Sunday, August 21, 2016

ಬಾಳಾಂಕಿತ

ಆ ಒಂದು ಸಂಪರ್ಕ
ಜೊತೆಯಾದ ಸಂದೇಶ
ತುಸು ನಾಚಿತು ಸವಿಗನಸು
ನಿನ ಸಂಗಡ ಬೆರೆಯಲು

ನಿರ್ವಿಕಾರ ಕಲ್ಪನೆಯಲಿ
ಮನಸಲ್ಲಿಳಿದೆ ಸ್ನೇಹದಲಿ
ಹರಟೆ ಸಂಕ್ಷಿಪ್ತ ಮಾತು
ಸ್ಪೂರ್ತಿಯಾಯ್ತು ಸಂಬಂಧಕೆ

ಕಾಲೆಳೆವ ಕೀಟಲೆಯ ದನಿ
ಹರ್ಷಕೆ ಕಾರಣವಾದ ಕಂಪನ
ಒಣಜಂಭ ಮುಂಗೋಪಿಗೆ
ಬಾವದಿಂದಾಗದ ತಿರಸ್ಕಾರ

ಸಮಯದ ಸಂಭಾಷಣೆ ತಿಳಿಸಿತು
ನಾವು ಸರಿಯಾದ ಜೋಡಿಯೆಂದು
ಕೈಪಿಡಿದು ಜೀವನವ ಮಾಡಲೋಗ್ಯವು
ಹೊಂದಿಕೊಂಡು ಒಂದಾಗಿ ನಾವಿಬ್ಬರು

ಸರಳ ನಡೆ ನುಡಿಗೆ
ಸೋತಿತು ಈ ಮನ
ಸೊಕ್ಕು ಸಮ್ಮತಿಸಿತು
ಮದುವೆಗೆ ಸಂಚಲನ

ಹಿರಿಯರ ಮಾತುಕತೆಲಿ
ಕಿರಿದಾದ ಭಾವಗೀತೆ
ಸಂಪ್ರೀತಿ ವಿನಿಮಯವು
ಹಾಕಿದೆ ಬಾಳಿಗೆ ಅಂಕಿತವ

Monday, August 1, 2016

ನಂಬಿಕೆಗೊಂದು ಕಲ್ಪನೆ

ಮಾತಿನಲಿ ಹೇಳಲಾಗದ ನಂಬಿಕೆ
ತನ್ನದೇ ಉಳಿವುಂಟು ಗತಕೆ
ಸೌಮ್ಯ ಸಮ್ಮತಿಯಿಹುದು ಬಲಕೆ
ಸ್ಪೂರ್ತಿ ನೀಡುತಿಹುದು ಜಗಕೆ

ಲಿಖಿತ ಲೇಖನ ಹಣೆ ಬರಹ
ಕಾಣದು ಗೀಚಿದ ಪದಗಳು
ಸಿಗವುದೆಂದೊ ಆ ಲೇಖನಿ
ಬೊಮ್ಮ ವಿಶ್ರಮಿಸಲೆಂದು ಕ್ಷಣಕೆ

ಸತತ ಸೃಷ್ಠಿಯ ಕರ್ಮಕೆ
ಗುಡಿಯಿರದು ಹುಟ್ಟಿಸಿದ ಫಲಕೆ
ಗೆಲುವಿಗುಂಟು ಸ್ವಾಮ್ಯದ ಜಂಭ
ಬವಣೆಗೆ ನೆಪ ಬ್ರಹ್ಮ ಬರಹ

ಯಕ್ಕಡದಲಿ ತುಳಿದರೂ ಬುಡದಲಿ
ಉಳಿ ಪೆಟ್ಟಿನ ಹೊಡೆತ ಅರಳಲು
ಅನಾವರಣ ಕಲ್ಪಿತ ಮೂರ್ತಿಗೆ
ಪೂಜೆ ನೈವೇದ್ಯ ತುಚ್ಛ ಶಿಲೆಗೆ

ಗರ್ಭ ಗುಡಿಯಲಿ ಕಾಣುವುದು
ನಂಬಿಕೆಗೊಂದು ಕಲ್ಪಿತ ರೂಪ
ಮಂದ ಬೆಳಕಿನಲಿ ಪ್ರಜ್ವಲಿಸುವುದು
ಬಾಳ ಬೆಳಗಿಸುವ ಆಧಾರ ದೀಪ