Tuesday, March 29, 2016

ನಿಸ್ವಾರ್ಥವೆಲ್ಲಿದೆ!!

ಸ್ವಾರ್ಥವೆಲ್ಲಿದೆ ಸ್ವಾರ್ಥವೆಲ್ಲಿದೆ
ಎಂದು ಕೇಳುವ ಪ್ರಮೇಯವಿಲ್ಲಾ
ಆದಿ ಅಂತ್ಯದ ನಡುವಿನಲ್ಲಿ
ಬಂದು ಹೋಗುವ ತೃಣವಿನಲ್ಲೂ
ಹೇಳಲಾಗದು ನಿಸ್ವಾರ್ಥವೆಲ್ಲಿದೆ.

ಸ್ವಾರ್ಥಿಯು ತಾನೆಂದು
ಪೇಳುವವರಾರಿಲ್ಲ
ವಿಶಾಲ ಮನಸಿಗನಿಗೂ
ತಾನೊಬ್ಬನೆ ನಿಸ್ವಾರ್ಥಿಯಾಗಿರಬೇಕೆಂಬ
ಮನದಿಚ್ಛೆಯಿರುವುದು.

ಸ್ವಾರ್ಥವಿರದ ಮನುಜನಿಲ್ಲ
"ಸರ್ವೇ ಜನಾಃ ಸುಖಿನೋ ಭವಂತು"
ಪ್ರಾರ್ಥನೆಯ ತುದಿಯಲ್ಲಿ
ಎಲ್ಲರಿಗಿಂತ ನನಗೋಂದು ಚೂರು
ಜಾಸ್ತಿ ಒಳ್ಳೆಯದಾಗಲಿಯೆಂಬ ವಿನಂತಿ.

ಸ್ವಾರ್ಥವಿಲ್ಲದವನಾರೆಂದು ಕೇಳಿದರೆ
ಜನರ ಬಾಯಲ್ಲಿ ಬರುವುದು "ದೇವ"ನೆಂದು
ಅವನಿಗೂ ಸ್ವಾರ್ಥವಿದೆಯೆಂದರೆ ತಪ್ಪಾಗದು!!
ಬೇರೆ ದೇವನಿಗಿಂತ ಹೆಚ್ಚು ಭಕ್ತರು
ತನಗಿಹರೆಂದು ಬೀಗಬೇಕೆಂದು!!

ದೇವನೊಬ್ಬನಾದರೆ ನಾಮ ಹಲವು
"ನಾಮ"ಗಳಿಗೂ ಸ್ವಾರ್ಥವಿದೆಯೆನ್ನಬಹುದು
ಸರ್ವಸಂಗ ಪರಿತ್ಯಾಗಿ ಯಾದರೂ
ಅವನಂತರಾಳದಲಿ ಸ್ವಾರ್ಥವಿರಬಹುದು
ತನ್ನನುಯಾಯಿಗಳಿಗೆ "ಮೋಕ್ಷ"ಸಿಗಲೆಂದು!!

ಸ್ವಾರ್ಥವು ಬಿಡದು ಅಗೋಚರವನ್ನು
ಆಕಾರವಿರದ ಅಲ್ಲಾಃನಿಗೂ
ಸ್ಪುರದ್ರೂಪಿಯಾಗಬೇಕೆಂಬ ಬಯಕೆ!!
ಶಿಲುಬೆಯೇರಿರುವ ಏಸುವಿಗೆ
ನಿಲ್ಲುಲು ನೆಲ ಸಿಗಲೆಂಬ ಹಂಬಲ!!

ಸ್ವಾರ್ಥವಿದೆ ಹುಸಿದು ತಿನ್ನುವ ಪ್ರಾಣಿಗಳಲಿ
ಹರೆಯುವ ಕ್ರಿಮಿ ಕೀಟಗಳಲಿ
ತನಗೊಂದೆ ಆಹಾರ ಸಿಗಲೆಂಬ ಯೋಚನೆ
ಹಾರುತ ಹಾಡುವ ಪಕ್ಷಿಗಳಿಗೂ
ತನ್ನ ಹಾಡನ್ನೇ ಎಲ್ಲ ಕೇಳಲೆಂಬ ಮಿಡಿತ!!

ಹಸಿರಿಗೆ ಹೆಚ್ಚೆಚ್ಚು ಉಸಿರಿತ್ತು ಸಾರ್ಥಕವಾಗುವಾಸೆ!!
ಶಿಲೆಗೆ ಬಹು ಚಂದದ ಶಿಲ್ಪವಾಗುವಾಸೆ
ಮಣ್ಣಿಗೆ ತುಂಬುವ ಫಸಲು ನೀಡುವಾಸೆ
ಬೆಟ್ಟಗಳಿಗೆ ಬಾನೆತ್ತರ ಬೆಳೆಯುವಾಸೆ
ಜೀವವಿರದ ನಿರ್ಜೀವಿಗಳಿಗೂ ಸ್ವಾರ್ಥವಿದೆ..!!

Monday, March 21, 2016

ದೃಢ ಆತ್ಮವಿಶ್ವಾಸ

ನಿನ್ನ ತುಂಬು ಕಿಸೆಯ ಭಾರಕೆ
ಹಲವು ಸ್ನೇಹಿತರು ಸಂಗಕೆ
ನಿನ್ನ ನಗುವಿನ ಮೆರವಣಿಗೆ
ಬಹಳ ಬಂಧುಗಳು ಜೊತೆಗೆ
ಗೆಲುವಿನಲಿ ಸುತ್ತ ನಿಲ್ಲುವವರು
ಸೋಲಿನಲಿ ಕೈ ಹಿಡಿಯರು

ಸತ್ತ ಮನಸಲಿ ಸೂಕ್ಷ್ಮತೆಯಿರದು
ಬಂದಿದ್ದ ಎದುರಿಸಲು ಹಿಂಜರಿಯದು
ಬಳಿಗೆ ಬರುವ ಜನರಿಗೆಲ್ಲ
ಸಿಹಿ ನಗುವನು ಚಪ್ಪರಿಸು
ನೋವ ನುಂಗಿದ ಜೀವದೊಳಗೆ
ನಲಿನಿನ ಮುಖವಾಡದ ಛಾಯೆ


ಹೊಂಡಕ್ಕೆ ಬಿದ್ದ ವ್ಯಕ್ತಿಗಿಂದು
ಆಳಿಗೊಂದು ಕಲ್ಲೆಸೆಯುವರು
ಬಾಯಿಗೆ ಬಂದ ಮಾತಿನಿಂದ
ಮನಸ ಚುಚ್ಚುವರು ಸೂಜಿಯಿಂದ
ಗಾಳಿಸುದ್ಧಿಯ ಹಬ್ಬಿಸಿ ಊರಲಿ
ಮುಖವನೆತ್ತಿ ನಡೆಯದಂತೆ ಮಾಡುವರು

ಉಗಿಸಿಕೊಂಡು ಬದುಕಲಾಗದು
ತಲೆಯೆತ್ತಿ ನಡೆಯುವ ಮಾನದಲಿ
ಕುನ್ನಿ ಕೂಗಿದರೆ ಹಾಳಾಗದು
ದೇವಲೋಕವೆಂಬಂತೆ ಜೀವಿಸು
ನಿನ್ನ ಹೆತ್ತವರ ಸಂತೈಸು ಘಳಿಗೆಯಲಿ
ದೃಢವಾಗಿರಲಿ ಆತ್ಮವಿಶ್ವಾಸ

Tuesday, March 8, 2016

ಪ್ರೀತಿಯೇ ಲೇಸು

ಏಕೋ ಕಾಣೆ
ನನ್ನ ಮನಸಲಿ
ನಿನ್ನ ಭಾವದ
ಚಿಂತನೆ

ಹೇಗೋ ನಾನೇ
ನಿನ್ನ ಕನಸಲಿ
ನುಗ್ಗಿ ಬರುವ
ಕಲ್ಪನೆ

ಸೊಗಸ ಸೂತ್ರಕೆ
ವಿರಸ ಯಾತಕೆ
ಉಕ್ಕಿ ಹರಿಯುಲಿ
ಎದೆಯ ಭಾವನೆ

ಹಲವು ಚಿಂತನೆ
ಚಿತ್ತ ಚಿತೆಯಲಿ
ಸುಡುತ ಕಮರಿದೆ
ಅಂತರಂಗದಲಿ

ಕುಪಿತ ಕಲ್ಪಿತ
ಸೂಕ್ಷ್ಮ ಚಿತ್ರಕೆ
ಸುಡುವ ಚಿಂತೆ
ಪಾತ್ರವಾಗಿದೆ

ಬಳಿಗೆ ಬೇಕು
ಬಯಕೆ ಸಾಕು
ಜೊತೆಗೆ ಸಾಗುವ
ಅಂಕಿತವ ಹಾಕಲಿ

ಕಾಳಜಿ ಮಾಡುವ
ಕನಸಲಿ ಕಾಡುವ
ಒಲವನೆ ಉಣಿಸುವ
ಜೀವಕೆ ಹಂಬಲ

ನೆನಪಿರಲಿ ಎಂದು
ಬಯಸುವ ಪ್ರೀತಿಗಿಂತ
ನಮ್ಮನು ಬಯಸಿದ
ಪ್ರೀತಿಯೇ ಲೇಸು

Sunday, March 6, 2016

ಕತ್ತಲೆಯ ಹಣತೆ

ಅಳುವ ಮೊಗದಲ್ಲಿ
ನಗುವ ಕನಸೆಲ್ಲಿ
ಕತ್ತಲೆಯ ಹಣತೆಯಲಿ
ದೀಪವೆಲ್ಲಿ.....

ಮುದ್ದು ಮನಸಲ್ಲಿ
ಸದ್ದು ಮಾಡಿಲ್ಲಿ
ಬದುಕಿನ ಬೇಗೆಯಲಿ
ಭಾವವೆಲ್ಲಿ.....

ನಿನಗೊಂದು ಜೀವನವು
ಮೀಸಲಿರಲು
ಬಳಸದನು ಅಳಿಯದಂತೆ
ನಿನ್ನ ಹೆಸರು

ತೆಗಳಿಕೆಯ ಬದುಕು
ನಿನಗೆ ಇರಲು
ತಪ್ಪುಗಳು ಮರುಕಳಿಸವು
ಎಂದು ಬೀಗು

ಹೊಗಳಿಕೆಯ ಬಾಳು
ಒದಗಿಬರಲು
ಶತ್ರುಗಳು ಎರಗುವ
ಭೀತಿ ಉಂಟು

ಅಂತರಂಗದ ಯೋಚನೆ
ಸುಕೃತವ ಬಯಸಲು
ಹಾವಭಾವಗಳೇ ನಿನ್ನ
ವ್ಯಕ್ತಿತ್ವದ ಗುರುತು

ಮನಸಿನಲಿ ಬಯಕೆಯ
ಗೊಂಚಲುಳಿದು
ಹೊರಹೊಮ್ಮುವ ಭಾವವು
ಟೀಕೆಗಳಿಯುವುದು

ಈ ಜನ್ಮ ನಿಮಗಾಗಿ
ಉಗಿದುಕೊಳ್ಳಿ
ಈ ದೇಹ ಸತ್ಕಾರ್ಯಕೆ
ಅಗೆದುಕೊಳ್ಳಿ