Monday, June 13, 2011

|| ಸಂಬಂಧವೋ...ಅನುಬಂಧವೋ...?||


ಯಾವುದು ಸಂಬಂಧವು..?
ಯಾವುದೋ ಅನುಬಂಧವು..?
ಒಲವಿನ ತುಡಿತದ ಸಂಘಕೆ
ಮಿಡಿಯುವ ಬಾವನೆ ಬಂಧವೋ..?

ದೇಹದ ತುಂಬ ಬಹುಪಾಲು ನೀರು
ಹರಿವುದು ರಕ್ತವು ದೇಹದ ಗಾಯಕೆ
ಹೃದಯದ ತುಂಬ ತುಂಬಿದೆ ರಕ್ತವು
ಬರುವುದು ಕಣ್ಣೀರು ಹೃದಯದ ನೋವಿಗೆ
ಇದು ಯಾವ ರೀತಿಯ ಸಂಬಂಧ
ದೇಹ ಹೃದಯಗಳ ಅನುಬಂಧ...||

ವಸಂತ ಮಾಸದಿ ಮಾವು ಚಿಗುರಲು
ಕೋಗಿಲೆ ಗಾನವು ಬಲುಚೆಂದ
ನಿಸರ್ಗ ವಿಸ್ಮಯ ಕಂಡಿರಲು
ಅರಿವುದು ಬಾವನೆ ಬಂಧವು
ಇದು ಯಾವ ರೀತಿಯ ಸಂಬಂಧ
ಜೀವಿ ಪ್ರಕೃತಿಗಳ ಅನುಬಂಧ...||

ತಾವರೆ ಅರಳದು ಸೂರ್ಯನ ನೋಡದ ವಿನಃ
ನೈದಿಲೆ ನಲಿವುದು ಚಂದ್ರನು ಬಂದಾಗ ಪುನಃ
ಬೆಳಕು ಕತ್ತಲಲಿ ನಡೆವುದು ಹೂಗಳ ನರ್ತನ
ಪರಿಸರದ ತುಂಬೆಲ್ಲ ಪರಿಮಳ ಘಮ ಘಮ
ಇದು ಯಾವ ರೀತಿಯ ಸಂಬಂಧ
ಹೂವು ಹಗಲಿರುಳುಗಳ ಅನುಬಂಧ...||

Sunday, June 12, 2011

|| ಇದೇನಾ ಪ್ರೀತಿ....? ||

 
ನನ್ನ ಮನದಲಿ ಮೂಡಿದ ಗೊಂದಲಕೆ
ನೀ ಉತ್ತರಿಸುವೆಯೇನು..?
ಒಂದು ಮೊಗವನು ನೋಡಿದ ತಕ್ಷಣಕೆ
ಪ್ರೀತಿ ಹುಟ್ಟುವುದು ಹೇಗೆ ನೀ ಹೇಳು...?
ಗೊಂದಲಕೆ ಉತ್ತರವೇ ಪ್ರೀತಿಯೇನು...?

ಮುದ್ದು ಮನಸು ಬಯಸಿರುವ
ಹೃದಯ ನೆನೆದಿರುವ
ಕಲ್ಪನೆಯ ರೂಪವನು ಎದುರಲಿ ಕಂಡಾಗ
ಹುಟ್ಟುವ ಒಲವೇ ಪ್ರೀತಿಯೇನು...?

ಎರಡು ಹೃದಯದ ಕಾಮನೆಯು
ಒಂದೇ ದಾರಿಯ ಹೊಂದಿರಲು
ಜೀವನ ಮೌಲ್ಯವ ಅರ್ಥೈಸುತ
ಪರಸ್ಪರ ಬೆಸೆಯುವ ಬೆಸುಗೆಯೇ ಪ್ರೀತಿಯೇನು...?

ಸುಂದರ ರೂಪವ ಕಂಡಾಗ
ಕಣ್ಣೋಟಕೆ ಕಣ್ಣೋಟ ಬೆರೆತಾಗ
ಸೇರುವವು ದೇಹಗಳು ಆಕರ್ಷಣೆಯಲಿ
ಆಗ ಸ್ಪರ್ಷಿಸುವ ಕಾಮವೇ ಪ್ರೀತಿಯೇನು...?

ಅರಿಯದೆ ಬದುಕುತ
ಎದೆಯೊಳಗಿನ ಸ್ವಾರ್ಥವ
ಈಡೇರಿಸಿಕೊಳ್ಳಲು ಹೊಂದಿರುವ ಮಾರ್ಗದ
ಸಂಕ್ಷಿಪ್ತ ರೂಪದ ಶಬ್ಧವೇ ಪ್ರೀತಿಯೇನು...?