Monday, July 20, 2015

ಜಿಜ್ಞಾಸೆ

ಒಂದೇ ಸಾಲಿನಲ್ಲಿ ಬರೆಯಲೆ
ನಿನ್ನ ಅಂದವ
ಪದಗಳಿಗೆ ನಿಲುಕದಂತ
ಗುಪ್ತ ಸೌಂದರ್ಯವ
ಹೋಲಿಕೆಯಿರದ ಭಾವಗಳೆಲ್ಲ
ಭಾವನೆಗೆ ಸ್ಪೂರ್ತಿ ತುಂಬಲು
ಅಗಲಿ ಹೋಗುವ ಚಿತ್ತಕೆಂದು
ಜೀವ ಬಾರದು

ಸುಪ್ತ ಮನಸಿನ ಆಳದಲ್ಲಿ
ನೂರಾರು ಚಿಂತನೆ
ನಿನ್ನ ಚಂದಕೆ ಅವಧಿಯಿಹುದೇ
ಎಂಬ ಯೋಚನೆ
ಬಾಹ್ಯ ರೂಪವೋ ಒಳಗಿನಂದವೋ
ಯಾವುದು ಸೂಕ್ತವೆಂಬ ಕಲ್ಪನೆ

ಮರ್ಕಟದಂತಹ ಮನಸ್ಸಿನಲ್ಲಿ
ಉಳಿಯುವುದೇ ಸ್ಥಿರ ಭಾವನೆ
ಮುಪ್ಪಾಗುವ ಮುಖದಲ್ಲಿ
ಇರುವುದೇ ಆಕರ್ಷಣೆ
ಮುಖವೋ ಚಿತ್ತವೋ
ಗೌಪ್ಯವಾದ ಪರಿಕಲ್ಪನೆ

ಬಾಹ್ಯವಾದ ಮಾರ್ಪಾಟು
ವಯಸ್ಸಿನ ಸಹಜ ಗುಣ
ಮನಸ್ಸಿನ ಬದಲಾವಣೆ
ಸಾಂದರ್ಭಿಕ ಸನ್ನಿವೇಶ
ಅಂದವೋ ಚಂದವೋ
ಬಗೆಹರಿಯದ ಜಿಜ್ಞಾಸೆ 

Saturday, July 18, 2015

ದಾರಿ ತಪ್ಪಿದ ಪಯಣ

ಅರ್ಥವಿರದ ಅನುರಾಗದಲ್ಲಿ
ಅನುಬಂಧವೆಲ್ಲಿ ಹುಡುಕಲಿ
ನನಸು ಮಾಡಲು ಕನಸುಗಳನು
ಬಾಂಧವ್ಯಬೇಕು ಬದುಕಲಿ

ತಂತಿಯಿರದ ವೀಣೆಯಲ್ಲಿ
ರಾಗ ಹೇಗೆ ನುಡಿಸಲಿ
ಗಾನ ನಾಟ್ಯಕೆ ತಾಳ ಹಾಕಲು
ನಾದ ನುಡಿತಕೆ ಸ್ವರವೇ ಬಾರದು

ಲಯವೇ ಇಲ್ಲದ ಹಾಡಿನಲ್ಲಿ
ಮನದ ನೋವಿನ ಕುಣಿತವು
ಪ್ರಾಸವಿರದ ಪದ್ಯದಲ್ಲಿ
ಪದಕೆ ಅರ್ಥವೇ ಕಾಣದು

ಬಂದೇ ಬರುವೆನು ಹಾಡುತ
ಹೊಂದಿ ಬಾಳುವೆ ಸೋಲುತ
ಗಾನ ಕೇಳಲು ತಲೆದೂಗುತ
ಮುಸ್ಸಂಜೆ ಮೌನಕೆ ಶರಣಾಗುತ

ಭಾಸ್ಕರ ಮೂಡಲು ಅರಿಶಿನವು
ಚಿಲಿಪಿಲಿ ಹಾಡಿನ ಸ್ವಾಗತವು
ದಿನವು ಏರಲು ಸುಡುಶಾಖವು
ಶಾಂತವಾಗಲು ಇಂಪಾದ ಸಂಗೀತವು

ಕರ್ಕಶವಾಗದಿರಲು ಸಾಮಗಾನಕೆ
ಸ್ವರ ಏರಿಳಿತದ ಮಾಧುರ್ಯವು
ದಾರಿ ತಪ್ಪಿದ ಬಾಳ ಪಯಣಕೆ
ಅನುಭವಿಗಳ ಮಾರ್ಗದರ್ಶನವು

Thursday, July 16, 2015

ಪದಗಳ ಮರೆತ

ಮರೆತೆ ನಿನ್ನ ಮಾತ ಕೇಳಿ
ಕವಿತೆಯಾಗೋ ಪದಗಳ
ಅರಿತೆ ನನ್ನ ಭಾವ ಹಾಡಿ
ಮನಸ ಕಾಡೋ ಸ್ತುತಿಗಳ
ಜೀವವಿಲ್ಲದ ಕಲ್ಪನೆಗಳಿಗೆ
ಕನಸಿನಲ್ಲಿ ಬದುಕಿದೆ
ಪ್ರೀತಿಯಿಲ್ಲದ ಜೀವಿಗಳಿಗೆ
ನನಸಿನಲ್ಲಿ ನೋವಿದೆ
ಕನಸು ನನಸಿನ ಬಾಳಿನಲ್ಲಿ
ಏಳುಬೀಳಿನ ಪದರಗಳಿವೆ

ಸುಡುಗಾಡಿಗೆ ಹೋದ ದೇಹಕೆ
ಅಗ್ನಿ ಸ್ಪರ್ಶಿಸೋ ಸಂಭ್ರಮ
ಹುಡುಗಾಟದ ತುಂಟ ಮನಸಿಗೆ
ಸಮಯ ದೂಡಲು ಅಕ್ರಮ
ದ್ವದ್ವ ನೀತಿಯ ರೀತಿಗಳಿಗೆ
ಬದುಕ ಪ್ರಾಮುಖ್ಯತೆಗೆ ತರ್ಪಣ

ತನ್ನ ಮಾತಿನ ಬೆಲೆಯನರಿಯದೆ
ತಪ್ಪು ಕಲ್ಪನೆಯ ಅನುಭವ
ಜಗಳವಾಡಲು ಮಾತುಮಾತಿಗೆ
ಸ್ಪೂರ್ತಿ ತೊರೆದ ಕಂಪನ
ಎದೆಯ ಅಗತ್ಯಕೆ ಸ್ಪಂದನೆಯು
ದುರೆಯದೆ ಕಾಡುವ ನಿಬಂಧನೆಯು