ಹಬ್ಬವೆಂದರೆ ಸಂತಸ, ಮನೋಲ್ಲಾಸ, ಸಡಗರದ ಗಡಿಬಿಡಿಯ ಕ್ಷಣಗಳು. ಬಗೆ ಬಗೆಯ ತಿಂಡಿ ತಿನುಸು, ಹೊಸ ಬಟ್ಟೆ, ಅಲಂಕೃತ ಮನೆಯ ಎದುರು ರಂಗೋಲಿ ಹೀಗೆ ವಿಧ ವಿಧವಾದ ಸಂತಸದ ಆಟೋಟಗಳು. ಎನೋ ಬಯಸಿದ ಬರಿದಾದ ಮನಗಳಿಗೆ ಮುದ ನೀಡುತ್ತಿದ್ದ ಆಯಾಮವಾಗಿತ್ತು. ಆದರೆ ಈಗ ಆ ದಿನಗಳು ಮರೆಯಾದಂತೆ ಮನವರಿಕೆಯಾಗುತ್ತಿದೆ. ಹೇಗೆ ಬೇಕಾದರೂ ಹಬ್ಬದ ದಿನವನ್ನು ಬಳಸಿಕೊಳ್ಳುವ ಬದಲಾಯಿತ ಸಂದರ್ಭ ನಮದಾಗುತ್ತಿದೆ. ವಿಶ್ರಾಂತಿಯೋ, ತಿರುಗಾಟವೋ, ಪಯಣವೋ, ಪ್ರವಾಸವೋ ಹೀಗೆ ಮನ ಬಂದಂತೆ ವ್ಯಯಿಸುವ ಪೂರ್ವ ನಿಯೋಜಿತ ದಿನಗಳಾಗುತ್ತಿದೆ.
ಯಾಕೆ ನಮ್ಮ ದಿನಚರಿಗಳು ಬದಲಾಗುತ್ತಿದೆ, ಆಧುನಿಕತೆಗೆ ತಲೆಬಾಗಿ ನಾವು ನಮ್ಮ ಪಾರಂಪರಿಕ ಜೀವನ ಶೈಲಿಯಲ್ಲಿ ಬಂದಿರುವ ಸಂಭ್ರಮದ ಕ್ಷಣಗಳನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ಅದಕ್ಕೊಂದು ಸಮರ್ಥನೆ ನೀಡಲು ಮುಂದಾಗುತ್ತಿರುವುದು ವಿಪರ್ಯಾಸವಾಗಿದೆ. ಇಂದ್ಯಾಕೆ ನಮ್ಮ ಹಬ್ಬದ ದಿನಗಳು ಸಂಭ್ರಮವನ್ನು ಕಳೆದುಕೊಳ್ಳುತ್ತಿದೆ ಎಂದು ಸ್ವಲ್ಪ ಓರೆಗಲ್ಲಿಗೆ ಹಚ್ಚಿ ನೋಡಿದಾಗ ಆದ ಬದಲಾವಣೆಯ ದರ್ಶನವಾಗುವುದಂತು ಖಂಡಿತ. ಏನಿತ್ತು, ಏನಾಯ್ತು, ಏನಾಗುತ್ತಿದೆ ಎನ್ನುವುದರ ಬಗ್ಗೆ ನಮ್ಮ ಗಮನವನ್ನು ಹರಿಸಿದಾಗ ಗೋಚರಿಸುವ ನಿದರ್ಶನಗಳು ನಮ್ಮೆದುರಿಗೆ ಹೀಗೆ ಬರುತ್ತದೆ.
ಕೆಲವು ವರ್ಷಗಳ ಹಿಂದೆ ನಮ್ಮ ಜನರು ಹಳ್ಳಿಯ ಜೀವನಕ್ಕೆ ಮನ್ನಣೆ ಹಾಕಿ ಅದರಂತೆ ಬದುಕಲು ಮತ್ತೆ ಅಲ್ಲಿಯ ಬದುಕಿನ ಶೈಲಿಗಳಿಗೆ ಜೈ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಬಹುತೇಕ ಮಂದಿ ಪೇಟೆಯ ಬದುಕಿಗೆ ಒಗ್ಗಿಕೊಳ್ಳಲಾರಂಭಿಸಿರುವುದರಿಂದ ನಮ್ಮ ಬದುಕಿನ ಪರಿಗಳು ಬದಲಾಗಿರುವುದೇ ಹಬ್ಬ ಹರಿದಿನಗಳು ಮಂದವಾಗುತ್ತಿರಲು ಮುಖ್ಯ ಕಾರಣವಾಗಿದೆ. ಬಹುಪಾಲು ಜನರು ಹಳ್ಳಿಯಿಂದ ನಗರಗಳಿಗೆ ಬಂದಿರುವುದರಿಂದ ಈ ಹಬ್ಬ ಹರಿದಿನಗಳು ತನ್ನ ಮೂಲ ಖುಷಿಯನ್ನು ಕಳೆದುಕೊಂಡು ನಾಟಕೀಯ ಸಂಭ್ರಮದ ಜಡತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ಹಬ್ಬ ಹರಿದಿನಗಳ ಸಂಭ್ರಮದ ಬಗ್ಗೆ ಯೋಚಿಸುವ ಮನ ಬೇಸರಿಸುತ್ತಿದೆ.
ಈ ದಿನಗಳಲ್ಲಿ ಹಬ್ಬಗಳು ತನ್ನ ಸಂಭ್ರಮವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಹಲವು ಕಾರಣಗಳನ್ನು ಅವಲೋಕಿಸಿದಾಗ ನಿಜವಾದ ಬದಲಾವಣೆಯ ಅರಿವಾಗುತ್ತದೆ. ಮೊದಲು ಹಬ್ಬ ಬಂತೆಂದರೆ ಮಕ್ಕಳಿಗೆ ಖುಷಿ, ಮನೆಯ ಪುರಷ ಮತ್ತು ಮಹಿಳೆಯರಲ್ಲಿ ಸಂಭ್ರಮ, ಸಡಗರ, ಹಾಗೆ ಮನೆಯ ಯಜಮಾನನಿಗೆ ಮಾತ್ರ ಸಡಗರದ ಜೊತೆ ಯೋಚನೆ, ಭಯ, ದುಗುಡ ಕಾಣುತ್ತಿತ್ತು. ಏಕೆಂದರೆ ಮಕ್ಕಳಿಗೆ & ಮನೆ ಮಂದಿಗೆಲ್ಲ ಆಟ ಮತ್ತು ಹೊಸ ಬಟ್ಟೆ ಸಿಗುತ್ತದೆ ಎಂಬ ಆಶಾವಾದದ ಕ್ಷಣವಾಗಿತ್ತು ಆದರೆ ಯಜಮಾನನಿಗೆ ತುಂಬಾ ಹಣ ಹೊಂದಿಸಿ ಬೇಕಾದುದನ್ನೆಲ್ಲ ಹೇಗೆ ತರುವುದು ಎಂಬ ಯೋಚನೆ, ಹಣ ಹೊಂದಿಸಲಾಗುತ್ತದೆಯೋ ಇಲ್ಲವೋ ಎಂಬ ಭಯ, ಸಾಲ ಮಾಡಿದ ಹಣ ಅಗತ್ಯಕ್ಕಿಂತ ಜಾಸ್ತಿ ಖರ್ಚಾದರೆ ಎಂಬ ದುಗುಡ ಹೀಗೆ ಹಬ್ಬ ಹರಿದಿನಗಳು ತನ್ನದೇ ಆದ ಸಂಭ್ರಮವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದ್ದವು.
ಆದರೆ ಇಂದು ಹಲವಾರು ಮಂದಿ ಹಳ್ಳಿಯನ್ನು ಬಿಟ್ಟು ನಗರಗಳಿಗೆ ಉದ್ಯೋಗಾರ್ಥಿಗಳಾಗಿ ಬಂದಿದ್ದಾರೆ. ಅದು ಅಲ್ಲದೇ ನಗರಗಳಲ್ಲಿ ತುಂಬಿಕೊಂಡಿರುವ ಮಾಲ್ ಮತ್ತು ಆಭರಣ ಮಳಿಗೆಗಳು, ಹೊಟೆಲ್ ಮತ್ತು ವೈವಿಧ್ಯಮಯ ಅಂಗಡಿಗಳು ಜನರ ಆಸಕ್ತಿಯನ್ನು ಮೊದಲಿನಂತೆ ಯಾವುದೋ ಒಂದು ದಿನದ ಸಂಭ್ರಮಕ್ಕೆ ಕಾಯದೆ, ಬೇಕೆಂದಾಗ ಪಡೆದುಕೊಳ್ಳುವ ಅವಕಾಶಗಳಿರುವುದರಿಂದ ಜನರಿಗೆ ಈ ಹಬ್ಬ ಹರಿದಿನಗಳೆಂದರೆ ಮೊದಲಿನ ಹಾಗೆ ಸಂಭ್ರಮಿಸುವ ದಿನವಾಗದೆ ವಿಶ್ರಮಿಸುವ ಕ್ಷಣಗಳಗುತ್ತಿರುವುದಕ್ಕೆ ಮುಖ್ಯ ಕಾರಣವೆನ್ನಬಹುದು. ಅದು ಅಲ್ಲದೆ ಆನ್-ಲೈನ್ ವ್ಯವಹಾರಗಳು ಜಾಸ್ತಿ ಪ್ರಚಲಿತಕ್ಕೆ ಬಂದಿರುವುದರಿಂದ ಹಾಗೂ ಈ ಮಾಲ್ ಮತ್ತು ಹೊಟೆಲ್-ಗಳು ಹಳ್ಳಿಗಳಿಗೂ ವ್ಯಾಪಿಸಿರುವುದರಿಂದ ಹಳ್ಳಿಗಳಲ್ಲೂ ಹಬ್ಬದ ಸಂಭ್ರಮ ಮರೆಯಾಗುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.
ಮನೆಯಿಂದ ಹೊರಗಡೆಗೆ ಬಿಡದೆ ಮಕ್ಕಳನ್ನು ಮನೆಯೊಳಗೆ ಕೂಡಿಹಾಕುವ ಈ ಆಧುನಿಕ ಸಂಸ್ಕೃತಿ ಮಾನಸಿಕವಾಗಿ ಮಕ್ಕಳನ್ನು ಕುಬ್ಜರನ್ನಾಗಿ ಮಾಡುತ್ತಿದೆ. ಮೊದಲೆಲ್ಲ ಹಬ್ಬದ ದಿನಗಳು ಬಂತೆಂದರೆ ಆ ಆ ಹಬ್ಬದ ಸಮಯ ಸಂದರ್ಭಕ್ಕನುಸಾರವಾಗಿ ಬಗೆ ಬಗೆಯ ಆಟೋಟಗಳು ಮಕ್ಕಳಲ್ಲಿ ಕಂಡುಬರುತ್ತಿದ್ದವು. ಆದರೆ ಇಂದು ಮೊಬೈಲ್ ಆಟ, ಗಣಕ ಯಂತ್ರದ ಆಟಗಳಿಗೆ ದಾಸರಾಗಿರುವ ಮಕ್ಕಳಲ್ಲಿ ದೈಹಿಕ ಸೂಕ್ಷ್ಮತೆಗಳು, ತೊಂದರೆಗಳು ಕಾಣಿಸುತ್ತಿವೆ ಹಾಗೂ ಹಬ್ಬದ ಮೂಲ ಸಂಭ್ರಮ ಅಡಗುತ್ತಿರಲು ಇದೊಂದು ಸಂಕಲಿತ ಉದಾಹರಣೆಯಾಗಿದೆ. ಏಕೆಂದರೆ ಮಕ್ಕಳ ಸಡಗರವು ಯಾವುದೇ ಹಬ್ಬ ಹರಿದಿನಗಳ ಸಂಭ್ರಮವನ್ನು ವೃದ್ಧಿಸುತ್ತದೆ ಎನ್ನುವುದನ್ನು ಮರೆಯಬಾರದು.
ಆನ್-ಲೈನ್ ವ್ಯವಹಾರಗಳು ಹೆಚ್ಚಾಗುತ್ತಿರುವುದರಿಂದ ದೈಹಿಕ ಆಯಾಸವಿಲ್ಲದೆ ಬೇಕಾದುದನ್ನು ಮನೆ ಬಾಗಿಲಲ್ಲೇ ಪದೆದುಕೊಳ್ಳುವ ಅನುಕೂಲಗಳು ಮಾನವನ ದೇಹಕ್ಕೆ ವ್ಯಾಯಾಮದ ಕೊರತೆ ಎದುರಾಗಲು ಮತ್ತು ಹಬ್ಬಗಳ ನಿರೀಕ್ಷಣೆಯ ಸಂಭ್ರಮ ಮರೆಯಾಗಲು ಪ್ರಮುಖವಾದ ಕಾರಣಗಳು. ಮೊದಲೆಲ್ಲ ಹಬ್ಬದ ಸಂಭ್ರಮಕ್ಕೆ ಹಾತೊರೆಯುತ್ತಿದ್ದ ಜನಗಳು ಈಗ ಹಬ್ಬ ಬಂತೆಂದರೆ ರಜೆ ಸಿಗುತ್ತದೆ, ತಲೆತಿನ್ನುವ ಕೆಲಸವಿಲ್ಲದೆ ಆರಾಮವಾಗಿ ಮನೆಯಲ್ಲೇ ವಿಶ್ರಮಿಸಬಹುದೆಂದು ಚಿಂತಿಸುವುದರಿಂದ ಹಬ್ಬದ ಸಂಭ್ರಮ ಕ್ಷೀಣಿಸುತ್ತಿದೆ. ಅಮೃತ ಅತಿಯಾದರೆ ವಿಷವೆಂದು ಹೇಳುತ್ತಾರೆ ಹಾಗೆ ಪ್ರತಿನಿತ್ಯ ಬೇಕಾದ ಅವಶ್ಯಕ ವಸ್ತುಗಳಾದ ಬಟ್ಟೆ, ತಿಂಡಿ, ಆಟಗಳು ಆಯಾಸವಿಲ್ಲದೆ ದೊರೆಯುವುದರಿಂದ ಆಗಾಗ ಬರುವ ಹಬ್ಬದ ಸಂಭ್ರಮ ಅಡಗಿರಲು ಸ್ಪಷ್ಟ ಕಾರಣಗಳಾಗಿದೆ. ಇದು ಬದಲಾಯಿಸಲು ಆಗದೇ ಇರುವಂತ ಬದಲಾವಣೆಯಾಗಿದೆಯೆಂದರೆ ತಪ್ಪಾಗಲಾರದು.