Monday, September 9, 2024

ಮನದ ರಾಗ ಭಾವಗೀತೆ

ಮನದ ರಾಗ ಭಾವಗೀತೆ

ಪದವ ಬರೆಯದೇ ಹಾಡಲು

ಬದುಕ ಬವಣೆ ಶೋಕಗೀತೆ

ಕದವ ತೆರೆಯದೇ ನೋಡಲು


ದಿಕ್ಕು ಕಾಣದು ದಾರಿ ತೋರಲು

ದೀನನಾದರೂ ದಯೆಯಲಿ

ಸೋಲು ಸಾಯದು ಬಾರಿ ಯಾದರು

ಸಹಿಸಿಯಾದರೂ ಬಾಳಲಿ


ಹೊಳಪು ಮಿನುಗುವ ಬೆಳಕ ತೋರುವ

ಹರಸಿ ನಿಂತಿಹ ದೈವವು

ಕೊಳಕು ಮನಸಲಿ ಪುಳಕ ಬೀರುವ

ಬೆಳೆಸಿ ಬೆಂದಿಹ ದೇವನು

Wednesday, September 27, 2023

ಹಳೆಯದನ್ನು ಮೆಲುಕುಹಾಕಲು

 ಹಳೆಯದನ್ನು ಮೆಲುಕುಹಾಕಲು ಹುರುಪು ಮತ್ತೆ ಮರಳದು

ಹೊಸತು ಈ ದಿನ ಹಬ್ಬ ಹರಿ ದಿನ ಖುಷಿಗೆ ಕಾರಣವಾಗದು


ಕಳೆದ ಬಾಲ್ಯದ ತೆರೆದ ದೃಶ್ಯವು ಕಣ್ಣ ಎದುರಲಿ ಓಡಿದೆ

ಆಧುನಿಕತೆಯು ಮಬ್ಬ ಹರಿಸಲು  ಸಡಗರವೆ ಅಡಗಿ ಹೋಗಿದೆ

Friday, August 18, 2023

ದವಡೆಗೆ ಮೂಲ

ಬಲಕೆ ಸಂಕೇತ

ಹುಲ್ಲನ್ನು ತಿನ್ನುವ ಆನೆಯು

ಸಾವಿಗೆ ಉಪಮೇಯ

ರಕ್ತವನ್ನ ಹೀರುವ ಸೊಳ್ಳೆಯು


ಬಡವ ಎನ್ನಲು ನೀ

ಮೂದಲಿಸದೆ ಗೌರವಿಸು

ಬಲ್ಲವ ನುಡಿಯಲು ನೀ

ಪರಾಮರ್ಷಿಸುತ ಸ್ವೀಕರಿಸು


ಇಂದು ಬರಬಹುದು

ನಾಳೆ ಮರೆಯಲುಬಹುದು

ಪ್ರೀತಿ ಇರಬಹುದು

ಒಲವು ಅಡಗಲುಬಹುದು


ಅರಿಬೇಕು ನೀನು ಬಾಳ ತಿರುಳ

ಮರಿಬೇಕು ನಾವು ವೈರ ದುರುಳ

ಬಲಕೆ ತಳುಕಿಲ್ಲ ಸಾವಿನ ಗುರುತು

ಬಡವನ ಕೋಪ ದವಡೆಗೆ ಮೂಲ

Monday, July 17, 2023

ಬದುಕಿನ ಬಂಡಿ

ಬದುಕಿನ ಬಂಡಿಯಲ್ಲಿ ನೂರಾರು ತಿರುವುಗಳು

ಆಗುವರಾರು ಇಲ್ಲಿ ಆ ದಾರಿಗೆ ದೀಪಗಳು

ವಿಧವಿಧವಾದ ರೂಪಗಳಲ್ಲಿ   ಆ ದೇವರ ಕುರುಹುಗಳು


ನಾಳಿನ ದಃಖದ ಯೋಚನೆಯಲ್ಲಿ ಈಗಿನ ಸುಖವಿರದು

ಮುಂದಿನ ಸುಖದ ಬಯಕೆಗಳಲ್ಲಿ

ಇಂದಿನ ಕೊರಗಾರದು

ಕ್ಷಣದಲಿ ಉಲಿಯುವ ನಗುವಿದು ಮಾತ್ರ ಎಂದೂ ಮರೆಯಾಗದು


ಮಾಡುವ ಕೆಲಸಗಳಲ್ಲಿ ನಿನ್ನಯ ಶ್ರಮವಿರಲಿ

ಫಲಿತಾಂಶದ ಗಳಿಕೆಯಲ್ಲಿ ಭಗವಂತನ ಕೃಪೆಯಿರಲಿ

ಕ್ರಮದಲಿ ದುಡಿಯುವ ಕೈಗಳಿಗೆಂದೂ ಸ್ವಂತಿಕೆ ಶೃತಿಯಿರಲಿ


ಎಲ್ಲರ ಹೃದಯಗಳಲ್ಲಿ ನೋವಿನ ಕಥೆ ಸಹಜ

ಬದುಕಿನ ಮಜಲುಗಳಲ್ಲಿ ದುಃಖದ ವ್ಯಥೆ ವಿವಿಧ

ಮರೆಮಾಚುವ ಕಣ್ಣಿನ ನಗುವುಗಳಲ್ಲಿ ಬೀಗುವ ಕಲಿ ಮನುಜ

Thursday, June 22, 2023

ಹೂವು ಬಾಡದಿರದು

ಮಳೆಯಲ್ಲಿ ನೆಂದರೂ ಬಿಸಿಲಲ್ಲಿ ಬೆಂದರೂ

ಹೂವೆಂದೂ ಬಾಡದೇ ಇರಲಾರದು

ಇವ ಮೇಲೇ ಎದ್ದರೂ ಅವ ಕೆಳಗೇ ಬಿದ್ದರೂ

ಸಾವನ್ನು ಗೆದ್ದು ಬರಲಾಗದು


ಶೃತಿಯರಿತು ಇಡಬೇಕು ಸರಿಯಾದ ಹೆಜ್ಜೆ

ಇದ್ದಲ್ಲೇ ಹೊರಬೇಕು ಅವ ಕೊಡುವ ವಜ್ಜೆ

ಅಂತ್ಯಾದಿ ನಡುವೆ ಹೋರಾಟದುಳುಮೆ

ಹೊಂದಾಣಿಕೆಯೊಂದೆ ಈ ಬಾಳ ಗರಿಮೆ


ಗಳಿಸಿರುವ ಹಣವನ್ನು ನೀ ಹಂಚಿ ಸಾಗು

ಜನರೊಡನೆ ಛಲಬಿಟ್ಟು ನೀ ಕೊಂಚ ಬಾಗು

ಕೈ ಚಾಚಿ ನೆರವಾಗು ಬೇಡಿರುವ ಜನಕೆ

ನೋವಲ್ಲಿ ಜೊತೆಯಾಗು ಅಳುತಿರುವ ಮನಕೆ

Saturday, June 17, 2023

ಮುಗುಳಿನ ಗಂಧ

ಬಯಲು ವೇದಿಕೆ ಮೇಲೆ

ಬೆಳೆದು ನಿಂತಾ ಮುಗುಳೆ

ಹೇಳು ಭೀಗುವ ಮುನ್ನ

ಯಾವ ಪಯಣವು ಭಿನ್ನ

ಎಲ್ಲೂ ಬೇಡದ ಮುನಿಸು

ಎಲ್ಲಾ ಬಯಸುವ ಕನಸು

ಹೊಂದಿದ ಬಗೆಯನ್ನು ತಿಳಿಸು

ಆಗುವ ಕಲೆಯನ್ನು ಕಲಿಸು


ನರಳಿ ತೂರುತಲಿರಲು 

ಬದುಕ ಬಂಡಿಯ ಒಳಗೆ

ಮಿಂಚು ಹುಳುವಿನ ರೀತಿ

ಮಿನುಗಿದಾ ದೀಪ

ತತ್ವವನು ತೊರೆದಂತೆ 

ಸಾಗಿದೆಯಾ ಬಾಳಿನಲಿ

ಸತ್ವವನು ಎದುರಿಟ್ಟು

ತೋರುವುದೇ ಕ್ರಾಂತಿ


ಜನರೆಲ್ಲ ಬೇಡುತಿಹ

ಹಾರೋ ದುಂಬಿ ಹರಡುತಿಹ

ಜೇನಿನ ಸಿಹಿಯಲ್ಲೂ

ಮುಗುಳಿನ ಗಂಧ

ಪ್ರೀತಿ ಹರಿವ ಹೊತ್ತು

ಸ್ಪೂರ್ತಿಯಾಗಲು ಅಸ್ತು

ಇರುವ ತಡೆಯನು ತೊಡೆದು

ನುಡಿಯುವುದೇ ಶಾಂತಿ


ಮೌನದಲೆ ಹಂಗಿಸುವ

ಮಾತಿನಲೆ ತಿವಿಯುತಿಹ

ಹಂಗಿನರಮನೆಗಿಂತ 

ಇಂಗಡದ ಗುಡಿ ಲೇಸು

ಹೊತ್ತುಗೊತ್ತು ಇಲ್ಲದಲೆ

ಸುತ್ತ ಸುತ್ತಿ ಹುಡುಕುತಿಹ

ಭ್ರಷ್ಟ ಸಂಸಾರಿಗಳು

ಪರಿಸರದ ಕಾಂತಿ...

ಬಯಲಿನ ಗೋಪುರ

ನನ್ನೆದೆಯ ಬಯಲಿನ ಗೋಪುರ

ನಿನ್ನ ನೆನಪಿನ ಪ್ರೀತಿಯ ಸ್ಮಾರಕ

ಒಣ ಹುಲ್ಲಿನ ಹಾಸಿಗೆ ರೂಪಕ

ಭಿನ್ನ ಮನಸಿನ ಭಾವನೆ ಪೂರಕ


ಬಿಸಿಯುಸಿರಿದು ಸೋಕಲು ಮೆಲ್ಲಗೆ

ನನ್ನ ಹಂಬಲವಾಗಲು ಮೆಲ್ಲಗೆ

ನಿನ್ನೆದೆಯ ನೆನಪಿನ ದೀವಿಗೆ

ಬೆಳಗುವುದೇ ಒಲವಿನ ಪ್ರೀತಿಗೆ


ಅಳಿವಿರದ ದೀಪದ ಜೋಳಿಗೆ

ಹೊತ್ತುತರಲು ಕಣ್ಣಿನ ಕಾಡಿಗೆ

ತಿಳಿಸುವುದೇ ನೀತಿಯ ಬಾಳಿಗೆ

ಹಸಿರಾಗಲು ಶಾಶ್ವತ ಕೂಳಿಗೆ