Sunday, December 30, 2018

ಸಸ್ಯ ಸಾಮರಸ್ಯ

ಜಾರದಿರಲಿ ಹನಿ ನೀರು
ಬೊಗಸೆಯಿಂದಾಚೆಗೆ
ಬುದ್ಧಿಯಿರಲಿ ಒಂಚೂರು
ಸ್ಥಾನಮಾನದಿಂದೀಚೆಗೆ

ಕಡಿಯದಿರು ಹೆಮ್ಮರವ
ತಂಪೆರೆಯುವ ಮೂಲವ
ಕದಡದಿರು ಜಗ ನಿಯಮವ
ಕಾಪಾಡು ಪ್ರಾಣಿ ಸಂಕುಲವ

ಬಾಯಲ್ಲಿ ಬಡಾಯಿ ಕೊಚ್ಚಿ
ಸ್ವಪ್ರತಿಷ್ಠೆ ವೈಭವೀಕರಿಸದಿರು ಮೂಢ
ಕಾದಿಟ್ಟ ದಿನದಂದು ಫಲಕವ ಹಚ್ಚಿ
ಜಾಗೃತಗೊಳಿಸುವೆನೆಂಬ ನಂಬಿಕೆಯು ಬೇಡ

ಹೆಸರಿಗೆ ಮಾತ್ರ ದಿನವೆಂದುಕೊಂಡು
ಆ ಕ್ಷಣಕ್ಕಷ್ಟೇ ಮುಗಿಯದಿರಲಿ ಹಬ್ಬವು
ಕೇವಲ ಜಾಲತಾಣಗಳ ಮಿತಿಯಲಿರದೆ
ಬದುಕಿನ ದಿನಚರಿಯಾಗಲಿ ಬರಿ ಮಾತಾಗದೆ

ತಿಳಿದಿಕೊ ತರುವಿರದ ಇಳೆಯು
ಉಗುಳುವ ಬೆಂಕಿ ಮಳೆಯು
ಕರಡಿ ನೀರಾದ ಮಣ್ಣು ಮರಳಾಗಿ
ಪ್ರಳಯದಲೆಗಳ ಎರಗಿಸುವವು ಜೋರಾಗಿ

ನೆರಳಿಗಾಗಿ ತುಸು ಉಸಿರಿಗಾಗಿ
ಕಡಿಯದಿರು ಹಸಿರು ಮರವ
ನೀರಡಿಕೆಗಾಗಿ ಹನಿ ನೀರಿಗಾಗಿ
ಕೊಲ್ಲದಿರು ಜೀವ ಜಲವ

ಮರೆತರೆ ಕ್ರಮಬದ್ಧ ಕಾರ್ಯವನು
ಅನುಭವಿಸುವೆ ಕರುಣೆಯಿರದ ಕರ್ಮವನು
ಉಳಿಯಲು ನೆಡು ಸಸ್ಯದ ಬೇರನ್ನು
ಬದುಕಲು ದುಗುಡ ರಹಿತ ಬಾಳನ್ನು

ಬೆಳೆಸೋಣ ಸಸ್ಯರಾಶಿಯನ್ನ
ಮೆರೆಯಿಸೋಣ ಸಸ್ಯಕಾಶಿಯನ್ನ
ಉಳಿಸೋಣ ಒಂದು ಹನಿ ನೀರನ್ನ
ಬದುಕೋಣ ಸಾಮರಸ್ಯದ ಬದುಕನ್ನ 

Wednesday, December 19, 2018

ಹಸಿವಿರದ ಹೊಂದಾಣಿಕೆ

ರೆಕ್ಕೆ ಬಲಿತ ಹಕ್ಕೀಯೆಂದೂ
ಗೂಡಲ್ಲಿ ಬಂಧಿಯಾಗುವುದೇ?
ಮಾತು ಕಲಿವ ಮಗುವುಯೆಂದೂ
ತೊದಲು ಮಾತಾಡದೆ ಇರುವುದೇ?
ಸಮಯ ಬಂದ ಕ್ಷಣಕೆ ಸತ್ತು
ಹಿಡಿ ಬೂದಿಯಾಗುವುದು ಈ ದೇಹ
ಹೀಗೆ ಆಗುವುದೇ ವಿಧಿ ಲಿಖಿತ
ತಪ್ಪದೇ ನಡೆಯುವುದು ಇದು ಖಚಿತ

ಜನಿಸಿದ ಕೂಸಿನ ನಗುವ ಕಂಡು
ಮನಸೋಲದ ಹೆತ್ತವರು ಇರರೂ ಎಂದೂ
ನಾಳೆ ಬೆಳೆವ ಮಕ್ಕಳ ಮೇಲೆಂದು
ಅವಲಂಬಿತವಾಗದಿರು ಸಲಹುವರು ಎಂದೂ
ಗೆಲುವೇ ಜೊತೆಯಿರದು ಸೋಲೇ ಉಳಿದಿರದು
ಭರವಸೆಯಲಿ ಬದುಕುತಿರು ಬಾಳಲಿಯೆಂದೂ

ವರಿಸಿದ ಸಂಗಾತಿಯ ಮಂದಹಾಸ
ಸೂರೆಗೊಂಡರೆ ಆಗುವರು ಚರಣದಾಸ
ಅರಳಿದ ಕಾಂತೀಯ ಚಂದ್ರಹಾಸ
ಸೋಲೆಂದರೆ ನೀಡುವುದು ಸ್ಪೂರ್ತಿಯಾಕಾಶ
ಪ್ರೀತಿ ಶಾಶ್ವತವಲ್ಲ ದ್ವೇಷ ಸಂಸ್ಕಾರವೇ ಅಲ್ಲ
ಹಸಿವಿರದ ಹೊಂದಾಣಿಕೆಯ ಸಂಬಂಧಕೆ ಸಾವಿಲ್ಲ