Tuesday, January 22, 2019

ಪರ್ವಕಾಲ

ಆ ಸೂರ್ಯ ತೊರೆದ ಕಳ್ಳ ಹಾದಿಯ
ಈ ಭೂಮಿ ಕ್ರಮಿಸಲು ಸರಿ ದಾರಿಯ
ಹಗಲೆಂಬ ಹೊತ್ತು ಹೆಚ್ಚಾಗಲು
ಇರುಳೆಂಬ ಕೆಡುಕು ದೂರಾಗಲು
ಬಾಳೆಂಬ ತೇರು ಜೊತೆ ಸಾಗಲಿ

ಒಳ್ಳೊಳ್ಳೆ ಕೆಲಸ ಸಂಧಿಸಲಿದೋ ಬಂದಿದೆ
ಉತ್ತರಾಯಣದ ಪರ್ವಕಾಲ
ಹುಳುಕೆಂಬ ಬಂಡೆ ಕರಗುತ ಅಳಿಯಲಿದೆ
ನಾನು ನನ್ನದೆಂಬ ಅಹಮ್ಮಿನ ಶೂಲ

ಬೆಳೆದ ಬೆಳೆಗೆ ಸಿಗಲಿ
ಹೊಸ ಆಸೆ ಈಡೇರಿಸುವ ದರ
ಸುಗ್ಗಿಕಟ್ಟಿ ಕುಣಿಯಲಿ
ರಸ ಬಾಧೆ ಅಡಗಿಸುವ ಕರ

ಎಳ್ಳು ಬೆಲ್ಲವ ತಿಂದು ಒಳ್ಳೆ ಮಾತಾಡಬೇಕೆಂಬುದು
ಬರಿ ಮಾತಾಗದಿರಲಿ
ಜಲಸೆಯಿಂದ ಎಗರಿ ವಲಸೆ ಹೋಗದ
ನಿಸ್ವಾರ್ಥದ ಬದುಕಿಗೆ ನಾಂದಿಯಾಗಲಿ

ಬೆಳಗಲಿ ಜಗದ ಜ್ಯೋತಿಯು
ಆರದ ನಂದಾದೀಪವಾಗಿರಲು
ಗುಡಿಸಲಿ ಮನದ ತೊಚ್ಛೆಯನು
ಸ್ವಚ್ಛ ಸಮೃದ್ಧಿಯ ಗುಡಿಯಾಗಿರಲು

Saturday, January 12, 2019

ಹಡಗಿನಂತ ಬದುಕು

ಬದುಕು ಮಾಸಬಹುದೇ ಹಾಗೆ
ತಾರೆ ಮಿನುಗದೆ
ಚಿತ್ರ ಏರಬಹುದೇ ಹೀಗೆ
ಗೋಡೆ ಕುಣಿಕೆಗೆ
ಬಾನ ದಾರಿಯಲ್ಲಿ ಚಂದ್ರ
ಬೆಳಗೊ ಹೊತ್ತಲಿ
ಸೂತ್ರವಿರದ ಜನ್ಮದಲ್ಲಿ
ಪಾತ್ರ ಯಾತಕೆ?

ಬೆಂದ ಬೇಳೆ ಹುಳುಕು ಹೊಟ್ಟೆಗೆ
ನೊಂದ ಜೀವ ಸುಡುವ ಚಟ್ಟಕೆ
ಕಾಲಚಕ್ರ ತಿರುಗುತಿಹುದು
ಒಳಿತು ಕೆಡುಕ ನಡುವೆಯು

ಸಂದ ಬಯಕೆ ಇಚ್ಛೆ ಮನಕೆ
ಕಂದ ಕೊರತೆ ತೊಚ್ಛೆ ಸುಖಕೆ
ಏಳುಬೀಳಿನಾಟ ನಡೆವುದು
ನಿನ್ನ ಹಾದಿ ಕ್ರಮಿಸಲು

ಎಲ್ಲಿ ತಿರುಗಿ ಏನ ಕೇಳಲಿ
ಇಲ್ಲಿ ಕಾವಲು ಸಿಗುವುದೇ?
ಯಾರು ಯಾರಿಗಾಗರೆಂದು
ಸ್ವಂತ ಕೆಲಸ ಆಗದೆ

ಹುಟ್ಟಿ ಬರುವ ಪ್ರಾಣಿಗೆಂದು
ಕರುಣೆ ತೋರುವ ಜೀವವುಂಟು
ಮರೆಯಲಾದರೂ ಅಳುತ ಮರುಗುವ
ದೇಹ ಇರುವುದು ಕಾಣದೆ

ಬರೆದ ಹಾಗೆ ಸಾಗೊ ಚೇತನ
ತೊರೆಯು ಓಡುವಂತೆ ಶರಧಿಗೆ
ಕುಣಿವ ಕಡಲ ನಡುವೆ ಮುಳುಗದ
ಹಡಗಿನಂತೆ ಮೆರೆವ ಭಾವ ಬದುಕಿದು

Monday, January 7, 2019

ಶ್ರೀಮತಿಗೆ ಸೀಮಂತವೇ ಶೃಂಗಾರ

ಮೊದಲ ನಕ್ಷತ್ರದ ಹೆಸರೆಂದರೆ ಅಶ್ವಿನಿ
ಆಗಿಹಳು ನನ ಬಾಳ ಪ್ರೇಮಸತಿ
ನೋವು ನಲಿವಿನಲಿ ನಿಜ ಗೆಳತಿ
ನಮ್ಮಿಬ್ಬರ ಕನಸೀಗ ಆಗುವುದು ನನಸು
ಜೊತೆಯಾಗಿ ಬರಲು ಪುಟ್ಟ ಕೂಸು

ಇಬ್ಬರು ಮೂರಾಗುವ ಈ ಹೊತ್ತಿನಲಿ
ಸಂಸಾರ ವೃದ್ಧಿಯ ಹೊಸ್ತಿಲಲಿ
ಕನಸು ಕಂಗಳ ತುಂಬ ನಲಿವ ಗಿಲಕಿ
ಹೃದಯದಂಗಳದಲ್ಲಿ ಇದುವೆ ಖುಷಿಯ ಗಿರಕಿ

ಶ್ರೀಮತಿಗೆ ಸೀಮಂತ ನಾಂದಿಯಾಯಿತು
ಸಿಂಗಾರದ ಬಾಳಿಗೆ ದಾರಿಯಾಯಿತು
ಹುಳಿಮಾವು, ಹುಣಸೆಗಳ
ಬಯಸಿ ತಿಂದೆ
ಚಿನ್ನದೊಡವೆಗಳನು ರತ್ನದಂತವಳಿಗೆ ನಾನೇ ತಂದೆ

ಬಾಳ ಗೂಡಿನಲಿ ಕೇಳಬೇಕಿದೆ ಹೊಸರಾಗ ಚಿಲಿಪಿಲಿ
ಹೆಣ್ಣು ಗಂಡೆನದೆ ಕೇಳಲಿ ನಗುವ ಕಂದನ ತೊದಲುಲಿ

ಕೇಳಿಸು ಕಂದಗೆ ರಾಮ, ಕೃಷ್ಣರ ಕಥೆಗಳನು
ಗರ್ಭದೊಳಗೇ ಆಲಿಸಲಿ ಹಿರಿಯ ವೀರ ಯೋಧರ ವ್ಯಥೆಗಳನು

ಹಿರಿಯ ಜೀವಗಳ ಹಾರೈಕೆ ಇರಲಿ
ಸದ್ವಿಚಾರಗಳ ಆರೈಕೆ ಸಿಗಲಿ
ಕೇಳಿ ತಿಳಿಯುತ, ಓದಿ ಕಲಿಯುತ ನವಮಾಸ
ತುಂಬಲಿ
ಕಾತರದ ಕಾಯುವಿಕೆ ತೀರಲಿ ಸಖಿ
ಸುಖಿಯಾಗಲಿ ಜೀವಗಳೆರಡಾಗುವ ಹೆರಿಗೆಯ ಆಯಾಸ