದ ಬೇಜಾರಾಗಾದೆ ಸದಾ ಖುಷಿಯಿಂದಿರಬೇಕಾಗಿದ್ದು ನಮ್ಮ ಆದ್ಯ ಕರ್ತವ್ಯವೂ ಸಹ ಹೌದು. ಯಾಕೆಂದರೆ ನಮ್ಮ ಹೆತ್ತವರು ಯಾವತ್ತೂ ನಮ್ಮ ದುಃಖವನ್ನು ಬಯಸಿದವರಲ್ಲ. ಅವರಿಗೆ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳು ಖುಷಿಯಾಗಿರಲಿ ಅಂತ ಬಸಿದವರ ಎದುರು, ತಂದೆ ಮತ್ತು ತಾಯಂದಿರ ದಿನದಂದು ಯಾರೋ ಕೆಲವರು ಹೆತ್ತವರೊಂದಿಗಿನ ಆಟದ ವಿಚಾರ ಹೇಳಿದಾಗ ಆಗಲಿ ಅಥವಾ ಅವರೊಂದಿಗಿನ ಫೋಟೋ ನೋಡಿದಾಗಾಗಲಿ ಬೇಸರಿಸಿ ದುಃಖಿಸಿದರೆ ಅದು ನಾವು ನಮ್ಮ ಹೆತ್ತವರಿಗೆ ಮಾಡುವ ದ್ರೋಹ ಎನ್ನುವುದು ನನ್ನ ಭಾವನೆ.

ಹೀಗಾಗಿ ಹೆತ್ತವರೊಂದಿಗೆ ನಿಮ್ಮ ಮನಸಿನ ಬಾಂಧವ್ಯವನ್ನು ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಅವರ ವಾತ್ಸಲ್ಯವನ್ನು ಪ್ರತಿ ಕ್ಷಣಗಳ ಹಬ್ಬವನ್ನಾಗಿ ಆಚರಿಸುವಂತಾಗಲಿ ಎಂದು ಆಶಿಸುತ್ತೇನೆ.

Thursday, April 30, 2020

ಮಾರ್ಮಿಕ ಸೂಚನೆ

ಅರಿವಾಗದು ಜೀವಿಗೆ
ಕಣ್ಣೆದುರಿಗೆಲ್ಲಾ ತೆರೆದಿದ್ದರೂ
ಮಾರ್ಮಿಕವೆಲ್ಲಾ ನಿನ್ನ ಸೂಚನೆ
ತಿಳಿಯೆ ಜ್ಞಾನದಿಂದ

ಮಾತನಾಡದ ಹಣತೆ
ತಿಳಿಸುವುದು ಪರಿಚಯವ
ಮೂಲ ಮುಗಿಯುವ ತನಕ
ಚೆಲ್ಲುವ ಬೆಳಕಿನಿಂದ //೧//

ತಡೆಯಿರದ ರಶ್ಮಿಗೆ
ಹೊಲಸಾಗದ ಗುಣವುಂಟು
ಕೊಳಕು ಜಾಗಕೆ ಹೋದರೂ
ಸ್ವಚ್ಛ ಕಿರಣಗಳಿಂದ //೨//

ಹಣತೆ ಪ್ರಕಾಶಿಸಿದಂತೆ
ಸೂಕ್ಷ್ಮತೆಯ ಉಣಬಡಿಸು
ದೀಪದ ಪ್ರತಿರೂಪ ದೇವನು
ಕ್ಷಣ ಕ್ಷಣವು ನೀಡುವ ಸ್ಪೂರ್ತಿಯನು //೩//

Tuesday, April 28, 2020

ಸುರಿದೆ ಸಾಲ

ಬರೆದೆ ನಾನು ಹಲವು ಸಾಲ
ನಿನ್ನ ಜೊತೆಗೆ ಸಾಗುತ
ಸುರಿದೆ ನೀನು ಒಲವ ಸಾಲ
ಪ್ರೀತಿ ಬದುಕ ತೇಯುತ //ಪ//

ನಮ್ಮ ಬಾಳಿನ ನೀರಿನಲ್ಲಿ
ಕಣ್ಣ ಸೆಳೆಯುವ ಬಣ್ಣವು
ಹರಿವ ಕ್ಷಣದ ಹೊತ್ತಿನಲ್ಲಿ
ತಡೆದು ಹಿಡಿಯುವ ಮಣ್ಣದು //೧//

ಪ್ರೀತಿ ಕಾಣಿಕೆ ಸೆರಗಿನಲ್ಲಿ
ಕೊಂಚ ಕಾಡುವ ಪ್ರೇಮಯು
ನೀತಿ ವಾಡಿಕೆ ಬಗಲಿನಲ್ಲಿ
ಮಿಂಚ ಸೆಳೆತಕೆ ಸೋಲದು //೨//

ಬರೆದೆ ಸಾಲನು ಹೊಸ್ತಿಲಲ್ಲಿ
ಪಯಣಕೊಂದೆ ಗೀತವು
ಸುರಿವ ಮಳೆಯ ನಾದವಲ್ಲಿ
ನಡೆವ ಬಾಳಿಗೆ ಗಾನವು //೩//