Saturday, August 24, 2019

ಬತ್ತಿ ಬದುಕು

ದೀಪ ನೀನು
ತೈಲ ನಾನು
ಬತ್ತಿಯಂತೆ ಬದುಕಿದು

ದೀಪ ಉರಿಯೆ
ತೈಲ ಸುರಿಯೆ
ಹಣತೆಯಂತೆ ಬಾಳಿದು

ತೈಲ ವಿರದ
ಬತ್ತಿ ವಿರಹಿಯು
ಬಹುಕಾಲ ಬೆಳಗದು

ಬದುಕು ಎಂದರೆ
ನಮ್ಮ ಸಂಗವು
ಸಾಮರಸ್ಯ ಸೊಗಸಿದು

ನೀನು ಮಿನುಗಲು
ನಾನು ಸವೆಯುವೆ
ಹೂವಿನ ಜೊತೆ
ದಾರದಂತೆ ಮುಡಿಗೇರುವೆ

ನಾವು ಬೆಳೆಯಲು
ನೋವು ಅಳಿಯಲು
ಬರೆದ ಕತೆ
ಅಳಿಯದಂತೆ ಶಿಲೆಯಾಗು

ಸೌಮ್ಯಾಂದ

ಅದೋ ನೋಡು
ನಾಗರ ಜಡೆಯವಳು
ಉದ್ದ ಲಂಗವ ಧರಿಸಿ
ಎತ್ತ ಹೊರಟಿಹಳೋ...

ಮುಡಿಯಲ್ಲಿ ಕಂಡ
ಮಲ್ಲಿಗೆ ಹೂವಿನ ಕಂಪು
ಮನದೊಳಗೆ ಗುಡಿ ಮಾಡಿ
ಮರುಳನಾಗಿಸಿಹುದು

ಹಣೆ ಅಗಲವಾಗಿಹುದು
ಸಿಂಧೂರ ನಗುತಿಹುದು
ಕಣ್ಣ ಮೇಲಿನ ಹುಬ್ಬು
ಕಣ್ಮನವ ಸೆಳೆದಿಹುದು

ಮುಖದಲ್ಲಿನ ಮುಗ್ಧತೆಯು
ಮನೆಯಲ್ಲಿ ನೆಲೆಸಿದರೆ
ಮನದೊಳಗೆ ನೆಮ್ಮದಿಯಿರಲು
ಮನ್ಮಥನ ಮಣಿಸಿವೆನು

ಸ್ಪಷ್ಟ ಸಂದೇಶ ಬರದಿರಲು
ಕಷ್ಟ ಕಾರ್ಪಣ್ಯ ಬದಿಗಿರಲು
ಕಾಣುವುದೇ ಅವಳಂದಕೆ
ನನ್ನ ಮನದ ಮನವಿ

ರೂಪದಲಿ ಲಕ್ಷ್ಮಿ ದೇವಿಯು
ನಡಿತೆಯಲಿ ಜಾನಕಿಯು
ರಾಗದಲಿ ಶಾರದೆಯು
ರೌದ್ರದಲಿ ಮಹಾದುರ್ಗಿಯು

ಇವಳೆ ಸಿಗಬಹುದೇ
ಬಾಳಿನಲಿ ಹೆಜ್ಜೆಯಿಡಲು
ಸೌಮ್ಯಾಂದಕೆ ಸೋತಿರಲು
ಬಯಕೆ ಬಲಿತಿಹುದು

Thursday, August 15, 2019

ಎಲ್ಲೋ ಮಳೆ

ಎಲ್ಲೋ ಮಳೆಯು
ಇನ್ನೆಲ್ಲೋ ಹೊಳೆಯು
ಇದುವೆ ಜೀವನ ಗಾಥೆಯು
ಮಹಾ ಮಳೆಗೆ
ಉತ್ತರ ತತ್ತರ
ಮಲೆನಾಡ ಅಳಲಿಗೆ
ಕರಾವಳಿ ಕಂಪನ
ಎಲ್ಲಿಂದ ಎಲ್ಲಿಗೋ
ಪ್ರವಾಹದ ಬಂಧನ

ಗುರುತಿನ ಸೂಚಕ
ಮನುಜನ ಮುಖವಿದು
ಉತ್ತರ ಎತ್ತರ
ಗಮನವ ಸೆಳವುದು
ನೆರವಿನ ಆದ್ಯತೆ ಪಡೆವುದು

ಈಶಾನ್ಯ ಕಡಲಿನ ಕನ್ನಡ
ನರಳಿದೆ ತರತಮ ಧೋರಣೆಗೆ
ಸಿಗದು ಟಿ.ಆರ್.ಪಿ ಮಾಧ್ಯಮಕೆ
ರಾಜಕೀಯ ಲಾಭವಿಲ್ಲ ಪಕ್ಷಗಳಿಗೆ
ನಿರ್ಲಕ್ಷದ ಗೂಡಾಗಿದೆ ಕರಾವಳಿ

ಬೆಟ್ಟ ಗುಡ್ಡಗಳು ಎರಗಿದೆ
ರಾಜ್ಯ ಸರ್ಕಾರವು ಮಲಗಿದೆ
ಸುರಿದ ನೀರು ಹರಡಿ ತುಂಬಿದೆ
ರಸ್ತೆ ಇಕ್ಕೆಲಗಳು ಬಿರಿದಿದೆ
ಪ್ರಜೆಗಳ ಬದುಕಿದು ಸೊರಗಿದೆ