Thursday, October 3, 2019

ಕಾವ್ಯ ಗಾನ

ಕಾವ್ಯ ರಾಗದ ಲಯಕೆ
ಬಾವ ಜೀವದ ಬೆಸುಗೆ
ಕವಿಯ ಆಶಯಕೊಂದು
ರೂಪ ನೀಡುವುದು

ಗಾನ ತಾಳದ ಸ್ವರಕೆ
ಶ್ರೋತೃ ಮನ ತಲುಪುವುದು
ಗೀತೆ ಬರೆದ ಜನಕೆ
ತೃಪ್ತ ಹೆಮ್ಮೆ ಹೆಚ್ಚುವುದು

ದನಿಯ ಇಂಪು ಗಾಳಿಯಲ್ಲಿ
ನುಡಿಯ ಕುಣಿತ ಸ್ವರಗಳಲ್ಲಿ
ಕೇಳಿ ತಂಪು ಕಿವಿಗಳಲ್ಲಿ
ಹರಡಿತು ಕಂಪು ಬರಹದಲ್ಲಿ

ಈಜಿ ಮುಳುಗಲು ಪಾತಾಳಕೆ
ಅದುವೆ ರಾಗದ ಅವರೋಹಣ
ಗಿರಿಯ ಏರಿ ಗುರಿಯ ತಲುಪಲು
ಅದಕೆ ಹೆಸರು ಆರೋಹಣ

ಬೇಡಿ ಬಯಸಿ ಸಿದ್ಧಿಯಾದರೆ
ಇನಿತು ದೊರೆತ ಖುಷಿಯದು
ತೋಡಿ ಹರಿಸಿ ವೃದ್ಧಿಯಾದರೆ
ಗರ್ವ ತೊರೆದು ನಿಲ್ಲುವುದು

ಹತ್ತಿ ಮುಳುಗುವ ಜನರು ವಿರಳ
ಸಾಧನೆ ತುದಿಯ ಹತ್ತುವುದು ಸರಳ
ನಿರತವಾದರೆ ಭಕ್ತಿ ತಪವಿದು
ಅಭಿಮಾನವು ಸುತ್ತಿ ಬರುವುದು

Friday, September 27, 2019

ಮಗಳು ಧೃತಿ

ಆ ಪುಟ್ಟ ಕೈಯಲ್ಲಿ
ಚಿವುಟಾಡುವಾಗ
ಮನದಾಳದ ಖುಷಿಯೆಲ್ಲಾ
ಹೊರ ಹೊಮ್ಮಿತಾಗ

ಮೃದುವಾದ ಕಾಲಲ್ಲಿ
ನೀ ಒದೆಯುವಾಗ
ಎದೆಯಾಳದ ನಗುವೆಲ್ಲಾ
ಹೊರ ಚಿಮ್ಮಿತಾಗ

ನೀನೆ ನನ್ನ ಜಗವು
ನಿನ್ನಿಂದಲೆ ಹೊಸ ಯುಗವು
ಆ ತುಂಟ ನಗುವಲ್ಲಿ
ಮರೆವುದು ಎಲ್ಲಾ ನೋವು

ನವ ಮಾಸ ಕಳೆಯಿತು
ತಪಸಿನ ದ್ಯಾನದ ರೀತಿಯಲಿ
ತಂಪಾದ ಗಾಳಿ ಬೀಸಿತು
ಜನುಮದ ಸುದ್ದಿ ಕರೆಯಲ್ಲಿ

ಬಯಸಿದ ಪುಟಾಣಿ ಮುದ್ದು
ಅಳಿಸದೆ ಅಳುವ ನಿನ್ನ ಸದ್ದು
ಹೆರಿಗೆಯ ನೋವಲು ನಗುವ
ಕಂಡೆ ತಾಯಿ ಮೊಗದ ಬಾವ

ಭಯದಲಿ ಕಳೆದೆವು ನಿರತ
ದೇವರೆ ನೀನೆ ಗತಿಯೆನ್ನುತ
ಹೊಸತಿಗೆ ಕಾಯುತ ಸತಿ ಪತಿ
ಕ್ಷೇಮದಿ ಜನಿಸಲು ಮಗಳು ಧೃತಿ

Monday, September 23, 2019

ಬೇಸರದ ಬಾವ

ನನ್ನ ಕೊಳಲಿನ ನಾದಕ್ಕೊಂದು
ಸೋತ ಮೊಗ್ಗು ಅರಳಿದೆ
ಅವಳು ಕರೆಯಲು ನಾನು ಬರುವೆನು
ಕೃಷ್ಣಾ ಎಂದು ಧ್ಯಾನದಿ....

ಮಡದಿಯರೆಷ್ಟು ಇದ್ದರೇನು
ಪ್ರೀತಿ ಸೆಳೆತ ನಿನ್ನದು
ಭಕ್ತರೆಷ್ಟು ಬಂದರೇನು
ಭಕ್ತಿ ಮೊರೆತ ಬಂಧವು

ಹರಿವ ನದಿಯ ತೀರದಲ್ಲಿ
ಜೋತು ಮರದ ಟೊಂಗೆಗೊಂದು
ಕಟ್ಟಿ ತೂಗುವೆ ಉಯ್ಯಾಲೆಯ
ಮುದದ ಮರಕೆ ಬುನಾದಿಯ

ಕಾದು ಕುಳಿತಿಹ ಮನಕೆ ಎಂದು
ಬೇಸರದ ಭಾವಕೆ ನಾಮ ರಾಧೆ
ಅರಿತು ಬಾಳುವ ಜೋಡಿಗೆಂದು
ಸದೃಶವಾಗುವ ಯುಗ್ಮ ನಾವು

Wednesday, September 4, 2019

ಶ್ರಾವಣ ಶೃಂಗಾರ

ಶೃಂಗಾರಕೆ ಮೀಸಲದುವೆ
ಶ್ರಾವಣ ಮಾಸ
ವಿಷಯವನು ವಿನಿಮಯಿಸೆ
ಹೊಂದಾಣಿಕೆ ರಸ

ಶ್ರಾವಣದಲೆ ಬರುವುದುಂಟು
ಸೋಣೆ ಸಂಕ್ರಾಂತಿ
ತೋಟಗಳಲಿ ಊಳುವುದುಂಟು
ಮಾಡುತ ಸಂ ಕ್ರಾಂತಿ

ಶ್ರಾವಣಕು ಶೃಂಗಾರಕು
ಇರುವುದು ಆ ನಂಟು
ಆಷಾಡದ ವಿರಹಗಳನು
ಅಳಿಸುವುದು ಈ ಅಂಟು

ಕಾಮಕಾಗಿ ಹಪಹಪಿಸುವ
ಜನಕೆ ಹೇಳುವ ಮಾತುಂಟು
ಆಡಬೇಡ ಸೋಣೆ ಕುನ್ನಿಯ ಹಾಗೆ
ಹಾಕುವ ಮೊದಲು ಮೂರುಗಂಟು

ಆಷಾಡಲಿ ದೂರಿರುವ
ದಂಪತಿಗಳಿಗೆ ಮೀಸಲಾದ
ಶ್ರಾವಣದಲಿ ಜೊತೆಯಾಗುವ
ಜೋಡಿಗಳ ಶೃಂಗಾರದ ನಾದ

ಅನುರಾಗಕೆ ಮುಡಿಪಾಗಿದೆ
ಜನರ ಮಾತಿನಲಿ ಉಳಿದೋಗಿದೆ
ಹಾಡಿನಲೂ ಪದವಾಗಿದೆ
ಶ್ರಾವಣವೆಂದರೆ ಶೃಂಗಾರವಾಗಿದೆ

Saturday, August 24, 2019

ಬತ್ತಿ ಬದುಕು

ದೀಪ ನೀನು
ತೈಲ ನಾನು
ಬತ್ತಿಯಂತೆ ಬದುಕಿದು

ದೀಪ ಉರಿಯೆ
ತೈಲ ಸುರಿಯೆ
ಹಣತೆಯಂತೆ ಬಾಳಿದು

ತೈಲ ವಿರದ
ಬತ್ತಿ ವಿರಹಿಯು
ಬಹುಕಾಲ ಬೆಳಗದು

ಬದುಕು ಎಂದರೆ
ನಮ್ಮ ಸಂಗವು
ಸಾಮರಸ್ಯ ಸೊಗಸಿದು

ನೀನು ಮಿನುಗಲು
ನಾನು ಸವೆಯುವೆ
ಹೂವಿನ ಜೊತೆ
ದಾರದಂತೆ ಮುಡಿಗೇರುವೆ

ನಾವು ಬೆಳೆಯಲು
ನೋವು ಅಳಿಯಲು
ಬರೆದ ಕತೆ
ಅಳಿಯದಂತೆ ಶಿಲೆಯಾಗು

ಸೌಮ್ಯಾಂದ

ಅದೋ ನೋಡು
ನಾಗರ ಜಡೆಯವಳು
ಉದ್ದ ಲಂಗವ ಧರಿಸಿ
ಎತ್ತ ಹೊರಟಿಹಳೋ...

ಮುಡಿಯಲ್ಲಿ ಕಂಡ
ಮಲ್ಲಿಗೆ ಹೂವಿನ ಕಂಪು
ಮನದೊಳಗೆ ಗುಡಿ ಮಾಡಿ
ಮರುಳನಾಗಿಸಿಹುದು

ಹಣೆ ಅಗಲವಾಗಿಹುದು
ಸಿಂಧೂರ ನಗುತಿಹುದು
ಕಣ್ಣ ಮೇಲಿನ ಹುಬ್ಬು
ಕಣ್ಮನವ ಸೆಳೆದಿಹುದು

ಮುಖದಲ್ಲಿನ ಮುಗ್ಧತೆಯು
ಮನೆಯಲ್ಲಿ ನೆಲೆಸಿದರೆ
ಮನದೊಳಗೆ ನೆಮ್ಮದಿಯಿರಲು
ಮನ್ಮಥನ ಮಣಿಸಿವೆನು

ಸ್ಪಷ್ಟ ಸಂದೇಶ ಬರದಿರಲು
ಕಷ್ಟ ಕಾರ್ಪಣ್ಯ ಬದಿಗಿರಲು
ಕಾಣುವುದೇ ಅವಳಂದಕೆ
ನನ್ನ ಮನದ ಮನವಿ

ರೂಪದಲಿ ಲಕ್ಷ್ಮಿ ದೇವಿಯು
ನಡಿತೆಯಲಿ ಜಾನಕಿಯು
ರಾಗದಲಿ ಶಾರದೆಯು
ರೌದ್ರದಲಿ ಮಹಾದುರ್ಗಿಯು

ಇವಳೆ ಸಿಗಬಹುದೇ
ಬಾಳಿನಲಿ ಹೆಜ್ಜೆಯಿಡಲು
ಸೌಮ್ಯಾಂದಕೆ ಸೋತಿರಲು
ಬಯಕೆ ಬಲಿತಿಹುದು

Thursday, August 15, 2019

ಎಲ್ಲೋ ಮಳೆ

ಎಲ್ಲೋ ಮಳೆಯು
ಇನ್ನೆಲ್ಲೋ ಹೊಳೆಯು
ಇದುವೆ ಜೀವನ ಗಾಥೆಯು
ಮಹಾ ಮಳೆಗೆ
ಉತ್ತರ ತತ್ತರ
ಮಲೆನಾಡ ಅಳಲಿಗೆ
ಕರಾವಳಿ ಕಂಪನ
ಎಲ್ಲಿಂದ ಎಲ್ಲಿಗೋ
ಪ್ರವಾಹದ ಬಂಧನ

ಗುರುತಿನ ಸೂಚಕ
ಮನುಜನ ಮುಖವಿದು
ಉತ್ತರ ಎತ್ತರ
ಗಮನವ ಸೆಳವುದು
ನೆರವಿನ ಆದ್ಯತೆ ಪಡೆವುದು

ಈಶಾನ್ಯ ಕಡಲಿನ ಕನ್ನಡ
ನರಳಿದೆ ತರತಮ ಧೋರಣೆಗೆ
ಸಿಗದು ಟಿ.ಆರ್.ಪಿ ಮಾಧ್ಯಮಕೆ
ರಾಜಕೀಯ ಲಾಭವಿಲ್ಲ ಪಕ್ಷಗಳಿಗೆ
ನಿರ್ಲಕ್ಷದ ಗೂಡಾಗಿದೆ ಕರಾವಳಿ

ಬೆಟ್ಟ ಗುಡ್ಡಗಳು ಎರಗಿದೆ
ರಾಜ್ಯ ಸರ್ಕಾರವು ಮಲಗಿದೆ
ಸುರಿದ ನೀರು ಹರಡಿ ತುಂಬಿದೆ
ರಸ್ತೆ ಇಕ್ಕೆಲಗಳು ಬಿರಿದಿದೆ
ಪ್ರಜೆಗಳ ಬದುಕಿದು ಸೊರಗಿದೆ