Sunday, September 3, 2017

ದೀನರ ಮಾತು

ಹಸಿದ ಹೊಟ್ಟೆಗೆ
ಹಾಗಿರಲಿ ಊಟ
ಕುಡಿಯಲು ತೊಟ್ಟು
ನೀರು ಸಿಗದೆ ಹೋದರೂ
ಕಣ್ಣಂಚಲಿ ಹರಿಯುತಿವೆ
ಗಂಗೆ ತುಂಗೆಯ ತೊರೆಗಳು
ತಡೆಯಲು ಬಾರರು
ಕರುಣೆಯ ಬರವಿರುವ ಜನರು

ಹೊತ್ತಿಗಾದರೂ
ಕೈ ತುತ್ತು ಸಿಕ್ಕರೆ
ಬದುಕಲದುವೆ ಮೃಷ್ಟಾನ್ನವು
ನೀಡರಾರು ತಲೆಬಾಗಿ ಬೇಡಿದರೂ
ದಯೆಯೇ ಇಲ್ಲದ ಧನಿಕರು
ಧರ್ಮದ ಮೂಲ ಮರೆತ ಮತಾಂಧರು

ಆಸೆಗಾದರೂ
ಅರಮನೆಯ ಕನಸ ಕಾಣಲು
ನೈತಿಕತೆ ಪ್ರಶ್ನೆಯ ಉಗಮವು
ಮತದ ಭೇಟೆಗೆ ದಾಳಿಯಿಡುವ
ರಾಜಕಾರಣಿಗಳ ಕರಿ ನೆರಳಲಿ
ಸ್ವಾವಲಂಭಿಯಾಗಿ ಬಾಳ ನಡೆಸಲಾಗದು

ಆತ್ಮತೃಪ್ತಿಗಾದರೂ
ಜಾತಿ ಮತಗಳ ಒಡೆಯದೆ
ಪ್ರಜೆಗೆ ಮಾಡಲಿ ಚೂರು ಒಳಿತನು
ದೇಶ ಹೊಂದುವುದು ಅಭಿವೃದ್ಧಿಯ
ಕೊಂಚ ನಿರಾಳತೆಯ ಭಾವವ ಹೊಂದಲು
ಕೆಡುಕಾಗದು ತಿಂದರೂ ದೀನರ ದುಡ್ಡನು

Friday, September 1, 2017

ವಿದೇಶಿ ಯಾನ ಮುಖ ತಗ್ಗಿಸುವಂತೆ ಮಾಡಿದ ಅವಮಾನ

ಹೊರ ದೇಶಕ್ಕೆ ಹೋಗುತ್ತಿದ್ದೇನೆ ಎಂಬ ಜಂಭ, ಹರ್ಷ, ಹಿರಿಹಿಗ್ಗು ಒಂದೆಡೆಯಾದರೆ ನನ್ನವರನ್ನು ಬಿಟ್ಟು ತುಂಬ ದಿನ ಇರಬೇಕಲ್ಲ ಎಂಬ ಬೇಸರ ಇನ್ನೊಂದೆಡೆ. ವಿಮಾನ ಹತ್ತಿ ರಷ್ಯಾದ ಅಂಗಳದಲ್ಲಿ ಕಾಲಿಟ್ಟಾಗ ಅದೇನೊ ಸಂಭ್ರಮ. ಅದೇ ಜಂಭದಿಂದ ತಲುಪಬೇಕಾಗಿದ್ದ ಸ್ಥಳಕ್ಕೆ ಹೋಗಲು ಒಂದು ಕಾರನ್ನು ಹತ್ತಿ ಸ್ವಲ್ಪ ದೂರ ಕ್ರಮಿಸಿದೆ. ತುಂಬಾ ದೂರ ತಲುಪಬೇಕಾಗಿದ್ದರಿಂದ ಕಾರಿನ ಚಾಲಕನೊಂದಿಗೆ ಮಾತಿಗೆ ಇಳಿದೆ. ಪರಿಚಯ ವಿನಿಮಯ ಮಾಡಿಕೊಂಡ ಚಾಲಕ, ಇವನು ಭಾರತವನೆಂದು ತಿಳಿದ ಕೂಡಲೆ ಚಾಲಕನ ಮಾತು ಪರಿಚಯಸ್ತರ ತರಹ ಶುರುವಾಯಿತು.

"ನೀವು ಭಾರತದವರ" ಎಂದ ಕೂಡಲೆ ನಾನು ಹೆಮ್ಮೆಯಿಂದಲೇ ಹೌದು ಎಂದೆನು. ಮಾತನಾಡುತ್ತ ನನ್ನ ದೇಶದ ಬಗ್ಗೆ ವಿವರಿಸಲು ಪ್ರಾರಂಭಿಸಿದೆ. ಅಷ್ಟರಲ್ಲೆ ಚಾಲಕ ಮಧ್ಯ ಮಾತಾಡಿ ಸರ್ ನನಗೊಂದು ಗೊಂದಲವಿದೆ, ಅದನ್ನು ಪರಿಹರಿಸುತ್ತೀರ ಎಂದು ಕೇಳಿದ. ಆಗ ಗರ್ವದಿಂದಲೇ ನನ್ನ ದೇಶದ ಬಗ್ಗೆ ಏನನ್ನೇ ಬೇಕಾದರೂ ಕೇಳು ಹೇಳುತ್ತೇನೆ ಎಂದೆ. ಹಾಗೆಂದ ಕೂಡಲೆ ತಡ ಮಾಡದೇ ನನ್ನ ಗೊಂದಲವಿರುವುದು ಭಾರತದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಬಗ್ಗೆ ಎಂದೇಳುತ್ತಾನೆ.

ತುಂಬಾ ದಿನಗಳಿಂದ ನನಗೆ ಅದರ ಬಗ್ಗೆ ಗೊಂದಲವಿದೆ ಅದೇನೆಂದರೆ ಭಗವದ್ಗೀತೆಯ ೧೩ನೇ ಅಧ್ಯಾಯದ ೭ನೇ ಶ್ಲೋಕದ ಅರ್ಥವನ್ನು ಸ್ವಲ್ಪ್ ತಿಳಿಸುವಿರಾ? ಎಂದು ಕೇಳುತ್ತಾನೆ. ಅವನಷ್ಟು ಕೇಳಿದಕೂಡಲೆ ತುಂಬಾ ಗರ್ವದಿಂದ ಬೀಗುತ್ತಿದ್ದ ನನಗೆ ಈ ಭೂಮಿ ಇಲ್ಲೇ ಬಿರಿಯಬಾರದೇ, ಆ ಆಕಾಶ ಈ ಕೂಡಲೆ ತಲೆಯ ಮೇಲೆ ಎರಗಿ ಬೀಳಬಾದೇ ಅಥವಾ ತಕ್ಷಣಕ್ಕೆ ಕಾರಿಂದ ಜಿಗಿದು ಓಡೋಗಲೇ ಎಂಬೆಲ್ಲ ನಮನಮನಿಯ ಯೋಚನೆಗಳೆಲ್ಲ ತಲೆಯಲ್ಲಿ ಬಂದವು. ಏಕೆಂದರೆ ಹುಟ್ಟಿನಿಂದ ವಿದೇಶಕ್ಕೆ ಹೋಗುವವರೆಗೂ ಒಂದೇ ಒಂದು ಬಾರಿಯು ಭಗವದ್ಗೀತೆಯನ್ನು ಓದುವುದು ಹಾರಲಿ ಕೈಯಲ್ಲಿಯೂ ಹಿಡಿಯದ ನನಗೆ ಇನ್ನೆಲ್ಲಿ ಭಗವದ್ಗೀತೆಯ ಶ್ಲೋಕದ ಅರ್ಥ ತಿಳಿದಿರಲು ಸಾಧ್ಯ.

ಹೊರ ದೇಶದ ಕಾರಿನ ಚಾಲಕನಿಗೆ ಇರುವಷ್ಟು ಜ್ಞಾನವೂ ಸಹ ನನಗೆ ಭಗವದ್ಗೀತೆಯ ಮೇಲಿಲ್ಲದಿರುವುದರಿಂದ ಕ್ಷಮಿಸಿ ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲವೆಂದು ಹೇಳಿದೆ. ಆಗ ಮರ್ಯಾದೆಯಾಗಿ ಮುಖವನ್ನೆತ್ತಿ ಮಾತನಾಡಲಾಗದೆ ಅವನ ಮಾತಿಗೆ ಉತ್ತರಿಸುವುದು ಹಾಗಿರಲಿ ತುಟಿ ಪಿಟಿಕ್ ಎನ್ನದೆ ಸ್ತಬ್ಧನಾಗಿ ವಾಸವಿರಬೇಕಾದ ಸ್ಥಳ ಬರುವವರೆಗೂ ಸುಮ್ಮನೆ ಕುಳಿತೆ.