Wednesday, August 30, 2017

ಅನುಭವದ ಎರಕಾವ ಹೊಯ್ದ ಅಪ್ಪ

ಪರಿಸ್ಥಿತಿಯ ಕೈಗೊಂಬೆಯಾಗಿ, ವಿಧಿಯಾಟದ ಅಂಗಳದಲ್ಲಿ ಎದೆಯೊಡ್ಡಿ ನಿಂತ. ಕೊಚ್ಪಾಲು ತೋಟ (ಅಲ್ಲೊಂದಿಷ್ಟು ಚೂರು ಇಲ್ಲೊಂದಿಷ್ಟು ಚೂರು ತೋಟ) ದಲ್ಲಿ ಅಡಿಕೆ ಬೆಳೆಯನ್ನು ಸಮೃದ್ಧವಾಗಿ ತೆಗೆಯುವ ಹೋರಾಟದ ವ್ಯಕ್ತಿ. ಕೆಲಸ ಸ್ನೇಹಿ, ಸುಸ್ತಾಗದ ದೇಹಿ ಎಂಬಂತೆ ಮುಂಜಾವಿನಿಂದ ಮಧ್ಯ ರಾತ್ರಿಯ ತನಕವು ವಿಶ್ರಾಂತಿಯಿಲ್ಲದೆ ದುಡಿದು ತನ್ನ ಹೆಗಲ ಮೇಲಿನ ಜವಾಬ್ಧಾರಿಯನ್ನು, ಕರ್ತವ್ಯವನ್ನು ನಿರ್ವಹಿಸಿದವ ನನ್ನಪ್ಪ.

ಅವಿಭಕ್ತ ಕುಟುಂಬದ ತ್ರಿಮೂರ್ತಿಗಳಲ್ಲಿ ಕೊನೆಯವನಾಗಿ, ಮನೆಯ ಯಜಮಾನ ತನ್ನ ದೊಡ್ಡಣ್ಣನಿಗೆ ವಿಧೇಯನಾಗಿ ಬದುಕ ಸವೆಸಿದ. ಮೆಚ್ಚಿದ ಅಣ್ಣನ ಮಾತಿಗೆ ಎರಡಾಡದ ಈತ ಕಾಲಳತೆಯ ದೂರದಲ್ಲಿರುವ ಹಳೆಯ ಮನೆಯಲ್ಲೇ ತನ್ನ ಸಂಸಾರದೊಂದಿಗೆ ನೆಲೆಸಿದ. ಇದು ಬಹಳ ಇಕ್ಕಟ್ಟಿನ ಸಮಯ ಏಕೆಂದರೆ ಮಕ್ಕಳ ಅಗತ್ಯತೆಗೆ, ಮಡದಿಯ ಆಸೆಗಳಿಗೆ, ಮತ್ತೆಲ್ಲ ವ್ಯವಹಾರಕ್ಕೆ ಬೇಕಾದ ಹಣವನ್ನು ಕುಟುಂಬದ ಯಜಮಾನನ ಹತ್ತಿರ ಕೇಳಿ ಪಡೆಯಬೇಕಿತ್ತು. ಅವಶ್ಯಕತೆಗೆ ಬೇಕಾದಷ್ಟು ಹಣ ಯಜಮಾನನಿಂದ ಸಿಗದಿರುವುದು ಒಂದೆಡೆಯಾದರೆ ಮಕ್ಕಳ ಆಸೆ, ಅವಶ್ಯಕತೆಗಳನ್ನು ಈಡೇರಿಸಲಾಗದಿರುವುದು ಇನ್ನೊಂದೆಡೆ.

ಎಲ್ಲರಿಗೂ ಅವರವರ ಅಪ್ಪ ಎಲ್ಲರಿಗಿಂತ ದೊಡ್ಡ ನಾಯಕನೆ. ಆದರೆ ನನಗೆ ಯಾಕೆ ನನ್ನಪ್ಪನೇ ಶ್ರೇಷ್ಠ, ಎಲ್ಲರಿಗಿಂತ ಭಿನ್ನವಾಗಿದ್ದಾನೆ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಮಕ್ಕಳ ಏಳಿಗೆಗಾಗಿ ಹೇಗೆ ಶ್ರಮಿಸಿದ, ಮಕ್ಕಳ ಅಗತ್ಯತೆಗೆ ಯಾವ ರೀತಿಯಲ್ಲಿ ಸ್ಪಂದಿಸಿದ, ಯಾವೆಲ್ಲ ತ್ಯಾಗ ಮಾಡಿ ಸ್ಪೂರ್ತಿಯಾಗಿ ನಿಂತ, ಏನೆಲ್ಲಾ ಕೆಲಸ ನಿರ್ವಹಿಸಿ ನಾಯಕನಾಗಿ ಗೋಚರಿಸಿದ ಎನ್ನುವುದು ಅಂತರಾಳ ಕಲಕುವ ಕಥೆ.

ಓದಿದ್ದು ಬರೆ ೪ನೇ ತರಗತಿ ಆದರೆ ಕೂಡಿಸಿ ಕಳೆಯುವ ಗುಣಾಕಾರ ಭಾಗಾಕಾರಗಳ ಲೆಕ್ಕಚಾರದಲ್ಲಿ ಗಣಿತ ತಜ್ಞ. ಹಾಗೆ ತೋಟಗಾರಿಕೆಯ ವಿಚಾರದಲ್ಲಿ, ನೇತಾಡುತ್ತಿರುವ ಮರಗಳನ್ನು ಹಿಂಡು ಮರಗಳ ನಡುವಿನಲ್ಲಿರುವ ಖಾಲಿ ಜಾಗದಲ್ಲಿ ಉರುಳಿಸುವಲ್ಲಿ ಹಾಗು ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಇಂಜಿನಿಯರ್. ಅದಲ್ಲದೆ ನಡೆದಾಡುವ ವಿಷಯದಲ್ಲಿ ಮಿಂಚಿನಂತೆ ಕಣ್ಣು ಮಿಟಕಾಯಿಸುವಷ್ಟರಲ್ಲಿ ಇವರು ಗೋಚರಿಸದಂತೆ ಬೇರೆಡೆಗೆ ತೆರಳುವಷ್ಟು ವೇಗದ ನಡಿಗೆಯವನು.

ಬೆಳ್ಳು ಮೂಡುವ ಸಮಯಕ್ಕೆ ಎದ್ದು ಹಸಿದ ಹೊಟ್ಟೆಯಲ್ಲಿಯೇ ಮಳೆಗಾಲದಲ್ಲಿ ಕಾಡಿಗೆ ಹೋಗಿ ಸೊಪ್ಪನ್ನು ಕೊಯ್ದು, ಬೇಸಿಗೆಯಲ್ಲಿ ಬೇಣಕ್ಕೆ (ಗುಡ್ಡಕ್ಕೆ) ಹೋಗಿ ದೆರಕನ್ನು (ಉದುರಿದ ಒಣಗಿದ ಎಲೆಗಳನ್ನು) ತಂದು ಕೊಟ್ಟಿಗೆಯಲ್ಲಿರುವ ದನದ ಕಾಲಡಿಗೆ ಹಾಸಿಗೆಯನ್ನಾಗಿ ಹಾಕಿ ತೋಟಕ್ಕೆ ಗೊಬ್ಬರವನ್ನಾಗಿ ಮಾಡುತ್ತಿದ್ದ. ಉದುರಿದ ಅಡಿಕೆಗಳನ್ನು ಹೆಕ್ಕಿ, ಅಡಿಕೆ ಮರಗಳಿಗೆ ನೀರನ್ನು ತೋಕುತ್ತಿದ್ದನು (ಸೊಂಟ ಬಗ್ಗಿಸಿಕೊಂಡು ನೀರನ್ನು ಹಾಕುವುದು). ತೋಟಕ್ಕೆ ಬೇಕಾದ ಮಣ್ಣು, ಗೊಬ್ಬರ, ಮರಗೆಲಸ (ಮರ ಹತ್ತಿ ಅಡಿಕೆ ಕೊನೆ ಕೊಯ್ಯುವುದು, ತೆಂಗಿನ ಕಾಯಿ ಕೊಯ್ಯುವುದು), ಅಗೆತ, ಸಸಿ ನೆಡುವುದು ಹೀಗೆ ಎಲ್ಲವನ್ನು ಸ್ವಂತವಾಗಿಯೇ ಮಾಡಿಕೊಂಡು ಪರಿಶ್ರಮಿಸಿದ.

ಇದೆ ಸಮಯದಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡು ಮರು ಮದುವೆಯಾಗಿ ತನ್ನ ಮಕ್ಕಳನ್ನು ಸಮಾನವಾಗಿ ನೋಡಿಕೊಂಡನು. ತನ್ನ ಎರಡನೆ ಪತ್ನಿಯಿಂದನೂ ಸಹ ಬೆಂಬಲಿತನಾಗಿ ಎಲ್ಲಾ ಮಕ್ಕಳಿಗೂ ಸಹ ಬೇಕಾದ ಅವಶ್ಯಕತೆಗಳನ್ನು ಪೂರೈಸಿದ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಎಲ್ಲವನ್ನು ತೂಕಬದ್ಧವಾಗಿ ಸಂಸಾರವನ್ನು ಸಮತೋಲಿಸಿದ. ಆಡು ಜನರ ಮಾತಿಗೆ ಧೃತಿಗೆಡದೆ ತಾಳ್ಮೆಯಿಂದ ಸಮಾಜದ ಎದುರು ಎದ್ದುನಿಂತ ಪರಿ ಮೂಗಿನ ಮೇಲೆ ಬೆರಳಿಡುವಂತಹದು.

ಅವಿಭಕ್ತ ಕುಟುಂಬ ವಿಭಕ್ತವಾದ ಮೇಲೆ ತನಗೆ ಸಿಕ್ಕ ಕೊಚ್ಪಾಲು ತೋಟದಿಂದ ಬಂದ ಆದಾಯದಲ್ಲಿ ತನ್ನ ನಾಲ್ವರು ಮಕ್ಕಳ ಅವಶ್ಯಕತೆಯನ್ನು ಪೂರೈಸಲು ಹೆಣಗಾಡಿದ ಕತೆಯನ್ನು ನೋಡಿದರೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ. ಇಂತಹ ಸಂಗ್ದಿದ್ಧ ಪರಿಸ್ಥಿತಿಯಲ್ಲೂ ನಾನು ಹೈಸ್ಕೂಲಿನಲ್ಲಿದ್ದಾಗ ಸೈಕಲ್ ಕೊಡಿಸಿ,ಪದವಿಯ ಕೊನೆಯ ವರ್ಷದಲ್ಲಿದ್ದಾಗ ಉದ್ಯೋಗ ಅರಸಲು ಸಹಾಯವಾಗಲೆಂದು ಆಗತಾನೆ ಮಾರ್ಕೇಟಿಗೆ ಬಂದ ಮೊಬೈಲ್ ಸಹ ಕೊಡಿಸಿದ. ಓದಿಗೆ ಕೊಟ್ಟ ಸ್ಪೂರ್ತಿ ಬಹಳ ಅಚ್ಚು ಮೆಚ್ಚು. ಶಾಲೆಯಲ್ಲಿ ನಡೆಯುವ ಯಾವುದೇ ಚಟುವಟಿಕೆಗಳಲ್ಲೇ ಆಗಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದ. ತೋಟದ ಕೆಲಸ ಕಲಿಯಲಿಚ್ಛಿಸಿದರೆ ಅವುಗಳನ್ನು ಜಾಗರುಕತೆಯಿಂದ ನಿರ್ವಹಿಸಲು ಬೇಕಾದ ಚಾಕಚಕ್ಯತೆಯನ್ನು ನಾಜುಕಾಗಿ ಹೇಳಿಕೊಟ್ಟವ ನನ್ನಪ್ಪ. ಒಬ್ಬರಿಗೊಂದು ಕೆಡುಕನ್ನು ಮಾಡದೆ ಸಂಸ್ಕಾರವನ್ನಿತ್ತನು. ಅದೆಂತಹದೇ ದೊಡ್ಡ ಮರವಿರಲಿ ಅದನ್ನ ಏರಿ ಹಣ್ಣುಗಳನ್ನು ಕೊಯ್ಯುವ ಕೌಶಲ್ಯವನ್ನು ಕಲಿಸಿದನು.

ಜೀವನವನ್ನು ನದೆಸಿಕೊಂಡು ಹೋಗಲು ಬೇಗಾಗುವಂತಹ ವಿದ್ಯೆಯನ್ನು ಕೊಡಿಸಿ, ಬದುಕನ್ನು ಕಟ್ಟಲು ಬೇಕಾಗುವಷ್ಟು ಕೆಲಸಗಳನ್ನು ತಿಳಿಸಿದ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬ ಜಾಣ್ಮೆಯನ್ನು ಅರುಹಿದ. ಎಂತಹ ಸಂದಿಗ್ಧ ಸ್ಥಿತಿಯಲ್ಲಿ ಹೇಗೆ ತಾಳ್ಮೆಯಿಂದ ವರ್ತಿಸಿ ಎಲ್ಲರನ್ನು ಮತ್ತು ಎಲ್ಲವನ್ನು ಸಮತೋಲನದಿಂದ ನಿಭಾಯಿಸಬೇಕೆಂಬುದನ್ನು ನೀತಿಯುಕ್ತ ಜೀವನದ ಅನುಭವದಿಂದ ಕಲಿಸಿದವ ನನ್ನಪ್ಪ.

Wednesday, August 16, 2017

ಕರಡಿದೆಯಾ ಕೆಸರ

ಎಸೆದೆಯಾ ಸಣ್ಣ ಕಲ್ಲನು
ಕರಡಿದೆಯಾ ಕೆಸರ ಮಣ್ಣನು
ನಗುತಿರುವ ಶಿಶುವ ಅಳಿಸುವೆಯಾ?
ಪೂರ್ಣ ಚಂದ್ರನ ಚೂರಾಗಿಸುತ
ಸಂಸ್ಕರಿಸಲು ಸಾಕು ಕ್ಷಣ ಹೊತ್ತು
ಒಂದಾಗಲು ಬೇಕು ಆಣಿಮುತ್ತು

ಈ ಸಂಜೆ ಯಾಕೆ ಹೀಗೆ
ಕಲೆಯಲ್ಲಿ ಸೆಳೆಯುತಿದೆ ಮನವ
ಓ ರವಿಯೇ ಜೋಕೆ ಹಾಗೆ
ಮಂದ ಬೆಳಕಿನಲ್ಲಿ ಜಾರು ನಿಧಾನ
ಬೋರ್ಗರೆಯವ ಕಡಲ ಕಿನಾರೆ
ಗರ್ಜಿಸುವ ಸಾದುಮೃಗದ ತರಾನೆ
ಸರಿಸಾಟಿ ಯಾರು ಇಲ್ಲ
ಕನವರಿಸುವ ಮೂಲ ಬೊಂಬೆಗೆ

ಸ್ಪಂದಿಸಲು ಸಿಗದೆ ಸ್ವಲ್ಪ ಸಮಯ
ಹುಂಬತನದಿ ಅತಿ ನಂಬಿದೆಯ
ನಿರೀಕ್ಷೆಯ ಬಾಳಿನ ಸಂಜೆಯಲಿ
ಸೂರ್ಯ ಮುಳುಗುವ ಹೊತ್ತಾಗಿದೆ
ಉಸಿರಿನ ವೇಗಕೆ ಮೂಡುವ ಚಿತ್ರವು
ಮುಂದಿನ ಬದುಕಿಗೆ ಜೊತೆಯಾಗುವುದೇ?

ನೆನಪಿನ ಸಾರಾಂಶ ಭವಿಷ್ಯದ ಮುಖ್ಯಾಂಶ
ಹಲವು ಚಿಂತನೆಯು
ಮಂಥನಕೆ ಅಣಿಯಾಗಿರಲು
ಅವಳು ಸಿಗುವಳು ಎನ್ನುತಿದೆ

Thursday, August 3, 2017

ಆಧುನಿಕ ಒಲವು

ತಿರುಗೋ ಭೂಮಿ ತಿರಗೋದನ್ನು
ಮರೆಯಲಬಹುದೇನೊ
ಸುತ್ತುವ ಕಡಲು ನದಿಗಳ ಹಾಗೆ
ಹರಿಯಲುಬಹುದೇನೊ
ನೀಲಿ ನಭದ ಅಂಗಳದಲ್ಲೂ
ಮನೆಯನು ಕಟ್ಟಲುಬಹುದೇನೊ
ಮಂಗಳಸೂತ್ರದ ಧಾರಣೆ ಬಳಿಕ
ಮಂಗಳಯಾನವ ಗೈಯಬಹುದೇನೊ
ವಿಧವಿಧವಾದ ಬಯಕೆಯ ತವರು
ನನ್ನ ಮನವೀಗ
ಕಿರು ನೋಟದ ತರುವಾಯ

ಗಣಕಯಂತ್ರದ ಗಣೀತದಲ್ಲೂ ಮೊತ್ತವೆ ನಿನ್ನ ಹೆಸರು
ಚಂದ್ರಲೋಕದ ಚಿತ್ರಣದಲ್ಲೂ
ಗಾಳಿಯೆ ನಿನ್ನ ಉಸಿರು
ರಸ್ತೆಯಲ್ಲಿನ ಸಂಚಾರ ಸ್ತಂಭನದಲ್ಲೂ
ತುಂಬಿದೆ ಹಚ್ಚ ಹಸಿರು
ಕಣ್ಣಲಿ ಹರಡಿದೆ ಮನಸಿನ ಭಾವನೆ
ನೆನೆಯಲು ನಿನ್ನ ಕುರಿತು

ಸಿಯಾಚಿನ್ನಿನ ಕೊರೆವಾ ಚಳಿಯಲೂ
ಬೆಚ್ಚನೆಯ ಕವಚವಾಗಿರುವೆ
ಭಯೋತ್ಪಾದಕರ ಭಯದಾ ನೆರಳಲೂ
ಧೈರ್ಯದ ಬಿಸಿಲಾಗಿರುವೆ
ಕಕ್ಷೆ ಸೇರುವ ರಾಕೆಟ್ಟಿನ ಉಪಗ್ರಹದಲೂ
ಸುದ್ದಿ ಕೊಡುವ ಯಂತ್ರವಾಗಿರುವೆ
ಕಾಂಜಿಪೀಂಜಿಯ ಪುಂಡರ ಮೇಲೂ
ನಿಗಾವಹಿಸುವ ರಕ್ಷಕನಾಗಿರುವೆ
ಚಕಾರವೆತ್ತದೇ ಪ್ರೀತಿಯ ಬಗ್ಗೆ
ವರಿಸುತ ಉಳಿಸು ತಡಮಾಡದೆ

Wednesday, August 2, 2017

ವ್ಯವಸಾಯವಿಲ್ಲದ ವಿಚಾರದಿಂದ ವ್ಯವಹರಿಸಬಾರದು

ಹಲವು ವಿಚಾರಗಳಿಗೆ ಬೌತಿಕ ಸ್ಪರ್ಶದ ಅಗತ್ಯತೆ ಇರುವುದಿಲ್ಲ. ಮೊದಲಿಗೆ ನಾವು ಮಾಡುವ ವಿಚಾರಗಳಿಗೆ ಬಾಹ್ಯ ರೂಪವಿಲ್ಲ. ವಿಚಾರವೆನ್ನುವುದು ತಾರ್ಕಿಕವಾಗಿ ರಚನೆಯಾಗಿರುವುದಾಗಿದೆ. ಅದೆಷ್ಟೋ ಜನರು, ಅದೇನೆ ಹೇಳಿದರೂ ವ್ಯವಸಾಯವಿರದ ವಿಚಾರಗಳಿಂದ ವ್ಯವಹರಿಸುತ್ತಾರೆ. ಇದರಿಂದಾಗಿ ತೊಂದರೆಗೂ ಒಳಗಾಗುತ್ತಾರೆ ಮತ್ತು ನಿಂದನೆಗೆ ಅರ್ಹರು ಎಂದೆನಿಸುತ್ತಾರೆ. ನೈತಿಕತೆಯ ಸ್ಪರ್ಶದಿಂದ ಹಲವು ಜನರು ವ್ಯವಸಾಯವಿರದ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.

ಒಬ್ಬ ವ್ಯಕ್ತಿ ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಬಹಳ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಆದರೆ ಅವುಗಳಲ್ಲಿ ಕೆಲವೇ ಕೆಲವರಿಂದ ಔಚಿತ್ಯಪೂರ್ಣವಾದ ತತ್ವಗಳು ಮತ್ತು ವಿಚಾರಧಾರೆಗಳು ಮಂಡನೆಯಾಗುತ್ತದೆ. ಮುಂದಿಡುವ ವಿವೇಚನಾ ಶೀಲ ಅನಿಸಿಕೆ ಅಭಿಪ್ರಾಯಗಳಿಗೆ ವ್ಯವಸಾಯವಿಲ್ಲದಿದ್ದರೆ ಅಸಂಬದ್ಧ ಪ್ರಲ್ಲಾಪವಾದಂತಾಗುತ್ತದೆ. ವ್ಯವಸಾಯವೆಂದರೆ ಕೃಷಿ ಕ್ಷೇತ್ರದ ಒಂದು ಬೌತಿಕವಾದ ಕೆಲಸವೆಂದೆನಿಸಬಹುದು ಆದರೆ ಇದನ್ನು ನಾವು ಮಾಡುವ ವಿಚಾರಗಳಲ್ಲೂ ನೈತಿಕವಾಗಿ ಮಾಡಿದಾಗ ಮಾತ್ರ ಜೀವನವೆನ್ನುವುದು ನವಿರಾಗಿ ಕಂಗೊಳಿಸುವುದು. ತಾರ್ಕಿಕವಾದ ವ್ಯವಸಾಯವಿರದಿದ್ದರೆ ಉಳಿದವರ ಎದುರು ತಲೆ ತಗ್ಗಿಸುವಂತ ಮಾತನಾಡಬೇಕಾಗುತ್ತದೆ. ಆಗ ಜೀವನವೆಂಬುದು ಫಸಲು ಬಾರದ ಬಂಜರು ಭೂಮಿಯಂತಾಗುತ್ತದೆ.

ಬರಡು ಬುರುಡೆಯಂತೆ ವ್ಯವಹರಿಸದೆ, ಸತ್ವ ಸಾರುವ ವಿಷಯಗಳನ್ನು ಅರುಹಿದರೆ ತಾರೆಗಳ ನಡುವಿನಲ್ಲಿ ಕಂಗೊಳಿಸುವ ಶಶಿಯಂತಾಗುವುದು ಖಂಡಿತ. ಒಂದುವೇಳೆ ಹಾಗಾಗದಿದ್ದರೂ ಆಭರಣಗಳ ನಡುವಿನಲಿ ಮಿನುಗುವ ಮುತ್ತಿನಂತಾಗುವುದಂತೂ ನಿಶ್ಚಿತ. ವ್ಯವಸಾಯವಿರುವ ವಿಚಾರವಂತರ ಬಾಳು ಹೇಗಿರುತ್ತದೆಂದರೆ ಇರುವೆಗಳು ಮುತ್ತುವ ಸಿಹಿಯಂತಿರುತ್ತದೆ. ಅಲ್ಲದೆ ಕಡಿವ ಜೇನು ಹುಳುವಿನಿಂದಾಗುವ ಜೇನು ತುಪ್ಪದಂತಿರುತ್ತದೆ. ವ್ಯವಸಾಯವಿರುವ ವಿಚಾರದಿಂದ ವ್ಯವಹರಿಸಿದರೆ ನೈತಿಕ ಸ್ಪರ್ಶದ ಅನುಭವಿಯಾಗುವುದರಲ್ಲಿ ಅನುಮಾನವಿಲ್ಲ.