ನಮ್ಮ ಸುತ್ತಮುತ್ತಲು ಕನ್ನಡದ ಉಳಿವಿಗಾಗಿ ಹೋರಾಟವೆಂಬ ದೊಡ್ಡ ದೊಡ್ಡ ಫಲಕಗಳನ್ನು ನೋಡೂತ್ತೇವೆಯೇ ಹೊರತು ಅದರ ಕಾರ್ಯಾಚರಣೆಗಳನ್ನು ಕಾಣುವುದು ಬಹಳ ವಿರಹ. ನಾವು ನಮ್ಮ ಭಾಷೆ ಉಳಿಯಬೇಕಂದರೆ ಏನು ಮಾಡಬೇಕು? ಕಟ್ಟುನಿಟ್ಟಾದ ಕಾಯಿದೆಯನ್ನು ಸರಕಾರ ಜಾರಿಗೆ ತರಬೇಕೆ? ಮಕ್ಕಳು ಕನ್ನಡದಲ್ಲಿ ಕಡ್ಡಾಯವಾಗಿ ಓದುವಂತೆ ಮಾಡಬೇಕು? ಇದಕ್ಕೆಲ್ಲ ಉತ್ತರ ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡ ಮಾತ್ರಕ್ಕೆ ಉತ್ತರ ಸಿಗದ ವಿಷಯವಾಗಿದೆ. ಇವಕ್ಕೆಲ್ಲ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ "ಇಚ್ಛಾಶಕ್ತಿ" ಇರಬೇಕಾಗಿದೆ. ಕನ್ನಡ ಉಳಿಸಿ ಎಂದು ಬರಿ ಹೇಳುವುದರಿಂದಾಗಲಿ, ಕೂಗಾಡುವುದರಿಂದಾಗಲಿ ಅಥವಾ ಹೋರಾಡುವುದರಿಂದಾಗಲಿ ಕನ್ನಡ ಉಳಿಯುತ್ತದೆ ಎನ್ನುವ ಭ್ರಮೆಯನ್ನು ಬಿಟ್ಟು ವಾಸ್ತವಿಕತೆಯನ್ನು ಅರಿಯುವುದು ಒಳ್ಳೆಯದು.
ಏನೆಲ್ಲಾ ಮಾಡುವುದರಿಂದ ನಮ್ಮ ಕನ್ನಡದ ಉಳಿವಿಗೆ ನಾವು ಕಾಣಿಕೆಯನ್ನು ಕೊಡಬಹುದು? ಎಂಬ ಚಿಕ್ಕ ಚಿಕ್ಕ ವಿಷಯವಾದರೂ ಜವಾಬ್ಧಾರಿಯುತ ಅಂಶಗಳತ್ತ ನಮ್ಮ ಗಮನವನ್ನು ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿಯತ್ತ ನಾವಿಂದು ಬಂದು ನಿಂತಿದ್ದೇವೆಂದರೆ ಅದು ವಿಷಾದನೀಯ ಸಂಗತಿ, ಅಲ್ವೇ? ಕೆಲವು ಸೂಕ್ಷ್ಮ ಸಂಗತಿಗಳತ್ತ ನಮ್ಮ ಕಣ್ಣು ಮಿಟಕಾಯಿಸಿದಾಗ ನಮಗೆ ಹಲವು ಅಂಶಗಳು ಗೋಚರಿಸುತ್ತವೆ.
ಜವಾಬ್ಧಾರಿಯುತ ಸ್ಥಾನದಲ್ಲಿರು ಪ್ರಸಿದ್ಧ ವ್ಯಕ್ತಿಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸ್ವಚ್ಚಂದವಾಗಿ ಕನ್ನಡವನ್ನು ಮಾತಾಡಬೇಕಿದೆ. ಪ್ರಸಿದ್ಧ ವ್ಯಕ್ತಿಗಳೆಂದರೆ ಸಿನಿಮಾದ ನಟ ನಟಿಯರು, ರಾಜಕಾರಣಿಗಳು, ಬುದ್ಧಿಜೀವಿಗಳು, ಸಂಘಟನೆಯ ಮುಖ್ಯಸ್ಥರು, ಅಭಿಯಂತ್ರಕರು (Engineers), ವೈದ್ಯರುಗಳು, ಶಿಕ್ಷಕರು, ಪ್ರಾಧ್ಯಾಪಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅತಿ ಮುಖ್ಯವಾಗಿ ಮಾಧ್ಯಮ ಮಿತ್ರರು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸ್ಥಾನದಲ್ಲಿರುವ ಮಹನೀಯರು ಹಾಗು ತಾಯಂದಿರು ಕನ್ನಡವನ್ನು ಸ್ವಚ್ಚಂದವಾಗಿ ಮಾತನಾಡಿದರೆ ಅದು ಸಾಮಾನ್ಯ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವುದು ಖಂಡಿತ. ಎಲ್ಲದಕ್ಕಿಂತ ಹೆಚ್ಚಿನದಾಗಿ ಸಿನಿಮಾ ನಟ ನಟಿಯರು ತಮ್ಮ ತಮ್ಮ ಸ್ವಪ್ರತಿಷ್ಠೆಯ ಮೆರೆಸುವುದನ್ನು ಬಿಟ್ಟು ನಿರಾಯಾಸವಾಗಿ ಆಂಗ್ಲ ಭಾಷೆಯ ಹಂಗಿಲ್ಲದೆ, ಒಂದೇ ಒಂದು ಆಂಗ್ಲ ಭಾಷೆಯನ್ನು ಬಳಸದೆ ಮಾತನಾಡುವುದರಿಂದ ಅದು ಅವರನ್ನು ನೋಡುವ, ಹಿಂಬಾಲಿಸುವ ಅವರವರ ಅಭಿಮಾನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕನ್ನಡದ ಉಳಿವಿಗೆ ಸಹಕಾರಿಯಾಗುತ್ತದೆ.
ಅದಲ್ಲದೆ ಇಂದಿನ ದಿನಗಳಲ್ಲಿ ಅತಿ ಹೆಚ್ಚಿನದಾಗಿ ಪ್ರಚಲಿತದಲ್ಲಿರುವ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಸಡೆಸುವ ಸಂಭಾಷಣೆಯನ್ನು ಕನ್ನಡದಲ್ಲಿ ಸಡೆಸಬೇಕಾಗಿದೆ. ಸಂಭಾಷಣೆ ಹಾಗಿರಲಿ ಮಧ್ಯದಲ್ಲಿ ಬರುವ ಗೀತೆಗಳ ಸಾಹಿತ್ಯದಲ್ಲೂ ಆಂಗ್ಲ ಭಾಷೆಯನ್ನು ಬಳಸುತ್ತಿರುವುದನ್ನು ನಿಲ್ಲಿಸಬೇಕಾಗಿದೆ. ಪ್ರತಿಯೊಂದು ಚಿತ್ರದ ಶೀರ್ಷಿಕೆಯನ್ನು ಕನ್ನಡದಲ್ಲಿಯೇ ಇರುವಂತೆ ನಿಗಾ ವಹಿಸಬೇಕಾಗಿದೆ. ನಡೆಸುವ ಸಂಭಾಷಣೆಯಲ್ಲಿ ಕನ್ನಡದ ಶಬ್ಧಗಳನ್ನು ಬಳಸುವುದರಿಂದ ಅದು ನೋಡುವ ಜನರ ಮೇಲೆ ಪರಿನಾಮ ಬೀರುತ್ತದೆ. ಇದನ್ನು ಯಾಕೆ ಒತ್ತು ಕೊಟ್ಟು ಹೇಳುತ್ತೇನೆ ಎಂದರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುತ್ತೇವೆ. ಅಲ್ಲದೆ ಒಂದು ಭಾಷೆ, ಸಂಸ್ಕೃತಿ ಉಳಿಯಬೇಕೆಂದರೆ ಅದು ಸಹ ಮಹಿಳೆಯರಿಂದಾಗಿಯೇ ಎನ್ನುತ್ತೇವೆ. ಹಾಗಾಗಿ ಧಾರಾವಾಹಿಗಳನ್ನು ನೋಡುವುದು ಹೆಚ್ಚಿನದಾಗಿ ಮಹಿಳೆಯರಾಗಿರುವುದರಿಂದ ಧಾರಾವಾಹಿ ಮತ್ತು ಚಲನಚಿತ್ರದ ಸಂಭಾಷೆಣೆ ಮತ್ತು ಸಾಹಿತ್ಯಗಳಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಬಳಸಲೇ ಬೇಕಾಗಿದೆ.
ಕನ್ನಡದ ಉಳಿವಿಗಾಗಿ ಹೋರಾಡುತ್ತೇವೆ ಎನ್ನುವ ಚಲನಚಿತ್ರ ರಂಗದ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಂದು ವಿನಂತಿಯೇನೆಂದರೆ ದಯವಿಟ್ಟು ಆಂಗ್ಲಭಾಷೆಯಲ್ಲಿ ಮಾತಾಡುವ ಪ್ರತಿಷ್ಠೆಯನ್ನು ಬಿಟ್ಟು ಮೊದಲು ಸರಾಗವಾಗಿ ಕನ್ನಡವನ್ನು ಮಾತನಾಡಿ ನಂತರ ಅವಶ್ಯಕತೆಯಿದ್ದರೆ ಹೋರಾಟದ ದಾರಿ ನೋಡಿ ಎಂದೇಳುತ್ತ ಮನವರಿಕೆ ಮಾಡಿಕೊಡಬೇಕಾಗಿದೆ. ಉಳಿದ ಆದರ್ಶ ವ್ಯಕ್ತಿಗಳೆಂದು ಗುರುತಿಸಲ್ಪಡುವ ಹಿರಿಯರಾದ ಶಿಕ್ಷಕರು, ಸಮಾಜಮುಖಿ ವ್ಯಕ್ತಿಗಳು, ಕವಿಗಳು, ಬರಹಗಾರರು, ಮೌಲ್ಯಯುತ ಸಂದೇಶ ಹೇಳುವ ಸಂಪನ್ಮೂಲ ವ್ಯಕ್ತಿಗಳು ಹೀಗೆ ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ತಮ್ಮ ಜವಾಬ್ಧಾರಿಗಳನ್ನು ಅರಿತು ವ್ಯವಹರಿಸುವ ಸಂದರ್ಭದಲ್ಲಿ ಕನ್ನಡವನ್ನೇ ಬಳಸುವುದರಿಂದ ಜನರಲ್ಲಿ ಕನ್ನಡವನ್ನೇ ಬಳಸಬೇಕೆಂಬ ಸ್ವೇಚ್ಛೆ ಜಾಸ್ತಿಯಾಗುತ್ತದೆ ಎಂಬ ಆಶಾಭಾವ ನಮ್ಮದಾಗಿದೆ.
ಅಲ್ಲದೇ ಅಂತರ್ಜಾಲ ತಾಣಗಳಲ್ಲಿ ಬರೆಯುವ ಹತ್ತು ಹಲವು ಬರಹಗಾರರು ಮತ್ತು ಹವ್ಯಾಸಿ ಬರಹಗಾರರುಗಳೇ, ದಯವಿಟ್ಟು ತಮ್ಮ ಬರಹಗಳಲ್ಲಿ ಕನ್ನಡವನ್ನೇ ಬಳಸಿ ಹೊರತು ಕಂಗ್ಲೀಷನ್ನು ಬರೆಯದೆ ಓದುಗರಿಗೆ ಕನ್ನಡದ ಮೇಲೆ ಬೇಸರ ಮೂಡುವ ಹಾಗೆ ಬರೆಯಬೇಡಿ. ಕನ್ನಡದ ಉಳಿವಿಗಾಗಿ ನಾವು ನಮ್ಮ ಚಿಕ್ಕ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿಕೊಂಡು ಬರೆಯುವ ನಿಮ್ಮ ಬರಹ ನಿಮಗರಿಯದ ರೀತಿಯಲ್ಲಿ ಬರಹವನ್ನು ಓದುವವರಿಗೆ ಕನ್ನಡದ ಮೇಲೆ ಜಿಗುಪ್ಸೆ ಮೂಡದಂತಾಗದಿರದಂತೆ ಎಚ್ಚರವಹಿಸಿ. ಜಾಲತಾಣಗಳಲ್ಲಿ ಬಿತ್ತರಿಸುವ ಹಲವು ಬರಹಗಳಿಗೆ ನಿಮ್ಮದೇ ವ್ಯಾಖ್ಯಾನವನ್ನು ಮಾಡುವಾಗಲೂ ಸಹ ಕನ್ನಡವನ್ನೇ ಬಳಸುವುದರಿಂದ ಯುವ ಜನತೆಯ ಮೇಲೆ ಕನ್ನಡದ ಬಗ್ಗೆ ಅಭಿಮಾನ ಮೂಡಲು ಸಹಕಾರಿಯಾಗುತ್ತದೆ.
ಹಾಗೆ ಅತ್ಯಂತ ಜವಾಬ್ಧಾರಿಯುತ ಸ್ಥಾನದಲ್ಲಿರುವುದು, ಜನಮಾನಸದಲ್ಲಿರುವುದು, ಜನರನ್ನು ಸೆಳೆಯುವುದು, ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆಂದರೆ ಅದು ದೂರದರ್ಶನದ ಮಾಧ್ಯಮಗಳು. ಹಾಗಾಗಿ ಕನ್ನಡದ ದೂರದರ್ಶನದ ಮಾಧ್ಯಮಗಳಾಗಿರಲಿ ಅಥವಾ ಪತ್ರಿಕೆಯ ಮಾಧ್ಯಮಗಳಾಗಿರಲಿ ತಮ್ಮ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಎಲ್ಲದಕ್ಕೂ ಕನ್ನಡ ಶಬ್ದವನ್ನೇ ಬಳಸಬೇಕಾಗಿದೆ. ತಾವು ಪ್ರಸಾರ ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಕನ್ನಡದಲ್ಲಿಯೇ ಶೀರ್ಷಿಕೆಯನ್ನು ನೀಡಬೇಕು. ಹಾಗೆ ನಡೆಸುವ ಚರ್ಚೆಗಳಲ್ಲಿ, ಓದುವ ವಾರ್ತೆಯಲ್ಲಿ, ಒಂದು ವಿಷಯದ ಬಗ್ಗೆ ವಿವರಿಸುವಾಗಲೂ ಸಹ ಕನ್ನಡದ ಶಬ್ಧಗಳನ್ನು ಬಳಸುವುದರಿಂದ ಅದನ್ನು ನೋಡುವ ಜನರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಪತ್ರಿಕಾ ಮಾಧ್ಯಮದವುರೂ ಸಹ ತಾವು ಬರೆಯುವ ಲೇಖನಗಳಲ್ಲಿ, ಸುದ್ದಿಗಳಲ್ಲಿ, ಪ್ರಕಟಿಸುವ ಹೆಚ್ಚುವರಿ ಪತ್ರಿಕೆಗಳಲ್ಲಿ ಕನ್ನಡದಲ್ಲಿಯೇ ಶೀರ್ಷಿಕೆಯನ್ನು ನೀಡುವುದರಿಂದ ಓದುವ ಜನ ಸಮಾನ್ಯರ ಮೇಲೆ ಕನ್ನಡವನ್ನೇ ಬಳಸಬೇಕೆಂಬ ಮನದಿಚ್ಛೆ ಮೂಡಲು ಸಾಧ್ಯವಾಗುತ್ತದೆ.
ನಾವು ಕನ್ನಡದ ದೂರದರ್ಶನ ಮಾಧ್ಯಮಗಳು, ಪತ್ರಿಕಾ ಮಾಧ್ಯಮಗಳು ಎಂಬ ಪ್ರಜ್ನೆಯಿಂದ ಕನ್ನಡದ ಉಳಿವಿಗೆ ಶ್ರಮಿಸಬೇಕಾಗಿದೆ. ಆಂಗ್ಲ ಭಾಷೆಯ ದುರ್ಮೋಹವನ್ನು ದೂರಾಗಿಸಿ ನಮ್ಮ ಕನ್ನಡದಲ್ಲಿಯೇ ಎಂತೆಂಥ ಚಂದದ ಶಬ್ಧಗಳಿವೆಯೆಂಬುದನ್ನು ಪರಿಚಯಿಸುವ ವಿಶೇಷವಾದ ದೃಢ ಸಂಕಲ್ಪ ಮತ್ತು ಕಾರ್ಯ ನೀವು ಮಾಡಿದರೆ ಚಂದ. ಬೇರೆಯವರ ಮೇಲೆ ಜವಾಬ್ಧಾರಿಗಳನ್ನು ಹೊರಿಸುವ ಬದಲು ಹೇಗೆ ತಪ್ಪಿತಸ್ಥರ ವಿರುದ್ಧ ನಿಮ್ಮ ದನಿಯೆತ್ತಿ ಅವರಿಗೆ ಶಿಕ್ಷೆಯಾಗುವಲ್ಲಿ ಮಹತ್ತರ ಪಾತ್ರವಹಿಸುತ್ತೀರೋ ಹಾಗೆ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿ ಕನ್ನಡದ ಉಳಿವಿಗೆ ಹೋರಾಡುವ ಕರಾಳ ದಿನಗಳು ಎದುರಾಗದಂತೆ ನೋಡಿಕೊಳ್ಳುವ ಮಹತ್ತರ ಕಾರ್ಯ ನಿಮ್ಮಿಂದಾಗಬೇಕಿದೆ. ನಂತರದಲ್ಲಿ ಕನ್ನಡದ ಶಾಲೆಗಳಲ್ಲಿ ಓದುವುದನ್ನು ಕಡ್ಡಾಯಗೊಳಿಸುವುದು ಮತ್ತೊಂದು ಎನ್ನುವುದನ್ನು ಮಾನ್ಯ ಸರಕಾರಕ್ಕೆ ಎಚ್ಚರಿಸಬೇಕಾಗಿದೆ. ನೀವುಗಳೇ ಕನ್ನಡದ ಒಳಿತಿಗೆ ಶ್ರಮಿಸದೆ ಸರಕಾರಗಳನ್ನು ದೂಷಿಸುವುದು ಸರಿಯಲ್ಲ ಅಲ್ಲವೇ? ಹಾಗಾಗಿ ಕನ್ನಡವನ್ನು ದಿನ ನಿತ್ಯದ ವ್ಯವಹಾರಗಳಲ್ಲಿ ಬಳಸಿ ಕನ್ನಡದ ಉಳಿವಿಗೆ ಹೋರಾಟ ಬೇಡವೆಂಬುದನ್ನು ಮನದಟ್ಟು ಮಾಡಿಕೊಡೋಣ.
ಇವರಿಷ್ಟಲ್ಲದೇ ಅತಿ ಮುಖ್ಯವಾಗಿ ಸಾರ್ವಜನಿಕ ವಾಹನದ (ಬಸ್) ನಿರ್ವಾಹಕರು, ಚಾಲಕರು, ಅಂಗಡಿಯವರು, ರಿಕ್ಷಾ ಚಾಲಕರು ಹೀಗೆ ಎಲ್ಲರೂ ಸಹ ತಾವು ನಡೆಸುವ ವ್ಯವಹಾರಗಳಲ್ಲಿ ಕನ್ನಡವನ್ನು ಮಾತನಾಡುವುದರಿಂದ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ದಿಟ್ಟ ಹೆಜ್ಜೆಯಿಡಬೇಕಾಗಿದೆ. ಇದರಿಂದಾಗಿ ದಿನನಿತ್ಯ ವ್ಯವಹರಿಸುವ ಅನ್ಯ ಭಾಷಿಕರಲ್ಲಿ ಕನ್ನಡವನ್ನು ಕಲಿಯಬೇಕೆಂಬ ಅನಿವಾರ್ಯತೆ ಬಂದು ಅವರು ಭಾಷೆಯನ್ನು ಕಲಿಯುವುದರಿಂದ ಕನ್ನಡ ಬೆಳೆಸುವಲ್ಲಿ ಒಂದು ಹೆಜ್ಜೆ ಮುಂದೆಯಿಟ್ಟಂತಾಗುತ್ತದೆ. ಮಕ್ಕಳಿಗೆ ಶಾಲೆಯ ಪಾಠ ಕಲಿಸುವ ಮತ್ತು ವಿಷಯ ಹೇಳಿಕೊಡುವ ಸಮಯವನ್ನು ಬಿಟ್ಟು ಉಳಿದ ಸಮಯದಲ್ಲಿ, ದಿನಚರಿಯ ಕೆಲಸದಲ್ಲಿ ಕನ್ನಡದಲ್ಲಿಯೇ ಪಾಲಕರು ಮಾತನಾಡಿದರೆ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಕನ್ನಡವು ಹೂವಾಗಿ ಅರಳುವುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸದಲ್ಲಿರಲಿ, ಎಷ್ಟೇ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿ, ಯಾವುದೇ ಪ್ರದೇಶದಲ್ಲಿರಲಿ ಜನರೊಂದಿಗೆ ವ್ಯವಹರಿಸುವಾಗ ಸ್ವಚ್ಚ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಉಳಿಸಿ ಎಂಬ ಹೋರಾಟದ ಕೂಗು ಕೇಳುವುದು ನಿಲ್ಲುತ್ತದೆ. ಬ್ರಿಟಿಷರು ಆಳಿದ್ದರಿಂದ ನಾವು ಕನ್ನಡ ಮಾತಾಡುವಾಗ ಅಂಗ್ಲ ಪದ ಬಳಕೆ ಬರುತ್ತದೆ ಎಂಬ ಫಲಾಯನವಾದವನ್ನು ಮಂಡಿಸುವ ಬದಲು ನಾವು ನಮ್ಮ ಭಾಷೆಯನ್ನು ಮಾತನಾಡಲು ನಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಕನ್ನಡ ಮಾತಾಡುತ್ತೇವೆಂದರೆ ಎಷ್ಟು ಚನ್ನ ಅಲ್ವೇ? ಹೀಗಾಗಿ ನಾವು ನಮ್ಮ ಭಾಷೆಯನ್ನು ಬೇರೆ ಭಾಷೆಯ ಹಂಗಿಲ್ಲದೆ ಸ್ವಚ್ಚಂದವಾಗಿ ಮಾತಾನಾಡ ಬೇಕು ಎನ್ನುವ ಸ್ವಾಭಿಮಾನ ಮೂಡಬೇಕಾಗಿದೆ.
ಕನ್ನಡ ಉಳಿಸಿಯೆಂದು ಕನ್ನಡದ ಬಾವುಟ ಹಿಡಿದು ರಸ್ತೆಯ ಮೇಲೆ ಕೂಗಾಡುವುದು, ಹೋರಾಡವುದು ಮತ್ತು ರಸ್ತೆ ತಡೆದು ದಟ್ಟ ಸಂಚಾರ ಸ್ಥಂಭನವನ್ನು ಉಂಟುಮಾಡಿ ಇತರರಿಗೆ ತೊಂದರೆ ಕೊಡುವ ಬದಲು ಕನ್ನಡದ ಉಳಿವಿಗೆ ಇರುವ ಉಪಾಯದ ಹಾದಿಯನ್ನು ತುಳಿದು ಮೂಲದಿಂದಲೇ ಗಟ್ಟಿಗೊಳಿಸಿದರೆ ಕಂಗ್ಲಿಷ್ ಅಡಗಿ ಕನ್ನಡದ ಸುವರ್ಣ ಯುಗ ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೆನಿಸುತ್ತಿದೆ.