Sunday, December 6, 2015

ನಿಶೆಯ ಸೆರಗು

ಮುಬ್ಬು ಮುಗಿಲ ಮಾಲೆಯಲಿ
ಅಡಗಿರುವ ಹೊಂಗಿರಣದ ಪಗಳೆಗಳು
ಚೂರು ಬಂದು ವಿರಹಿ ಎಂದು
ಅತ್ತ ಇತ್ತ ಅರಸಿದೆ ಜೋಡಿಯನು

ಸನಿಹದಲ್ಲಿ ಸಂಗಾತಿಯನು ಕಲ್ಪಿಸಿ
ದಿಟ್ಟ ತನದಿ ನೋಡಿದೆ ಒಂಟಿಯಾಗಿ
ಯಾವ ಮಗ್ಗಲಿನಲಿ ಹೊರಬಂದರೂ
ಕೆಲಸವಾಗದೆ ಬೇಸರಿಸಿತು ಸುಂಕವಿತ್ತರು

ಮೂಡಣದಲಿ ಹೊರಗೆ ಬಂದರೆ
ಕೋಳಿ ಕೂಗಿನ ಕಾಟವು
ಪಡುವಣದಲಿ ಮರೆಯಾದರೆ
ನಿಶಾಚರಗಳ ಮಾರ್ದನಿಯು

ದಡದ ಕಡೆಗೆ ಓಡುವ ಅಲೆಗಳಲಿ
ತಾರತಮ್ಯವಿಲ್ಲದ ತತ್ವಗಳಿವೆ
ಪ್ರಾಣಿಯಾಗಲಿ ಕಸವೇ ಆಗಲಿ
ಒಡಲಲ್ಲಿ ಉಳಿಸದೆ ಹೊರಗೆ ದೂಡುವುದು

ಸುರಿವ ಮಳೆಯಲಿ ಬೇಧವಿಲ್ಲ
ಎಲ್ಲರ ಮನ ತಣಿಸುವುದು
ಬೋರ್ಗರೆವ ತರಂಗಗಳ ಜೊತೆ
ನಿಶೆಯ ಸೆರಗು ಹಿಡಿಯಲೆ ಏಕಾಂತದಲಿ

ಮುಂಜಾನೆಯು ಮುಸ್ಸಂಜೆಯಂತೆ
ರಸಗಳೆ ಇಲ್ಲದಾಗ ನವರಸಗಳಲಿ
ಬೆಳಕ ಹೊತ್ತು ಕಿರಣ ಬಂದರೂ
ಚೈತನ್ಯವಿಲ್ಲದಂತೆ ಜೀವ ಸೊರಗುವುದು

Friday, December 4, 2015

ಹದಿ-ಹರೆಯ

ಹದಿಹರೆಯದ ಮುನ್ನೋಟಕೆ
ಮನಸೇಳಿದೆ ಆಲಿಂಗನ
ಅದು ಶಪಿಸುವ ಪರಿಣಾಮಕೆ
ಬದುಕಲ್ಲಿದೆ ಆಕ್ರಂದನ

ಮನಸಲ್ಲಿನ ಬಹು ಮಿಡಿತಕೆ
ಬೇಕಾಗದ ಕೆಲ ತುಡಿತವು
ಆಸ್ವಾದಿಸೊ ಪ್ರತಿ ನೋಟಕೆ
ನವರಸಗಳ ಉದ್ಭವವು

ಬಯಕೆಗಳು ಬಹಳ
ಏರು ರಕ್ತದಲಿ ಈಡೇರಿಕೆಗೆ
ಸರಿ ತಪ್ಪುಗಳ ಎಣಿಕೆ
ಜೀವನದಲ್ಲಿ ತುಸು ಸೋತರೆ

ಏನೋ ಹಿಡಿಯುವ ಆಸೆ
ಉದ್ವೇಗದಲ್ಲಿ ತಾಳ್ಮೆಯಿಲ್ಲದೆ
ಸಹ ಬಾಳ್ವೆ ನಡೆಸುವ ಆಸೆ
ಯವ್ವನದಲ್ಲಿ ಸಂಗಾತಿಯ ಜೊತೆ

Thursday, December 3, 2015

ಒಲವಲಿ ಮನ್ನಿಸು

ನೆನಪಲಿ ಕ್ಷಮಿಸು ನೋವಾದರೆ
ಒಲವಲಿ ಮನ್ನಿಸು ಸಿಟ್ಟಾದರೆ
ಹಗಲಲಿ ನಿದ್ರಿಸು ನಲಿವಿದ್ದರೆ
ಇರುಳನೆ ಅಳಿಸು ಈ ಜಗವು ಸುಳ್ಳಾದರೆ

ಮನಸಿದು ಒಲವಿನ ವೇದಿಕೆ
ಹೃದಯವು ಒಲವಿನ ದೀವಿಗೆ
ಭಾವನೆಯೇ ಮೌನದ ಮಾತು
ಕೌತುಕವು ಕಣ್ಣ ಸನ್ನೆಯಲಿ ಕೂತು
ಮರೆಯದೆ ಬಾಳುವ ಮರು ದಿನಗಳ ಸರದಿಯಲಿ 

ಇಳೆಯಲಿ ಚಾರಿತ್ರ್ಯದ ಚಪ್ಪರ
ಕನಸಲಿ ಕಲ್ಪನೆಗಳ ಅಬ್ಬರ
ನವೋದಯದ ನಂಬಿಕೆಯು ಮುಂಜಾನೆಯಲಿ
ನಲಿವಿನ ನರ್ತನವು ಮುಸ್ಸಂಜೆಯಲಿ
ಚೈತನ್ಯಕೆ ನಾವಿಬ್ಬರೇ ಆದರ್ಶ ವ್ಯಕ್ತಿಗಳು