Sunday, October 28, 2018

ಬೆಳಗು

ಬ್ರಾಹ್ಮಿ ಮುಹೂರ್ತದಲ್ಲಿ ಮೂಡಿತೊಂದು ಬೆಳ್ಳು
ಉಕ್ಕಿ ಬರುತಿದೆ ಹೊಸ ಭರವಸೆಯ ಜೊಲ್ಲು
ಮಂಜಿನ ಹನಿಯ ಮಧುರವಾದ ಗುಡುಗು
ಬಾನಾಡಿಗಳ ಇಂಚರಕೆ ಸ್ಪೂರ್ತಿಯಾದ ಬೆಳಗು

ದಣಿವಾರಿದ ಚೈತನ್ಯಕೆ ಧರೆಯಾಳುವ ಬಯಕೆ
ಬಾನಾಳುವ ಭಾನಿಗೆ ಜಗ ಬೆಳಗುವ ಹರಕೆ
ಮನ ತಣಿಸುವ ಪ್ರೀತಿಗೆ ಬೆಳದಿಂಗಳೇ ಹೋಲಿಕೆ
ಅಂತರಂಗದ ಮಸುಕಿಗೆ ಜ್ಞಾನವೇ ಬೆಳಗೆಂಬ ಕಾಣಿಕೆ

Sunday, October 21, 2018

ಒಗಟು

ತಂಗಾಳಿಯಲ್ಲಿ ನಾ
ತೇಲಿ ಬಂದೆನು
ತಂಪನ್ನು ಎರೆದು ನಾ
ಕರಗಿ ಹೋದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ನೀರ ಹೊತ್ತಿ ಬರುವ ಮೋಡ ನಾ ತಿಳಿಯದಾದೆಯಾ?

ಹಸಿರು ಹರಡಿದ ಎಲೆಯು
ಕಣ್ಣ ಸೆಳೆತಕೆ
ಇಡಲು ಮುಂದಿನ ಹೆಜ್ಜೆ
ಮಣ್ಣ ಕುಣಿತಕೆ
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ಮಳೆಗೆ ಮೆರೆವ ಕಳೆಗೆಯು ಎಂದು ನುಡಿಯಬಲ್ಲೆಯಾ?

ಒಡಲ ಮಡಿಲು ತವರಿಗೆಂದು
ಓಡುತಿರುವೆನು
ಬೆಳಕ ಸ್ಪರ್ಶ ಸೋಕಿತೆಂದು
ಮಾಯವಾದೆನು
ನಾನು ಯಾರು ಎಂದು ನೀನು ಹೇಳಬಲ್ಲೆಯಾ?
ತುಂಬಿ ಹರಿವ ಹೊಳೆಯು
ಎಂದು ಹಾಡಬಲ್ಲೆಯಾ?

Wednesday, October 10, 2018

ದಿಕ್ಪಾಲಕ

ಮೂಡಣದ ಹೊತ್ತಿನಲಿ
ಏಕಾಂಗಿ ಧ್ಯಾನದಲಿ
ಒಂದುಸಿರ
ಮನದೊಲವ ಸೂರೆಗಯ್ಯುವವನೆ
ಜೊತೆಯಾಗುವೆಯೇನು?

ಪಡುವಣದ ಸಮಯದಲಿ
ರಭಸದ ತೆರೆಗಳಲಿ
ರಂಗಾದ ಮುಗಿಲಿನಲಿ
ರಂಗಿನಾಟದ ರವಿಯಂತೆ
ಬಳಿಬಾರದೇನು?

ಬಡಗಣದ ಪಯಣದಲಿ
ಹಿಮಗಿರಿಯ ಶಿಖರದಲಿ
ತಂಪಾದ ಮಂಜಿನಲಿ
ನುಸುಳಿ ಬರುವ
ಬೆಚ್ಚನೆಯ ಉಷೆಯು ನೀನಾಗುವೆಯಾ?

ತೆಂಕಣದ ಹಡಗಿನಲಿ
ತಿಳಿಯಾದ ಸಂಜೆಯಲಿ
ತೇಲುತಿಹ ಬದುಕಿನಲಿ
ಚುಕ್ಕಾಣಿಯ ಹಿಡಿದ ನಾವಿಕ
ನೀನಾಗುವೆಯಾ?